ನವಿಲುಗರಿ – ೧೪

ನವಿಲುಗರಿ – ೧೪

ಚಿನ್ನುವನ್ನು ಆದಷ್ಟು ಬೇಗ ತಮ್ಮ ಘನತೆಗೆ ತಕ್ಕಂತವರಿಗೆ ಮದುವೆ ಮಾಡಿಕೊಟ್ಟು ಅವಳ ಪ್ರೇಮ ಪ್ರಲಾಪವು ಹಳ್ಳಿಗರ ಪಾಲಿಗೆ ರಸಗವಳವಾಗುವ ಮುನ್ನವೆ ಸಿಟಿಗೆ ಸಾಗುಹಾಕಬೇಕೆಂದು ಉಗ್ರಪ್ಪ ಒಳಗೆ ತಹತಹಿಸುತ್ತಲಿದ್ದ. ಮೈಲಾರಿ ನೆಂಟರಿಷ್ಟರ ಪಟ್ಟಿಮಾಡಿಕೊಂಡು ಚಿನ್ನು ಜಾತಕ ಹಿಡಿದು ವರನ ತಲಾಷ್‌ಗೆ ತೊಡಗಿರುವಾಗಲೇ ಸುಪ್ರಸಿದ್ದ ರಾಜಕಾರಣಿ ಮಾಜಿ ಸಚಿವ ದುರ್ಗಸಿಂಹನೇ ತನ್ನ ಮಗನೊಂದಿಗೆ ಹೆಣ್ಣು ಕೇಳಿ ಬರುವನೆಂದರೆ ದೈವಲೀಲೆಯೆ ಇರಬಹುದು ಅಂದುಕೊಂಡ ಉಗ್ರಪ್ಪ. ಮೈಲಾರಿಗಂತೂ ಲಾರಿತುಂಬಿದರೂ ಮಿಗುವಷ್ಟು ಸಂಭ್ರಮ. ವಿಷಯ ತಿಳಿದ ಭರಮಪ್ಪ ಸಾರೋಟು ಏರಿ ಗದ್ದೆಯಿಂದ ಮನೆಯತ್ತ ಕುದುರೆಗಳನ್ನು ಓಡಿಸಿದರು. ದುರ್ಗಸಿಂಹ ಮಗನೊಂದಿಗೆ ಮಾತ್ರ ಬಂದಿರಲಿಲ್ಲ. ತನ್ನ ರಾಜಕೀಯಕ್ಕೆ ಸಾಥ್ ನೀಡುವ ಚೇಲಾಗಳ ಪರಿವಾರದೊಂದಿಗೆ ಬಿಜಯಂಗೈದಿದ್ದ. ತಮ್ಮಂಥವರು ಬಂದ ಮೇಲೆ ನಕಾರಾತ್ಮಕವಾದ ಉತ್ತರವೇ ಸಾಧ್ಯವಿಲ್ಲವೆಂಬ ಆತ್ಮವಿಶ್ವಾಸ. ಅಷ್ಟಕ್ಕೂ ಹೊರಗಿನವರಲ್ಲ. ಬಿಸಿನೆಸ್ ಪಾರ್ಟನರ್‌ಗಳೆಂಬ ಅಚಲ ವಿಶ್ವಾಸ ಬೇರೆ. ಪಾಳೇಗಾರರ ಮನೆಯ ಗಂಡಸರು ಹೆಂಗಸರೆಲ್ಲಾ ಕೌತುಕದಿಂದ ಬರಮಾಡಿಕೊಂಡ ಪರಿಯೇ ದುರ್ಗಸಿಂಹನಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬಿತು.

ಮೊದಲಿಗೆ ತಂಪು ಪಾನೀಯಗಳು ಬಂದವು. ಇದ್ದಕ್ಕಿದ್ದಂತೆ ಬಂದ ದುರ್ಗಸಿಂಹ ಅವನ ತಂಡದ ಬಗ್ಗೆ ಪಾಳೇಗಾರರಿಗೆ ಅಚ್ಚರಿ. ಚುನಾವಣೆ ಏನೋ ಹತ್ತಿರದಲ್ಲಿದೆ. ಈ ಸರಹದ್ದಿನಲ್ಲಿ ನಮ್ಮವರ ಸಾಲಿಡ್ ಓಟುಗಳು ಬೇಕೆಂದರೆ ಅದು ನಮ್ಮ ಕೃಪೆಯಿಲ್ಲದೆ ಸಾಧ್ಯವಿಲ್ಲ. ಹೀಗಾಗಿ ರಾಜಕಾರಣಿಗಳು ಬರೋದು ಹೋಗೋದು ದೊಡ್ಡ ವಿಷಯವೇನಲ್ಲವಾದರೂ ದುರ್ಗಸಿಂಹರ ಎಲ್ಲಾ ಬಿಸಿನೆಸ್‌ನಲ್ಲೂ ಒಂದಲ್ಲ ಒಂದು ವಿಧದಲ್ಲಿ ಪಾಳೇಗಾರರೂ ಹಣತೊಡಗಿಸಿ ಕುಬೇರರಾಗಿದ್ದರು. ಪಾಳೇಗಾರರ ಬೆಂಬಲದಿಂದ ದುರ್ಗಸಿಂಹ ರಾಜಕೀಯ ಸ್ಥಾನಮಾನ ಪಡೆದರೋ ದುರ್ಗಸಿಂಹನ ರಾಜಕೀಯ ಪವರ್‌ನಿಂದ ಪಾಳೇಗಾರರು ಲಕ್ಷ್ಮೀ ಪುತ್ರರಾದರೋ ಎಂಬುದು ಇಂದಿಗೂ ಬೀಜವೃಕ್ಷ ನ್ಯಾಯದಂತಿದೆ. ಪಾನೀಯದ ಹಿಂದೆ ಬಿಸಿಬೇಳೆಬಾತ್, ಬೋಂಡಾ ಬಂದವು. ಆಳುಕಾಳುಗಳೂ ಸಂಭ್ರಮದಿಂದ ಓಡಾಡಿದರು. ‘ನಿಮ್ಮಿಂದ ನಾವು ಧಣಿ’ ಎಂದು ಭರಮಪ್ಪನವರ ಪಾದಮುಟ್ಟಿ ದುರ್ಗಸಿಂಹ ನಮಿಸಿ ವಿನಯವನ್ನು ಜಾಹೀರುಪಡಿಸಿದರೆ, ‘ನಿಮ್ಮಿಂದಲೇ ನಾವೂ ಏನೆಲ್ಲಾ ಪಡೆದಿದ್ದೇವೆ. ಇವತ್ತಿನ ನಮ್ಮ ದೌಲತ್ತಿಗೆ ನಿಮ್ಮ ಸಹಕಾರವೇ ಕಾರಣ’ ಎಂಬ ಸೌಜನ್ಯದ ಮಾತುಗಳೂ ಭರಮಪ್ಪನವರಿಂದ ಬಂದವು. ಮನೆ ಹೆಣ್ಣು ಮಕ್ಕಳೆಲ್ಲಾ ಬಂದು ‘ಚೆನ್ನಾಗಿದ್ದೀರಾ ಅಣ್ಣಾ’ ಎಂದು ಯೋಗಕ್ಷೇಮ ವಿಚಾರಿಸಿಕೊಂಡರು. ಚಿನ್ನು ಕಾಣದೆ ಹೋದಾಗ ಸಂಗ್ರಾಮ ತಡೆಯಲಾರದೆ ತಂದೆಯ ಕಿವಿಕಚ್ಚಿದ. ದುರ್ಗಸಿಂಹ ಬಂದ ಕಾರಣವನ್ನು ವಿವರಿಸಲು ಸ್ವಲ್ಪ ಹಿಂಜರಿದ. ಹೆಣ್ಣು ಕೇಳುವುದು, ಅದೂ ತಾನಾಗಿಯೇ. ಆತ್ಮಾಭಿಮಾನ ತುಯ್ದಾಡಿತು. ಆದರೂ ಮುದ್ದಿನ ಮಗನಿಗಾಗಿ ರಾಜಿಯಾಗಲೇಬೇಕಿತ್ತು.

‘ಅಂದ್ಹಾಗೆ ಉಗ್ರಪ್ಪ, ನಿಮ್ಮ ಮಗಳೇ ಕಾಣ್ತಾ ಇಲ್ವಲ್ಲಾರೀ…?’ ಪ್ರಶ್ನಿಸಿ ಆತ್ಮೀಯತೆ ನಗೆ ಬೀರಿದ ದುರ್ಗಸಿಂಹ.

‘ಒಳಗಿದಾಳೆ’ ಅವಳನ್ನು ಇಂತಹ ಪರಿಸ್ಥಿತಿಯಲ್ಲಿ ಕರೆಯುವುದೋ ಬೇಡವೋ ಎಂಬಂತೆ ದುರ್ಗಸಿಂಹ ಒಳಗೇ ತಿಣುಕಾಡಿದ.

‘ಭಾಳ ಸಣ್ಣಾಕಿದ್ಹಾಗ ನೋಡಿದ್ದು… ಕರೀರಣ್ಣಾ ನೋಡೋಣ’ ದುರ್ಗಸಿಂಹ ಒಂದಿಷ್ಟು ಹೆಚ್ಗೆ ಒತ್ತಾಯಿಸಿದ.

‘ಚಿನ್ನೂಗೆ ಬರ್‍ಲಿಕ್ಕೆ ಹೇಳೆ…’ ಚಿನ್ನಮ್ಮನತ್ತ ನೋಡಿದ. ಆಕೆ ಕ್ಷಣ ಮೌನವಾಗಿ ನಿಂತವಳು. ‘ಬಾರೆ ಕೆಂಚಮ್ಮ’ ಎಂದು ಕೆಂಚಮ್ಮನನ್ನು ಕರೆದುಕೊಂಡು ಚಿನ್ನು ಕೋಣೆಗೆ ಹೋದಳು. ಚಿನ್ನು ಆರಾಮಾಗಿ ಟಿವಿ ಮುಂದೆ ಕೂತು ಯಾವುದೋ ತೆಲುಗು ಫೈಟಿಂಗ್ ಪಿಕ್ಚರ್ ನೋಡುತ್ತಿದ್ದಳು. ಪ್ರೀತಿಯಿಂದ ಮಾತನಾಡಿಸಿ ಸ್ವಲ್ಪ ಪಡಸಾಲೆಗೆ ಬಾರೆ… ನಿಮ್ಮಪ್ಪಂಗೆ ಬೇಕಾದೋರು ಬಂದಾರೆ’ ಚಿನ್ನಮ್ಮ ಪಾಲಿಶ್ ಮಾಡಿದಳು.

‘ಅರೆ ಹೋಗಮ್ಮ… ಸಿನಿಮಾ ಸಖತ್ತಾಗಿದೆ. ಡಿಸ್ಟರ್ಬ್ ಮಾಡೇಡ’ ಅಂದಳು ಚಿನ್ನು.

‘ಹಾಗಲ್ವೆ ಒಂದು ನಿಮಿಷ ಬಂದು ಹೋಗು… ಬಂದಿರೋದು ದೊಡ್ಡವರು ಮಂದೆ ಸಿ‌ಎಂ ಕ್ಯಾಂಡಿಡೇಟ್ ಆಗೋರು ಪ್ಲೀಸ್’ ಕೆಂಚಮ್ಮನೇ ಚಿನ್ನು ಮೈದಡವಿದಳು ಪ್ರೀತಿಯಿಂದ.

‘ಈ ಪಿಕ್ಟರ್ ಮುಗೀಲಿ… ಬರ್ತಿನಿ’ ಚಿನ್ನುವಿನ ಹಠ.

‘ಇದೇ ಬೇಡ… ಮತ್ತೆ ಗಂಡಸರು ಬಂದು ಕರೀತಾರೆ. ಬಂದವರ ಮುಂದೆ ರಂಪ ಯಾಕೆ? ಒಂದ್ನಿಮಿಷ ಬಂದು ಹೋಗೆ’ ಕೆಂಚಮ್ಮ ಮುಖ ಸಣ್ಣದು ಮಾಡಿಕೊಂಡಾಗ ಚಿನ್ನು ಕರಗಿದಳು. ಈ ಚಿಕ್ಕಮ್ಮ ತನ್ನ ಪರವೆಂಬ ಅಭಿಮಾನ. ತನಗಾಗಿ ಹೊಡೆತ ತಿಂದವಳು ಎಂಬ ಸಹಾನುಭೂತಿಗೆ ಚಿನ್ನು ಸೋತಳು.

‘ಓಕೆ… ನಿನಗಾಗಿ ಬರ್ತಿನಿ ಚಿಗಮ್ಮ’ ಹೊರಟು ನಿಂತಳು.

‘ಸ್ಟಾಪ್‌ಸ್ಟಾಪ್, ಈ ಲಂಗ ಜಾಕೀಟು ಬೇಡ. ಫಸ್ಟ್ ಕ್ಲಾಸಾಗಿ ಸೀರೆ ಉಡಿಸ್ತೀನಿ. ನಮ್ಮ ಮನೆ ಹುಡುಗಿ ಬಂದೋರ ಕಣ್ಣು ಕುಕ್ಕೋ ಹಾಗಿರಬೇಕು’ ಕೆಂಚಮ್ಮ ಅವಳನ್ನು ಒಲಿಸಿಕೊಂಡಳು. ಚಿನ್ನಮ್ಮನ ತಲೆಭಾರ ಇಳಿಯಿತು.

ಚಿನ್ನು ಕೆಂಚಮ್ಮನೊಂದಿಗೆ ಬಂದುನಿಂತಾಗ ‘ಇವಳೇ ನನ್ನ ಮುದ್ದಿನ ಮೊಮ್ಮಗಳು. ಚಿನ್ನು ಅಂತೀವಿ ಪ್ರೀತಿಯಿಂದ’ ಭರಮಪ್ಪನವರೇ ಪರಿಚಯಿಸಿದರು. ಸಂಗ್ರಾಮ ಪಿಳಿ ಪಿಳಿ ನೋಡಿದ. ಅವಳು ತಲೆ ಎತ್ತಿ ಇವರತ್ತ ನೋಡಲೇಯಿಲ್ಲ. ದುರ್ಗಸಿಂಹ ಅವಳನ್ನು ನೋಡಿ ಖುಷಿಗೊಂಡರು. ತನ್ನ ಮಗನದು ಬ್ಯಾಡ್‌ಟೇಸ್ಟ್ ಅಲ್ಲವೆಂದು.

