ಬಾಲಕನ ಚೂಟಿಯಾಟಕ್ಕೆ ಹಿಗ್ಗುವ ಹಾಗೆ
ಮುಪ್ಪಾದ ತಂದೆ, ನಾ ವಿಧಿಯಸೂಯೆಗೆ ಸಿಕ್ಕು
ವಿಕಲನಾದರು ನಿನ್ನ ಮೇಲ್ಮೆ ಯೋಗ್ಯತೆಗಳಿಗೆ
ನೆಮ್ಮದಿಯ ತಾಳುವೆನು. ಸೌಂದರ್ಯ ಸಂಪತ್ತು
ವಂಶ, ಧೀಶಕ್ತಿ – ಒಂದೇ ಇರಲಿ, ಕೂಡಿರಲಿ
ಮೆರೆಯುತಿದೆ ತುತ್ತತುದಿ ನೆಲೆಯಲ್ಲಿ ನಿನ್ನಲ್ಲಿ,
ಕಸಿಗಿಡುವೆ ನನ್ನ ಪ್ರೀತಿಯನು ಸಹ ಅದರಲ್ಲಿ
ನಾನು ಅದೃಷ್ಟಹೀನ ಎಂಬರಿವು ಆಗೆಲ್ಲಿ ?
ಬಡವ ನಿರ್ಲಕ್ಷಿತ ಎನ್ನಿಸುವ ಅತೃಪ್ತಿ ?
ಇಂಥ ಛಾಯಾರಕ್ಷೆಯಲ್ಲಿ ನಾ ನಿಂತಾಗ
ಎಂಥ ಕಸುವಿನ ಅರಿವು! ಸಮೃದ್ಧಿ ಸಂತೃಪ್ತಿ,
ಅನಿಸುವುದು ನಾ ನಿನ್ನ ವೈಭವದೊಂದು ಭಾಗ.
ಯಾವುದತ್ಯುತ್ತಮ ಅದನ್ನೆ ಬಯಸುವೆ ನಿನಗೆ
ಅಂಥ ಬಯಕೆಯ ಹೊತ್ತು ಹತ್ತು ಮಡಿ ಸುಖ ನನಗೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 37
As a decrepit father takes delight