ಪುಂಸ್ತ್ರೀ – ೧೫

ಪುಂಸ್ತ್ರೀ – ೧೫

ಮಿಳಿತವಾದುದು ಪ್ರೇಮ ನಯನದಲಿ

ಗಿರಿನಾಯಕ ತೋರಿಸಿಕೊಟ್ಟದ್ದು ಪರಶುರಾಮರನ್ನು. ಬದುಕಿರುವಾಗಲೇ ಕತೆಯಾದವರು ಅವರು. ಅಂಬೆ ಎಳವೆಯವಳಾಗಿದ್ದಾಗ ಅವಳ ಅಪ್ಪ ಪರಶುರಾಮರ ಕತೆಗಳನ್ನು ಎಷ್ಟೋ ಬಾರಿ ಹೇಳಿದ್ದುಂಟು. ಅಪ್ಪ ಅವರನ್ನು ಕ್ಷತ್ರಿಯ ದ್ವೇಷಿ ಎಂದು ವರ್ಣಿಸುತ್ತಿದ್ದ. ಕ್ಷತ್ರಿಯಾಣಿಯ ಮಗ ಕ್ಷತ್ರಿಯದ್ವೇಷಿಯಾಗಿದ್ದೇಕೆಂದು ಅವಳಿಗೆ ಆಗ ಹೊಳೆದಿರಲಿಲ್ಲ. ಭೀಷ್ಮರಿಂದ, ಸಾಲ್ವನಿಂದ ತಿರಸ್ಕೃತಳಾದ ಮೇಲೆ ಅವಳಲ್ಲಿ ಅವಳಿಗರಿವಿಲ್ಲದೆ ಕ್ಷತ್ರಿಯ ದ್ವೇಷ ಮೊಳೆಯತೊಡಗಿತು. ಅದುವೇ ತಾನು ಗಿರಿನಾಯಕನಿಗೆ ಹತ್ತಿರವಾಗಲು ಕಾರಣವಾಯಿತೇ ಎಂದು ಅವಳು ಪ್ರಶ್ನಿಸಿ ಕೊಂಡಳು. ಗಿರಿನಾಯಕನೂ ಒಳಗೊಳಗೇ ಕ್ಷತ್ರಿಯರನ್ನು ದ್ವೇಷಿಸುತ್ತಿರಬಹುದೆ? ಅದಕ್ಕಾಗಿಯೇ ಅವನು ಪರಶುರಾಮರನ್ನು ತೋರಿಸಿಕೊಟ್ಟನೆ?

ಅವಳಿಗೆ ಅಪ್ಪ ಹೇಳುತ್ತಿದ್ದ ಕತೆಗಳು ನೆನಪಾದವು. ಪರಶುರಾಮರು ಜಮದಗ್ನಿ ಋಷಿಗೆ ರೇಣುಕೆಯಲ್ಲಿ ಹುಟ್ಟಿದವರು. ರೇಣುಕೆಯ ಅಪ್ಪ ಪುಟ್ಟ ರಾಜ್ಯವೊಂದರ ದೊರೆಯಾಗಿದ್ದ. ಋಷಿ ಮುನಿಗಳು ಜಾತಿಯ ಚೌಕಟ್ಟನ್ನು ಮೀರಿ ಬೆಳೆದವರು. ಅವರ ಮೂಲವನ್ನು ಪ್ರಶ್ನಿಸುವುದು ತಪ್ಪೆಂದು ಅಪ್ಪ ಹೇಳುತ್ತಿದ್ದ. ಜಮದಗ್ನಿ ತಾನಾಗಿಯೇ ಯಾರ ತಂಟೆಗೂ ಹೋಗುತ್ತಿರಲಿಲ್ಲ. ಋಷಿಯಾದರೂ ಕ್ರರೋಧವನ್ನು ಗೆಲ್ಲಲಾಗದೆ ಒದ್ದಾಡುತ್ತಿದ್ದ. ಒಮ್ಮೆ ಕಾರ್ತವೀರ್ಯನೆಂಬ ಬಲಾಢ್ಯ ಅರಸ ಜಮದಗ್ನಿಯ ಆಶ್ರಮಕ್ಕೆ ಬಂದಿದ್ದ. ಋಷಿಯ ಪಶುಮಂದೆಯಲ್ಲಿದ್ದ ನಂದಿನಿ ಯೆಂಬ ಅತ್ಯಪೂರ್ವ ದನವನ್ನು ತನಗೆ ಕೊಡೆಂದು ಕೇಳಿದ್ದ. ಋಷಿ ನಿರಾಕರಿಸಿದ್ದಕ್ಕೆ ನಂದಿನಿಯನ್ನು ಎಳಕೊಂಡು ಹೋಗಿದ್ದ.

ಪರಶುರಾಮರಿಗೆ ವಿಷಯ ಗೊತ್ತಾಗಿ ಕಿಡಿಕಿಡಿಯಾಗಿ ಕಾರ್ತವೀರ್ಯನನ್ನು ಎದುರಿಸಿದ್ದರು. ಆಗ ನಡೆದ ಯುದ್ಧದಲ್ಲಿ ಕಾರ್ತವೀರ್ಯ ಮಡಿದ. ನಂದಿನಿ ಜಮದಗ್ನಿಯ ಆಶ್ರಮಕ್ಕೆ ತಿರುಗಿ ಬಂದಳು. ಪರಶುರಾಮರಿಲ್ಲದಿರುವಾಗ ಕಾರ್ತವೀರ್ಯನ ಮಕ್ಕಳು ಜಮದಗ್ನಿಯ ತಲೆ ಕಡಿದು ನಂದಿನಿಯನ್ನು ಎಳಕೊಂಡು ಹೋಗಿದ್ದರು. ವಿಧವೆ ತಾಯಿ ರೇಣುಕೆ ಪರಶುರಾಮರಿಗಾಗಿ ಅಲೆದೂ ಅಲೆದೂ ಅವರು ಸಿಕ್ಕಾಗ ನಡೆದ ದುರಂತವನ್ನು ಹೇಳಿದ್ದಳು. ಸಿಟ್ಟಿಗೆದ್ದ ಪರಶುರಾಮರು ಕಾರ್ತವೀರ್ಯನ ಪುತ್ರರನ್ನು ಯುದ್ಧದಲ್ಲಿ ನಾಮಾವಶೇಷ ಮಾಡಿ ಹಾಕಿದ್ದರು. ಶಸ್ತ್ರವಿದ್ಯೆಯಲ್ಲಿ ಅವರಷ್ಟು ನಿಪುಣರು ಆರ್ಯಾವರ್ತದಲ್ಲೇ ಇಲ್ಲವೆಂದು ಅಪ್ಪ ಆಗಾಗ ಹೇಳುತ್ತಿದ್ದುದು ಅವಳಿಗೆ ನೆನಪಾಯಿತು.

ಅವರ ಗುಣ ವಿಶೇಷಗಳನ್ನೂ ಅಪ್ಪ ಹೇಳುತ್ತಿದ್ದ. ಅವರದು ಶೋಷಿತರ ನೆರವಿಗೆ ಧಾವಿಸುವ ಗುಣ. ಮದೋನ್ಮತ್ತ ಕ್ಷತ್ರಿಯರನ್ನು ಎದುರು ಹಾಕಿಕೊಂಡು ಯುದ್ಧದಲ್ಲಿ ಕೊಂದುಬಿಡುತ್ತಿದ್ದರು. ಆರ್ಯಾವರ್ತದ ಸಮಸ್ತ ಅಧರ್ಮ, ಅಕೃತ್ಯಗಳಿಗೆ ಕ್ಷತ್ರಿಯರೇ ಕಾರಣರೆಂದು ಅವರು ಹೇಳುತ್ತಿದ್ದರು. ಹಾಗಾಗಿಯೇ ಕ್ಷತ್ರಿಯರಿಗೆ ಶಸ್ತ್ರಾಭ್ಯಾಸ ಮಾಡಿಸುವುದಿಲ್ಲವೆಂದು ಸಂಕಲ್ಪ ತೊಟ್ಟಿದ್ದರು. ಸಮಸ್ತ ಆರ್ಯಾವರ್ತದಲ್ಲಿ ಸ್ತ್ರೀ ಶಿಕ್ಷಣದ ಮಹತ್ತ್ವವನ್ನು ಪ್ರತಿಪಾದಿಸುತ್ತಿದ್ದವರು ಅವರೊಬ್ಬರೇ. ತಾನು ಶಸ್ತ್ರ ಮತ್ತು ಶಾಸ್ತ್ರಾಭ್ಯಾಸ ಮಾಡುವಾಗ ಸ್ತ್ರೀ ಶಿಕ್ಷಣ ಪಾಪ ಪರಿಹಾರಾರ್ಥ ಪ್ರಾಯಶ್ಚಿತ್ತ ಹವನ ನಡೆಸುತ್ತಿದ್ದ ಪುರೋಹಿತನಲ್ಲಿ ಪರಶುರಾಮರ ಉದಾರ ನಿಲುವಿನ ಬಗ್ಗೆ ಹೇಳಿದಾಗ ಅವನು ತಿರಸ್ಕಾರದಿಂದ ದೊಡ್ಡವರು ಏನು ಮಾಡಿದರೂ ಲೋಕ ಕ್ಷಮಿಸುತ್ತದೆ. ಇಷ್ಟಕ್ಕೂ ಅವರೇನು ನಮ್ಮ ಹಾಗೆ ಅಪ್ಪಟ ಕರ್ಮಠ ಬ್ರಾಹ್ಮಣರಾ ಎಂದು ಪ್ರಶ್ನಿಸಿದ್ದು ಅಂಬೆಗೆ ನೆನಪಾಯಿತು. ವ್ಯವಸ್ಥೆಯನ್ನು ಬದಲಾಯಿಸ ಹೊರಟವರನ್ನು ಪ್ರಭುತ್ವ ಮತ್ತು ಪುರೋಹಿತರು ಒಪ್ಪಿಕೊಳ್ಳುವುದಿಲ್ಲವೆನ್ನುವುದು ಅವಳಿಗೆ ಆಗ ಅರ್ಥವಾಗಿತ್ತು. ಪರಶು ರಾಮರನ್ನೇ ಗುರುವಾಗಿ ತೋರಿಸಿಕೊಟ್ಟ ಗಿರಿನಾಯಕನನ್ನು ಮನದಲ್ಲೇ ಅವಳು ಮೆಚ್ಚಿಕೊಂಡಳು. ಗುರುವು ಬರಿಯ ಪಾಠ ಹೇಳಿಕೊಡುವವನಾದರೆ ಯಾವ ಪುರುಷಾರ್ಥವೂ ಸಾಧನೆಯಾಗುವುದಿಲ್ಲ. ಶೋಷಿತರ ಮತ್ತು ಸ್ತ್ರೀಯರ ಪರವಾದ ನಿಲುವುಗಳುಳ್ಳವವನೇ ನಿಜವಾದ ಗುರು. ಅಂಥವನು ವ್ಯವಸ್ಥೆಯನ್ನು ಬದಲಾಯಿಸಬಲ್ಲ ಎಂಬ ವಿಶ್ವಾಸ ಅವಳಲ್ಲಿ ಮೂಡಿತು.