‘ನಿಮ್ಮ ಮುದ್ದಿನ ಮೊಮ್ಮಗಳು ರಿಯಲಿ ಮುದ್ದಾಗಿದ್ದಾಳೆ ಯಜಮಾನ್ರೆ’ ಮೀಸೆ ಅಡಿಯಲ್ಲೇ ನಕ್ಕ ದುರ್ಗಸಿಂಹ.

‘ಈಕೆ ನನ್ನ ಕ್ಲಾಸ್‌ಮೇಟ್ ಅಪ್ಪಾ’ ಮುಗ್ಧನಂತೆ ಹೇಳಿದ ಸಂಗ್ರಾಮಸಿಂಹ ಆಗಲೇ ಚಿನ್ನು ತಲೆ‌ಎತ್ತಿ ನೋಡಿದ್ದು. ಸಂಗ್ರಾಮಸಿಂಹನ ಮುಸುಡಿ ನೋಡುತ್ತಲೇ ಎದೆಯಲ್ಲಿ ಎಂತದೋ ತಳಮಳ. ಸರಕ್ಕನೆ ಒಳನಡೆದುಬಿಟ್ಟಳು.

‘ತುಂಬಾ ನಾಚಿಕೆ ಹುಡುಗಿಗೆ’ ನಕ್ಕರು ದುರ್ಗಸಿಂಹನ ಚೇಲಾಗಳು.

‘ನನಗ್ಯಾಕೋ ಈಗ ಇದ್ದಕ್ಕಿದ್ದಂತೆ ಒಂದು ವಿಷಯ ನಿಮ್ಮ ಹತ್ತಿರ ಪ್ರಸ್ತಾಪ ಮಾಡಬಾರದೇಕೆ ಅನಿಸ್ತಿದೆ ನೋಡಿ ಯಜಮಾನ್ರೆ’ ಬಂದ ವಿಷಯ ಮಾತನಾಡಲು ಪೀಠಿಕೆ ಹಾಕಿದ ದುರ್ಗಸಿಂಹ.

‘ಧಾರಾಳವಾಗಿ ಮಾತಾಡಿ. ನಾವೇನು ಹೊರಗಿನವರೆ ದುರ್ಗಣ್ಣ’ ಎಂದ ಉಗ್ರಪ್ಪ.

‘ಇನ್ನೇನಿಲ್ಲ. ನಮ್ಮ ನಿಮ್ಮ ಸ್ನೇಹ ಸಂಬಂಧ ಸಂಬಂಧವಾಗಿ ಉಳೀಬೇಕೆ? ಅದೇಕೆ ರಕ್ತಸಂಬಂಧವಾಗಿ ಎರಡೂ ಮನೆ ಶಾಶ್ವತವಾಗಿ ಒಂದಾಗಬಾರದು’ ದುರ್ಗಸಿಂಹ ಹೇಳುತ್ತಾ ಮಗನ ಮೋರೆ ನೋಡಿ ನಕ್ಕರು. ಯೋಚನೆ ಮಾಡುವ ಸರದಿ ಈಗ ಭರಮಪ್ಪ, ಉಗ್ರಪ್ಪ, ಮೈಲಾರಿಯದು. ದೊಡ್ಡ ಸಂಬಂಧವೇ. ಮಗ ಕೂಡ ಲಕ್ಷಣವಾಗಿದ್ದಾನೆ. ಸಿಟಿ ಹುಡುಗ ನಮ್ಮ ಹುಡುಗಿನ ಒಪ್ಪಿಯಾನೆ ಎಂಬ ಅಳಕು ಕಾಡಿತು. ಚಿನ್ನುಗೆ ಬೇಗ ಮದುವೆ ಮಾಡಿ ಮುಗಿಸಬೇಕೆಂದು ಕಾತರರಾಗಿದ್ದವರ ಕಾಲಿಗೆ ಬಯಸಿದ್ದ ಬಳ್ಳಿ ತೊಡರಿದಂತಾಗಿತ್ತು.

‘ಏನ್ ಯೋಚನೆ ಮಾಡ್ತಿದಿರಾ… ನಾನೇನಾದ್ರೂ ತಪ್ಪು ಮಾತಾಡಿದೆನೆ?’ ದುರ್ಗಸಿಂಹ ಪೇಚಿಗೆ ಬಿದ್ದ. ಇವರು ಒಪ್ಪದಿದ್ದರೆ ತನ್ನ ಮಗನ ಆಸೆ ಬರೀ ಆಸೆಯಾಗಿಯೆ ಉಳಿದರೆ ತಾನಿದ್ದೂ ಸಾರ್ಥಕವೇನೆಂದು ಒಳಗೇ ಕುಬ್ಜನಾದ.

‘ಯೋಚನೆ ಮಾಡೋ ಅಂತಾದ್ದೇನಿದೆ ದುರ್ಗಣ್ಣ ಹುಡುಗ ಹುಡುಗಿ ಮೆಚ್ಚಿದರೆ ನಮ್ಮದೇನು ಅಭ್ಯಂತರವಿಲ್ಲ. ಏನಂತಿಯಪ್ಪಾ?’ ಉಗ್ರಪ್ಪ ಏಕಕಾಲದಲ್ಲಿ ತಂದೆಯನ್ನು ತಮ್ಮನನ್ನು ನೋಡಿದ ಪ್ರತಿಕ್ರಿಯೆಗಾಗಿ, ಅವರಿಬ್ಬರ ಮುಖದಲ್ಲಿ ಗೆಲುವಿನ ನಗೆಯಿತ್ತು.

‘ಆಗಬಹುದು ಆಗಬಹುದು’ ಎಂದು ತಲೆದೂಗಿದರು.

‘ನಿಮ್ಮ ಹುಡುಗ ನಮಗೇನು ಬೇರೆಯವನೆ. ನೀವು ನಮ್ಮ ಸಂಬಂಧ ಇಷ್ಟಪಟ್ಟಿದ್ದು ನಮ್ಮ ಸೌಭಾಗ್ಯ. ನೀವು ಕೇಳಿದಷ್ಟು ವರದಕ್ಷಿಣೆ ಕೊಡೋಕೆ ನಾವ್ ರೆಡಿ… ಹಂಗೆ ಯಾವುದಕ್ಕೂ ಕಡಿಮೆ ಇಲ್ಲದಂಗೆ ಲಗ್ನ ಮಾಡಿಕೊಡ್ತೀವಿ’ ಉಗ್ರಪ್ಪ ಅಂದ.

‘ನಿಮ್ಮ ಹುಡುಗನಿಗೆ ಚಿನ್ನು ಇಷ್ಟವಾಗವಳೆ ತಾನೆ?’ ಮೈಲಾರಿಗೆ ಅನುಮಾನ. ಅವನಿಗೆ ಚಿನ್ನು ರಂಗರ ಪ್ರೇಮಪ್ರಸಂಗ ತಿಳಿದಿದ್ದೀತೆ ಎಂಬ ಬೇಗುದಿ.

‘ಅವನು ಇಷ್ಟಪಟ್ಟಿದ್ಕೆ ನಾವು ಇಲ್ಲಿವರೆಗೂ ಬಂದ್ವಿ, ಹಣಕ್ಕಾಗಿ ಸಂಬಂಧ ಬೆಳೆಸೋಕೆ ಬಂದೋರಲ್ಲ ನಾವು. ಸಂಬಂಧ ಉಳಿಬೇಕು. ಹಣ ಅನ್ನೋದು ಇವತ್ತು ಇರ್ತದೆ ನಾಳೆ ಹೋಯ್ತದೆ. ನಮ್ಮ ಹುಡುಗ ಇಷ್ಟಪಟ್ಟಿದ್ದನ್ನು ಪಾತಾಳದಾಗೆ ಇರ್‍ಲಿ ಫಾರಿನ್ನಾಗೆ ಇರ್‍ಲಿ ತಂದುಕೊಟ್ಟವನು ನಾನು. ಈಗ ಅವನು ನಿಮ್ಮ ಹುಡುಗಿ ಇಷ್ಟಪಡ್ತಿದಾನೆ ಅಂದ್ಮೇಲೆ ವಧುದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳಕ್ಕೂ ರೆಡಿ ನಾನು’ ಮೈತುಂಬ ನಕ್ಕರು ದುರ್ಗಸಿಂಹ. ಭರಮಣ್ಣನವರಿಗೆ ಅವನ ಮಾತು ಸರಿ ಬೀಳಲಿಲ್ಲ. ನಮ್ಮ ಹುಡುಗಿನಾ ಮಾರಾಟಕ್ಕಿಡೋ ದೌರ್ಭಾಗ್ಯ ನಮಗಿನ್ನು ಬಂದಿಲ್ಲ… ಆಕೆ ಒಪ್ಪಿಬಿಟ್ಟರೆ ಒಪ್ಪಿದವನಿಗೆ ಕೊಡೋಕೆ ನಾವು ಅವನ ಕಾಲಡಿ ನಮ್ಮ ದುಡಿಮೆನೆಲ್ಲಾ ಸುರಿಯೋಕು ರೆಡಿ. ಒಟ್ನಾಗೆ ನಮ್ಮ ಕೂಸು ಹೋದ ಮನೆಯಾಗೆ ಸುಖವಾಗಿರಬೇಕಪ್ಪ’ ಭರಮಪ್ಪ ಗಡುಸಾಗಿ ಅಂದು ಮೀಸೆ ತೀಡಿದರು.

‘ನನ್ನ ಮಾತನ್ನು ತಪ್ಪಾಗಿ ಭಾವಿಸಬಾರದು ಯಜಮಾನ್ರು… ತಪ್ಪಾಗಿದ್ದರೆ ದಯಮಾಡಿ ಕ್ಷಮಿಸಿಬಿಡಿ ದೊಡ್ಡವರು’ ಮಸ್ಕ ಹೊಡೆದ ದುರ್ಗಸಿಂಹ, ಭರಮಪ್ಪ ಪ್ರಸನ್ನರಾದರು.

‘ಆತುಬುಡಿ, ಎರಡುದಿನ ಇದ್ದು ಆತಿಥ್ಯ ಸ್ವೀಕಾರ ಮಾಡಿಕೊಂಡು ಹೋಗಿ, ಹೆಂಗೂ ಬಂದೀರಾ…’ ಭರಮಪ್ಪನವರೇ ಮೆತ್ತಗಾದರು. ತಾನಾಗಿಯೇ ಬಂದ ಸಂಬಂಧ ಕಳೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ರಂಗ ಗರ್ವಭಂಗ ಮಾಡಿದ್ದನ್ನವರು ಅಂತರಂಗದಲ್ಲಿ ಒಪ್ಪಿಕೊಂಡಿದ್ದುಂಟು. ಆ ಕುರಿತಂತೆ ಮೊಮ್ಮಗಳನ್ನು ಕಡಿದು ತುಂಡರಿಸುವಷ್ಟು ಕೋಪವಿದೆ. ಹೃದಯದಲ್ಲಿ ವಾಲ್ವ್ ಒಂದು ಬ್ಲಾಕ್ ಆಗೇತೆ ಅಂದಾಕ್ಷಣ ಹೃದಯಾನೇ ಕಿತ್ತು ಬಿಸಾಡ್ಲಿಕ್ಕೆ ಆದೀತೆ, ರಿಪೇರಿ ಮಾಡಿಸ್ಕೊಂಡು ಬದುಕು ಕಂಡ್ಕೋಬೇಕಲ್ವೆ ಎಂದು ಮನದಲ್ಲೇ ತರ್ಕ ಮಾಡಿದರು.

ಮನೆಯಲ್ಲಿ ಕುರಿ ಕೋಳಿಗಳು ಬಿದ್ದವು. ವಿಸ್ಕಿಕೇಸ್‌ಗಳೂ ಬಂದವು. ಬಚ್ಚಿಟ್ಟಿದ್ದ ಫಾರಿನ್‌ಸ್ಕಾಚನ್ನೂ ಬಯಲಿಗಿಟ್ಟ ಮೈಲಾರಿ. ಎಲ್ಲರಿಗಿಂತ ಖುಷಿಯಾಗಿದ್ದದ್ದು ಅವನಿಗೆ. ಚಿನ್ನು ಎಂದರವನಿಗೆ ವಿಚಿತ್ರ ಪ್ರೀತಿ, ಅವಳೊಂದು ಗಿಣಿ ಇದ್ದಂಗೆ. ಬೆಕ್ಕಿನ ಬಾಯಿಗೆ ಕೊಡಲಿಕ್ಕೆ ಆದೀತಾ? ಬಂಗಾರದ ಪಂಜರವೇ ಗಿಣಿಗೆ ಸರಿ. ತಂತಿಬೇಲಿಯಲ್ಲ ಎಂದವನ ಆಲೋಚನೆ. ರಂಗ ಹಿಡಿಸಿದರೂ ಅವನ ಬಡತನ ಮೈಲಾರಿಗೆ ಇಷ್ಟವಾಗಿರಲಿಲ್ಲ. ತಮ್ಮಂಥವರ ಮೇಲೆ ಹರಿಹಾಯುವ ಅವನ ಕೊಬ್ಬು ಕೂಡ ಇನ್ನೊಂದು ಕಾರಣ. ಇಂತಹ ಮಹಾನ್ ರಾಜಕಾರಣಿಗಳೇ ತಮಗೆ ದೊಗ್ಗು ಸಲಾಮ್ ಹೊಡೆವಾಗ ರಂಗ ಯಾವ ತೊಪ್ಪಲು ಅಂದುಕೊಂಡ, ಕೆಂಚಮ್ಮನಿಂದ ವಿಷಯ ತಿಳಿದ ಚಿನ್ನು ನಕ್ಕಳು. ಒಂದಿನಿತೂ ಕಂಗಾಲಾಗಲಿಲ್ಲ. ‘ಅಲ್ವೆ, ನಿನ್ನನ್ನ ಆ ಪೊಲಿಟೀಶಿಯನ್ ಮಗಂಗೆ ಲಗ್ನ ಮಾಡ್ಕೊಡ್ತಾರೆ ಕಣೆ, ಮಾತುಕತೆ ನಡೀತಿದೆ. ಈಗ್ಲೆ ನೀನು ಪ್ರತಿಭಟಿಸಲಿಲ್ಲ. ಆಮೇಲೆ ಪಶ್ಚಾತ್ತಾಪ ಪಡ್ತಿ, ನಿನಗಿಷ್ಟವಿಲ್ಲ ಅಂತ ಹೇಳಿಬಿಡೆ… ತೀರಾ ಮುಂದುವರೆದ್ಮೇಲೆ ನೀನು ತಿರುಗಿಬಿದ್ದರೆ ಮನೆ ಮಾನ ಹೋಗದಂತ ಹಿಡಿದು ಕಟ್ಟುತಾರಷ್ಟೆ, ನಿನ್ನ ಅಭಿಪ್ರಾಯನಾ ಧೈರ್ಯವಾಗಿ ಹೇಳಿಬಿಡೆ’ ಕೆಂಚಮ್ಮ ಹಪಹಪಿಸಿದಳು. ಆಗಲೂ ಚಿನ್ನುದು ನಿರಾಳ ನಗೆ.

