ತೋರುವುದು ಕನ್ನಡಿ ಈ ಚೆಲುವು ಕರಗುವುದ,
ಗಡಿಯಾರ ಕೈಮುಳ್ಳು ಗಳಿಗೆಗಳು ಜರುಗುವುದ;
ಈ ಖಾಲಿ ಪುಟಗಳಲಿ ಬರೆ ಮನದೊಳಿರುವುದ,
ರುಚಿನೋಡಿ ಬಳಸು ಈ ಪುಸ್ತಕದ ಒಳತಿರುಳ.
ಕನ್ನಡಿಯು ಬಿಂಬಿಸುವ ಮುಖದ ಮುರಿನೆರಿಗೆಗಳು
ಕೆಳಕುಸಿದ ಗೋರಿಗಳ ನೆನಪನ್ನು ಕೆದುಕುವುವು.
ಗಡಿಯಾರದೊಳಗಿನ ನಿಧಾನ ನಡಿಗೆಯ ಮುಳ್ಳು
ಕಾಲನ ಕಳ್ಳನಡಿಗೆಯ ಪ್ರಗತಿ ತೋರುವುವು.
ನೆನಪಿಂದ ಉದುರಿಹೋಗುವುದೆ ಇದೆ ಬಹುಭಾಗ
ಬರೆಯದನು ಪುಸ್ತಕದ ಈ ಖಾಲಿ ಪುಟಗಳಲಿ,
ನಿನ್ನಂತರಂಗ ಚಿಂತನೆಯ ಸಂತತಿ ಆಗ
ನೀಡುವುದು ನಿನ್ನ ಪರಿಚಯವ ನಿನಗೇ ಮರಳಿ.
ಎಷ್ಟು ಸಲ ಬಳಸಿದರೆ ಅಷ್ಟು ಅಷ್ಟೂ ನಿನಗೆ,
ಲಾಭವಿದೆ ಪುಸ್ತಕದ ಅರ್‍ಥಶ್ರೀಮಂತಿಕೆಗೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 77
Thy glass will show thee how thy beauties wear