ಕೋಣೆಯ ಮೂಲೆಗೆ ಜಗುಲಿಯ ಕಟ್ಟಿ !
ಬೆಳ್ಳಿಯ ಮಂಟಪ ಮಾಡಿಸುತಿಟ್ಟಿ !
ಚಿನ್ನದ ಮುದ್ದಿಯ ಮೂರ್ತಿಯನಿಟ್ಟಿ !
ಎಡಬಲ ನಂದಾದೀಪಗಳಿಟ್ಟಿ !


ಹಗಲಿರುಳೆನ್ನದೆ ಕಾಯುತಲಿರುವಿ!
ತಾಳ ತಂತಿಗಳ ಬಾರಿಸುತಿರುವಿ !
ಸವಿ ಸವಿ ತಿಂಡಿಯ ತೋರಿಸುತಿರುವಿ !
ಪುಣ್ಯವಪಡೆಯಲು ಹವಣಿಸುತಿರುವಿ !


ಆರಿಗೆ ನಿನ್ನಯ ನಂದಾದೀಪ ?
ಕೋಣೆಯ ಮೂಲೆಗೆ ನಂದಾದೀಪ ?
ಚಿನ್ನದ ಮೂರ್ತಿಗೆ ನಂದಾದೀಪ ?
ಸೂರ್ಯನ ತಂದೆಗೆ ನಂದಾದೀಪ ?


ಏನಿದುನಿನ್ನಯ ನಂದಾದೀಪ!
ಮುದುಕರ ಮುಂಗೈ ಎಲುವಿನದೀಪ !
ಬಡವರ ಕರುಳಿನ ಬತ್ತಿಯದೀಪ !
ಹೃದಯದ ರಕ್ತದ ತೈಲದದೀಪ !


ನಿನಗೋ ನಿನಗೋ ನಂದಾದೀಪ !
ಬಡವನ ಗುಡಿಸಲಿ ಕತ್ತಲತಾಪ !
ನಿನಗೋ ನಿನಗೋ ಗೆಜ್ಜಿಯಕುಣಿತ !
ಬಡವನ ತಾಯಿಗೆ ಸರ್ಪದಕಡಿತ !


ಪುಣ್ಯವುಬೇಕೇ ಹೇಳುವೆಕೇಳು !
ನಿನ್ನೀ ನಂದಾದೀಪವು ಹಾಳು !
ದೂಡೋ ಬಡವನ ಕತ್ತಲ ಗೋಳು !
ಇಲ್ಲವೆ ದೇವರ ಕಂಗಳ ಕೀಳು !
*****