‘ಚಿಗಮ್ಮ, ನನ್ನ ಇಷ್ಟ ಏನು ಅಂತ ಗೊತ್ತಿದ್ದೂ ಬೇರೆಯವರಿಗೆ ನನ್ನನ್ನ ಕಟ್ಟೋಕೆ ಸಿದ್ಧವಾಗಿರೋರ ಮುಂದೆ ಕಾಡಿದರೆ, ಬೇಡಿದರೆ ಮಾತ್ರ ಕರುಣೆ ತೋರಿಸ್ತಾರ್‍ಯೇ? ನಾನು ಒಪ್ಪಿದವನಿಗೆ ಮದುವೆ ಮಾಡ್ತಾರ್‍ಯೆ? ಹೇಳು?

ಇವರುಗಳ ಮುಂದೆ ಕಣ್ಣೀರು ಇಟ್ಟರೆ ‘ನೋ ಯೂಸ್’ ಚಿನ್ನು ಹೇಳಿದಳು.

‘ನೀನ್ ಹೇಳೋದು ಸರಿ ಕಣೆ… ಆದ್ರೆ ಅವರು ಮನಸ್ಸಿಗೆ ಬಂದ ಮೇಲೆ ಮಾಡಿಯೇ ತೀರ್‍ತಾರೆ. ಆಗೇನು ಮಾಡ್ತೀಯೆ?’

‘ಚಿಗಮ್ಮ, ರಂಗ ನನ್ನನ್ನು ಪ್ರೀತಿಸ್ತಿರೋದ್ನ ಎಲ್ಲರ ಮುಂದೂ ಹೇಳ್ಕೊಂಡಿದಾನೆ. ಹಿರಿಯರನ್ನ ಒಪ್ಪಿಸಿ ಮದುವೆಯಾಗ್ತಿನಿ ಅಂತ ಛಾಲೆಂಜ್ ಮಾಡಿದಾನೆ. ಅವನು ಸುಮ್ನೆ ಇರೋ ಗಂಡಾ? ಅವನಿಗೆ ನನ್ನನ್ನು ಕಾಪಾಡೋದು ಹೆಂಗೆ ಅಂತ್ಲೂ ಗೊತ್ತಿದೆ. ನಾನೇಕೆ ಟೆನ್ಶನ್ ಮಾಡಿಕೊಳ್ಳಿ ಆರಾಮವಾಗಿರ್ತಿನೇ’ ಚಿನ್ನುವಿನ ಆತ್ಮವಿಶ್ವಾಸದ ಮಾತುಗಳು ಕೆಂಚಮ್ಮನಿಗೆ ಸಮಾಧಾನ ನೀಡಲಿಲ್ಲ. ಇಂತಿಂಥ ಸರದಾರರು ಒಟ್ಟಾದರೆ ಬಡ ಹುಡುಗ ಏನು ತಾನೆ ಮಾಡಬಲ್ಲನೆಂಬ ಸಹಜ ಅನಿಸಿಕೆ ಅವಳನ್ನು ಹಿಂಡಿ ಹಿಪ್ಪೆ ಮಾಡಿತು. ಮೊದಲ ದಿನ ಖಾರದ ಅಡಿಗೆ ಮಾಡಿದವರು ಮರುದಿನ ಹೋಳಿಗೆ ಪಾಯಸ ಅಡಿಗೆಗೆ ಅಣಿಯಾದರು. ಪದಾರ್ಥ ಯಾವುದೇ ಮಾಡ್ರಿ ಪಾನೀಯ ಮಾತ್ರ ಇರಲೇಬೇಕೆಂದು ನಗೆಯಾಡಿದ ದುರ್ಗಸಿಂಹ.

ಮನೆಯಲ್ಲಿ ಹೋಳಿಗೆಯ ಕಮ್ಮನೆ ವಾಸನೆ ಅಡರಿತ್ತು. ಸಂಗ್ರಾಮ ತನ್ನ ಅಭಿಲಾಷೆ ವ್ಯಕ್ತಪಡಿಸಿದ ತಂದೆಯ ಬಳಿ, ತಾನು ತನ್ನ ಗೆಳೆಯರು ಫಾರೆಸ್ಟ್‌ಗೆ ಹೋಗಿ ಬರುತ್ತೇವೆ. ಅಲ್ಲೊಂದು ಬ್ಯೂಟಿ ಸ್ಪಾಟ್ ಇದೆ ಅಂತಾರೆ. ಬಸವನ ಬಾಯಲ್ಲಿ ಎಂಥ ಕಾಲದಲ್ಲೂ ನೀರು ಹರಿಯುತ್ತಂತೆ ಅರಣ್ಯ ಕೂಡ ದಟ್ಟವಾಗಿದ್ದು ನವಿಲು ಮೊಲ ಜಿಂಕೆಗಳು ಎಲ್ಲೆಂದರಲ್ಲಿ ಕಾಣುತ್ತವೆ ಎಂದು ಬಣ್ಣಿಸಿದ. ‘ನೀವು ಹುಡುಗರು ಹೋಗಿ ಬನ್ನಿರಯ್ಯಾ’ ದುರ್ಗಸಿಂಹ ಅಪ್ಪಣೆ ಕೊಟ್ಟರು. ‘ನಾವ್ ನಾವ್ ಹೋದ್ರೆ ಏನ್ ಮಜಾ ಇರ್ತದೆ ಡ್ಯಾಡಿ, ಚಿನ್ನೂನು ಕಳುಹಿಸ್ಲಿಕ್ಕೆ ಹೇಳಿ ಪ್ಲೀಸ್…’ ದಮ್ಮಯ್ಯ ಬಿದ್ದ ಮಗ.

ಮುಂದೆ ಮದುವೆಯಾಗುವ ಹುಡುಗನ ಜೊತೆ ಹೊರಹೋದರೇನಂತೆ ಗೆಳೆಯರೂ ಜೊತೆಗಿರುತ್ತಾರೆ ಈಗಿನ ಕಾಲದಲ್ಲಿ ಇದೆಲ್ಲಾ ಕಾಮನ್ ಎಂದು ಪಾಳೇಗಾರರ ಮುಂದೆ ಪ್ರಸ್ತಾಪವಿಟ್ಟ ದುರ್ಗಸಿಂಹ.

‘ಅದೆಲ್ಲಾ ಪ್ಯಾಟೆನಾಗೆ ಇರ್‍ಬೋದು ದುರ್ಗಾ. ನಮ್ಮ ಹಳ್ಳಿನಾಗೆ ಎಂತಾದಾರ ಮಾತಾಡ್ಕತವೆ’ ಭರಮಪ್ಪ ಮೂಗು ಮುರಿದರು. ಅದರಲ್ಲೂ ಮೊಮ್ಮಗಳು ಸುಲಭವಾಗಿ ಬರುವುದಿಲ್ಲ. ರಂಪರಾದ್ಧಾಂತವಾಗಿ ಬಂದವರ ಮನಸ್ಸು ಹುಳಿಯಾಗಬಾರದು ತಾವೂ ತಲೆ ತಗ್ಗಿಸುವಂತಾಗಬಾರದಲ್ಲ ಎಂಬ ಚಿಂತನೆಯೂ ಅವರಲ್ಲಿತ್ತು.

‘ಏನೋ ನನ್ನ ಮಗ ಇಷ್ಟಪಡ್ತಿದಾನೆ. ಒಟ್ಟಾಗಿ ಅಡ್ಡಾಡಿದರೆ ಒಬ್ಬರನ್ನೊಬ್ಬರು ಅರ್ಥ ಮಾಡ್ಕೊತಾರೆ ಯಜಮಾನ್ರ ಜೊತೇಲಿ ಅವನ ಫ್ರೆಂಡ್ಸೂ ಇರ್‍ತವೆ’

ಮಗನ ಸಲುವಾಗಿ ದುರ್ಗಸಿಂಹ ಅಲವತ್ತುಕೊಳ್ಳುತ್ತಾ ಕನ್ವಿನ್ಸ್ ಮಾಡಲು ಯತ್ನಿಸಿದ. ಇಷ್ಟಕ್ಕೇ ಸಂಬಂಧ ಮುರಿದುಬಿದ್ದರೆ ಎಂಬ ಧಾವಂತ ಉಗ್ರಪ್ಪನನ್ನು ಕಾಡಿತು. ‘ನಮ್ಮದೇನು ಅಂತಹ ಅಭ್ಯಂತರವಿಲ್ಲ. ತೀರಾ ಸಂಪ್ರದಾಯಕ್ಕೆ ಕಟ್ಟುಬಿದ್ದೋರೂ ನಾವಲ್ಲ. ನಾವು ಕಾಲಕ್ಕೆ ತಕ್ಕಂತೆ ಬದಲಾಗಬೇಕಲ್ವೆ ದುರ್ಗಣ್ಣ… ಆದರೆ ನಮ್ಮ ಹುಡ್ಗಿ ಕಾಲೇಜ್ ಓದಿದ್ರೂ ಒಂತರಾ ಓಲ್ಡ್ ಟೈಪ್ ಹಿಹಿಹಿಹಿ. ಅವಳು ಒಪ್ಪಿದರೆ ನಮ್ಮದೇನು ತಕರಾರಿಲ್ಲ… ಪ್ರಯತ್ನ ಮಾಡೋಣ. ಒಪ್ಪಲಿಲ್ಲ ಅಂದ್ರೆ ದಯವಿಟ್ಟು ಬೇಜಾರು ಮಾಡ್ಕೊಬೇಡಿ. ಮದುವೆಯಾದ್ಮೇಲೆ ಎಲ್ಲಿಗೆ ಬೇಕಾದ್ರೂ ಹೋಗ್ಲಿ ಯಾರು ಬೇಡ ಅಂತಾರೇಳಿ’ ಉಗ್ರಪ್ಪ ತಿಪ್ಪೆ ಸಾರಿಸಿದ. ಚಿನ್ನಮ್ಮನನ್ನು ಭೇಟಿಯಾಗಿ ವಿಷಯ ಪ್ರಸ್ತಾಪಿಸಿದಾಗ ಒಲೆಯ ಮೇಲಿನ ಹೊಳಿಗೆ ಸುಟ್ಟು ಕರಕಲಾಯಿತೆ ವಿನಹ ಮಗಳ ಬಳಿ ಈ ವಿಷಯವನ್ನು ಪ್ರಸ್ತಾಪಮಾಡಲು ಚಿನ್ನಮ್ಮ ಸುತ್ರಾಂ ಒಪ್ಪಲಿಲ್ಲ. ಕಡೆಗೆ ಉಗ್ರಪ್ಪ ಕೆಂಚಮ್ಮನನ್ನು ಒಪ್ಪಿಸಲು ಬೇಡಿಕೊಂಡ. ‘ಏನೋ ಪ್ರಯತ್ನ ಮಾಡ್ತೀನಿ ಭಾವ. ಅವಳು ಒಪ್ಪಿದರೆ ಹುಡುಗನ ಪುಣ್ಯ… ಮದುವೆಗೆ ಮೊದಲೆ ಇದೆಲ್ಲಾ ಬೇಕಾಗಿತ್ತಾ’ ಎಂದು ಗೊಣಗುತ್ತಲೇ ಚಿನ್ನು ಕೋಣೆಯತ್ತ ಹೆಜ್ಜೆ ಹಾಕಿದಳು. ಕೆಂಚಮ್ಮ ಅಲಿಯಾಸ್ ಸುಮ.

ಚಿನ್ನುವಿನ ಬಳಿ ಕೂತು ಮೊದಲಿಗೆ ಟಿವಿ ಆಫ್ ಮಾಡಿ ನಿಧಾನವಾಗಿ ವಿಷಯವನ್ನು ವಿಷದೀಕರಿಸಿದಳು ಕೆಂಚಮ್ಮ, ಎಲ್ಲಿ ಜಗಳ ತೆಗೆಯುವಳೋ ಮುಖ ಪರಚುವಳೋ ಅಬ್ಬರಿಸಿ ಕೂಗಾಡಿ ಬಂದವರಿಗೂ ಕೇಳುವಂತೆ ಮಾನ ತೆಗೆಯುವಳೋ ಎಂದೆಲ್ಲಾ ಚಿಂತಿಸುತ್ತಲೇ ಜೀವ ಬಿಗಿಹಿಡಿದೇ ಹೇಳಿದ್ದಳು. ಚಿನ್ನು ಯಾವ ಉದ್ವೇಗಕ್ಕೂ ಒಳಗಾದವಳಂತೆ ಕಾಣಬಾರದಿದ್ದದು ಮೊದಲ ಅಚ್ಚರಿ. ‘ಅಷ್ಟೇನಾ… ಹೋಗಿಬಂದ್ರಾತೇಳ್ ಚಿಗಮ್ಮ ಅವನೇನು ನನ್ನ ತಿಂದುಬಿಡ್ತಾನಾ’ ಅಂದದ್ದು ಎರಡನೆ ಅಚ್ಚರಿ.

