ರೆಕ್ಕೆಸುಟ್ಟ ಹಕ್ಕಿಗಳು
ಎದೆಯ ತುಂಬ ಕೂತಿವೆ
ಮಾತು ಸತ್ತು ಮೌನ ಹೊತ್ತು
ಮಹಾಕಾವ್ಯ ಬರೆದಿವೆ

ಹಾಳೆಗಳ ಹರಡಲಿಲ್ಲ
ಮೇಲೆ ಮಸಿಯು ಹರಿಯಲಿಲ್ಲ
ಅಕ್ಷರಗಳು ಮೂಡಲಿಲ್ಲ
ಮಹಾಕಾವ್ಯ ಬರೆದಿವೆ

ಮುಕ್ಕುಗೊಂಡ ಇತಿಹಾಸವು
ಕೊಕ್ಕಿನಲ್ಲಿ ಕೂತಿದೆ
ಕಣ್ಣ ತುಂಬ ಬೆವರು ತುಂಬಿ
ಮಹಾಕಾವ್ಯ ಬರೆದಿವೆ

ಸಂಕಟಗಳ ಗಾಣದಲ್ಲಿ
ಭ್ರೂಣಭಾವ ಸಿಕ್ಕಿದೆ
ಎದೆಯ ತುಂಬ ಮೌನ ಬಸಿದು
ಮಹಾಕಾವ್ಯ ಬರೆದಿವೆ

ಮಾತಿಲ್ಲದ ಮಹಾಕಾವ್ಯ
ಹುಟ್ಟುತ್ತಿದೆ ಗೂಡಿನಲ್ಲಿ
ನಿಂತ ನೆಲುವು ನಾಚುವಂತೆ
ಹಬ್ಬುತಿದೆ ನಾಡಿನಲ್ಲಿ
*****