ವರ್ಷಾ ಬಂತು ಹರುಷ ತಂತು
ಎಲ್ಲರೆದೆಯಲಿ
ಹಸಿರು ತುಂಬಿ ಉಸಿರು ಬಂತು
ಭೂಮಿಯ ಮೊಗದಲಿ
ಹನಿ ಹನಿ ಮುತ್ತಾಗಿ ಚೆಲ್ಲಿ
ಧರೆಗಿಳಿದು ಹಾರವಾಗಿ
ಕಡಲ ಕೊರಳ ಬಳಸಲೆಂದು
ವಧುವಂತೆ ನಾಚುತ ಬಂತು
ಹೊಳೆ ಹಳ್ಳ ಕೆರೆ ತುಂಬಿ ತುಳುಕಿ
ಬೆಟ್ಟ ಬಯಲು ಜಲಪಾತ ಬಳುಕಿ
ಬರಡು ನೆಲವ ತಣಿಸಲೆಂದು
ಭೋರ್ಗರೆಯುತ ಹರಿದು ಬಂತು.
ಜೀವಕೋಟಿಗೆಲ್ಲಾ ಜಳಕ
ಆನಂದದಿ ಇಳೆಗೆ ಪುಳಕ
ಜಗದ ಕೊಳೆಯ ತೊಳೆಯಲೆಂದು
ಆಗಸದಿ ಆಡುತ ಬಂತು.
ಟಪ್ ಟಪ್ ಆಲಿಕಲ್ಲು
ದಿಗಂತದೆ ಕಾಮನಬಿಲ್ಲು
ರುದ್ರ ರಮಣೀಯ ಸೊಲ್ಲು
ಬಿಂಕದಿಂದ ಇಳಿದು ಬಂತು
ಗುಡುಗು ಸಿಡಿಲು ಮಿಂಚಿನ ಆರ್ಭಟ
ಭಯವರಿಯದ ಚಿನ್ನರಾಟ
ಮೈಮನಕೆ ಜಡತೆ ತುಂಬಿ
ಆಮೋದದೆ ಹರಿದು ಬಂತು.
*****