‘ಆದ್ರೂ ಬರೀ ಹುಡುಗರೇ ಹೋಗ್ತಿರೋದು…’ ರಾಗ ಎಳೆದಳು ಕೆಂಚಮ್ಮ.

‘ನಾನೂ ಅವನು ಇಬ್ಬರೆ ಹೋದ್ರೆ ಅಲ್ಲೇನಾದ್ರೂ ಯಡವಟ್ಟು ಮಾಡ್ತಾನೇನೋ ಅವನು ಅನ್ನೋ ಭಯ ಸಹಜ… ಎಲ್ಲಾ ಗೆಳೆಯರ ಮುಂದೆ ಅಸಭ್ಯನಾಗಿ ನಡೆದ್ರೋಳ್ಳೋವಷ್ಟು ಥರ್ಡ್‍ರೇಟ್ ಅಲ್ಲ ಅವನು ಅಂಡ್ಕೊಂಡಿದ್ದೀನಿ…’ ಇದು ಮೂರನೆ ಅಚ್ಚರಿ. ಚಿನ್ನು ಬದಲಾದಳೆ, ಬಂದವರ ಸಿರಿವಂತಿಕೆ, ಪ್ರಭಾವಕ್ಕೆ ಸೋತಳೆ? ತನ್ನ ಮನೆಯವರಿಂದ ರಂಗನಿಗೆ ಪ್ರಾಣಾಪಾಯವಾದೀತೆಂದು ಮನಸ್ಸು ಬದಲಿಸಿದಳೆ! ಎಲ್ಲವೂ ಅಚ್ಚರಿಗಳೆ.

‘ಈಗ ನಾನು ಭಾವನವರಿಗೆ ಏನ್ ಉತ್ತರ ಹೇಳ್ಳಿ?’ ಮತ್ತೆ ಪ್ರಶ್ನಿಸಿದಳು ಕೆಂಚಮ್ಮ.

‘ನಾನ್ ರೆಡಿ ಅಂತ ಹೇಳಿಬಿಡಿ ಚಿಗಮ್ಮ’ ಚಿನ್ನು ಕನ್ನಡಿಯ ಮುಂದೆ ಅಲಂಕಾರಕ್ಕೆ ನಿಂತಳು. ನೆರವಿಗೆ ಚಿಗಮ್ಮನನ್ನೂ ಕರೆದಳು. ವಿಷಯ ತಿಳಿದ ಸಂಗ್ರಾಮ, ಅವನ ಗೆಳೆಯರು ಕುಣಿದಾಡಿದರು. ಭರಮಪ್ಪನವರಿಗೆ ಎಲ್ಲವೂ ಅಯೋಮಯ, ಪೊಲೀಸ್ ಸ್ಟೇಷನ್‌ನಿಂದ ಬಂದ ಮೇಲೆ ವಿಚಿತ್ರ ಹಠ ಮಾಡುತ್ತಾಳೆ. ಜಿದ್ದು ಸಾಧಿಸುತ್ತಾಳೆ, ಊಟ ಬಿಟ್ಟು ತಲೆ ತಿಂತಾಳೆ ಎಂದೆಲ್ಲಾ ಗಾಬರಿಯಾದ ಮನೆಯವರಿಗೆಲ್ಲಾ ಚಿನ್ನುವಿನ ಸೌಮ್ಯಭಾವ, ಸದಾ ಸಂತಸದ ನಡವಳಿಕೆ ಕಾಲೇಜು ಬಿಡಿಸಿದರೂ ಎದುರಾಡದೆ ಆರಾಮಾಗಿ ಕಾಲ ಕಳೆಯುವ ಸ್ವಭಾವ ಹಾವಭಾವ ಎಲ್ಲದರಲ್ಲೂ ಗುಮಾನಿಯೆ. ಈಗ ನೋಡಿದರೆ ಹೀಗೆ! ಭರಮಪ್ಪನವರಿಗೆ ಇದೆಲ್ಲಾ ಸರಿಯಿಲ್ಲವೆನಿಸಿತು. ಚಿನ್ನುವೇ ಒಪ್ಪಿ ಹೊರಟ ಮೇಲೆ ಹೆತ್ತವರೇ ಹಿರಿ ಹಿರಿ ಹಿಗ್ಗುವಾಗ ಅವರಾದರೂ ಏನು ಮಾಡಿಯಾರು. ‘ಹೇಗೋ ತನ್ನ ಮನೆ ಕೂಸು ಚನ್ನಾಗಿದ್ದರಷ್ಟೆ ಸಾಕು’ ಎಂದು ಉಡುಮರಡಿ ರಂಗನ ಪಟಕ್ಕೆ ವಂದಿಸಿದರು.

ಚಿನ್ನು ತನ್ನ ಕಾರಿನಲ್ಲಿ ಒಬ್ಬಳೇ ಹೊರಟರೆ ಇನ್ನೊಂದು ವ್ಯಾನ್‌ನಲ್ಲಿ ಸಂಗ್ರಾಮ ಅವನ ಗೆಳೆಯರ ದಂಡು ಹೊರಟಿತು. ಚಿನ್ನು ಉಬ್ಬುತಗ್ಗುಗಳು ಕಾಣುವಂತೆ ಉಟ್ಟ ಸೀರೆಯ ಅಂದಕ್ಕೋ ಕಾಣುವ ಚೆಂದಕ್ಕೋ ಸಂಗ್ರಾಮ ಸಿಂಹ ಪುರಾ ಬೌಲ್ಡ್ ಆಗಿಹೋಗಿದ್ದ. ಸದಾ ಬಣ್ಣ ಬಣ್ಣದ ಚೂಡಿದಾರಲ್ಲೋ, ಜೀನ್ಸ್ ಟಾಪ್ನಲ್ಲೋ ಅವಳನ್ನು ಕಾಲೇಜಿನಲ್ಲಿ ಕಾಣುತ್ತಿದ್ದ ಅವನು, ಇಂದಿನ ಅವಳ ಪಾರದರ್ಶಕ ಸೀರೆ ಬೆಡಗು ಬಿನ್ನಾಣಕ್ಕೆ ಪರವಶನಾದ. ತನ್ನ ಜೊತೆ ಅವಳೊಬ್ಬಳೆ ಬರಲು ಒಪ್ಪಿದಳೆಂದರೆ ತನ್ನ ಮೇಲೆ ಅವಳಿಗೆ ಇಷ್ಟವಿದೆ. ಇದು ಸುಲಭವಾಗಿಯೇ ಬೀಳುವ ಹಕ್ಕಿ ಎಂದು ಗೆಳೆಯರ ಮುಂದೆ ಹೇಳಿಕೊಂಡು ನಕ್ಕ ಗೆಳೆಯರಿಗೂ ಹಾಗೆ ಅನ್ನಿಸಿತು. ‘ನೀನ್ ಬಿಡಮ ಹುಡುಗೀರ ಬುಟ್ಟಿಗೆ ಹಾಕಿಕೊಳ್ಳೋದರಲ್ಲಿ ಖದೀಮ. ಆದರೂ ಇವಳೊಂತರಾ ಡಿಫರೆಂಟ್ ಕಣೋ. ಮದುವೆಯಾಗೋ ಹುಡುಗಿ ಬೇರೆ. ಯಾವುದಕ್ಕೂ ಆತುರ ಬೀಳಬೇಡಮ್ಮ ಮೊದ್ಲೆ ಪಾಳೇಗಾರೆ ಜನ’ ಗೆಳೆಯರು ಅವನ ಸ್ಪೀಡ್‌ಗೆ ಬ್ರೇಕ್ ಹಾಕಿದರು.

ಪಿಕ್‌ನಿಕ್ ಸ್ಪಾಟ್ ಹಿಮವದ್‌ಕೇತಾರ ಬಂದಾಗ ಎಲ್ಲರಿಗೂ ಖುಷಿಯೋ ಖುಷಿ. ಬಂಡೆಗಳಿಂದಾವೃತವಾದರೂ ಎಲ್ಲೆಲ್ಲೂ ಗಗನಚುಂಬಿ ಮರಗಳು ಪೊದೆಗಳು ಹಸಿರರಾಶಿ. ಬಂಡೆಗಳ ಮಧ್ಯೆ ಕೊರೆದಿರುವ ಬಸವನ ಬಾಯಲ್ಲಿ ಝುಳು ಝುಳು ಹರಿವ ನೀರು ತೊರೆಯಂತೆ ಹರಿಯುವಾಗ ಒಬ್ಬರಿಗೊಬ್ಬರು ನೀರೆರೆಚಿಕೊಂಡು ಜಿಗಿದಾಡಿದರು. ಚಿನ್ನು ಮೌನವಾಗಿ ಬಂಡೆಯ ಮೇಲೆ ಕೂತಿದ್ದರೂ ಇವರ ಜಿಗಿದಾಟವನ್ನು ನೋಡಿ ಮಂಗನಿಂದ ಮಾನವ ಎಂಬ ಮಾತು ನೆನಪಾಗಿ ಆಗಾಗ ಕಿಲಕಿಲನೆ ಚಪ್ಪಾಳೆ ತಟ್ಟಿ ನಗುತ್ತಿದ್ದಳು. ಅವಳ ನಗು ಸಂಗ್ರಾಮನಲ್ಲಿ ಮತ್ತೇರಿಸಿತು. ಬಿಯರ್ ಕುಡಿದು ಬಾಟಲ್ ಎಲ್ಲೆಂದರಲ್ಲಿ ಬಿಸಾಡಿ ಜಂಕ್‌ಫುಡ್ ತಿಂದು ತಮ್ಮ ಪಕ್ಕೆಗಳಿಗೆ ರೆಕ್ಕೆ ಬರಿಸಿಕೊಂಡರು. ಚಿನ್ನು ಹೆಚ್ಚು ತಿನ್ನಲಿಲ್ಲ ಹೆಚ್ಚು ಬೆರೆಯಲೂ ಇಲ್ಲ. ಅವರೊಡನಿದ್ದೂ ಅವಳು ಏಕಾಂಗಿ. ಸಂಗ್ರಾಮನ ಹೊಟ್ಟೆ ಸೇರಿದ್ದ ಬಿಯರ್‌ ಅವನಲ್ಲಿನ ಧೈರ್ಯವನ್ನು ಹೆಚ್ಚಿಸಿತು. ಅವಳ ಬಳಿ ಹೋಗಿ ಕೂತ, ‘ಬಾ ಚಿನ್ನು, ಹೀಗೆ ಸುತ್ತಾಡಿಕೊಂಡು ಬರೋಣ’ ಆಹ್ವಾನಿಸಿದ.

‘ನೊನೊ… ಇಲ್ಲೇ ಚೆನ್ನಾಗಿದೆ’ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದಳು.

‘ಸ್ವಲ್ಪ ದಿನದಲ್ಲಿ ಮದುವೆಯಾಗೋ ನಮ್ಮ ನಡುವೆ ಸಂಕೋಚ ಏಕೆ ಕಮಾನ್ ಡಾರ್ಲಿಂಗ್’ ಎಂದವಳ ಕೈ ಹಿಡಿದೆಳೆದ.

‘ಬೇಡ ಪ್ಲೀಸ್’ ಎಂದಳೇ ಹೊರತು ಕೈ ಬಿಡಿಸಿಕೊಳ್ಳಲಿಲ್ಲ. ಉತ್ತೇಜಿತನಾದ

‘ನಾನೂ ನೀನು ಮದುವೆಯಾದ್ರೆ ರಂಗನ ಗತಿ ಏನು?’ ಅನಿರೀಕ್ಷಿತ ಪ್ರಶ್ನೆ ಎತ್ತಿ ಅವಳ ಮೋರೆಯನ್ನು ಕೆಣಕುವಂತೆ ನೋಡಿದ. ಅವಳು ತುಟಿಗಳಲ್ಲೇ ಓರೆ ನಗೆ ಚೆಲ್ಲಿದಳು.

‘ನಾನು ನೀನು ಮದುವೆ ಆಗ್ತಿವಿ ಅಂತ ಯಾರು ಹೇಳಿದರು?’ ಕೊಂಕು ನಗೆ ನಕ್ಕಳು.

