ನನ್ನ ಜೀವಿತ ಮುಗಿದು ಕಾಲ ಮೂಳೆಗಳನ್ನು
ಮಣ್ಣಲ್ಲಿ ಹೂಳುವನು. ಅದೃಷ್ಟದಿಂದಾಗ
ನೀ ನನ್ನ ಕಳಪೆ ಸಾಲುಗಳ ಓದಿದೆಯೆನ್ನು.
ನನ್ನ ಕಾಲದ ಪ್ರಗತಿ ಜೊತೆಗೆ ಹೋಲಿಸಿದಾಗ
ಪ್ರತಿಯೊಂದು ಬರೆಹವೂ ಮೀರಿದ್ದರೂ ಇದನು,
ಇದರ ಕೌಶಲ ಆ ಅದೃಷ್ಟವಂತರ ಬರೆಹ-
ಕಿಂತ ಕೆಳಗಿದ್ದರೂ, ನೆನೆದೆನ್ನ ಪ್ರೀತಿಯನು
ಉಳಿಸಿಕೊ ಇದನ್ನು. ನನಗಾಗಿ ನೀನೀ ತರಹ
ಯೋಚಿಸುವ ಕೃಪೆ ಮಾಡು: ಗೆಳೆಯ ತಾ ಬದುಕಿದ್ದ
ಕಾಲದುನ್ನತಿಯೊಡನೆ ಸೇರಿ ಬೆಳೆದಿದ್ದಲ್ಲಿ
ಇದಕು ಮಿಗಿಲಾದ ಕೃತಿಯನ್ನು ಸೃಷ್ಟಿಸುತಿದ್ದ,
ಸಾಗುತಿತ್ತದು ಇನ್ನೂ ಹೆಚ್ಚು ಎತ್ತರದಲ್ಲಿ.
ಆದರವನಿಲ್ಲ, ಮೀರಿದರಿವರು ಗೆಳೆಯನನು,
ಮೆಚ್ಚುವೆನು ಅವರ ಕಲೆಯನು, ಇವನ ಪ್ರೀತಿಯನು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 32
If thou survive my well-contented day