ನನ್ನ ನಗುವಿನ ಹಿಂದೆ
ಅಡಗಿದ ಸಾವಿರ ಸತ್ಯಗಳಿವೆ.
ಹರಿದ ಬಟ್ಟೆಗೆ ಹಚ್ಚಿದ
ಹಲವಾರು ತೇಪೆಗಳಿವೆ.
ಒತ್ತಾಯದ ನಗೆಯನ್ನು
ಮತ್ತೇ ಮತ್ತೇ
ಬರಿಸಬೇಕಿದೆ ಮುಖದಲಿ
ನೋವನ್ನು ಹಲ್ಲು ಕಚ್ಚಿ
ಕಣ್ಣು ಮುಚ್ಚಿ ಸಹಿಸಬೇಕಿದೆ.
ಮನದ ಆಳದ ನೋವಿನ
ವಿಷ ತುಂಬಿದ ಗುಟುಕುಗಳ
ತುಟಿ ಎರಡು ಮಾಡದೇ
ನುಂಗಿ ನಗಬೇಕಿದೆ.
ಸನ್ನೆಯಿಂದ ಕಣ್ಣು ಮಿಟುಕಿಸಿ
ಕಪ್ಪು ಕತ್ತಲೆಗೆ ಕರೆವ
ಬುಸುಗುಡುವ ಗೂಳಿಗಳಿಗೆ
ನಗೆಯ ಮುಖವಾಡ
ಧರಿಸಿ ಭೂಮಿಯಾಗಬೇಕಾಗಿದೆ.
ಹಸಿದ ಕಂದಮ್ಮಗಳ
ರೋದನ ಆಕ್ರಂದನ
ಕಿವಿಗೆ ಬೀಳುವಾಗ
ತುಟಿಕಚ್ಚಿ ಹೃದಯ
ಕಲ್ಲು ಮಾಡಿಕೊಂಡು ಸಹಿಸಬೇಕಿದೆ,
ಲೋಕದಲಿ ದಿನದಿನವೂ
ಸಾಯುತ್ತ ನೋವನ್ನು
ಸಹಿಸುತ್ತ ಬದುಕಬೇಕಿದೆ
ಸುಂದರ ನಾಳೆಯ ಕನಸುಗಳ ಕಾಣುತ್ತ
ಜೋಗುಳ ಹಾಡುತ್ತ ಕರುಳ ಕುಡಿಗಳ
ತಟ್ಟಿ ಮಲಗಿಸಬೇಕಿದೆ.
*****