‘ಹಿರಿಯರೆಲ್ಲಾ ಒಪ್ಪಿದ್ದಾರಲ್ಲ. ಎಂಗೇಜ್‌ಮೆಂಟ್ ಮಾಡಿಕೊಂಡೇ ಹೋಗೋದು ನಾವು’

ಚಿನ್ನು ಜೋರಾಗಿ ನಕ್ಕಳು. ಮೈ ಕುಲುಕಿತು ಅವಳ ನಗುವಿನಲ್ಲಿ ತನಗೆ ಬೇಕಾದಂತಹ ಅರ್ಥವನ್ನು ಕಲ್ಪಿಸಿಕೊಂಡ ಸಂಗ್ರಾಮ ಅವಳ ಸರಿದ ಸೆರಗಿನ ಮರೆಯಲ್ಲಿ ಕಾಣುವ ತೋರ ಮೊಲೆಗಳು ದ್ರಾಕ್ಷಿ ಹೊಕ್ಕುಳವನ್ನೆಲ್ಲ ನೋಡಿದ. ಅವನ ದೇಹ ಬೆಚ್ಚಗಾಯಿತು. ‘ನೀನು ತುಂಬಾ ಬ್ಯೂಟಿಫುಲ್ಲಾಗಿದ್ದಿ’ ಎಂದವಳ ತೋಳುಗಳನ್ನು ಹಿಡಿದು ಮೇಲೆಳೆದುಕೊಳ್ಳಲು ಯತ್ನಿಸಿದ. ಅವಳಷ್ಟು ಸುಲಭವಾಗಿ ಒಲಿದಾಳೆ ಗೆಳೆಯರು ಆ ದೃಶ್ಯವನ್ನು ನೋಡಿ ಮಜಾ ತಗೊಂಡರು. ಶೀಟಿ ಚಪ್ಪಾಳೆ ಹೊಡೆದು ಸಂಗ್ರಾಮನನ್ನು ಉತ್ತೇಜಿಸಿದರು. ಅವನ ಕಾಮ ಕೆರಳಿ ಕಾದ ಕಬ್ಬಿಣದಂತಾಯಿತು. ನಾಯಿ ಬಾಲ ಡೊಂಕು ಎಂಬಂತೆ ಕಲಿತ ಚಾಳಿ ಬಿಡಿಸಲಾದೀತೆ. ಅವಳು ಪ್ರತಿಭಟಿಸಲು ಮುಂದಾದಳು. ‘ಬಾರೆ ಕಂಡಿದೀನಿ… ಈವತ್ತಲ್ಲ ನಾಳೆ ನಾವು ಗಂಡ ಹೆಂಡ್ತಿ ಕಣೆ’ ಮಾಂಸ ಕಂಡ ಹದ್ದಿನಂತೆ ಅವಳ ಮೇಲೆ ಮುಗಿಬಿದ್ದ ಇಬ್ಬರ ಸೆಣಸಾಟದಲ್ಲಿ ಅವಳ ಸೀರೆ ರವಿಕೆ ಹರಿದು ಚಿಂದಿಯಾದಂತೆಯೇ ಅವನ ಶರ್ಟು ಬನಿಯನ್ನೂ ಹರಿದು ನೇತಾಡಿದವು ‘ಬಿಡಬೇಡಮ್ಮ… ಹಿಡಿ… ಬಕ್ ಅಪ್’ ಗೆಳೆಯರು ಹುರಿದುಂಬುವಂತೆ ಕೇಕೆ ಹಾಕಿದರು. ಚಿನ್ನುವನ್ನು ಪೊದೆಯ ಹಿಂದೆ ಎಳೆದೊಯ್ಯಲು ಹರಸಾಹಸ ಮಾಡಿದ ಸಂಗ್ರಾಮ. ಅವನಿಂದ ಬಿಡಿಸಿಕೊಂಡ ಚಿನ್ನು ತಳ್ಳಿದ ರಭಸಕ್ಕೆ ಬಂಡೆಯ ಮೇಲಿಂದ ಕೆಳಗುರುಳಿದ ಸಂಗ್ರಾಮ. ಅವಳು ಜಿಂಕೆಯಂತೆ ಬಂಡೆಯಿಂದ ಬಂಡೆಗೆ ನೆಗೆದು ಓಡುವಾಗ ಸಂಗ್ರಾಮ ಅವನ ಗೆಳೆಯರಾಗಲೆ ಕುಡಿದು ಚಿತ್ತಾಗಿದ್ದರಿಂದ ಅವಳಷ್ಟೇ ಚುರುಕಾಗಿ ಓಡಿ ಅವಳನ್ನು ಹಿಂಬಾಲಿಸಿ ಹಿಡಿಯುವುದರಲ್ಲಿ ಹಿಂದೆ ಬಿದ್ದರು. ‘ಬಿಡಬೇಡಿ ಹಿಡಿರೋ ಅವಳನ್ನಾ’ ಸಂಗ್ರಾಮ ಕಿರಿಚಾಡುತ್ತಾ ಓಡಿದ, ಚಿನ್ನು ತನ್ನ ಕಾರು ಏರಿ ವೇಗವಾಗಿ ಹೊರಟಾಗ ಇವರೂ ವ್ಯಾನ್ ಏರಿ ಅಷ್ಟೇ ವೇಗದಲ್ಲಿ ಹಿಂಬಾಲಿಸಿದರು. ‘ಬಿಡಬೇಡಲೆ ಅವಳ್ನ…. ಅವಳ ಕಾರಿಗೆ ಅಡ್ಡಹಾಕು… ನಿಲ್ಲಿಸು’ ಅರಚಾಡುತ್ತಿದ್ದ. ಗೆಳೆಯರ ಎದುರು ತಾನೀಗ ಅವಳನ್ನು ಬಿಟ್ಟರೆ ಅಪಮಾನಕ್ಕೀಡಾದಂತೆ ಎಂಬ ಆಲೋಚನೆಯಿಂದಲೇ ಕ್ರುದ್ಧನಾದ ಸಂಗ್ರಾಮ ಅಕ್ಸಲೇಟರ್ ಮೇಲಿಟ್ಟ ಕಾಲು ತೆಗೆಯಲಿಲ್ಲ.

ತಿಂದು ಕುಡಿದು ಮೌಜು ಉಡಾಯಿಸುತ್ತಾ ಕುಳಿತಿದ್ದ ಪಾಳೇಗಾರರ ಕುಟುಂಬ ಮತ್ತು ದುರ್ಗಸಿಂಹ ಅವನ ಚೇಲಾಗಳು ಮದುವೆ ಪಕ್ಕಿಯಾದ ಆನಂದದಲ್ಲಿ ಮೈಮರೆತಿರುವಾಗಲೆ ಬಿರುಗಾಳಿಯಂತೆ ಚೀರುತ್ತಾ ಓಡಿಬಂದ ಚಿನ್ನು ಆ ಸಮೂಹದ ಎದುರೇ ಆಯತಪ್ಪಿ ಉರುಳಿದಳು. ಅವಳ ರಕ್ತಸಿಕ್ತ ಮೈ ಹರಿದು ನೆಲಗುಡಿಸುತ್ತಿದ ವಸ್ತ್ರಗಳನ್ನು ನೋಡಿದಾಗ ಉಗ್ರಪ್ಪನ ನೆತ್ತಿಗೇರಿದ್ದ ಅಮಲು ಜರನೆ ಇಳಿಯಿತು. ಏನಾಯಿತೆಂಬುದೇ ತಿಳಿಯದೆ ಹಿರಿಯ ಭರಮಪ್ಪ ಕೂಡ ಗಲಿಬಿಲಿಗೊಂಡರು. ಅಷ್ಟರಲ್ಲಿ ಹಿಂದೆಯೇ ಚಿಗುರೆಯನ್ನು ಬೆನ್ನಟ್ಟಿಬರುವ ಹುಲಿಯಂತೆಯೇ ಓಡಿಬಂದ ಸಂಗ್ರಾಮ ನೆಲಕ್ಕುರುಳಿದ್ದ ಚಿನ್ನುವಿನ ತೋಳು ಹಿಡಿದು ಮೇಲೆತ್ತಿದ್ದ. ಅವಳು ‘ಹೆಲ್ಪ್ ಹೆಲ್ಪ್ ಕಾಪಾಡಿ’ ಎಂದು ಕೂಗಾಡುವಾಗ ಸಂಗ್ರಾಮನ ಕೈಯಿಂದ ಅವಳನ್ನು ಪಾರು ಮಾಡಿದವ ಮೈಲಾರಿ. ಆಗಲೆ ಕುಡಿದು ತೂರಾಡುತ್ತಿದ್ದ ಸಂಗ್ರಾಮನ ಗೆಳೆಯರೂ ಒಳಬಂದರು. ಸಂಗ್ರಾಮನೂ ವಾಸನೆ ಹೊಡೆಯುತ್ತಿದ್ದುದನ್ನು ಕಂಡು ಮೈಲಾರಿ ಕೆಂಡದಂತಾದ. ನಡೆದ ಪರಿಸ್ಥಿತಿಯನ್ನು ಯಾರೂ ಬಾಯಿಬಿಟ್ಟು ಹೇಳಿಯೇ ಇರಲಿಲ್ಲವಾದರು ನೋಡಿದವರಿಗೆ ಅರ್ಥವಾಗಿತ್ತು. ಅಲ್ಲಿಗೂ ಚಿನ್ನುವೇ ಬಿಕ್ಕಿ ಅಳುತ್ತಾ, ‘ಇವನು ನನ್ನ ಬಲಾತ್ಕಾರ ಮಾಡೋಕೆ ಬಂದ ತಾತ’ ಎಂದು ಅಪಮಾನದಿಂದ ಹಿಡಿಯಷ್ಟಾಗಿ ಒಳ ಓಡಿದಳು. ‘ಏನಲೆ ನಮ್ಮ ಮನೆ ಹೆಣ್ಣುಮಗೀನ ಮೈ ಮುಟ್ಟೋಕೆ ಎಷ್ಟಲೆ ಪೊಗರು ನಿನ್ಗೆ’ ಎಂದು ಸ್ಫೋಟಿಸಿದ ಮೈಲಾರಿ ಗೋಡೆಗೆ ನೇತುಹಾಕಿದ್ದ ಕತ್ತಿಯನ್ನೇ ಸೆಳೆದುಕೊಂಡ. ಮೈಮುಟ್ಟಿದ ನಿನ್ನ ಕೈ ಇರಬಾರ್‍ದು’ ಎಂದು ಸಂಗ್ರಾಮನತ್ತ ಮುನ್ನುಗಿದ. ನೆರೆದವರ ನೆತ್ತಿಗೆ ಏರಿದ ನಶೆ ಹಿಮರಿ ಹೋಗಿತ್ತು. ತಕ್ಷಣ ದುರ್ಗಸಿಂಹ, ಉಗ್ರಪ್ಪ ಅಡ್ಡಬಂದು ತಡೆಯದಿದ್ದರೆ ಸಂಗ್ರಾಮನ ಕೈ ತುಂಡಾಗಿ ಧರೆಗುರುಳುತ್ತಿತ್ತೇನೋ. ‘ಸಮಾಧಾನ ಮಾಡ್ಕೋ ಮೈಲಾರಿ… ಬಾ ಈ ಕಡೆ’ ಉಗ್ರಪ್ಪ ಮೈಲಾರಿಯನ್ನು ತಬ್ಬಿ ಹಿಂದಕ್ಕೆಳೆದ ‘ನಮ್ಮ ಹುಡುಗೀನ ಬಲತ್ಕಾರ ಮಾಡೋದು ಅಂದ್ರೇನು? ಅಂತವನು ಜೀವಂತವಾಗಿ ಉಳಿಯೋದು ಅಂದ್ರೇನು ಬಿಡಣ್ಣಾ ನನ್ನಾ’ ಮೈಲಾರಿಯನ್ನು ಹಿಡಿದು ನಿಲ್ಲಿಸಲು ಭರಮಪ್ಪನವರೇ ಮುಂದಾದರು.

‘ಇದೆಲ್ಲಾ ಏನಯ್ಯಾ ಸಂಗ್ರಾಮ್?’ ಉಗ್ರಪ್ಪ ಬಿರುಗಣ್ಣುಬಿಟ್ಟ. ಅವನು ಮಾತನಾಡಲಿಲ್ಲ. ‘ಚಿನ್ನು ಹೇಳಿದ್ದು ನಿಜವೇನೋ?’ ಮತ್ತೆ ಗುಡುಗಿದ.

‘ಆಫ್-ಕೋರ್ಸ್… ವಾಟ್ ಈಸ್ ದೇರ್’ ಅಲಕ್ಷ್ಯವಾಗಿ ನಕ್ಕ ಸಂಗ್ರಾಮಸಿಂಹ ಅವನ ಕೆನ್ನೆಗೆ ರಪ್ಪನೆ ಬಾರಿಸಿದನು ಉಗ್ರಪ್ಪ. ಇದರಿಂದ ಅಪಮಾನಿತನಾದವ ದುರ್ಗಸಿಂಹ. ತನ್ನ ಚೇಲಾಗಳ ಎದುರೇ ನಡೆದಿದ್ದರಿಂದ ಪ್ರೆಸ್ಟೀಜ್ಗಾಗಿಯಾದರೂ ಸಮರ್ಥಿಸಿಕೊಳ್ಳಲೇಬೇಕಿತ್ತು. ‘ಉಗ್ರಪ್ಪ’ ಎಂದು ಗದರುತ್ತಲೇ ಮಗನನ್ನು ತನ್ನತ್ತ ಎಳೆದುಕೊಂಡ. ‘ಈ ಪಾಳೇಗಾರಿಕೆ ಎಲ್ಲಾ ನಮ್ಮ ಹತ್ತಿರ ಇಟ್ಟೋಬೇಡಿ. ನಾವೇನು ನಮ್ಮ ಸ್ಟೇಟಸ್ ಏನು? ಅಷ್ಟಕ್ಕೂ ಈಗೇನಾಯ್ತು ಅಂತ ಹೀಗ್ ಆಡ್ತಿರಿ’ ಎಂದು ಕುಪಿತನಾದ. ‘ನನ್ನ ಮಗಳನ್ನು ಬಲತ್ಕಾರ ಮಾಡೋಕೆ ನಿನ್ನ ಮಗ ಪ್ರಯತ್ನ ಮಾಡಿದ್ದು ಸರಿನೇನಯ್ಯ?’ ಉಗ್ರಪ್ಪ ದುರುಗುಟ್ಟಿದ.