ಬೆಳಿಗ್ಗೆ ಅಂಬೆ ಬೇಗನೆ ಎದ್ದು ನಿತ್ಯಾಹ್ನಿಕಗಳನ್ನು ಪೂರೈಸಿ ಹೊರಟು ನಿಂತಳು. ಕಾಶಿಯಿಂದ ಹಸ್ತಿನಾವತಿಗೆ ಪಯಣಿಸಿ ಕೊನೆಗೆ ಗಿರಿನಗರಿಯನ್ನು ಸೇರಿದ ಪೆಟ್ಟಿಗೆಯ ವಸ್ತ್ರಾಭರಣಗಳನ್ನು ಅವಳು ಮುಟ್ಟಿಯೂ ನೋಡಲಿಲ್ಲ. ಗಿರಿನಗರಿಯ ಜನರು ತಯಾರಿಸಿದ ವಸ್ತ್ರಗಳು ಅವಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದ್ದವು. ಅವಳು ಸೌಭಕ್ಕೆ ಪಯಣಿಸುವಾಗ ತೊಟ್ಟಿಕೊಂಡಿದ್ದ ಬಟ್ಟೆಗಳನ್ನು ಶುಭ್ರವಾಗಿ ಒಗೆದು ಒಣಗಿಸಿಟ್ಟದ್ದನ್ನು ಸೇವಂತಿ ತಂದುಕೊಟ್ಟಾಗ ‘ಅವು ನಿನಗೇ ಇರಲಿ’ ಎಂದಳು. ವಕ್ಷಸ್ಥಳದಲ್ಲಿ ರಾರಾಜಿಸುವ ಎರಡು ಚಿನ್ನದ ಮಾಲೆ, ಕೈಗಳಲ್ಲಿ ನಾಲ್ಕು ಚಿನ್ನದ ಬಳೆ, ಕಿವಿಯಲ್ಲಿ ಚಿನ್ನದ ಚೆಂಡು ಮತ್ತು ಮೂಗಿನಲ್ಲಿದ್ದ ನತ್ತು ಇವಿಷ್ಟನ್ನು ಉಳಿಸಿಕೊಂಡು ಉಳಿದುದೆಲ್ಲವನ್ನೂ ಸೇವಂತಿಗೆ ಕೊಟ್ಟುಬಿಟ್ಟಳು. ಗಿರಿನಗರಿಯ ಜನರು ತಯಾರಿಸಿದ ಬಟ್ಟೆಗಳಲ್ಲಿ ಅಗತ್ಯವಿರುವ ಒಂದಷ್ಟನ್ನು ಆಯ್ದುಕೊಂಡು ದೊಡ್ಡ ಚೀಲವೊಂದರಲ್ಲಿ ಹಾಕಿಕೊಂಡಳು.

ಅವಳು ಹೊರಟು ನಿಂತಾಗ ಗಿರಿನಾಯಕನ ಅಪ್ಪ-ಅಮ್ಮ ಕಣ್ಣೀರಾದರು. ಅವಳಿಗೂ ತಡೆಯಲಾಗಲಿಲ್ಲ. ಮೋಸ, ವಂಚನೆ, ಪೊಳ್ಳು ಪ್ರತಿಷ್ಟೆಗಳಿಂದ ದೂರವಾಗಿ ತಮ್ಮದೇ ಪ್ರಪಂಚದಲ್ಲಿ ಬದುಕುವ ಮುಗ್ಧ ಜೀವಿಗಳು. ಇನ್ನಿವರನ್ನು ಜೀವಿತದಲ್ಲಿ ಮತ್ತೊಮ್ಮೆ ಕಾಣಲಾಗುತ್ತದೆಯೋ ಇಲ್ಲವೋ? ಕಾಶಿಯಿಂದ ಹಸ್ತಿನಾವತಿಗೆ ರಥವೇರಿ ಹೊರಟಾಗ ಕಾಡದ ಭಾವಗಳು ಈಗ ಜೀವ ಹಿಂಡುತ್ತಿವೆ. ಆಗ ಅಪ್ಪ‌ಅಮ್ಮಂದಿರ ಆಶೀರ್ವಾದ ಪಡೆಯಬೇಕೆನಿಸಿರಲಿಲ್ಲ. ಇಲ್ಲಿ ಈ ವೃದ್ಧ ಜೀವಗಳ ಆಶೀರ್ವಾದ ಪಡೆಯಬೇಕೆನಿಸಿತು. ಅಂಬೆ ಹೋಗಿ ಅವರ ಕಾಲಿಗೆ ಬಿದ್ದಾಗ ಅವರು ಹಾವು ತುಳಿದವರಂತೆ ಹಿಂದಕ್ಕೆ ಸರಿದರು. ಅವರ ಮುಖದಲ್ಲಿ ಗದರಿಕೆಯಿತ್ತು. ಕಾಶಿಯ ರಾಜಕುಮಾರಿ ಯಿಂದ ಪಾದ ನಮಸ್ಕಾರ ಮಾಡಿಸಿಕೊಳ್ಳುವುದೆ? ಅವರು ಅವಳ ಕೈ ಹಿಡಿದೆತ್ತಿ ಗಾಢವಾಗಿ ಆಲಂಗಿಸಿಕೊಂಡರು. ಈ ಗಳಿಗೆ ಹೀಗೆಯೇ ಇದ್ದು ಬಿಡಬಾರದೇ ಎಂದು ಅಂಬೆ ಅಂದುಕೊಂಡಳು. ನಿಧಾನವಾಗಿ ಅವರ ಆಲಿಂಗನದಿಂದ ಬಿಡಿಸಿಕೊಂಡಳು. ಅವರ ಕಣ್ಣುಗಳಲ್ಲಿ ನೀರಿತ್ತು. ಸೇವಂತಿಯ ಕಣ್ಣುಗಳಿಂದ ಪ್ರವಾಹ ಧುಮ್ಮಿಕ್ಕುತ್ತಿತ್ತು. ಎಳೆಯ ಮಕ್ಕಳ ಮೂಗುಗಳಿಂದ ಸುರಿವ ದ್ರವದೊಡನೆ ಕಣ್ಣೀರು ಮಿಳಿತವಾಗಿತ್ತು. ಎರಡು ದಿನಗಳ ಹಿಂದೆ ಅವರನ್ನು ಹಾಗೆ ಕಂಡಾಗ ಅಂಬೆ ಮನಸ್ವೀ ನಕ್ಕಿದ್ದಳು. ಈಗ ನಗು ಬರಲಿಲ್ಲ.

ಸನ್ನಿವೇಶದ ಮೌನವನ್ನೊಡೆದು ಗಿರಿನಾಯಕನೆಂದ: “ನೀವು ಬಯಸಿದರೆ ನಿಮ್ಮನ್ನು ಆಶ್ರಮದವರೆಗೆ ಬಿಟ್ಟು ಬರಬಲ್ಲೆ ರಾಜಕುಮಾರಿ. ಇಲ್ಲಿಂದ ಎರಡು ಯೋಜನ ದೂರದಲ್ಲಿದೆ ಅದು. ಬದರಿಕಾಶ್ರಮವೆಂದು ಅದನ್ನು ಕರೆಯುತ್ತಾರೆ. ಸೌಭದಿಂದ ಹಸ್ತಿನಾವತಿಗೆ ಹೋಗುವ ದಾರಿಯಲ್ಲಿ ನೀವಲ್ಲಿ ಇಳಿದಿರಲ್ಲಾ? ಅದೇ ದಾರಿಯಲ್ಲಿ ಸ್ವಲ್ಪ ಮುಂದಕ್ಕೆ ಹೋಗಿ ಎಡಕ್ಕೆ ತಿರುಗಿ ಕೊಳ್ಳಬೇಕು. ರಥ ಚಲಿಸಲು ಯೋಗ್ಯವಾದ ದಾರಿಯೊಂದು ಅಲ್ಲಿಗಿದೆ. ಬೇಕೆಂದಾಗ ಗುರುಗಳ ಆಶ್ರಮಕ್ಕೆ ಹೋಗಿ ಬರಲು ಭೀಷ್ಮ ನಿರ್ಮಿಸಿದ ಹಾದಿಯದು. ಎಡ ಬಲ ಎಲ್ಲೂ ಕವಲೊಡೆಯದೆ ನೇರವಾಗಿ ಹೋದರೆ ಅದು ನಿಮ್ಮನ್ನು ಆಶ್ರಮಕ್ಕೆ ಮುಟ್ಟಿಸುತ್ತದೆ. ಭೀಷ್ಮನಿಂದಾಗಿ ಕುರು ಸಾಮ್ರಾಜ್ಯದಲ್ಲಿ ಕಳ್ಳಕಾಕರ ಭಯವಿಲ್ಲ. ಆದರೆ ಇಲ್ಲಿ ಅಪಾಯಕಾರೀ ಕಾಡು ಪ್ರಾಣಿಗಳಿವೆ. ಅದಕ್ಕೆಂದೇ ಜತೆಯಲ್ಲಿ ಬರಲೇ ಎಂದು ಕೇಳಿದೆ. ನನ್ನದೊಂದು ಕುದುರೆ ಗಾಡಿಯಿದೆ. ಮಾರ್ಗಾಯಾಸವಾಗದಂತೆ ನಿಮ್ಮನ್ನು ಅಲ್ಲಿಗೆ ಮುಟ್ಟಿಸಬಲ್ಲೆ”.

