ನನ್ನ ವಾಣಿಗೆ ಸಾರವಾಗೆಂದು ಮರಮರಳಿ
ನಿನ್ನ ಕರೆಯುತ್ತ ಎಷ್ಟೆಲ್ಲ ಸ್ಫೂರ್ತಿಯ ಪಡೆದೆ,
ಈಗ ಕಬ್ಬಿಗರೆಲ್ಲ ನನ್ನ ದಾರಿಗೆ ಹೊರಳಿ
ಅವರ ಕವಿತೆಗೆ ನಿನ್ನ ನೆರಳಲ್ಲಿ ಮೆರವಣಿಗೆ.
ನನ್ನಂಥ ಮೂಕನನೂ ಹಾಡಹಚ್ಚಿದ ಕಣ್ಣು
ಇನ್ನಿಂಥ ದಡ್ಡನನೂ ಹಾರಹಚ್ಚಿದ ಚೆಲುವು,
ಕಲಿತವರ ರೆಕ್ಕೆಗಳಿಗಿತ್ತು ಹೊಸ ಗರಿಗಳನು
ನೀಡುತಿದೆ ಕೃತಿಗಳಿಗೆ ಇಮ್ಮಡಿಯ ಘನತೆಯನು.
ನಿನಗಿರಲಿ ಹೆಮ್ಮೆ ನಾ ಬರೆದ ಕವಿತೆಯ ಕುರಿತು,
ನಿನ್ನಿಂದ ಪುಟಿದ ನಿನ್ನದೆ ಸೃಷ್ಟಿ ಅದಕಾಗಿ;
ಇತರ ಕೃತಿಗಳ ಶೈಲಿಯಂತು ಬಿಡು ಜ್ವಲಿಸೀತು
ನಿನ್ನ ಘನತೆಯ ಮಿಂಚು ತೊಳಗಿ ನುಡಿಗಳು ಬೆಳಗಿ.
ನೀನೆ ನನ್ನೆಲ್ಲ ಕಲೆ ಎತ್ತಿ ಮೆರೆಸುತ್ತಿರುವೆ.
ಅಜ್ಞಾನವನ್ನು ಸಹ ಜ್ಞಾನದೆತ್ತರದಲ್ಲೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 78
So oft have i invoked thee for my muse