‘ಸರಿನೋ ತಪ್ಪೋ, ವಯಸ್ಸಿಗೆ ಬಂದ ಹುಡುಗ ದುಡುಕಿರಬಹುದಯ್ಯ… ಅಷ್ಟಕ್ಕೂ ಅವನು ಇಂದಲ್ಲ ನಾಳೆ ಮದುವೆ ಆಗೋ ಹುಡುಗಿ ಅವಳು… ಮದುವೆಗಿಂತ ಮೊದಲೇ ಇಷ್ಟಪಟ್ಟಿದ್ದಾನೆ. ಈಗ ಇದೆಲ್ಲಾ ಕಾಮನ್ ಕಣ್ರಿ… ನೀವು ಹಳ್ಳಿಗುಗ್ಗುಗಳ ತರಾ ಆಡಬೇಡಿ’ ದುರ್ಗಸಿಂಹ ಕುಹಕನಗೆ ನಗುತ್ತಾ ಆಡಿದಾಗ ರೇಗಿದ ಭರಮಪ್ಪ ತಾಳ್ಮೆಗೆಟ್ಟು ‘ಹುಟ್ಟಾ ಲೋಫರ್ ತಂದು’ ಎಂದು ದುರ್ಗಸಿಂಹನ ಕಪಾಳ ಕಣ್ಣು ಏಕವಾಗೋ ಹಂಗೆ ಅವನ ಮುಖಕ್ಕೆ ಮುಷ್ಟಿಕಟ್ಟಿ ಗುದ್ದಿಬಿಟ್ಟರು. ಮೂಗಿನಿಂದ ಬಳಬಳನೆ ರಕ್ತ ಸುರಿದು ತೊಟ್ಟ ಬಟ್ಟೆಯ ಮೇಲಿಳಿಯಿತು. ‘ಏನಂತ ತಿಳ್ಕೊಂಡಿದಿರಲೆ ನಮ್ಮನ್ನಾ. ಇಕ್ಕರಿ ಇವರನ್ನ’ ತನ್ನವರಿಗೆ ದುರ್ಗಸಿಂಹ ಆಜ್ಞಾಪಿಸಿದ. ಉಗ್ರಪ್ಪ ಮೈಲಾರಿ ಮತ್ತು ಭರಮಪ್ಪ ಗೋಡೆಗೆ ನೇತುಹಾಕಿದ್ದ ಬಂದೂಕಗಳನ್ನೆತ್ತಿಕೊಂಡರು. ಪಾಳೇಗಾರರ ಆಳುಕಾಳುಗಳು ಮಚ್ಚು ದೊಣ್ಣೆಗಳನ್ನು ಹಿಡಿದು ಒಳ ಬಂದರು. ‘ಏನಲೆ ದುರ್ಗ, ನಮ್ಮ ಮೇಲೆ ಕೈ ಎತ್ತೋ ಎತ್ತರಕ್ಕೆ ಬೆಳೆದುಬಿಟ್ಯಾ. ನಾವು ಸಾಕಿ ಬೆಳೆಸಿದ ನಾಯಿ ನೀನು, ನಮ್ಮ ಬೆಂಬಲವಿಲ್ದೆ ಯಲಕ್ಷನ್ನಿಗೆ ನಿಲ್ತಿಯಾ? ಗೆಲ್ತಿಯೇನೋ ನಾಮರ್ದಾ. ಒಂದು ಮಾತು ಆಡ್ದೆ ಕಳಕ್ಕಳಲೆ. ನಮ್ಮ ಸಂಬಂಧ ಬೆಳಸೋ ಯೋಗ್ಯತೆ ನಿನಗೆಲ್ಲಿ ಐತಲೆ ನಾಯಿ? ನಾವೇ ನಾಯಿ ತಗೊಂಡು ಹೋಗಿ ಸಿಂಹಾಸನದ ಮ್ಯಾಗೆ ಕೂರಿಸೋಕೆ ಹೊಂಟಿದ್ದು ನಮ್ಮದೆ ತೆಪ್ಪಲೆ ಮಗ್ನ’ ಭರಮಪ್ಪನವರ ಮಾತಿನಲ್ಲಿ ರೋಷದ ಜೊತೆಗೆ ಸಂಕಟವೂ ಇಣುಕಿತು.

‘ಭರಮಪ್ಪಾ ಮರ್ಯಾದೆಯಿಂದ ಮಾತಾಡೋದ್ನ ಕಲಿ’ ಅಂಜುತ್ತಲೇ ಸಿಡಿಮಿಡಿಗೊಂಡ ದುರ್ಗಸಿಂಹ. ಸಂಗ್ರಾಮಸಿಂಹ ಬೆಪ್ಪಾಗಿ ನಿಂತಿದ್ದ.

‘ನಿನಗೆ ಮರ್ಯಾದೆ ಬೇರೆ ಕೇಡು… ಹೋಗಲೆ, ಹಳ್ಳಿಜನಕ್ಕೇನಾರ ವಿಷಯ ಗೊತ್ತಾದರೆ ನೀನು ನಿನ್ನ ಪಟಾಲಮುಗಳು ಹಳ್ಳಿನಾಗೇ ಸಮಾಧಿ ಆದೀರಾ… ಅದಕಿಂತ ಮೊದ್ಲು ಓಡಿಹೋಗಿ ಬದುಕ್ಕೊಳ್ಳಿ’ ಭರಮಪ್ಪ ಬಂದೂಕ ಎತ್ತಿದರು.

‘ನಡಿಯಲೆ ಕತ್ತೆ’ ಮಗನನ್ನು ಎಳೆದುಕೊಂಡ ದುರ್ಗಸಿಂಹ ಘರ್ಜಿಸದೆ ನರಸತ್ತವನ ಪರಿ ಸಾಗುವಾಗ ಅವನ ಚೇಲಾಗಳೂ ಜೀವ ಉಳಿದರೆ ಸಾಕೆಂಬಂತೆ ಹಿಂಬಾಲಿಸಿದರು. ಬಾಗಿಲ ಬಳಿ ಹೋಗಿ ಗಕ್ಕನೆ ತಿರುಗಿ ನಿಂತ ದುರ್ಗಸಿಂಹ ತಾನು ಆಚೆ ಹೋಗುವ ಮುನ್ನ ಘರ್ಜಿಸಿದ. ‘ನಿಮ್ಮ ಸಂಬಂಧ ಮುರಿದುಬಿತ್ತು ಅಂತ ನನಗೇನೂ ಬೇಸರವಿಲ್ಲ ಭರಮಪ್ಪ ನನ್ನ ಮಗನಿಗೆ ಹೆಣ್ಣಿಗೇನು ಬರ? ಸೊಫೆಸ್ಟಿಕೇಟೆಡ್ ಅಲ್ಲದ, ಮಾಡರನ್ ರೀತಿ ನೀತಿ ಅರಿಯದ ನಿಮ್ಮಂತಹ ಗಮಾರರ ಸಂಬಂಧ ಬಯಸಿ ಬಂದದ್ದು ನಮ್ಮದೇ ತಪ್ಪು, ಇವತ್ತು ಈ ನಾಲ್ಕು ಮೂಲೆಗಳ ಮನೆಯಲ್ಲಿ ನಮಗೆ ಅಪಮಾನವಾಗಿದೆ… ಓಕೆ. ಆದರೆ ಪಾಳೆಗಾರರು ಅಂತೇನು ಮೆರಿತಿದ್ದೀರಲ್ಲ, ನಿಮ್ಮ ಇಡೀ ಕುಟುಂಬವೇ ಸಮಾಜದ ಎದುರು ತಲೆತಗ್ಗಿಸುವಂತೆ ಅಪಮಾನದಿಂದ ಬೆಂದು ಹೋಗುವಂತೆ ಮಾಡಲಿಲ್ಲ… ನಾನು ಅಮರಸಿಂಹನ ಮಗ ದುರ್ಗಸಿಂಹನೇ ಅಲ್ಲ. ಇಟ್ ಈಸ್ ಮೈ ಛಾಲೆಂಜ್’ ಸವಾಲ್ ಹಾಕಿದ ದುರ್ಗಸಿಂಹ ತನ್ನವರೊಡನೆ ವಾಹನಗಳನ್ನೇರಿ ಹೊರಟು ಹೋಗುವುದನ್ನೇ ನೋಡಿದ ಭರಮಪ್ಪ ಮೀಸೆ ತೀಡಿದರು. ‘ಬೊಗಳೋ ನಾಯಿ ಕಚ್ಚೋಲ್ಲ’ ತಮ್ಮಲ್ಲಿ ತಾವೇ ಅಂದುಕೊಂಡರು. ‘ಅಣ್ಣಾ, ನೀನು ನನ್ನನ್ನ ತಡೆಯದಿದ್ದರೆ ನಾನ್ ಅವನ ಕೈಯನ್ನಷ್ಟೇ ಅಲ್ಲ ಮೈಯನ್ನೂ ಕೈಮಾ ಮಾಡಿಬಿಡ್ತಿದ್ದೆ’ ಅಸಹನೆಯಿಂದ ವ್ಯಗ್ರನಾಗಿದ್ದ ಮೈಲಾರಿ, ‘ನಮ್ಮ ಹುಡುಗಿ ಮೈ ಮುಟ್ಟೋದು ಅಂದ್ರೇನು ಅಷ್ಟೊಂದು ಸದರವಾಗೋತೆ’ ಬಿಸಿಯುಸಿರುಬಿಟ್ಟ.

‘ಸಾಕು ಸಾಕು ನಿನ್ನ ಹಾರಾಟ. ಯಾರ ಯಾರದ್ದೋ ಕೈಕಾಲು ಕತ್ತರಿಸಿದಂತಲ್ಲ. ಪೊಲಿಟಿಕಲ್ ಬ್ಯಾಗ್ರೌಂಡ್ ಇರೋನು ಹಣ ಇರೋನು. ಇಂಥೋರನ್ನ ನಾವು ಭಾಳ ಹುಶಾರಾಗಿ ಹ್ಯಾಂಡ್ಲ್ ಮಾಡ್ಬೇಕಲೆ’ ತಮ್ಮನನ್ನು ಸಂತೈಸಿದ ಉಗ್ರಪ್ಪ.

‘ಆ ಪೊಂಗೊಳ್ಳೆಗೆಲ್ಲಾ ಹೆದರೋದೇನ್ಲೆ ಉಗ್ರಾ… ನಮ್ಮ ದ್ವೇಷ ಕಟ್ಕೊಂಡು ಅವನು ಯಲಕ್ಷನ್ ಗೆದ್ದಾನೇನ್ಲೆ… ಸೋತ ಅಂದ್ರೆ ಸತ್ತ ಅಂತ್ಲೆ ಅಲ್ವೆ?

ಹಲ್ಲು ಕಿತ್ತ ಹಾವನಂಗೆ ಆಗ್ತಾನೆ… ಭರಮಪ್ಪನೆಂಬ ಅನುಭವಿ ಅಂಜಲಿಲ್ಲ. ‘ಒಳ್ಳೆ ಸಂಬಂಧವೇ ಬಂದಿತ್ತು… ಹಾಳಾಗಿಹೋಯ್ತು’ ಉಗ್ರಪ್ಪ ಒಳಗೇ ಖಿನ್ನನಾಗಿದ್ದ. ಇಂತಹ ಹಲ್ಕಾಗಳ ಸಂಬಂಧ ತಪ್ಪಿದ್ದೆ ಒಳ್ಳೆದಾತು ಬಿಡಣ್ಣ… ಇವನಿಲ್ಲದಿದ್ದರೆ ಇವನಪ್ಪನಂತಹ ಸಂಬಂಧ ತರೋಣ’ ಮೈಲಾರಿ ಹತಾಶನಾಗಿರಲಿಲ್ಲ. ಆದರೆ ಯಾರಿಗೂ ಚಿನ್ನುವಿನ ಬಳಿ ಹೋಗಿ ಸಾಂತ್ವನಿಸುವ ಎದೆಗಾರಿಕೆ ಚಿಗುರಲಿಲ್ಲ. ಅಸಲಿಗೆ ಅವಳ ಮುಖ ನೋಡುವಷ್ಟು ತ್ರಾಣವೂ ನರಗಳಲ್ಲಿ ಹರಿಯಲಿಲ್ಲ. ಅವಳಿಗಿಂತ ಹೆಚ್ಚಿನ ಅಪಮಾನ ಸಂಕಟ ವ್ಯಥೆ ಅವರಲ್ಲುಂಟಾಗಿತ್ತು. ಚಿನ್ನಮ್ಮನಿಗೆ ಮನೆಬಾಗಿಲಿಗೆ ಬಂದ ಸಂಬಂಧ ಕೈತಪ್ಪಿದ್ದರಿಂದ ಒಂದರ್ಥದಲ್ಲಿ ಸಂಕಟವೇ ಆಗಿತ್ತು. ಏನಂದರೂ ಮನೆ ಗಂಡಸರಿಗೆ ಸೈರಣೆಯಿಲ್ಲ. ಹೇಳಿದವರ ಮಾತು ಕೇಳುವುದಾಗಲಿ ಸ್ವಂತ ಬುದ್ದಿಯೇ ಆಗಲಿ ಸುತ್ರಾಂ ಇಲ್ಲ. ಏನಿಲ್ಲದಿದ್ದರೂ ಪೊಗರು ಒಗರಿಗಂತೂ ಕಮ್ಮಿಯಿಲ್ಲ ಎಂದೆ ಹಳಹಳಿಸಿದಳು. ಅಡಿಗೆ ಮಾಡುವ ಉಮೇದೇ ಅವಳಲ್ಲುಳಿದಿರಲಿಲ್ಲ. ಕೆಂಚಮ್ಮ ಅಲಿಯಾಸ್ ಸುಮ ಮತ್ತು ಚಿನ್ನು ಹಿಗ್ಗಿನ ಪರಾಕಾಷ್ಠೆಯಲ್ಲಿದ್ದು ಒಬ್ಬರನ್ನೊಬ್ಬರು ಕೈ ಕುಲುಕಿ ಅಭಿನಂದಿಸುವುದನ್ನು ಯಾರೂ ಊಹಿಸಲೂ ಸಾಧ್ಯವಿರಲಿಲ್ಲ. ಊಹಿಸಿದ್ದು ನಡೆಯುವಂತೆ ಮಾಡೋದು ಅಸಾಧ್ಯವನ್ನು ಸಾಧಿಸುವಂತೆ ಪ್ರೇರೇಪಿಸೋದು ಸೋತೆನೆಂಬುವನನ್ನು ವಿಜಯದ ಮೆಟ್ಟಿಲುಗಳತ್ತ ಬಡತನದ ಎದುರು ಸಿರಿತನ ಸೋಲುವಂತೆ ಮಾಡೋ ‘ಪವರ್’ ಇದ್ರೆ ಅದು ಪ್ರೇಮಕ್ಕೆ ಮಾತ್ರ ಎಂಬುದು ಅನಾದಿಕಾಲದಿಂದ ಸಾಬೀತಾದ ಸತ್ಯವಾದರೂ ಪ್ರೇಮದ ವಿರುದ್ಧ ಸೆಣಸುವುದು ವಿರೋಧಿಸುವುದು ಇಂದಿಗೂ ನಡದೇಯಿದೆ. ನಡೆಯುತ್ತಲೇ ಇರುತ್ತದೆ ಆದ್ದರಿಂದಲೇ ‘ಪ್ರೇಮ’ ಯಾವತ್ತೂ ನಿತ್ಯನೂತನ ಬಾಳಿನ ಚಂದನವಲ್ಲವೆ. ಯಾರಿಗೂ ತಿಳಿಯದಿರಲಿ ಎಂದಷ್ಟೇ ಮುಚ್ಚಿಟ್ಟರೂ ರಾಜಕಾರಣಿ ದುರ್ಗಸಿಂಹರಿಗೂ ಪಾಳೇಗಾರರಿಗೂ ಮಧ್ಯೆ ವಿರಸ ಉಂಟಾದ ಸಂಗತಿ ರೆಕ್ಕೆ ಪುಕ್ಕ ಅಂಟಿಸಿಕೊಂಡು ಸಂಪಿಗೆಹಳ್ಳಿ ತುಂಬಾ ಹಾರಾಡದಿರಲಿಲ್ಲ. ರಂಗ ಆದದ್ದೆಲ್ಲಾ ಒಳ್ಳೆಯದೆ ಆಯಿತೆಂದು ನಕ್ಕು ಸುಮ್ಮನಾದ.