ಅಂಬೆ ಅಂತರ್ಮುಖಿಯಾದಳು. ನಾನು ಇಲ್ಲಿದ್ದ ಮೂರು ದಿನ ಆತ್ಮೀಯ ವರ್ತುಲವೊಂದು ನಿರ್ಮಾಣವಾಗಿತ್ತು. ಭಾಷೆ ಅರ್ಥವಾಗದವರೊಡನೆ ಬೆಳೆದ ಭಾವ ಬಂಧವದು. ಗಿರಿನಾಯಕರೊಡನೆ ನಾನು ಮನಬಿಚ್ಚಿ ಮಾತಾಡಿದ್ದೆ. ಇವನು ಸಾಲ್ವನಿಗಿಂತ, ಭೀಷ್ಮರಿಗಿಂತ ಒಳ್ಳೆಯವನು. ಕಪಟತನ, ಸ್ವಾಭಿಮಾನವೆಂಬ ಪೊಳ್ಳು ಪ್ರತಿಷ್ಠೆ ಎಳ್ಳೆನಿತಿಲ್ಲದವನು. ಈ ಗಿರಿನಗರಿಯಲ್ಲಿ ಬೌದ್ಧಿಕ ಸಾಹಚರ್ಯಕ್ಕಾಗಿ ಹಂಬಲಿಸುವವನು. ನನ್ನಲ್ಲಿ ಇವನು ಒಳ್ಳೆಯ ಸ್ನೇಹಿತನೊಬ್ಬನನ್ನು ಹುಡುಕಲು ಹೊರಟಿದ್ದ. ವಯಸ್ಸಿನಲ್ಲಿ ಕಿರಿಯವಳಾದ ನನ್ನನ್ನು ಬಹುವಚನದಿಂದ ಸಂಬೋಧಿಸಿದ್ದ. ನಾನು ಮಾತ್ರ ಲೀಲಾಜಾಲವಾಗಿ ಇವನನ್ನು ಏಕವಚನದಲ್ಲಿ ಸಂಬೋಧಿಸಿದೆ. ನನಗರಿವಿಲ್ಲದಂತೆ ಅಂತರಂಗಕ್ಕಿಳಿದು ಬಿಟ್ಟ. ಆದರೆ ಒಬ್ಬ ಸಾಲ್ವಭೂಪತಿ ನನ್ನ ಅಂತರಂಗ ಪ್ರವೇಶಿಸಿದ್ದು ಸಾಕು. ಇನ್ನಾರೂ ಪ್ರವೇಶಿಸುವುದು ಬೇಡ. ಅಲ್ಲೀಗ ಸಾಲ್ವಭೂಪತಿ ಯಿಲ್ಲದೆ ಶೂನ್ಯ ಆವರಿಸಿದೆ. ಆದರೂ ಬೇರೊಬ್ಬನನ್ನು ಪ್ರತಿಷ್ಠಾಪಿಸಲು ಮನಸ್ಸು ಒಡಂಬಡುವುದಿಲ್ಲ. ಅದಕ್ಕೆಂದೇ ಅಂತರ ಕಾಪಾಡಿಕೊಂಡದ್ದು. ಗಿರಿನಾಯಕನಿಗೆ ಏಕವಚನ ಬಳಸಿದ್ದು, ಅವನಿಗೆ ಆಶ್ರಮದವರೆಗೆ ಸಾಂಗತ್ಯ ನೀಡುವ ಬಯಕೆ. ಬಹುಶಃ ಇನ್ನೆಂದೂ ನಾವು ಭೇಟಿಯಾಗಲಾರೆವು ಎಂದುಕೊಂಡಿದ್ದಾನೇನೊ?

ಗಿರಿನಾಯಕನ ಬಂಡಿ ಆಶ್ರಮದತ್ತ ಚಲಿಸುವಾಗ ಅವಳು ಉದ್ವಿಗ್ನಳಾದಳು. ಬಿಕ್ಕಿ ಬಿಕ್ಕಿ ಅಳುವ ಸೇವಂತಿಯನ್ನು ಅಲಂಗಿಸಿ ತಲೆ ಸವರಿದಳು. ಆ ಕ್ಷಣದಲ್ಲೂ ಅಂಬೆಗೆ ತಾನು ರಾಜಕುವರನಾಗಿರುತ್ತಿದ್ದರೆ ಇವಳನ್ನು ಕಣ್ಣು ಮುಚ್ಚಿ ಅಂತಃಪುರಕ್ಕೆ ಸೇರಿಸಿಬಿಡುತ್ತಿದ್ದೆ ಎಂದೆನ್ನಿಸಿತು. ಗಿರಿನಗರ ಸ್ವತಂತ್ರ ಗಣರಾಜ್ಯವಾಗಿರುತ್ತಿದ್ದರೆ ಇನ್ನಷ್ಟು ದಿನ ಅಲ್ಲಿ ಉಳಿದು ಬಿಡುಬಹುದಿತ್ತು. ಅದು ಭೀಷ್ಮರ ರಕ್ಷಣೆಯಲ್ಲಿದೆಯೆಂದು ತಿಳಿದ ಮೇಲೆ ಹಸ್ತಿನಾವತಿಯ ಆಶ್ರಿತ ಬದುಕು ಅವಳಿಗೆ ಬೇಡವೆನ್ನಿಸಿತು. ಭೀಷ್ಮರ ಮೇಲಣ ಗೌರವ ಕ್ರರೋಧವಾಗಿ ಮಾರ್ಪಟ್ಟಿತು. ಇನ್ನು ಆತನಿಗೆ ಬಹುವಚನ ಬಳಸುವ ಅಗತ್ಯವಿಲ್ಲವೆಂದು ಅವಳು ಅಂದುಕೊಂಡಳು. ಕಾಶೀರಾಜ ಪ್ರತಾಪಸೇನನ ಪಣವೇ ಎಲ್ಲಾ ಅನಾಹುತಗಳಿಗೆ ಕಾರಣವೆಂದು ಹೇಳಿ ಅವನು ಇಡೀ ಪ್ರಕರಣಕ್ಕೆ ತಪ್ಪು ಭಾಷ್ಯ ನೀಡಿದ್ದಾನೆ. ತನ್ನ ಜೀವನದ ಅನಿರೀಕ್ಷಿತ ತಿರುವುಗಳಿಗೆ ಕಾರಣನಾದ ಆ ಭೀಷ್ಮನಿಗೆ ಮರೆಯಲಾಗದ ಪಾಠವೊಂದನ್ನು ಕಲಿಸುವ ಅವಕಾಶ ತನಗೊದಗಿ ಬರಲೆಂದು ಅವಳು ಮನದಲ್ಲೇ ಹಾರೈಸಿದಳು.

ಮೌನವಾಗಿ ಗಾಡಿಯೋಡಿಸುತ್ತಿದ್ದ ಗಿರಿನಾಯಕ ಯೋಚಿಸುತ್ತಿದ್ದ. ಬೆಳಿಗ್ಗೆ ಎದುರಾದಾಗ ಅಂಬೆ ಕುರು ಸಾಮ್ರಾಜ್ಯದಿಂದ ಸ್ವತಂತ್ರವಾಗಿರಲು ಗಿರಿಜನರಿಗೆ ಸಾಧ್ಯವೇ ಎಂದು ಪ್ರಶ್ನಿಸಿದಳಲ್ಲಾ? ಅವಳ ಮನಸ್ಸಿನಲ್ಲಿ ಏನಿದ್ದಿರಬಹುದು? ಗಿರಿನಗರಿ ಸ್ವತಂತ್ರವಾದರೆ ನಾನೊಬ್ಬ ರಾಜನಾಗಿ ಬಿಡುತ್ತೇನೆ. ಹಾಗಾಗಲು ಸಾಧ್ಯವಿರುತ್ತಿದ್ದರೆ ಅಂಬೆ ಗಿರಿನಗರಿಯಲ್ಲೇ ಉಳಿದು ಬಿಡುತ್ತಿದ್ದಳೆ? ಅವಳಲ್ಲಿ ಅಂಥದ್ದೊಂದು ಭಾವನೆ ಇದ್ದಿರಬಹುದೆ? ಅವಳಿದ್ದ ಮೂರು ದಿನ ಅದೆಷ್ಟು ಸಂತೋಷ ವಾಗಿದ್ದಳು! ಅದು ಕಾಶಿಯಲ್ಲಿ ಸಿಗದ ಅನುಭವಗಳು ಇಲ್ಲಿ ದೊರೆತುದಕ್ಕಾಗಿರಬಹುದು. ಅಥವಾ ಭೀಷ್ಮನಿಂದ ಮತ್ತು ಸಾಲ್ವನಿಂದಾದ ಅಪಮಾನವನ್ನು ತಾತ್ಕಾಲಿಕವಾಗಿ ಮರೆಯಲು ಸಾಧ್ಯವಾದುದಕ್ಕಿರಬಹುದು. ನಾನೆಲ್ಲಿ, ಅವಳೆಲ್ಲಿ? ನನ್ನನ್ನು ಅವಳು ಪತಿಯಾಗಿ ಎಂದೂ ಸ್ವೀಕರಿಸಲಾರಳು. ನನ್ನ ಬರಡು ಜೀವನದಲ್ಲಿ ನದಿಯಾಗಿ ಪ್ರವಹಿಸಿದಳು. ಮೂರೇ ಮೂರುದಿನಗಳಾದರೂ ಚಿಂತಿಲ್ಲ. ಹೊಸ ಉತ್ಸಾಹ ಮೂಡಿಸಿದಳು. ಅಷ್ಟು ಸಾಕು. ಈಗ ಪರಶುರಾಮರಲ್ಲಿಗೆ ಹೋಗುತ್ತಿದ್ದಾಳೆ. ಅವಳ ಸಮಸ್ಯೆಗೆ ಯಾವ ಪರಿಹಾರ, ಯಾರಿಂದ ದೊರೆಯುತ್ತದೆಯೊ?”

ಗಿರಿನಾಯಕನೆಂದ: “ರಾಜಕುವರೀ, ಅಧಿಕ ಪ್ರಸಂಗವೆಂದು ಭಾವಿಸದಿದ್ದರೆ ಒಂದು ಪ್ರಶ್ನೆ. ಪರಶುರಾಮರಲ್ಲಿಗೆ ಹೋಗಿ ನೀವು ಮಾಡುವುದಾದರೂ ಏನನ್ನು?”

ಏನನ್ನೆಂದು ಅವಳಿನ್ನೂ ನಿರ್ಧರಿಸಿರಲಿಲ್ಲ. ಪರಶುರಾಮರಲ್ಲಿ ಇನ್ನಷ್ಟು ಶಸ್ತ್ರಶಾಸ್ತ್ರಾಭ್ಯಾಸ ಮಾಡಿ ಕಾಶಿಗೆ ಹೋಗಿ ಸಿಂಹಾಸನವೇರಿದರೇನು? ಅಪ್ಪ-ಅಮ್ಮ ಬೇಡವೆನ್ನಲಿಕ್ಕಿಲ್ಲ. ಆದರೆ ಸಮಸ್ತ ಆರ್ಯಾವರ್ತದಲ್ಲಿ ಎಲ್ಲೂ ಹೆಣ್ಣೊಬ್ಬಳು ಸಿಂಹಾಸನದಲ್ಲಿ ಕುಳಿತು ರಾಯಭಾರ ಮಾಡುತ್ತಿಲ್ಲ! ಕಾಶೀರಾಜ್ಯವನ್ನು ಹೆಣ್ಣೊಬ್ಬಳು ಆಳುವುದನ್ನು ಆರ್ಯಕುಲದ ಕ್ಷತ್ರಿಯರು ಸಹಿಸಲಾರರು. ಅಲ್ಲದೆ ಇನ್ನೂ ಒಂದು ಸಮಸ್ಯೆ ಎದುರಾಗುತ್ತದೆ. ವೈವಾಹಿಕ ಸಂಬಂಧದಿಂದಾಗಿ ಕಾಶಿ ಈಗ ಹಸ್ತಿನಾವತಿಗೆ ಸೇರಿ ಹೋದಂತಾಗಿದೆ. ಹೆಣ್ಣೊಬ್ಬಳು ಕಾಶಿಯನ್ನು ಆಳುವುದನ್ನು ಕ್ಷತ್ರಿಯರು ಒಪ್ಪಿಕೊಂಡರೂ, ಕಾಶಿಯ ಸಿಂಹಾಸನದಲ್ಲಿರುವವರು ಕುರು ಸಾಮ್ರಾಜ್ಯದ ಸಾಮಂತರಾಗುತ್ತಾರೆ. ಸಾಲ್ವ ಭೂಪತಿಯನ್ನೇ ಗೆದ್ದ ಭೀಷ್ಮನನ್ನು ತಾನು ಸೋಲಿಸಲಾರೆನಾದುದರಿಂದ ತಾನು ಕಾಶಿಗೂ ಹೋಗುವಂತಿಲ್ಲವೆಂದು ಅಂಬೆ ಅಂದುಕೊಂಡಳು.

