ಗೊತ್ತಿರುವುದು ನನಗೆ
ಪಂಚೆಯ ಶ್ರೀರಾಮ
ಹುಟ್ಟಿರುವುದು ಈಗ
ಚೆಡ್ಡಿಯ ಶ್ರೀರಾಮ ||

ರಾಮ ಹುಟ್ಟಿದ ಅಂದು
ತಾಯಿಯ ಗರ್‍ಭದಲಿ
ಅವನೆ ಹುಟ್ಟಿದ ಇಂದು
ಮಸೀದಿ ಮೂಲೆಯಲಿ

ಅಂದು ರಾಮನ ಜನನ
ಹಗಲು ಹೊತ್ತಿನಲ್ಲಿ
ಇಂದು ಅವನ ಜನನ
ತೂತು ಕತ್ತಲಲ್ಲಿ

ಅಂದು ಬಿಲ್ಲು ಬಾಣ
ಅವನ ಹೆಗಲಿನಲ್ಲಿ
ಇಂದು ಬಿದಿರು ದಂಡ
ಅದೇ ಬಗಲಿನಲ್ಲಿ

ಅಂದು ರಾಮನ ಹಣೆಗೆ
ಎರಡೊ ಮೂರೊ ನಾಮ
ಇಂದು ನಮ್ಮ ಹಣೆಗೆ
ರಕ್ತದ ಒಂದೇ ನಾಮ

ಅಂದು ಹೊರಟ ರಾಮ
ವನವಾಸದ ಕಡೆಗೆ
ಇಂದು ನಮ್ಮ ರಾಮ
ನವದೆಹಲಿಯ ಕಡೆಗೆ

ಅಂದು ರಾಮನಿಗೆ ಸಾಕು
ಕಾಡಲಿ ಪರ್‍ಣ ಕುಟೀರ
ಇಂದು ಬೇಕೇ ಬೇಕು
ಕೋಟಿ ಇಟ್ಟಿಗೆ ಮಂದಿರ

ಅಂದು ರಾಮನಿಗೆ ಪ್ರಿಯವು
ಎಲ್ಲ ಜೀವ ಜಂತು
ಇಂದು ಯಾರೂ ಬೇಡ | ಇರಲಿ
ದಲಿತರಂತೂ ಇಂತು

ನಿನ್ನೆ ಶಂಭೂಕ ಮರ್‍ಡರ್
ತಪ್ಪಿತು ಕುವೆಂಪು ಇಂದ
ಇಂದು ನಾವುಗಳೆ ಮರ್‍ಡರ್
ತಪ್ಪುವುದು ಯಾರಿಂದ?

ಅಂದು ಹರಡಿದ ರಾಮ
ಹೆಚ್ಚೂ ಕಡಿಮೆ ಪ್ರೀತಿ
ಇಂದು ಹರಡುವನು ಯಾಕೆ
ಎಂದಿಲ್ಲದ ಭೀತಿ?

ಇರಲು ಎದುರಿನಲ್ಲಿ
ಭೀಮನ ಸಂವಿಧಾನ
ಮತ್ತೆ ಯಾಕೆ ಬೇಕು
ರಾಮನ ಸಂವಿಧಾನ?

ಇರಲಿ ರಾಮ ಅಲ್ಲಿ
ಜನರ ತಂಟೆ ಯಾಕೆ
ಸುಮ್ಮನಿರದೆ ಇರುವೆ
ಬಿಟ್ಟುಕೊಳುವುದ್ಯಾಕೆ?
*****