ರಂಗ ಕಾಲೇಜು ಮುಗಿಸಿಬರುವಾಗ ಫ್ಯಾಮಿಲಿ ಲಾಯರ್ ಅಂದಾನಯ್ಯ ಸಿಕ್ಕರು. ರಂಗನ ಅಣ್ಣ ವೆಂಕಟ ಇವರ ಬಳಿಯೇ ಸಾಕಷ್ಟು ವರ್ಷ ಜೂನಿಯರ್ ಆಗಿ ಹೆಸರು ಮಾಡಿದವನು. ಅಂದಾನಯ್ಯನವರಿಗೆ ರಂಗನ ತಂದೆ ಕೂಡ ಗೆಳೆಯರಾಗಿದ್ದವರೆ. ಹೀಗಾಗಿ ಅವರು ರಂಗನ ಯೋಗಕ್ಷೇಮದ ಬಗ್ಗೆ ಕುಟುಂಬದ ಸ್ಥಿತಿಗತಿಗಳ ಕುರಿತು ವಿಚಾರಿಸಿದರು. ರಂಗ ಮುಖ್ಯವಾಗಿ ತನ್ನ ತಂಗಿಯ ಮದುವೆ ಮಾಡುವ ಕನಸನ್ನು ಅವರ ಮುಂದಿಟ್ಟ. ಅಣ್ಣಂದಿರ ನಿರ್ಲಕ್ಷ್ಯ ಅಸಹಕಾರವನ್ನೂ ಹೆಚ್ಚು ಬಣ್ಣಿಸಿದ. ಗಂಡಹೆಂಡಿರು ಚೆನ್ನಾಗಿ ದುಡಿದು ಸಂಪಾದಿಸ್ತಾ ಇದಾರೆ ಯಾರಿಗೂ ಇರೋ ಒಬ್ಬಳು ಹುಡುಗಿ ಮದುವೆನಾ ಮಾಡಬೇಕೆಂಬ ಮುತುವರ್ಜಿನೂ ಇಲ್ಲವೆಂದು ಮನದಳಲನ್ನು ತೋಡಿಕೊಂಡ. ಹೇಗೂ ಅಪ್ಪ ಕಟ್ಟಿಸಿದ ಮನೆ ಇದೆ. ತಂಗಿ ಮದುವೆಗೆ ಹಣ ಒದಗಿಸುವ ಮನಸ್ಸಾಗಲಿ ಕರ್ತವ್ಯಪ್ರಜ್ಞೆಯಾಗಲಿ ಇವರಲಿಲ್ಲ. ಮನೆ ಮಾರಿಯಾದರೂ ತಂಗಿ ಮದುವೆ ಮಾಡಿಬಿಡೋಣವೆಂದರೆ ಅದಕ್ಕೂ ಒಪ್ಪುತ್ತಿಲ್ಲ ಎಂದು ಕೌಟುಂಬಿಕ ಸಮಸ್ಯೆಗಳನ್ನು ಅವರುಗಳ ಮುಂದಿಟ್ಟು, ‘ನೀವಾದ್ರೂ ಅವರಿಗೆ ಒಂದಿಷ್ಟು ಬುದ್ದಿ ಹೇಳಿ ಸಾರ್, ಮನೆನಾ ಮಾರಾಟ ಮಾಡೋಕ್ಕೆ ಒಪ್ಪಿಸಿ ಸಾರ್’ – ಅಂದ ರಂಗ. ರಂಗನಿಗೊಂದು ಅಚ್ಚರಿ ಕಾದಿತ್ತು. ‘ಮನೆ ಮಾರಾಟ ಮಾಡ್ಲಿಕ್ಕೆ ಬರೋದಿಲ್ಲ ರಂಗ’ ಅಂದರು ಅಂದಾನಯ್ಯ.

‘ಯಾಕೆ ಸಾರ್?’ ದಿಗ್ಭ್ರಾಂತನಾದ ರಂಗ

‘ಆ ಮನೆ ಪತ್ರಗಳನ್ನೆಲ್ಲಾ ಅಡ ಇಟ್ಟು ಐದು ಲಕ್ಷ ಸಾಲ ತಗೊಂಡಿದಾನೆ ಅದರ ಹಣದಲ್ಲಿ ಸಿಟಿನಲ್ಲಿ ಒಂದು ಸೈಟ್ ತಗೊಂಡಿದ್ದಾನಯ್ಯ ನಿಮ್ಮ ಅಣ್ಣ?’ ಲಾಯರ್ ಅಂದಾನಯ್ಯ ಹೇಳುವಾಗ ಅಪ್ರತಿಭನಾದ ರಂಗ.

‘ಅಣ್ಣ…. ಯಾವೋನು ಸಾರ್ ಅವ್ನು?’ ಸಿಡಿದ ರಂಗ

‘ನಿಮ್ಮ ಲಾಯರ್ ಅಣ್ಣ ವೆಂಕಟನಪ್ಪಾ’

‘ಅವನಿಗೆ ಯಾವೋನ್ ಸಾರ್ ಸಾಲ ಕೊಟ್ಟೋನು? ನಮ್ಮಗಳ ಯಾರ ರುಜು ಇಲ್ಲದೆ ಹೀಗೆಲ್ಲಾ ಲೋನ್ ತಗಳೋದು ತಪ್ಪಲ್ವೆ ಸಾರ್’

‘ರೂಲ್ಸ್ ಪ್ರಕಾರ ಅವನೇನೂ ಮಾಡಿಲ್ಲ. ಬೇಕಾದವರ ಬಳಿ ತಗೊಂಡ ಐದು ಲಕ್ಷ ಸಾಲ ತೀರಿಸೋವರ್‍ಗೂ ಪತ್ರಗಳನ್ನು ಒಪ್ಪಿಸಿದ್ದಾನೆ. ಸಾಲ ತೀರಿಸಿದ ಮೇಲೆ ಹಿಂದಕ್ಕೆ ಪಡೀತಾನಷ್ಟೆ, ಇದು ನಂಬಿಕೆ ವಿಶ್ವಾಸದ ಮೇಲಿನ ಸರಳ ವ್ಯವಹಾರ ಅಷ್ಟೆ ಕಣೋ ರಂಗ’ ಅಂದಾನಯ್ಯ ವಿವರಿಸಿದರು.

‘ನಮ್ಮ ಅಣ್ಣನಿಂದ ಪತ್ರ ಇಟ್ಕೊಂಡಿರೋ ಆ ಪುಣ್ಯಾತ್ಮ ಯಾರು ಸಾರ್‌?’

ರಂಗನ ವ್ಯಂಗ್ಯ ನುಡಿ ಅಂದಾನಯ್ಯನವರನ್ನು ಚುಚ್ಚಿ ಘಾಸಿಗೊಳಿಸಿತು. ಅದು ತಾನೆ ಎಂದು ಹೇಳಿಕೊಳ್ಳುವ ಮನಸ್ಸಾಗದೆ ಹಿಂಜರಿದ ಅಂದಾನಯ್ಯ.

‘ಅದು ಯಾರೋ ನನ್ಗೂ ಸರಿಯಾಗಿ ಗೊತ್ತಿಲ್ಲ ತಮ್ಮಾ’ ಎಂದು ನುಣುಚಿಕೊಂಡರು.

‘ಅಲ್ಲ ಸಾರ್, ಇವನು ತಂಗಿ ಮದುವೆಗೇ ಈ ಹಣ ಉಪಯೋಗಿಸಬಹುದಾಗಿತ್ತಲ್ಲ ಸಾರ್, ಇವನೆಂತಹ ಅಣ್ಣ ಸಾರ್. ಇವನಿಗೆ ಸೈಟೇ ಮುಖ್ಯವೆ’ ರೇಗಿದ.

‘ಎಕ್ಸೈಟ್ ಆಗ್ಬೇಡ. ನಿಂದು ಬಿಸಿರಕ್ತ ಕಣೋ ಹುಡ್ಗಾ, ಅವರವರ ಹೆಂಡ್ತೀರು ಮಕ್ಳು ಅಂತಾದ್ಮೇಲೆ ಮನುಷ್ಯ ಸ್ವಾರ್ಥಿಯಾಗಿಬಿಡ್ತಾನಪ್ಪಾ, ಇದು ಅವನ ಒಬ್ಬನ ಮಾತಲ್ಲ… ಲೋಕಾರೂಢಿ’

‘ಹಾಳಾಗಿಹೋಗ್ಲಿ ಬಿಡಿ. ಈಗ ತಂಗಿ ಮದುವೆಗೆ ಅಂತ ನಮಗೆ ಹಣ ಬೇಕಾದ್ರೆ??’

‘ಅವನು ಪೂರಾ ಸಾಲ ತೀರಿಸ್ದೆ ಅವರು ಹೇಗಯ್ಯ ಪತ್ರ ಕೊಡ್ತಾರೆ…?’

ರಂಗನ ಮೊರೆ ಸಪ್ಪಗಾಯಿತು. ‘ವಿಷಯ ತಿಳಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ ಸಾರ್’ ಅಂದ. ಬೇಜಾರು ಮಾಡ್ಕೊಬೇಡಯ್ಯ ಕಂಕಣ ಬಲ ಕೂಡಿ ಬಂದ್ರೆ ನಿನ್ನ ತಂಗಿ ಮದುವೆ ಜಾಂ ಜಾಂ ಅಂತ ನಡೆದು ಹೋಗ್ತದೆ ಬಿಡು’ ಸಮಾಧಾನ ಹೇಳಿದರು ಅಂದಾನಯ್ಯ. ‘ಇದೂ ಲೋಕಾರೂಢಿ ಮಾತೇ ಸಾರ್‌?’ ಎಂದು ಕಟಕಿಯಾಡಿದ ರಂಗ ಸೈಕಲ್ಲೇರಿದ.

ಕಾವೇರಿಯನ್ನು ಒಬ್ಬ ವಿಧುರ ನೋಡಿಕೊಂಡು ಹೋಗಿ ಎಂಟು ತಿಂಗಳಾಗಿತ್ತು. ಅವನಿಗೆ ಮಾಧ್ಯಮಿಕ ಶಾಲೆ ಓದುವ ಮೂರು ಮಕ್ಕಳಿದ್ದರು. ನಲವತ್ತರ ಗಡಿ ದಾಟಿದ್ದ. ತನಗೆ ಹೆಣ್ಣು ಒಪ್ಪಿಗೆಯಿದೆ ಎಂಬ ವರ್ತಮಾನ ಕಳುಹಿಸಿದ್ದ. ಹೀಗಾಗಿ ಮನೆಯಲ್ಲಿ ಹರ್ಷದ ವಾತಾವರಣವಿತ್ತು. ಆದರೆ ಕಮಲಮ್ಮನವರಿಗೆಲ್ಲಿಯ ಹರ್ಷ. ಅವರ ಮೌನದ ಹಿಂದಿನ ಅಸಮ್ಮತಿಯ ಬಗ್ಗೆ ಗ್ರಹಿಸಿದ ಮಕ್ಕಳು ತಾಯಿಯನ್ನು ಒಲಿಸಲು ಪ್ರಯತ್ನ ನಡೆಸಿದ್ದರು.

‘ನೋಡಮ್ಮಾ, ಆತನಿಗೆ ನಲವತ್ತಾದರೇನಂತೆ, ಫಾರಿನ್‌ನಲ್ಲಿ ಇದೇ ಏಜ್‌ಗೆ ಮದುವೆಯಾಗೋದು, ಇಲ್ಲಿನ ಡಾಕ್ಟರ್‌ಗಳು ಓದಿ ಮುಗಿಸೋದೇ ನಲವತ್ತಕ್ಕೆ. ಮದುವೆಯಾಗೋದಿಲ್ವೆ? ವರ ನೋಡಿದ್ರೆ ಪಿ.ಡಬ್ಯೂ.ಡಿ ಆಫೀಸ್ನಾಗೆ ಎಫ್‌ಡಿಸಿ, ಸಖತ್ ಕಮಾಯಿ. ಮೂರು ಮಕ್ಕಳಿದ್ದರೇನಾತು? ಅವುಗಳನ್ನೇನ್ ಇವಳು ಸಾಕಬೇಕಾಗೇತ್ಹೇಳು? ಅವರಾಗ್ಗೆ ದೊಡ್ಡವರಾಗಿದ್ದಾರೆ. ಅವರ ಪಾಡಿಗೆ ಅವರು ಇರ್ತಾರೆ. ಸುಮ್ನೆ ಒಪ್ಕೊಳೋದು ಕ್ಷೇಮ’ ಮಕ್ಕಳೆಲ್ಲರದ್ದೂ ಇದೇ ರಾಗ. ‘ಆದ್ರೂ ಕಣೋ. ಇವಳ ವಯಸ್ಸೇನು? ಅವನ ವಯಸ್ಸೇನು? ಇರೋಳು ಒಬ್ಬಳು ಮಗ್ಳು. ಇಂತಹ ಎರಡನೆ ಸಂಬಂಧಕ್ಕೆ ಕೊಟ್ಟರೆ ಜನ ಆಡಿಕೊಳ್ಳೋದಿಲ್ವೆ’ ತಾಯಿಯ ತಳಮಳ.