ಗಿರಿನಾಯಕನ ಪ್ರಶ್ನೆಗುತ್ತರವಾಗಿ ಅಂಬೆಯೆಂದಳು: “ಏನು ಮಾಡುವುದೆಂದು ನನಗೀಗ ಹೊಳೆಯುತ್ತಿಲ್ಲ. ಭವಿಷ್ಯದ ಬಗ್ಗೆ ನಾನೇನನ್ನೂ ಯೋಚಿಸಲಿಲ್ಲ. ಮುಂದೆ ಏನಾಗುತ್ತದೆಯೋ ಯಾರಿಗೆ ಗೊತ್ತು?”

ಗಿರಿನಾಯಕನಿಗೆ ಬೇರೇನೂ ಮಾತಾಡಲು ತೋಚಲಿಲ್ಲ. ಮೌನವಾಗಿ ಹಾದಿ ಸಾಗಿತು. ಆಶ್ರಮ ಕಾಣಿಸಿದಾಗ ಅವ ಗಾಡಿ ನಿಲ್ಲಿಸಿ ಹೇಳಿದ: “ನಾವೀಗ ಆಶ್ರಮದ ಬಳಿಯಿದ್ದೇವೆ ರಾಜಕುಮಾರಿ. ಇಳಿದುಕೊಳ್ಳಿ. ನಾನು ಇನ್ನು ನಿಮ್ಮ ಜತೆ ಬರಲಾರೆ. ಮುಂದಿನದನ್ನು ನೀವೇ ನೋಡಿಕೊಳ್ಳಿ”.

ಬಟ್ಟೆಗಳ ಚೀಲದೊಡನೆ ಅಂಬೆ ಕೆಳಗಿಳಿದಳು. ಮಧುರವಾದ ಧ್ವನಿಯಲ್ಲಿ ಹೇಳಿದಳು. ಗಿರಿನಾಯಕಾ, ನನ್ನ ಜೀವನದಲ್ಲಿ ಒಬ್ಬ ಗೆಳೆಯನಾಗಿ ಉಳಿದವನೆಂದರೆ ನೀನೊಬ್ಬನೇ. ಮೂರು ದಿನ ನನ್ನನ್ನು ಮನೆಯಂಗಳದ ಹೂವಿನಂತೆ ನೋಡಿಕೊಂಡಿದ್ದೀಯಾ. ನಿನ್ನದು ದೊಡ್ಡ ಮನಸ್ಸು. ಗಿರಿನಗರಿಯಲ್ಲಿ ನೀನೊಬ್ಬನೇ ವಿದ್ಯಾವಂತ. ಓದು, ಚಿಂತನೆಗಳಿಲ್ಲದೆ ಯಾವ ಜನಾಂಗವೂ ಮುಂದುವರೆಯಲಾರದು. ನಿನ್ನವರಿಗೆ ವಿದ್ಯಾದಾನ ಮಾಡು. ನಿನ್ನಂಥ ನಾಯಕನನ್ನು ಸೃಷ್ಟಿಸು. ಅದಕ್ಕಾಗಿ ನೀನು ಮದುವೆಯಾಗಬೇಕು. ಸೇವಂತಿಯನ್ನು ಮದುವೆಯಾಗಿ ಗಿರಿನಗರಿಗೊಬ್ಬ ನಾಯಕನನ್ನು ಕೊಟ್ಟು ಬಾಳನ್ನು ಸಾರ್ಥಕಪಡಿಸಿಕೋ. ಕುರು ಸಾಮ್ರಾಜ್ಯಕ್ಕೆ ಸಡ್ಡು ಹೊಡೆಯುವ ಸ್ವತಂತ್ರ ರಾಜ್ಯವೊಂದನ್ನು ಸೃಷ್ಟಿಸಲು ಅವನಿಂದಲಾದರೂ ಸಾಧ್ಯವಾಗಲಿಲ್ಲ.”

ಗಿರಿನಾಯಕ ಮೆತ್ತನೆಯ ಸ್ವರದಲ್ಲೆಂದ: “ರಾಜ್ಯ ಕಟ್ಟುವ, ಸಾಮ್ರಾಜ್ಯಕ್ಕೆದುರಾಗಿ ನಿಂತು ರಕ್ತ ಹರಿಸುವ ಮಾತು ಒತ್ತಟ್ಟಿಗಿರಲಿ ರಾಜಕುಮಾರೀ. ನಿಮಗೆ ಪರಶುರಾಮರ ಆಶ್ರಮ ಹಿತವಾಗದಿದ್ದರೆ ಗಿರಿನಗರಿಗೆ ಬಂದು ಬಿಡಿ. ನಾನು ಹಸ್ತಿನಾವತಿಗೆ ಕಂದಾಯ ಕೊಡುವವನು. ಹಸ್ತಿನಾವತಿ ನನ್ನಂಥವರ ಹಂಗಿನಲ್ಲಿದೆಯೆಂದು ನೀವೇಕೆ ಅಂದುಕೊಳ್ಳಬಾರದು? ನಾನೇನು ಹಸ್ತಿನಾವತಿಯಿಂದಾಗಿ ಬದುಕುತ್ತಿಲ್ಲ. ಹಸ್ತಿನಾವತಿ ನಿಮ್ಮಿಂದಾಗಿ ಬದುಕುತ್ತಿದೆ. ದುಡುಕಿ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ನಿಮಗೆ ಯಾರೂ ಬಾಂಧವರಿಲ್ಲವೆಂದುಕೊಳ್ಳಬೇಡಿ. ನಾನಿದ್ದೇನೆ, ಸಮಸ್ತ ಗಿರಿನಗರಿಯಿದೆ”.

ಈ ಮಾತುಗಳಿಂದ ಅಂಬೆಯ ಹೃದಯ ತುಂಬಿ ಬಂತು. ಗಿರಿನಾಯಕ ಗಾಡಿ ತಿರುಗಿಸಿದ. ಕೊನೆಯ ಬಾರಿಗೆಂಬಂತೆ ಅವಳನ್ನು ಕಣ್ತುಂಬಾ ನೋಡಿದ. ಅವನು ಮನದಲ್ಲೇ ಹೇಳಿಕೊಂಡ: “ಎಲ್ಲಿಂದ ಬಂದೆ ನೀನು? ಎಲ್ಲಿಂದ ಅವತರಿಸಿ ಜೀವನದಲ್ಲಿ ಮಧು ಮಧುರ ಅನುಭೂತಿಗೆ ಕಾರಣಳಾದೆ? ಬಾಳಲ್ಲಿ ಮೂರು ದಿನ ತುಂಬಿದ ನದಿಯಾಗಿ ಹರಿದು ಮಾಯವಾದೆ. ಸಂತೋಷವೆನ್ನುವುದು ಹೆಚ್ಚು ಸಮಯವಿರುವುದಿಲ್ಲ. ಬಾಳನದಿ ಮತ್ತೆ ಬತ್ತಿದೆ. ಗಿರಿನಗರಿಯಲ್ಲಿ ಹೊಸತನವಿಲ್ಲದ ಏಕತಾನತೆ. ಬಂದು ಬಿಡು ರಾಜಕುಮಾರೀ ಮತ್ತೆ ಗಿರಿನಗರಿಗೆ. ಬಂದು ಬಿಡು ನನ್ನ ಬಾಳಲ್ಲಿ ಶಾಶ್ವತ ಸ್ಫೂರ್ತಿಯಾಗಿ”.

ತನ್ನದರ ಹಾಗೆ ಅವಳ ಕಣ್ಣಂಚಿನಲ್ಲೂ ನೀರ ಹನಿಗಳು ಪ್ರತ್ಯಕ್ಷವಾಗುವುದನ್ನು ಅವನು ಕಂಡ. ಅವಳಿಗೆ ಕೈ ಜೋಡಿಸಿ ನಮಸ್ಕರಿಸಿ ಗಾಡಿ ಏರಿ ವೇಗವಾಗಿ ಬಂದ ದಾರಿಯಲ್ಲಿ ಹಿಂದಿರುಗಿದ. ಅಂಬೆ ಆಶ್ರಮದತ್ತ ನಡೆದಳು.

ಆಶ್ರಮ ವಿಶಾಲವಾಗಿತ್ತು. ಎದುರಲ್ಲಿ ದೊಡ್ಡದೊಂಡು ಕೊಳವಿತ್ತು. ಅದು ನೈದಿಲೆಗಳಿಂದ ತುಂಬಿ ಹೋಗಿ ಕಪ್ಪೆಗಳ ಹೊರತು ಬೇರಾವ ಜಲಚರಗಳೂ ಕಣ್ಣಿಗೆ ಬೀಳಲಿಲ್ಲ. ಕೊಳದ ಇಕ್ಕೆಲಗಳಲ್ಲಿ ಸುಂದರವಾದ ಪುಷ್ಪೋದ್ಯಾನ. ಕುಳಿತುಕೊಳ್ಳಲು ಅಲ್ಲಲ್ಲಿ ಕಲ್ಲ ಹಾಸುಗಳು. ತರುಣರ ಎರಡು ಗುಂಪುಗಳು ಯಾವುದೋ ಗಹನವಾದ ಚರ್ಚೆಯಲ್ಲಿ ನಿರತವಾಗಿದ್ದವು. ಅವಳನ್ನು ನೋಡಿಯೂ ಅವರಲ್ಲಿ ಯಾರೊಬ್ಬರೂ ಎದ್ದು ಬರಲಿಲ್ಲ. ಏನು ಮಾಡುವುದೆಂದು ಅವಳು ಯೋಚಿಸು ತ್ತಿರುವಾಗ ಇಳಿ ವಯಸ್ಸಿನ ತಪಸ್ವಿಯೊಬ್ಬ ಕಾಣಿಸಿಕೊಂಡು ಪರಿಚಯ ಮತ್ತು ಬಂದ ಉದ್ದೇಶವನ್ನು ಕೇಳಿದ. ಪರಿಚಯ ಹೇಳಲು ಸಮಸ್ಯೆಯೇನಿರಲಿಲ್ಲ. ಉದ್ದೇಶ ಸ್ಪಷ್ಟವಿಲ್ಲ. ಆಚಾರ್ಯ ಪರಶುರಾಮರನ್ನು ಕಾಣಬೇಕಾಗಿದೆ ಎಂದಷ್ಟೇ ಹೇಳಿದಳು. ಒಳಗೆ ಹೋದ ತಪಸ್ವಿ ಸ್ವಲ್ಪ ಹೊತ್ತಿನಲ್ಲಿ ಮತ್ತೆ ಕಾಣಿಸಿಕೊಂಡ. ಇದು ಆಚಾರ್ಯರು ಈ ತರುಣರಿಗೆ ಶಾಸ್ತ್ರಾಭ್ಯಾಸ ಮಾಡಿಸುವ ಹೊತ್ತು. ಆಶ್ರಮಕ್ಕೆ ಒಬ್ಬಂಟಿಯಾಗಿ ಹೆಣ್ಣು ಮಕ್ಕಳು ಬರಬಾರದೆಂಬ ನಿಯಮವಿದೆ. ನೀನೊಬ್ಬಳೇ ಬಂದಿರುವುದನ್ನು ತಿಳಿದು, ಸಮಸ್ಯೆ ತೀವ್ರವಾದದ್ದೇ ಇರಬೇಕೆಂದು ಭಾವಿಸಿ ತಕ್ಷಣ ನಿನ್ನನ್ನು ಒಳ ಬರ ಹೇಳಿದ್ದಾರೆ. ಆ ದ್ವಾರದಿಂದ ಒಳ ಪ್ರವೇಶಿಸಿದರೆ ಮೊದಲಿಗೆ ಸಿಗುವುದು ಸಾಧನಾಂಗಣ. ಅಲ್ಲಿ ಆಚಾರ್ಯರು ಒಬ್ಬರೇ ಇದ್ದಾರೆ. ಧೈರ್ಯದಿಂದ ಹೋಗು. ಏನನ್ನೂ ಅಡಗಿಸಿಡದೆ, ಎಲ್ಲವನ್ನೂ ಅವರಲ್ಲಿ ಹೇಳಿ ಪರಿಹಾರ ಪಡೆದುಕೋ”.

