ನಕ್ಷತ್ರ ನೋಡಿ ಅಳೆವವನಲ್ಲ ನಾಳೆಗಳ,
ಆದರೂ ಇದೆ ನನಗೆ ಜ್ಯೋತಿಷ್ಯ ನುಡಿವ ಬಲ.
ಬರಲಿರುವ ಹಿತ, ಅಹಿತ, ಪಿಡುಗು, ಋತು ಧಾಟಿಗಳ
ಕಾಲಕಾಲಕ್ಕೆ ಅದು ಹೇಳಬಲ್ಲದ್ದಲ್ಲ ;
ವ್ಯಕ್ತಿಯೊಬ್ಬನ ಬಾಳಿನೊಳಗೆ ಹಾಯುವ ಗಾಳಿ
ಸಿಡಿಲು ಮಳೆ ಗುಡುಗುಗಳ ಗುಣಿಸಬಲ್ಲದ್ದಲ್ಲ ;
ಸ್ವರ್ಗದೊಳು ಕಣ್ಣಾಡಿ ಕಂಡದ್ದ ಕಣಿಮಾಡಿ
ಅರಸು ಮಕ್ಕಳಿಗೆ ವಿವರಿಸುವ ನೀತಿಯದಲ್ಲ ;
ನಿನ್ನ ಕಣ್ಣಿನ ಕಾಂತಿ ನನಗಿತ್ತ ಶಕ್ತಿ ಅದು.
ನಿತ್ಯನಕ್ಷತ್ರ ನಿನ್ನ ಕಣ್ಣಿಂದ ಅದ ಪಡೆವೆ,
ಹೇಳುವೆನು : ಸತ್ಯಸೌಂದರ್ಯ ಜೊತೆ ಬೆರೆದು
ನಾನು ಸಂಗ್ರಹಿಸಿದ್ದ ನೀನು ಪರಿವರ್ತಿಸುವೆ.
ಇಲ್ಲವೋ, ಇದೊ ನುಡಿವೆ ಮುಂದಿನ ಭವಿಷ್ಯವನೆ:
ನಿನ್ನ ಕೊನೆಯೇ ಸತ್ಯಸೌಂದರ್ಯಕೂ ಕೊನೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 14
Not from the stars do i my judgment pluck