ಬರೆದು ನಾನೊಂದು ಕವನ
ರಾಯನಿಗೆ ಕೇಳಿದೆ
ಹೇಗಿದೆ ಈ ಕವನ
“ನಾ ಕಂಡ ಕನಸುಗಳೆಲ್ಲಾ
ನೀರ ಮೇಲಿನ ಗುಳ್ಳೆ
ಬರೀ ಹೊಡೆತ ನಿಂದನೆ
ತುಂಬಿದೆ ಬದುಕೆಲ್ಲ”
…ಇತ್ಯಾದಿ …ಇತ್ಯಾದಿ
ಓದುತ್ತಿದ್ದಂತೆಯೇ ರಾಯ
ತಾಳಿದ ರಾವಣನ ಅವತಾರ,
ಮತ್ತೇ ಬೈಗುಳ ಹೊಡೆತ,
“ನಿನಗೆ ಬರೆಯಲು ಬೇರೆ
ವಿಷಯಗಳೇ ಇಲ್ಲವೆ?
ನಿನ್ನ ಕವನ ನನ್ನನ್ನು
ನಿಂದಿಸಿದಂತಿದೆಯಲ್ಲ?
ಬರೆಯುವುದೇ ಆಗಿದ್ದರೆ
ನನ್ನ ಹೊಗಳಿ ಬರೆ-
ಇಲ್ಲವಾದರೆ ಗೊತ್ತಿದೆಯಲ್ಲಾ
ಕಾದ ಕಬ್ಬಿಣದ ಬರೆ..”
ಮತ್ತೆ ಕಾಗದ ಪೆನ್ನು
ಹಿಡಿದು ನಡುಗುವ ಕೈಯಿಂದ
ಕವನ ಬರೆಯಲು ಕುಳಿತೆ-
“ನಿನ್ನ ಮಾತುಗಳೇ
ನನಗೆ ವೇದ – ಕುರಾನ
ಮತ್ತೇಕೆ ಬೇರೆ ಪುರಾಣ
ಆ ಲೋಕ – ಈ ಲೋಕ
ಏಳೇಳು ಲೋಕದಲ್ಲೂ
ನಿನ್ನ ಪಾದ ಸೇವೆಯ ಭಾಗ್ಯ
ಕರುಣಿಸು ನನ್ನ”
..ಇತ್ಯಾದಿ… ಇತ್ಯಾದಿ
ಈ ವಾಕ್ಯಗಳೇ ಸತ್ಯ
ಮಿಕ್ಕಿದ್ದೆಲ್ಲಾ ಬರೀ ಮಿಥ್ಯ.
*****