ಅವಳು ಆಶ್ರಮವೊಂದನ್ನು ನೋಡುತ್ತಿರುವುದು ಇದೇ ಮೊದಲು. ಆರ್ಯಾವರ್ತದ ಅತಿಶ್ರೇಷ್ಠರಾದ ಆಚಾರ್ಯರ ಆಶ್ರಮದ ಗಂಭೀರತೆ ಅವಳಲ್ಲಿ ಅಳುಕನ್ನುಂಟು ಮಾಡಿತು. ಗಿರಿನಗರಿಯೂ ದೂರಕ್ಕೆ ಗಂಭೀರವಾಗಿಯೇ ಕಾಣುತ್ತಿತ್ತು. ಆದರೆ ಅಲ್ಲಿನ ಮಕ್ಕಳು, ಹೆಂಗಳೆಯರು ಮತ್ತು ತರುಣರು ನಿಸರ್ಗಕ್ಕೆ ಜೀವ ಮೂಡಿಸಿದ್ದರು. ಇಲ್ಲಿ ಹಾಗಿಲ್ಲ. ತಾನು ಏನು ಹೇಳಿದರೆ ಎಲ್ಲಿ ತಪ್ಪಾಗಿ ಬಿಡುತ್ತದೆಯೋ ಎಂಬ ಭಾವನೆಯಿಂದ ಅವಳು ಅಧೀರಳಾದಳು. ಪರಶುರಾಮರ ಬಗ್ಗೆ ಅಪ್ಪ ಹೇಳುತ್ತಿದ್ದುದನ್ನು ನೆನಪಿಸಿಕೊಂಡಳು. “ಶೀಘ್ರ ಕೋಪಿ. ಆರ್ಯಾವರ್ತದ ಸಕಲ ಸಂಕಷ್ಟಗಳಿಗೆ ಅಧಿಕಾರ, ಧನ ಮತ್ತು ಬಾಹುಬಲಗಳಿಂದ ಕೊಬ್ಬಿರುವ ಕ್ಷತ್ರಿಯರೇ ಕಾರಣರೆಂದು ತಿಳಿದುಕೊಂಡಿರುವವರು. ಶೋಷಣೆಗೆ ಒಳಗಾದವರ ಪಕ್ಷ ವಹಿಸಿ ನ್ಯಾಯಕ್ಕಾಗಿ ಹೋರಾಡುವ ಮಹಾತ್ಮರು”.

ಈಗ ಅವಳಿಗೆ ಧೈರ್ಯ ಬಂತು. ಆಚಾರ್ಯರು ತನಗೊಂದು ದಾರಿ ತೋರಿಸಿಕೊಟ್ಟೇ ಕೊಡುತ್ತಾರೆಂಬ ಭರವಸೆಯೊಡನೆ ಅವಳು ಒಳ ಪ್ರವೇಶಿಸಿದಳು. ಪರಶುರಾಮರು ಈಚಲ ಚಾಪೆಯಲ್ಲಿ ದರ್ಭೆಗಳನ್ನು ಹರಡಿ ಅಚಲರಾಗಿ ಧ್ಯಾನಸ್ಥ ಭಂಗಿಯಲ್ಲಿ ಕುಳಿತಿದ್ದರು. ಉದ್ದನೆಯ ಬಿಳಿಗಡ್ಡ, ಬಿಳಿಯ ಶಿಖೆ, ಮುಖದಲ್ಲಿ ದಿವ್ಯ ತೇಜಸ್ಸು. ಮಾನವನಿಗೆ ವರ್ಣ ಮತ್ತು ಜಾತಿಗಳು ಅಗತ್ಯವೇ ಅಲ್ಲವೆಂಬುದನ್ನು ಸಮಸ್ತ ಭೂಮಂಡಲಕ್ಕೆ ತೋರಿಸಿಕೊಟ್ಟ ಮಹಾತ್ಮರು. ಪಶು ಸಂಗೋಪನೆಯಿಂದ ಅಲೆಮಾರಿ ಬದುಕು ಸಾಗಿಸುತ್ತಿದ್ದ ಆರ್ಯರನ್ನು ಭೂ ವ್ಯವಸಾಯದತ್ತ ಸೆಳೆದವರು. ಆರ್ಯಾವರ್ತವನ್ನು ಪೂರ್ಣವಾಗಿ ಕಾಲ್ನಡಿಗೆಯಲ್ಲಿ ಕ್ರಮಿಸಿ ಅಪಾರ ಲೋಕಜ್ಞಾನ ಸಂಪಾದಿಸಿದವರು. ಆರ್ಯಾವರ್ತದ ಅಷ್ಟೂ ರಾಜರುಗಳಿಗೆ ಬುದ್ಧಿ ಹೇಳಬಲ್ಲ, ಅಗತ್ಯಬಿದ್ದರೆ ಬುದ್ಧಿ ಕಲಿಸಬಲ್ಲ ಎತ್ತರದಲ್ಲಿರುವವರು. ಇಂಥವರ ಶಿಷ್ಯಳಾಗಲು ಪುಣ್ಯ ಬೇಕೆಂದುಕೊಂಡು ಅಂಬೆ ಆಚಾರ್ಯರಿಗೆ ಸಾಷ್ಟಾಂಗ ವಂದಿಸಿದಳು.

ಪರಶುರಾಮರು ಕಣ್ಣು ತೆರೆದರು. ಅಂಬೆಯನ್ನು ಆಪಾದಮಸ್ತಕ ವೀಕ್ಷಿಸಿ ಗಂಭೀರ ಸ್ವರದಲ್ಲಿ ಹೇಳಿದರು: “ಕಾಶೀರಾಜಕುಮಾರಿ ಅಂಬೆ ಬಂದಿದ್ದಾಳೆಂದು ತಪಸ್ವಿ ತಿಳಿಸಿದ. ಒಬ್ಬಳೇ ಬಂದಿದ್ದೀಯಂತೆ, ಕುಳಿತುಕೋ. ಬಂದ ಕಾರಣವನ್ನು ಅಳುಕಿಲ್ಲದೆ ತಿಳಿಸು”.

ಅಂಬೆ ಅಲ್ಲೇ ನೆಲದಲ್ಲಿ ಕುಳಿತುಕೊಂಡಳು. ಮರೆಯಬೇಕೆಂದಿದ್ದ ಇತಿಹಾಸವನ್ನು ಆಚಾರ್ಯರೆದುರು ಹೇಳುತ್ತಾ ಹೋದಳು. ಅಪ್ಪ ಪ್ರತಾಪಸೇನ ಮಹಾರಾಜ ಶೌರ್ಯವನ್ನು ಪಣವಾಗಿರಿಸಿ ಸ್ವಯಂವರವನ್ನು ಏರ್ಪಡಿಸಿದ್ದು, ಅನೂಹ್ಯವಾಗಿ ಅವಳು ಸಾಲ್ವಭೂಪತಿಯನ್ನು ಕಾಶಿಯ ಉಪವನದ ಸರೋವರದಲ್ಲಿ ಸಂಧಿಸಿದ್ದು, ಆಮಂತ್ರಣವಿಲ್ಲದ ಭೀಷ್ಮ ಸ್ವಯಂವರ ಮಂಟಪಕ್ಕೆ ನುಗ್ಗಿ ಸಾಲ್ವ ಭೂಪತಿಯನ್ನು ಸೋಲಿಸಿ ಹಸ್ತಿನಾವತಿಗೆ ಕರೆ ತಂದದ್ದು, ಅಲ್ಲಿಂದ ಸೌಭಕ್ಕೆ ಹೋಗಿ ಅವಳು ಸಾಲ್ವಭೂಪತಿಯಿಂದ ತಿರಸ್ಕೃತಳಾದದ್ದು, ಗಿರಿನಗರಿಯಲ್ಲಿ ಅವಳ ಜೀವಿತದ ಮೂರು ಅತ್ಯಂತ ಸುಂದರ ದಿನಗಳನ್ನು ಕಳೆದದ್ದು, ಇನ್ನು ಮುಂದೆ ಯೋಗಿನಿಯಾಗಿ ಆಶ್ರಮದಲ್ಲಿರಲು ತೀರ್ಮಾನಿಸಿದ್ದು, ಶಸ್ತ್ರ ಮತ್ತು ಶಾಸ್ತ್ರ ವಿದ್ಯಾ ಪಾರಂಗತಳಾಗಲು ಆಚಾರ್ಯ ಪರಶುರಾಮರನ್ನು ಏಕಪಕ್ಷೀಯವಾಗಿ ಆರಿಸಿಕೊಂಡದ್ದು.

ಕತೆ ಕೇಳಿ ಅವರ ಹುಬ್ಬುಗಳು ಮೇಲೇರಿದವು. ಸಾಂತ್ವನದ ಸ್ವರದಲ್ಲಿ ಅವರೆಂದರು: “ನಿನಗೆ ತುಂಬಾ ಅನ್ಯಾಯವಾಗಿದೆ ಮಗಳೇ. ಆದರೆ ನಿನ್ನ ನಿರ್ಣಯ ಸರಿಯಿಲ್ಲ. ನನ್ನ ಅಮ್ಮ ರೇಣುಕೆ ರಾಜಕುಮಾರಿಯಾಗಿದ್ದವಳು. ಆಶ್ರಮದಲ್ಲಿ ಅವಳ ಬದುಕು ಸಂತೋಷದಾಯಕ ವಾಗಿರಲಿಲ್ಲ. ಜಾತಿ, ವರ್ಣ, ಹೆಚ್ಚೇಕೆ? ಇಡೀ ವಿಶ್ವವನ್ನೇ ಗೆದ್ದಿದ್ದೇವೆಂದುಕೊಂಡಿರುವ ಋಷಿ ಮುನಿಗಳು ಕಾಮಕ್ರರೋಧಗಳನ್ನು ಗೆದ್ದಿರುವುದಿಲ್ಲ. ಅದರ ನಿಜವಾದ ಅರ್ಥದಲ್ಲಿ ಬ್ರಹ್ಮಚರ್ಯ ವ್ರತ ಪಾಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬ್ರಹ್ಮಚಾರಿಗಳೆಂದು ಕರೆಸಿಕೊಳ್ಳುವವರು ಚಿತ್ತ ಚಾಂಚಲ್ಯಕ್ಕೊಳಗಾಗುತ್ತಾರೆ. ಸಂಸಾರಿಯಾಗಿದ್ದರೂ ನನ್ನಪ್ಪ ಜಮದಗ್ನಿ ಋಷಿಗಳು ಉರಿಯುವ ಕೆಂಡದಂತಿದ್ದರು.”