‘ಆಡಿಕೊಳ್ಳೋರೆಲ್ಲಾ ಬಂದು ಲಗ್ನ ಮಾಡೋದಿಲ್ಲಮ್ಮ ಮೇಲಾಗಿ ವರನೇ ಎಲ್ಲಾ ಖರ್ಚಿಟ್ಟು ಮದುವೆ ಮಾಡ್ಕೊತಿದಾನೆ. ನಾವು ಅವನ ಊರಿಗೆ ಹೋಗಿ ಲಕ್ಷಣವಾಗಿ ಮದುವೆಮಾಡಿಕೊಟ್ಟು ಬಂದ್ರಾತು. ಇವಳೇನು ಎಳೆ ಹುಡ್ಗಿನಾ?’ ಲಾಯರ್ ಒಂದಿಷ್ಟು ಹಿರಿತನ ತೋರಿ ಜಬರ್ದಸ್ತ್ ಮಾಡಿದ. ಆಗಲೆ ರಂಗ ಒಳ ಬಂದ. ತಾಯಿ ಕಣ್ಣೀರಿಡುತ್ತಲೇ ವಿಷಯವನ್ನರುಹಿದಾಗ ತಾಯಿಗೆ ಈ ಸಂಬಂಧ ಇಷ್ಟವಿಲ್ಲವೆಂಬುದವನಿಗೆ ವೇದ್ಯವಾಯಿತು. ಕಾವೇರಿಯನ್ನು ಕೇಳುವ ಅಗತ್ಯವೇ ಬರಲಿಲ್ಲ. ಅವಳು ಮೂಲೆ ಹಿಡಿದು ಮೊಳಕಾಲುಗಳಲ್ಲಿ ತಲೆಹುದುಗಿಸಿ ಕುಳಿತ ಭಂಗಿಯೇ ಎಲ್ಲವನ್ನೂ ಬಣ್ಣಿಸುತ್ತಲಿತ್ತು.

‘ಅದಕ್ಕೆ ಯಾಕೆ ಅಳ್ತಿಬಿಡಮ್ಮ. ನಿನಗೆ, ಕಾವೇರಿಗೆ ಇಷ್ಟವಿಲ್ಲ ಅಂದ್ಮೇಲೆ ಲಗ್ನ ಮಾತೇಕೆ? ಅವಳಿಗೇನ್ ಮಹಾ ವಯಸ್ಸಾಗಿರೋದು ಮಾಡಿದ್ರಾತುಬಿಡು’ ಅಂದ ರಂಗ. ಅವನ ಠೇಂಕಾರದ ಮಾತು ಅಣ್ಣಂದಿರ ತಿಕದಲ್ಲಿ ಉರಿ‌ಎಬ್ಬಿಸಿತು.

‘ಪುಗಸಟ್ಟೆ ಲಗ್ನ ಆಗ್ತಿನಿ ಅಂತ ಬಂದೋನ್ನ ಬಿಟ್ಟು ಇನ್ನು ಯಾವನಿಗೆ ನಿನ್ನ ತಂಗಿನಾ ಕೊಡಬೇಕು ಅಂತಿದ್ದಿಯಲೆ ಸುವ್ವರ್?’ ಲಾಯರ್ ಅಂಗಾರಾದ.

‘ಹೈಸ್ಕೂಲ್ ಮೇಷ್ಟ್ರು ಒಬ್ಬ ಬಂದಿದ್ದನಲ್ಲ. ಅವನು ಕೇಳಿದ್ದು ಕೇವಲ ಒಂದು ಲಕ್ಷ ಸಿಂಪಲ್ ಮ್ಯಾರೇಜ್ ಮಾಡಿಕೊಟ್ಟರೆ ಸಾಕು ಅಂದಿದ್ದನಲ್ಲ ಅವನಿಗೇ ಯಾಕೆ ಕಾವೇರಿನಾ ಕೊಡಬಾರ್‍ದು?’ ರಂಗ ದಬಾಯಿಸಿದ.

‘ಹೋಗಲೆ ಹುಡುಗಬಟ್ಟೆ. ಲಕ್ಷ ವರದಕ್ಷಿಣೆ, ಲಕ್ಷಗಟ್ಟಲೆ ಮದುವೆ ಖರ್ಚು ಯಾರು ಕೊಡ್ತಾರೋ ಕತ್ತೆ? ದುಡ್ಡು ಎಲ್ಲಿಂದ ತರೋದೋ ರ್‍ಯಾಸ್ಕಲ್’.

‘ಮನೆ ಮಾರೋದು ಬೇಡ. ಮೂರು ಲಕ್ಷಕ್ಕೆ ಅಡ ಇಡೋಣ. ಯಾರಾದ್ರೂ ಕೊಟ್ಟಾರು. ಹೀಗೇಕೆ ಮಾಡಬಾರ್‍ದು?’ ರಂಗ ತಿರುಗಿ ನಿಂತ.

‘ಈ ಮನೆಗೆ ಯಾವನೋ ಮೂರು ಲಕ್ಷ ಕೊಡ್ತಾನೆ ಮತಿಗೇಡಿ?’ ಲಾಯರ್ ರೇಗಿಬಿಟ್ಟ. ‘ಐದು ಲಕ್ಷವೇ ಕೊಡ್ತಾರಂತೆ ಮೂರುರುಲಕ್ಷ ಕೊಡೋಲ್ವೆ?’ ರಂಗ ನಕ್ಕ. ‘ಏನ್ ಅಸಂಬದ್ಧವಾಗಿ ಮಾತಾಡ್ತಿಯಲೆ ಜವಾಬ್ದಾರಿ ಇಲ್ಲದೋನೆ’ ಅಳುಕುತ್ತಲೆ ಕನಲಿದ ಲಾಯರ್.

‘ನೀನು ಸಿಟಿನಲ್ಲಿ ಸೈಟ್ ತಗೊಳ್ಳೋಕ್ಕೋಸ್ಕರ ನಮ್ಮ ಫ್ಯಾಮಿಲಿ ಲಾಯರ್ ಅಂದಾನಯ್ಯನವರ ಬಳಿ ಐದು ಲಕ್ಷ ಸಾಲ ತಗೊಂಡಿದ್ದಿಯಾ ಹೌದಿಲ್ಲವೋ? ಯಾರಿಗಾದ್ರೂ ಇದನ್ನ ಹೇಳಿದ್ದೀಯೇನು?’ ತನ್ನ ಅಣ್ಣನ ಜುಟ್ಟನ್ನೇ ಹಿಡಿದುಬಿಟ್ಟ ಹುಮ್ಮಸ್ಸಿನಲ್ಲಿ ಮಾತಿಗಿಳಿದ ರಂಗ ಉಳಿದ ಅಣ್ಣಂದಿರೂ ಈಗ ಅನಿವಾರ್ಯವಾಗಿ ಯಾದರೂ ತನ್ನ ಬೆಂಬಲಕ್ಕೆ ಬರುತ್ತಾರೆಂದು ಒಳಗೇ ಖುಷಿಯಾದ.

‘ತಗೊಳ್ಳಿಬಿಡೋ, ಸಾಲ ತಗೊಂಡಿದಾನೆ ಬಡ್ಡಿ ಕಟ್ತಿದಾನೆ. ತೀರಿಸ್ತಾನೆ… ಇದರಲ್ಲಿ ಏನ್ ತಪ್ಪು…?’ ಲೆಕ್ಚರರ್ ಪರವಹಿಸಿದ.

‘ಎಷ್ಟು ದಿನ ಈ ಹಳ್ಳಿನಲ್ಲಿ ಇರೋದು? ಈವತ್ತು ಅವನು ಲೋನ್ ತಗೊಂಡಿದಾನೆ… ನಾಳೆ ನಾವೂ ಮನೆ ಮೇಲೆ ತಗೋತೀವಿ… ತೀರಿಸ್ತೀವಿ… ಇದರಲ್ಲಿ ಕಳ್ಕೊಳ್ಳೋದು ಏನೋ ಇದೆ ಮಂಗಾ?’ ಪರಮೇಶಿ ಪರಚಿದ.

‘ಇದು ಸ್ವಾರ್ಥ ಅಲ್ವೇನ್ರೋ? ತಂಗಿ ಮದುವೆ ಯಾರು ಮಾಡ್ಬೇಕು?’

‘ನೀನು ಇದ್ದೀಯಲ್ಲಯ್ಯ ಸರದಾರ ಮಾಡು. ಇಲ್ಲಿ ನಾವ್ ಹೇಳಿದ ವರನಿಗೆ ಮಾಡೋಕೆ ಒಪ್ಕೊಳ್ಳಿ. ಗಂಟೂ ಉಳೀತು ನೆಂಟೂ ಬೆಳೀತು’ ಲಾಯರ್‌ ಜಡ್ಜ್‍ಮೆಂಟ್ ಹೇಳಿದ. ಅವಳು ಮದುವೆಯಾಗ್ದೆ ಹಾಗೆ ಇದ್ದರೂ ಪರ್ವಾಗಿಲ್ಲ ಈ ಸಂಬಂಧ ಬೇಡ ಬೇಡ ಬೇಡ’ ಕೂಗಾಡಿದ ರಂಗ.

‘ಸರಿ ಬಿಡು, ಅವಳಿಗೆ ಈ ಜನ್ಮದಲ್ಲಿ ಮದುವೆಯೋಗಾನೇ ಇಲ್ಲ’ ಲಕ್ಚರರನ ಮಾತಿಗೆ ಎಲ್ಲರೂ ಜೋಕ್ ಕೇಳಿದವರಂತೆ ಮುಸಿ ಮುಸಿ ನಕ್ಕುಬಿಟ್ಟರು. ರಂಗ ಸಿಡಿಸಬೇಕೆಂದು ಬಂದ ಬಾಂಬ್ ಸಿಡಿಯಲೇ ಇಲ್ಲ. ತನ್ನ ಮಾತುಗಳಿಂದಾಗಿ ತಾಯಿ ತಂಗಿಯರ ಮೋರೆಯಲ್ಲಿ ಚೈತನ್ಯ ಮೂಡಿದುದನ್ನು ಕಂಡ ರಂಗ ಹತಾಶನಾಗಿದ್ದರೂ ತೋರಗೊಡದೆ ಮುಖದಲ್ಲಿ ನಗೆ ತರಿಸಿಕೊಂಡ. ಮುಂದೇನು ಮಾಡುವುದು ಎಂಬ ಚಿಂತೆ ಅವನ ಮೈ ಮನವನ್ನಾವರಿಸಿತು. ತಂಗಿಯ ಮದುವೆಯನ್ನಂತೂ ಇವರು ಮಾಡರು. ಅವರಿಗೆ ಕಾವೇರಿ ಮನೆ ಬಗ್ಗಡ ಬಳಿಯುತ್ತಾ ಪರ್ಮನೆಂಟ್ ಆಗಿ ಸಂಬಳವಿಲ್ಲದ ಆಳಾಗಿ ಮನೆಯಲ್ಲೇ ಉಳಿಯಬೇಕೆಂಬ ದೂರಾಲೋಚನೆ ಮನದಲ್ಲಿದ್ದಂತಿದೆ. ಇವರನ್ನು ನಂಬಿದರೆ ಅವಳ ಲಗ್ನವಾಗೋಲ್ಲ. ತಾನು ಓದು ನಿಲ್ಲಿಸಿ ದುಡಿಮೆಗೆ ಸೇರಿಯಾದರೂ ಸರಿ ತಂಗಿಯ ಮದುವೆ ಮಾಡಬೇಕು. ‘ಸಚ್ಚಾ ಔರ್ ಜೂಟಾ’ ಸಿನೆಮಾದಲ್ಲಿ ರಾಜೇಶ್ ಖನ್ನಾ ತನ್ನ ತಂಗಿ ಮದುವೆ ಮಾಡಿದಂತೆ ತಾನೂ ಮಾಡಬೇಕೆಂಬ ಕನಸುಕಂಡ. ತಾಯಿಯ ಎದುರು ತಾನು ಓದು ನಿಲ್ಲಿಸುವುದಾಗಿ ಹೇಳಿದಾಗ ಅಣ್ಣಂದಿರೂ ಅತ್ತಿಗೆಯರೂ ಮನೆಯಲ್ಲಿದ್ದರು. ‘ಒಳ್ಳೆ ಆಲೋಚನೆಯೆ, ಈಗೆಲ್ಲಾ ಸಾಫ್ಟ್‌ವೇರ್‌ಗಳನ್ನೇ ಕೇಳೋರಿಲ್ಲ. ನಿನ್ನ ಡಿಗ್ರಿಗ್ಯಾವನು ಕೆಲಸ ಕೊಡ್ತಾನೆ. ಸುಮ್ಮೆ ಓದೋದು ವೇಸ್ಟ್, ಕೆಲಸಕ್ಕೆ ಸೇರ್‍ಕೋ, ನಿನ್ನ ಫೀಜು ಪುಸ್ತಕ ಬಟ್ಟೆಬರೆಗಂತ ಆಗೋ ಖರ್ಚಾದರೂ ತಪ್ಪುತ್ತೆ’ ದೊಡ್ಡಣ್ಣ ಲಾಯರ್ ಅಭಿಪ್ರಾಯ ಮಂಡಿಸಿದ.

‘ಮುಖ್ಯವಾಗಿ ನಾನು ಓದು ನಿಲ್ಲಿಸಿ ದುಡಿಯಬೇಕಂತಿರೋದು ನನಗಾಗಿ ಖಂಡಿತ ಅಲ್ಲ… ತಂಗಿಗೆ ಮದುವೆ ಮಾಡಬೇಕಲ್ಲ. ಅದಕ್ಕಾಗಿ ದುಡೀತೀನಿ’ ವ್ಯವಹಾರ ಜ್ಞಾನವಿಲ್ಲದ ರಂಗ ಅಂದ. ಒಂದಿಷ್ಟು ಬೀಗಿದ ಕೂಡ.
*****

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಸಿಕ
Next post ನಿನ್ನ ನಂತರ…

ಸಣ್ಣ ಕತೆ

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…