ನಿನ್ನ ಮನಸ್ಸಿನಲ್ಲಿ ನಾನು ಇಲ್ಲದ ಹೊತ್ತು
ನಿನ್ನಿಂದ ನಡೆದಿರುವ ಸಣ್ಣ ತಪ್ಪುಗಳೆಲ್ಲ
ಹೊನ್ನ ಪ್ರಾಯಕ್ಕೆ ಚೆಲುವಿಗೆ ತಕ್ಕವೇ, ಗೊತ್ತು
ಬೆನ್ನಿಗೇ ಗಂಟು ಬಿದ್ದಿದೆ ಪ್ರಲೋಭನೆಯೆಲ್ಲ.
ಸಭ್ಯ, ಹಾಗೆಂದೆ ಗೆಲ್ಲುವರೆಲ್ಲ ನಿನ್ನನ್ನು;
ಚೆಲುವ, ಹಾಗೆಂದೆ ಆಕ್ರಮಿಸುವರು. ಅಲ್ಲದೆ
ಹೆಣ್ಣೆ ಬಯಸಲು, ಹೆಣ್ಣ ಬಸಿರಿಂದ ಬಂದವನು
ಗಂಡು ಯಾವನು ಅವಳ ಹೋಗಗೊಡುವನು ಬರಿದೆ ?
ಆದರೂ ಅಯ್ಯೊ! ನೀ ಬಳಸದಿರಬಹುದಿತ್ತು
ನನ್ನದೆನ್ನುವುದನ್ನು : ಚೆಲುವು ಹರಯಗಳನ್ನು
ಹದ್ಧುಬಸ್ತಲ್ಲಿಟ್ಟು ನೀ ತಡೆಯಬಹುದಿತ್ತು
ನಂಬಿಕೆಗೆ ಎರಡೆರಡು ದ್ರೋಹ ನಡೆಯುವುದನ್ನು ;
ನಿನ್ನ ರೂಪಕ್ಕವಳು ಮಾರುಹೋದದ್ದನ್ನು
ನೀ ನನ್ನ ನಂಬಿಕೆಯ ಬೆನ್ನಗಿರಿದದ್ದನ್ನು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 41
Those pretty wrongs that liberty commits
