ನಾವೂ ಮನುಷ್ಯರೇ. ನೀನೀಗ ನನ್ನ ಶಿಷ್ಯವೃತ್ತಿಯನ್ನು ಅಂಗೀಕರಿಸಲು ಬಂದಿದ್ದಿ. ಈವರೆಗೆ ನಾನು ಹೆಣ್ಣು ಮಕ್ಕಳಿಗೆ ಶಸ್ತ್ರ ಮತ್ತು ಶಾಸ್ತ್ರಾಭ್ಯಾಸ ಮಾಡಿಸಿದವನಲ್ಲ. ಕಲಿಸಬಾರದೆಂಬ ಶಠತ್ವವೂ ನನ್ನದಲ್ಲ. ಆದರೆ ಶಸ್ತ್ರ ಮತ್ತು ಶಾಸ್ತ್ರ ಕಲಿಕೆಯಿಂದ ನಿನಗಾಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದಿಲ್ಲ. ಕ್ಷತ್ರಿಯನೆಂಬ ಅಹಂಕಾರದಿಂದ ನಿನ್ನಪ್ಪ ಶೌರ್ಯವನ್ನು ಪಣವಾಗಿರಿಸಿದ. ತಮ್ಮ ಪ್ರತಿಷ್ಠೆಗೆ ಭಂಗ ಬಂತೆಂಬ ಅಹಂಭಾವದಿಂದ ಸಾಲ್ವ ಮತ್ತು ಭೀಷ್ಮ ವಿವಾಹ ಮಂಟಪಕ್ಕೆ ಬರುವಂತಾಯಿತು. ಸಮಸ್ಯೆ ಸೃಷ್ಟಿಸಿದವರು ಇವರು. ಈಗ ನೀನು ಇವರಿಬ್ಬರಲ್ಲಿ ಒಬ್ಬನನ್ನು ಆರಿಸಬೇಕು. ಸ್ವಯಂ ನಾನೇ ನಿನ್ನೊಡನೆ ಬರುತ್ತೇನೆ. ನೀನು ಯಾರನ್ನು ಆರಿಸುತ್ತೀಯೋ ಅವನೊಡನೆ ನಿನ್ನ ವಿವಾಹ ಮಾಡಿಸುತ್ತೇನೆ. ಅನ್ಯ ಯೋಚನೆ ಬಿಟ್ಟು ಬಿಡು. ನನ್ನ ಮಾತನ್ನು ಉಲ್ಲಂಘಿಸುವ ಎದೆಗಾರಿಕೆ ಆರ್ಯಾವರ್ತದಲ್ಲಿ ಯಾರಿಗೂ ಇಲ್ಲ. ಯೋಚಿಸಿ ತೀರ್ಮಾನಿಸು ಎಂದು ಹೇಳಿ ಧ್ಯಾನಮಗ್ನರಾದರು.

ಅವಳ ಮನಸ್ಸು ಗೊಂದಲದ ಗೂಡಾಯಿತು. ಅವಳು ಯೋಚಿಸತೊಡಗಿದಳು. ಸಮಸ್ಯೆಯ ಪರಿಹಾರಕ್ಕೆಂದು ನಾನಿಲ್ಲಿಗೆ ಬಂದರೆ ಆಚಾರ್ಯರು ಹೊಸ ಸಮಸ್ಯೆ ಹುಟ್ಟುಹಾಕಿದ್ದಾರೆ. ನನ್ನನ್ನು ತಿರಸ್ಕರಿಸಿದ ಸಾಲ್ವಭೂಪತಿ ಮತ್ತು ಭೀಷ್ಮರಲ್ಲಿ ಒಬ್ಬನನ್ನು ನಾನು ಆಯ್ಕೆ ಮಾಡಬೇಕು. ಸಾಲ್ವಭೂಪತಿ ನನ್ನ ಹೃದಯವನ್ನು ಗೆದ್ದವನು. ಅವನನ್ನೇ ಆರಿಸಿ ಪರಶುರಾಮರ ಅನುಗ್ರಹದಿಂದ ಸುಖವಾಗಿ ಇದ್ದುಬಿಡಲೆ? ಆದರೆ ಅವನು ಪ್ರತಿಷ್ಠೆಗಾಗಿ ಪ್ರೀತಿಯನ್ನು ಬಲಿಕೊಟ್ಟ ಮೂರ್ಖ. ಆಚಾರ್ಯರು ಆಜ್ಞಾಪಿಸಿದರೆ ಹೆದರಿ ನನ್ನನ್ನು ಮದುವೆಯಾಗಲು ಒಪ್ಪಲೂಬಹುದು. ಅದು ಬಲಾತ್ಕಾರದ ವಿವಾಹವಾಗುತ್ತದೆ. ಮನಸ್ಸು ಮುರಿದು ಹೋದ ಮೇಲೆ ಮದುವೆಯಲ್ಲಿ ಯಾವ ಸುಖವಿರುತ್ತದೆ? ನನಗೂ ಅಷ್ಟೇ. ಅವನಲ್ಲಿ ಮೊದಲಿನ ಪ್ರೀತಿ ಉಳಿದಿಲ್ಲ. ಅವನ ನೆನಪಾದಾಗ ಸ್ಫೂರ್ತಿ ಉಕ್ಕುವುದಿಲ್ಲ? ರೋಮಾಂಚನವಾಗುವುದಿಲ್ಲ. ಪ್ರೀತಿಯಿಲ್ಲದ ಮದುವೆಗೆ ಅರ್ಥ ವಿದೆಯಾ? ಪ್ರೀತಿಗಾಗಿ ಪ್ರತಿಷ್ಠೆಯನ್ನು ತ್ಯಾಗ ಮಾಡಲಾಗದವನೂ ಒಬ್ಬ ಗಂಡಸಾ?

ಒಂದು ವೇಳೆ ಸಾಲ್ವ ಭೂಪತಿಯೊಡನೆ ನನ್ನ ವಿವಾಹವಾದರೆ ಅವನು ಪ್ರತಿದಿನ ನನ್ನನ್ನು ಹಂಗಿಸುತ್ತಾನೆ. ಭೀಷ್ಮನ ರಥವೇರಿದವಳು, ಹಸ್ತಿನಾವತಿಯ ಭಿಕ್ಷೆ ಎಂದು ಚುಚ್ಚುತ್ತಾನೆ. ಸ್ವಯಂವರ ಮಂಟಪದಲ್ಲಾದ ಅಪಮಾನವನ್ನು ಅವನು ಜೀವನದುದ್ದಕ್ಕೂ ನೆನಪಿಟ್ಟುಕೊಂಡಿರುತ್ತಾನೆ. ಅವನ ಅಷ್ಟೂ ಮಂದಿ ಸಭಾಸದರಲ್ಲಿ ಒಬ್ಬನೇ ಒಬ್ಬ ನನ್ನ ಪರವಾಗಿ ಒಂದೇ ಒಂದು ಮಾತನ್ನು ಹೇಳಲಿಲ್ಲ. ಮೂರ್ಖ ದೊರೆಯ ಪರಮ ಮೂರ್ಖ ಪ್ರಜೆಗಳು! ಅವನು ನನ್ನ ಕೈ ಹಿಡಿದಿದ್ದರೆ ಆರ್ಯಾವರ್ತದ ರೂಢಧರ್ಮವನ್ನು ಬದಲಾಯಿಸಬಹುದಿತ್ತು. ಇನ್ನು ಅವನನ್ನು ಜೀವನ ಪರ್ಯಂತ ಕೊರೆಯುವುದು ಎರಡೇ: ಅಪಮಾನ ಮತ್ತು ವಿರಹ! ಬೇಡ. ಒತ್ತಾಯದ ಮದುವೆ ಬೇಡ. ಅವನಿಗಿಂತ ಗಿರಿನಾಯಕ ಸಾವಿರ ಪಟ್ಟು ಉತ್ತಮನು. ಗಿರಿನಾಯಕನಲ್ಲಿ ನೋವಿಗೆ ಮಿಡಿಯುವ ಹೃದಯವಿದೆ. ಮತ್ತೆ ನಾನು ಗಿರಿನಗರಿಗೆ ಹಿಂದಿರುಗಿದರೆ ತೆರೆದ ಹೃದಯದಿಂದ ಸ್ವಾಗತಿಸುತ್ತಾನೆ. ಸಾಲ್ವ ಭೂಪತಿಯಲ್ಲಿ ರೂಪವಿದೆ, ಯೌವ್ವನವಿದೆ, ಶೌರ್ಯವಿದೆ, ಸಿರಿವಂತಿಕೆಯಿದೆ, ಸುಸಂಸ್ಕೃತ ನಡವಳಿಕೆಯಿದೆ. ಆದರೆ ಅಸಹಾಯ ಹೆಣ್ಣಿನ ನೋವಿಗೆ ಮಿಡಿಯುವ ಹೃದಯವಿಲ್ಲ. ಅಂಥವನನ್ನು ನಾನು ಗಂಡು ಎಂದು ಭಾವಿಸಲಾರೆ. ನನ್ನ ಪತಿಯನ್ನಾಗಿ ಅಂಗೀಕರಿಸಲಾರೆ.

