ಹಣ್ಣ ಬಂದಾವ ಹೆಣ್ಣಾ ಮಗಿಯ ಮಾವಿನಽ ಹಣ್ಣ ಜಾಣಿ||
ಹಣ್ಣ ಕೊಳತೇವ ಹಣ್ಣಿನ ಬಿಲಿವಯ ಹೇಳ ಜಾಣಿ ||೧||
ಬೆಲಿಯ ಹೇಳುಽವ ಜಾಣಾ ಮಲ್ಲಾಡ ದೇಶಕ್ಹೋಗಿದನಲ್ಲೋ ಜಾಣಾ ||
ತಿಳಿಯಲಾರಽದ ಬೆಲಿಯ ನಾ ಏನ್ಹೇಳಾಲೊ ಜಾಣಾ ||೨||
ಕೆರಿಯ ಪಾಳ್ಯದ ಮ್ಯಾಲ ಕರಿಽ ಕಬ್ಬ ಹೆಚ್ಚ್ಯಾರಲಮ್ಮಽ ಜಾಣಿ ||
ಅದರಾಗ ತುಡಽಗ ದನ ಹೊಗತಾವಲಮಽ ಜಾಣಿ ||೩||
ತುಡಽಗ ದನ ಹೊಳ್ಳರ ಹೊಡದಾರ ಬಡೆದಾರೋ ಜಾಣಾ ||
ನಾಲೂರ ಕೂಡಿ ಬುದ್ದೀ ಹೇಳುವರಲ್ಲೋ ಜಾಣಾ ||೪||
ಭಾಂಯಾದರ ಕಟ್ಟ್ಯಾರಲ್ಲ ಅರುಟಿಗ್ಯಾದರಿಟ್ಟಾರಲಮಽ ಜಾಣಿ ||
ಅದರಾಗ ದಾಽನ ಧರ್ಮ ಇಲ್ಲ ಏನಽ ಜಾಣಿ ||೫||
ಅನ್ನ ವಸ್ತರು ದಾನ ಬೆಳ್ಳಿ ಬಂಗಾರ ದಾನೋ ಜಾಣಾ ||
ಹೆಣ್ಣ ಮಕ್ಕಳ ದಾನಾ ಕೊಡುಽವರೇನೋ ಜಾಣಾ ||೬||
ಗುಡಿಯಾದರು ಕಟ್ಟ್ಯಾರಲ್ಲ ಕಳಸಾದರಿಟ್ಟಾರಲಮಽ ಜಾಣಿ ||
ಕಣ್ಣೊತ್ತಿ ಕಳಸಗೋಳು ಒಡೆದಾವಲಮಽಽ ಜಾಣಿ ||೭||
ಒಡೆದಾರೆ ಒಡಿಯಾಲಿ ಒಡೆದುನೆ ಛಲ್ಲುವರೋ ಜಾಣಾ ||
ಒಡಹುಟ್ಟಿದಣ್ಣನಾಗಿ ಇರಽನೆ ಹೋಗೋ ಜಾಣಾ ||೮||
*****