ಹಾಗಾದರೆ ನನ್ನ ಅನಿವಾರ್ಯ ಆಯ್ಕೆ ಭೀಷ್ಮ! ಗುರುಗಳ ಮಾತನ್ನು ಗೌರವಿಸಿ ಬ್ರಹ್ಮ ಚರ್ಯವನ್ನು ತ್ಯಜಿಸಿ ಭೀಷ್ಮ ನನ್ನನ್ನು ವರಿಸಿಯಾನೆ? ಎಂದಿಗೂ ಇಲ್ಲ. ನಾನು ಭೀಷ್ಮನನ್ನೇ ಆಯ್ಕೆ ಮಾಡಬೇಕೇಕೆ? ಪರಶುರಾಮರ ಮಾತಿಗಾಗಿ! ಕಾಶಿಯಿಂದ ಭೀಷ್ಮನ ರಥವೇರಿ ಹಸ್ತಿನಾವತಿಗೆ ನಾನು ಹೊರಟಾಗ ಅವನ ಬಗ್ಗೆ ಅಪಾರ ಗೌರವವಿತ್ತು. ಸಾಲ್ವ ಭೂಪತಿಯಿಂದ ತಿರಸ್ಕೃತಳಾಗುವವರೆಗೂ ಆ ಗೌರವ ಹಾಗೆಯೇ ಇತ್ತು. ಮತ್ತದು ಮಾಯವಾಯಿತು. ಗೌರವದ ಸ್ಥಾನದಲ್ಲಿ ಈಗಿರುವುದು ಪ್ರತೀಕಾರದ ಮನೋಭಾವ. ಆ ಭೀಷ್ಮ ಸ್ವಯಂವರ ಕಣಕ್ಕೆ ಬಾರದಿರುತ್ತಿದ್ದರೆ ನಾನು ಸಾಲ್ವ ಭೂಪತಿಯ ರಾಣಿಯಾಗಿ ಬಿಡುತ್ತಿದ್ದೆ. ಭೀಷ್ಮ ನನ್ನ ಬಾಳನ್ನು ಹಾಳು ಮಾಡಿದ. ಕುರು ಸಾಮ್ರಾಜ್ಯದ ಪೊಳ್ಳು ಪ್ರತಿಷ್ಠೆ ಮತ್ತು ಹೆಗ್ಗಳಿಕೆಗಾಗಿ ಉಳಿಸಿಕೊಂಡ ಪ್ರತಿಜ್ಞೆಯ ನಿಷ್ಠೆಯೆದುರು ಅವನಿಗೆ ಹೆಣ್ಣೊಬ್ಬಳ ಭವಿಷ್ಯ ಏನೇನೂ ಅಲ್ಲ. ಅವನಿಂದಾಗಿ ಅಸಹಾಯ ಹೆಣ್ಣೊಬ್ಬಳ ಬಾಳು ಹಾಳಾದರೆ ಅವನಿಗೆ ನೋವಾಗುವುದಿಲ್ಲ. ಅವನು ಪಶ್ಚಾತ್ತಾಪ ಪಡುವುದಿಲ್ಲ. ಅವನದು ಪರಮ ಧಾಷ್ಟ್ರ್ಯ. ಭೀಷ್ಮನೇ ಹೆಂಗಳೆಯರನ್ನು ಹೀಗೆ ನಡೆಸಿಕೊಳ್ಳುತ್ತಾನೆಂದಾದರೆ ಆರ್ಯಾವರ್ತದಲ್ಲಿ ಸ್ತ್ರೀಯರು ಸುಖವಾಗಿರಲು ಸಾಧ್ಯವೇ ಆಗುವುದಿಲ್ಲ. ಅವನಿಗೊಂದು ಪಾಠ ಕಲಿಸಬೇಕು. ಅದು ಆಚಾರ್ಯ ಪರಶುರಾಮರಿಂದ ಮಾತ್ರ ಸಾಧ್ಯ.

ಸ್ವಲ್ಪ ಹೊತ್ತಿನ ಬಳಿಕ ಆಚಾರ್ಯರು ಕಣ್ಣು ತೆರೆದು ಆಪ್ಯಾಯಮಾನತೆಯಿಂದ ಕೇಳಿದರು: “ಯಾವ ನಿರ್ಧಾರಕ್ಕೆ ಬಂದಿದ್ದೀಯಾ ಮಗಳೇ?”

ಅಂಬೆ ವಿನೀತ ಭಾವದಿಂದ ನುಡಿದಳು: ಪೂಜ್ಯರೆ, ನನಗೀಗ ಸಾಲ್ವ ಭೂಪತಿಯನ್ನಾಗಲೀ, ಭೀಷ್ಮನನ್ನಾಗಲೀ ವಿವಾಹವಾಗುವ ಇಚ್ಛೆಯಿಲ್ಲ. ಯಾವನೋ ಒಬ್ಬನಿಗೆ ಈ ದೇಹದ ಅಧಿಪತ್ಯವನ್ನು ಒಪ್ಪಿಸಿ, ಅವನ ಮೂರ್ಖತನಗಳನ್ನು ಸಹಿಸಿಕೊಂಡು, ಜೀವನ ಪರ್ಯಂತ ಅವನ ದಾಸಿಯಾಗಿ ಪತಿವ್ರತೆಯೆಂದು ಕರೆಸಿಕೊಳ್ಳುವ ಹಂಬಲ ನನಗಿಲ್ಲ. ವಿವಾಹ ಬಂಧನದಿಂದ ದೂರವಾಗಿ ಆರ್ಯಾವರ್ತಕ್ಕೇ ಅನುಕರಣೀಯ ಪಥವನ್ನು ನಿರ್ಮಿಸಿದವರು ನೀವು. ಕಾಶಿಯಲ್ಲಿ ನಾನು ಸ್ವಲ್ಪ ಶಾಸ್ತ್ರಾಭ್ಯಾಸ ಮಾಡಿದವಳು. ನನಗೆ ಜ್ಞಾನ ಸಂಪನ್ನೆಯಾಗುವ ಆಸೆಯಿದೆ. ನಿಮ್ಮಿಂದ ಶಸ್ತ್ರಾಭ್ಯಾಸ ಮಾಡಿಸಿಕೊಳ್ಳುವ ಕನಸನ್ನು ಕಾಣುತ್ತಿದ್ದೇನೆ. ಆರ್ಯಾವರ್ತದ ಹೆಂಗಳೆಯರಿಗೆ ಹೊಸದೊಂದು ಹಾದಿಯನ್ನು ಹಾಕಿಕೊಡುವ ಮಹತ್ವಾಕಾಂಕ್ಷೆ ನನ್ನದು. ಅದನ್ನು ಈಡೇರಿಸಲು ಸಹಕರಿಸುತ್ತೀರಾ?”

ಪರಶುರಾಮರ ಮುಖದಲ್ಲಿ ಪ್ರಸನ್ನತೆ ಗೋಚರಿಸಿತು. ನಿನ್ನ ಆಕಾಂಕ್ಷೆ ಸಾಧುವಾದದ್ದು ಮಗಳೇ. ಆದರೆ ನಿನಗಾದ ಅನ್ಯಾಯವನ್ನು ವ್ಯಷ್ಟಿಯಾಗಿ ನಾನು ನೋಡುತ್ತಿಲ್ಲ. ಸಮಸ್ಯೆಯೊಂದನ್ನು ಸಮಷ್ಟಿಯಾಗಿ ನೋಡುವುದು ನನ್ನ ಸ್ವಭಾವ. ಒಬ್ಬಳು ಅಂಬೆಗೆ ಅನ್ಯಾಯವಾಗುವಾಗ ವಿಶಾಲವಾದ ಈ ಆರ್ಯಾವರ್ತದಲ್ಲಿ ಪ್ರತಿಭಟಿಸುವವರು ಒಬ್ಬರೇ ಒಬ್ಬರಿಲ್ಲವೆಂದಾದರೆ ಸ್ತ್ರೀ ಸಂಕುಲದ ಮೇಲಿನ ದೌರ್ಜನ್ಯ ಅತಿರೇಕಕ್ಕೆ ಹೋಗುತ್ತದೆ. ನಿನ್ನ ಕಲಿಕೆಯ ಬಗ್ಗೆ ಮತ್ತೆ ಯೋಚಿಸೋಣ. ಭೀಷ್ಮ ಮತ್ತು ಸಾಲ್ವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಿ?”

ತಕ್ಷಣ ಅಂಬೆಯೆಂದಳು: “ಭೀಷ್ಮನನ್ನು ಪೂಜ್ಯರೆ, ನನ್ನ ಬಾಳನ್ನು ಹಾಳು ಮಾಡಿದವನು ಅವನು. ಸರಿಪಡಿಸಬೇಕಾದವನೂ ಅವನೇ”

ಪರಶುರಾಮರು ತಲೆದೂಗಿದರು: “ಇದೀಗ ಸರಿಯಾದ ಮಾತು. ಆಶ್ರಮದ ಉಪಯೋಗಕ್ಕೆಂದು ರಥವೊಂದು ನಮ್ಮಲ್ಲಿದೆ. ನಾಲ್ಕು ಕುದುರೆಗಳೂ ಇವೆ. ನಾಳೆ ನಾವು ಹಸ್ತಿನಾವತಿಗೆ ಹೋಗಲಿದ್ದೇವೆ. ನಿನ್ನ ಈವರೆಗಿನ ಸಂಕಷ್ಟಗಳಿಗೆ ನಾಳೆ ಮುಕ್ತಿ ದೊರೆಯುತ್ತದೆ.”

ಮತ್ತೆ ಹಸ್ತಿನಾವತಿಗೆ! ಗಾಬರಿಯಿಂದ ಅಂಬೆಯೆಂದಳು: “ಪೂಜ್ಯರೆ, ಹಸ್ತಿನಾವತಿಗೆ ಹೋಗಲು ಮನಸ್ಸು ಹಿಂಜರಿಯುತ್ತಿದೆ. ಭೀಷ್ಮನನ್ನು ಇಲ್ಲಿಗೇ ಕರೆಸಲು ಸಾಧ್ಯವೆ?”

ಪರಶುರಾಮರು ತಲೆಯಲುಗಿಸಿದರು. “ಸಾಧ್ಯವಿದೆ. ಆದರೆ ಅದಕ್ಕೆ ತುಂಬಾ ಸಮಯ ಬೇಕಾಗಬಹುದು. ಅವನು ಇಲ್ಲಿಗೆ ಬರಬೇಕಾದರೆ ನಾನು ವಾರ್ತಾವಾಹಕರನ್ನು ಕಳುಹಿಸಿ ಕಾರಣ ತಿಳಿಸಬೇಕಾಗುತ್ತದೆ. ಅವನು ರಾಜಕಾರಣದ ನೆಪವೊಡ್ಡಿ ಬೇಕೆಂದೇ ತಡಮಾಡಬಹುದು. ನನ್ನ ಮಾತಿಗೆ ಗೌರವವಿತ್ತು ಬಂದರೂ ಆಶ್ರಮದ ಈ ಪ್ರಶಾಂತತೆಯಲ್ಲಿ, ಬ್ರಹ್ಮಚಾರಿಗಳ ಸಮ್ಮುಖದಲ್ಲಿ ಏನೇನೋ ಮಾತುಗಳು ಬರುವುದು ನನಗಿಷ್ಟವಿಲ್ಲ. ನಾಳೆಯೇ ನಾವು ಹಸ್ತಿನಾವತಿಗೆ ಹೋಗಿಬಿಟ್ಟರೆ ಅವನಿಗೆ ಯೋಚಿಸಲು ಸಮಯವಿರುವುದಿಲ್ಲ. ನಿನ್ನ ಪರವಾಗಿ ನಾನು ಮಾತಾಡುವಾಗ ಅವನ ನೈತಿಕ ಸ್ಥೈರ್ಯ ಉಡುಗುತ್ತದೆ. ಅವನ ಮಾತುಗಳು ಅರ್ಥ ಕಳಕೊಳ್ಳುತ್ತವೆ. ಗುರುವಾಕ್ಯವನ್ನು ಅವನು ಉಲ್ಲಂಘಿಸಲಾರ. ನನಗೆ ಎದುರಾಡಿದರೆ ಅವನ ಸೊಕ್ಕನ್ನು ಮುರಿದೇ ನಾನು ಹಿಂದಿರುಗುವುದು. ಇನ್ನು ವಾದ ಬೇಡ. ಈ ತಪಸ್ವಿ ನಿನ್ನನ್ನು ಅವನ ಕುಟೀರಕ್ಕೆ ಕರೆದು ಕೊಂಡು ಹೋಗುತ್ತಾನೆ. ಅವನು ಸಂಸಾರಸ್ಥ. ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದುಬಿಡು. ಎಷ್ಟು ಸಾಧ್ಯವೋ ಅಷ್ಟು ಬೇಗ ಹಸ್ತಿನಾವತಿಗೆ ಹೋಗಿ ಬಿಡುವಾ.”

ತಪಸ್ವಿಯ ಕುಟೀರ ದೊಡ್ಡದಿತ್ತು. ಅವನಿಗೆ ಅಂಬೆಯ ಪ್ರಾಯದ ಮಗಳೊಬ್ಬಳಿದ್ದಳು. ಅವಳು ಮಧುಭಾಷಿಣಿ. ಅವಳ ಪುಟ್ಟ ಮಗಳು ನೀಹಾರಿಕಾ ಅಂಬೆಗಿಷ್ಟವಾದಳು. ರಾತ್ರಿ ಅಂಬೆ ಮಧುಭಾಷಿಣಿಯ ಪಕ್ಕದಲ್ಲಿ ಮಲಗಿಕೊಂಡಾಗ ಅವಳು ತನ್ನ ನೋವಿನ ಕತೆಯನ್ನು ಹೇಳಿಕೊಂಡಳು. ಮಧುಭಾಷಿಣಿ ಶಿಕ್ಷಣವೇ ಇಲ್ಲದೆ ಬೆಳೆದವಳು. ಸ್ತ್ರೀಯರಿಗೆ ಶಿಕ್ಷಣ ನೀಡುವುದು ಧರ್ಮಬಾಹಿರ ಕೃತ್ಯವೆಂದು ಅವಳಪ್ಪ ಅಂದುಕೊಂಡಿದ್ದ. ನಾಲ್ಕು ವರ್ಷಗಳ ಹಿಂದೆ ಪರಶುರಾಮ ರಲ್ಲಿಗೆ ಶಿಕ್ಷಣಾರ್ಥಿಯಾಗಿ ಬಂದಿದ್ದವನೊಬ್ಬ ಮಧುಭಾಷಿಣಿಯನ್ನು ಮೋಹಿಸಿ, ಮದುವೆಯಾಗುವುದಾಗಿ ನಂಬಿಸಿ, ಇವಳ ಉದರದಲ್ಲಿ ಶಿಶುವೊಂದನ್ನು ಪ್ರಸಾದಿಸಿ ರಾತ್ರೋರಾತ್ರಿ ಕಣ್ಮರೆಯಾಗಿದ್ದ. ಅವನದು ಬಹಳ ದೂರದ ಪ್ರಾಗ್ಜೋತಿಷಪುರ. ಅಲ್ಲಿಗೆ ಬದರಿಕಾಶ್ರಮದಿಂದ ಏನಿಲ್ಲವೆಂದರೂ ಎಂಬತ್ತು ಯೋಜನ ದೂರ. ಹುಡುಕಿಕೊಂಡು ಹೋದರೂ ಅವನಲ್ಲಿ ಸಿಗುತ್ತಾನೆಂಬ ಭರವಸೆ ಇಲ್ಲದುದರಿಂದ ತಪಸ್ವಿ ಹತಾಶನಾಗಿದ್ದ. ಪರಶುರಾಮರಿಗೆ ಈ ವಿಷಯ ತಿಳಿಸುವುದು ಹೇಗೆಂದು ಅವನು ಒದ್ದಾಡತೊಡಗಿದ. ಹೀಗಾದ ಮೇಲೆ ಅಪ್ಪನೇ ಮಗಳಿಗೆ ಶಾಸ್ತ್ರಾಧ್ಯಯನಕ್ಕೆ ಅನುವು ಮಾಡಿಕೊಟ್ಟ. ವಿಷಯ ಪರಶುರಾಮರಿಗೆ ಹೇಗೋ ಗೊತ್ತಾಯಿತು. ಅವರು ತಪಸ್ವಿಯ ಕೃತ್ಯವನ್ನು ಪ್ರೋತ್ಸಾಹಿಸಿದರು. ಈಗ ಮಧುಭಾಷಿಣಿಗಿರುವುದು ಒಂದೇ ಗುರಿ. ಸ್ತ್ರೀಯರದ್ದೊಂದು ಆಶ್ರಮ ಆರಂಭಿಸಿ ಅವರಿಗೆ ಶಸ್ತ್ರ ಮತ್ತು ಶಾಸ್ತ್ರ ಶಿಕ್ಷಣ ನೀಡುವುದು.

ಮಧುಭಾಷಿಣಿ ಜೀವನವನ್ನು ಸ್ವೀಕರಿಸಿದ ರೀತಿಯನ್ನು ಅಂಬೆ ಮೆಚ್ಚಿಕೊಂಡಳು. ತಾನು ಇವಳೊಂದಿಗೆ ಕೈ ಜೋಡಿಸಿದರೇನೆಂದು ಅಂಬೆ ತನ್ನನ್ನು ಪ್ರಶ್ನಿಸಿಕೊಂಡಳು. ವಟುವೊಬ್ಬನಿಂದ ಮೋಸಹೋದ ತಪಸ್ವಿ ಪುತ್ರಿ ಮಧುಭಾಷಿಣಿ ಅದನ್ನೊಂದು ಸವಾಲಾಗಿ ಸ್ವೀಕರಿಸಿ ಸ್ತ್ರೀ ಸಂಕುಲದ ಸಮಷ್ಟಿ ಅಭ್ಯುದಯಕ್ಕಾಗಿ ಪುಟ್ಟದೊಂದು ಹೆಜ್ಜೆ ಇಟ್ಟಿದ್ದಾಳೆ. ಇವಳಿಗೆ ಬೆಂಬಲ ದೊರೆತರೆ ಅದರಲ್ಲಿ ಯಶಸ್ವಿಯಾಗುತ್ತಾಳೆ. ಇವಳಿಗೆ ತಾನು ಜೊತೆಯಾದರೆ ಇವಳ ಉದ್ದೇಶ ಸಾಧನೆಯಾಗುವುದರೊಂದಿಗೆ ತನ್ನ ಬದುಕಿಗೊಂದು ಅರ್ಥವೂ ದೊರೆತಂತಾಗುತ್ತದೆ.

ಅಂಬೆ ಅದನ್ನು ಮಧುಭಾಷಿಣಿಯಲ್ಲಿ ಹೇಳಿದಾಗ ಅವಳೆಂದಳು: “ರಾಜಕುಮಾರೀ, ಪರಶುರಾಮರು ನಮಗಿಂತ ಪ್ರಾಜ್ಞರು. ಅವರಂದಂತೆ ಮಾಡುವುದು ವಿಹಿತ. ಗುರು ಪರಶುರಾಮರ ಮಾತನ್ನು ಶಿಷ್ಯ ಭೀಷ್ಮ ಉಲ್ಲಂಘಿಸುವುದುಂಟೆ? ಭೀಷ್ಮನ ಕೈ ಹಿಡಿದು ಹಸ್ತಿನಾವತಿಯ ಸಮ್ರಾಜ್ಞಿ ಯಾಗಬೇಕಾದವಳು ನೀನು. ಆಗ ನೀನು ಇಂತಹ ಸಾವಿರಾರು ಆಶ್ರಮಗಳನ್ನು ನಿರ್ಮಿಸಬಲ್ಲೆ. ನನ್ನ ಜೀವನದ ಸಾಧ್ಯತೆ ಇಷ್ಟೇ. ಸಮ್ರಾಜ್ಞಿಯಾದರೆ ನಿನ್ನ ಜೀವನದ ಸಾಧ್ಯತೆ ಅಪಾರ. ಸ್ತ್ರೀಯರನ್ನು ಶೋಷಿಸಲೆಂದೇ ಸೃಷ್ಟಿಯಾಗಿರುವ ಸ್ಮೃತಿಗಳನ್ನು ಆಗ ನೀನು ಬದಲಾಯಿಸಬಲ್ಲೆ. ಅಪಾರ ಸಾಧ್ಯತೆಗಳುಳ್ಳ ನೀನು ಬರಿದೆ ಈ ಕಾಡಲ್ಲಿ ನಾರು ಬಟ್ಟೆಯುಟ್ಟು ಕಾಲಕಳೆಯುವ ಮಾತುಗಳನ್ನಾಡಬೇಕು”.

ಮಧುಭಾಷಿಣಿಯ ನುಡಿಗಳು ಅಂಬೆಯ ಗುರಿಯನ್ನು ನಿಚ್ಚಳಗೊಳಿಸಿದವು. ಮದುವೆಯೇ ಬೇಡವೆಂದುಕೊಂಡಿದ್ದ ಅಂಬೆಗೆ ಅವಳು ಭೀಷ್ಮನನ್ನು ವಿವಾಹವಾಗುವುದರಿಂದ ಉದ್ಭವಿಸುವ ಸಾಧ್ಯತೆಗಳು ಗೋಚರವಾಗತೊಡಗಿದವು. ಭೀಷ್ಮ ಗುರು ವಾಕ್ಯಕ್ಕೆ ಗೌರವಕೊಟ್ಟು ವಿವಾಹಕ್ಕೊಪ್ಪಿದರೆ ಹಸ್ತಿನಾವತಿಯ ಸಮ್ರಾಜ್ಞಿಯಾಗಿ ವ್ಯವಸ್ಥೆಯನ್ನು ಸ್ತ್ರೀಯರ ಪರವಾಗಿ ಬದಲಾಯಿಸಲು ಪ್ರಯತ್ನಿಸುವುದು. ಅವನು ಒಪ್ಪದಿದ್ದರೆ? ಆಗ ಪರಶುರಾಮರಿಂದ ಭೀಷ್ಮನ ಪೊಳ್ಳು ಪ್ರತಿಷ್ಠೆ ಭಂಗವಾಗುವುದನ್ನು ನೋಡಿ ತೃಪ್ತಿ ಪಡುವುದು. ಬಳಿಕ ಇಲ್ಲಿಗೆ ಬಂದು ಮಧುಭಾಷಿಣಿಗೆ ಹೆಗಲೆಣೆಯಾಗಿ ದುಡಿಯುವುದು.

ಅಂಬೆಯ ಮನಸ್ಸು ನಿರಾಳವಾಗಿ ಸ್ವಲ್ಪ ಹೊತ್ತಿನಲ್ಲಿ ಗಾಢ ನಿದ್ದೆ ಬಂತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಟ್ಟು
Next post ಬಾಲಕನ ಚೂಟಿಯಾಟಕ್ಕೆ ಹಿಗ್ಗುವ ಹಾಗೆ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys