ಸ್ವಪ್ನ ಮಂಟಪ – ೬

ಸ್ವಪ್ನ ಮಂಟಪ – ೬

ಮದನಿಕೆಯ ಸಾವು ರಾಜಕುಮಾರಿ ಮದಾಲಸೆಯನ್ನು ತುಂಬಾ ಕಾಡಿಸತೊಡಗಿತು. ರಾತ್ರಿ ಮಲಗಿದರೆ ಮದನಿಕೆಯ ಕನಸು ಕಂಡು ಬೆಚ್ಚುತ್ತಾಳೆ. ಮದನಿಕೆಯ ರೂಪ ತೇಲಿ ಬಂದು ತೀವ್ರತೆಯ ಬಿರುಗಾಳಿ ಎಬ್ಬಿಸುವ ಅನುಭವದಿಂದ ಆತಂಕಿಸುತ್ತಾಳೆ.

ಕಣ್ಣು ಮುಚ್ಚಿದರೆ ಮದನಿಕೆ ಬಂದು ಮಾತನಾಡಿಸುವ ಕನಸು. ‘ಮದಾಲಸೆ, ನಾನಂತೂ ರಾಜನ ಖಡ್ಗಕ್ಕೆ ಬಲಿಯಾದೆ. ನನ್ನ ಕನಸು ನಿನ್ನಲ್ಲಾದರೂ ನಿಜವಾಗಲಿ’ ಎನ್ನುತ್ತಾಳೆ.

‘ನನ್ನ ಕನಸನ್ನು ನೀನು ಕದ್ದು ಸಂಪೂರ್ಣ ಬಿದ್ದುಹೋದೆ. ನನ್ನ ಕನಸನ್ನು ನೀನು ಕಾಣದೆ ಇದ್ದರೆ ನನಗಾದರೂ ಒಳ್ಳೆಯದಾಗುತ್ತಿತ್ತು.’ ಎನ್ನುತ್ತಾಳೆ ಮದಾಲಸೆ.

ಆಗ ಮದನಿಕೆ ನಗುತ್ತಾಳೆ; ಮಾತಾಡುತ್ತಾಳೆ:

‘ಹುಚ್ಚೀ! ನಿನಗಿನ್ನೂ ತಿಳಿಯದು, ರಾಜರ ತೋಳ್ಬಲಕ್ಕೆ ಏನೆಲ್ಲ ಬಲಿಯಾಗುತ್ತದೆ ಗೊತ್ತೆ? ಇಷ್ಟಪಟ್ಟ ಹೆಣ್ಣನ್ನು ಬಳಸುವ ಈ ತೋಳು ಹೆಣ್ಣನ್ನು ಬಳಸುತ್ತಲೇ ಬಾಳನ್ನು ಬಲಿತೆಗೆದುಕೊಳ್ಳುತ್ತದೆ. ಇಷ್ಟಪಡದವರ ಎದುರು ಇದೇ ತೋಳು ಖಡ್ಗ ಹಿಡಿದು ಜೀವವನ್ನು ಬಲಿ ತೆಗೆದುಕೊಳ್ಳುತ್ತದೆ. ಹೀಗಾಗಿ ರಾಜರ ತೋಳ್ಬಲದ ಬಗ್ಗೆಯೇ ನನಗೆ ಅಸಹ್ಯವಾಗಿದೆ. ಒಂದು ಮಾತು ನೆನಪಿರಲಿ, ನಾನಲ್ಲದಿದ್ದರೆ ನೀನು ಬಲಿಯಾಗುತ್ತಿದ್ದೆ, ಅಷ್ಟೆ.’

‘ಹಾಗಾದರೆ ಮುಂದೆ ನನ್ನ ದಾರಿ?’

‘ನೀನು ನಿನ್ನ ದಾರಿಯನ್ನು ಕಂಡುಕೊಳ್ಳುವೆಯೊ ರಾಜಾಜ್ಞೆಯ ದಾರಿ ಹಿಡಿದು ಜೀವ ಸವೆಸುವೆಯೊ ನಿನಗೇ ಬಿಟ್ಟದ್ದು.’

‘ನನಗಂತೂ ಭಯವಾಗುತ್ತಿದೆ.’

‘ಹಾಗಾದರೆ ಸುಮ್ಮನೆ ಅರಮನೆಯ ವೈಭೋಗದ ಭ್ರಮೆಯಲ್ಲಿ ಬದುಕು.’

‘ಭ್ರಮೆಯ ಬದುಕು ನನಗೆ ಕಷ್ಟ’

‘ಆಗ ಇಷ್ಟದ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕು. ನಾನು ಆಸೆಪಟ್ಟ ಚಂದ್ರಕುಮಾರ ನಿನಗಾಗಿ ಪರಿತಪಿಸುತ್ತಿದ್ದಾನೆ. ನನ್ನ ಬಗ್ಗೆಯಾದರೆ ಸಲ್ಲದ ಮಾತಾಡುವ ಸಣ್ಣ ಅವಕಾಶವಿತ್ತು. ನಿನಗಾದರೆ ಹಾಗಲ್ಲ. ನೀನು ಅವಿವಾಹಿತೆ.’

‘ಅವಿವಾಹಿತೆಯಾದರೆ ಅರಮನೆ ಸುಮ್ಮನಿರುತ್ತದೆಯೆ?’

‘ಯಾವ ಮನೆಯೂ ಸುಮ್ಮನಿರುವುದಿಲ್ಲ.’

‘ಹಾಗೆಂದು ನನಗೆ ಸುಮ್ಮನಿರಲಾಗುತ್ತಿಲ್ಲ.’

‘ಈ ದ್ವಂದ್ವ ಸ್ವಾಭಾವಿಕ ರಾಜಕುಮಾರಿ. ಆದರೆ ಅದನ್ನು ಮೀರುವುದರಲ್ಲಿ ಬದುಕಿನ ಅರ್ಥವಿದೆ. ದ್ವಂದ್ವದ ಧ್ವಜ ನೆಟ್ಟು ಅದನ್ನೇ ಪಟ್ಟು ಮಾಡಿಕೊಳ್ಳುವುದರಲ್ಲಿ ಸ್ವಾರ್ಥವಿದೆ.’

‘ಅದೆಂಥ ಸ್ವಾರ್ಥವಿರಲು ಸಾಧ್ಯ ಚಿಕ್ಕಮ್ಮ?’

‘ಅಯ್ಯೋ ಮಗಳೆ, ನಿನಗೆ ಇದಿಷ್ಟೇನ ಗೊತ್ತಿರುವುದು? ಜೀವನದಲ್ಲಿ ದ್ವಂದ್ವಗಳು ಬರುತ್ತವೆ. ಅವನ್ನು ಮೀರದೆ, ಅವುಗಳ ರಿಯಾಯಿತಿಯಲ್ಲಿ ಸುಖಭೋಗಗಳಿಗೆ ಬಲಿಯಾಗುತ್ತ ಮೀರುವ ಮೌಲ್ಯಗಳನ್ನು ಮಣ್ಣುಗೂಡಿಸಿದರೆ ಸ್ವಾರ್ಥವೆನ್ನದೆ ಇನ್ನೇನೆಂದು ಕರೆಯಬೇಕು.’

‘ಇಲ್ಲ. ನನಗೆ ಅಂಥ ಸ್ವಾರ್ಥ ಬೇಕಿಲ್ಲ. ನನಗೆ ಮೀರುವ ಮೌಲ್ಯ ಬೇಕು.’

‘ಹಾಗಾದರೆ ಅರಮನೆಯನ್ನ ಧಿಕ್ಕರಿಸಿ ನಿನಗೆ ಬೇಕಾದ ಚಂದ್ರಕುಮಾರನ ಜೊತೆಗೂಡು, ಬಣ್ಣದ ಭವನವನ್ನು ಬಿಟ್ಟು ಮಣ್ಣಿನ ಮನೆ ಸೇರು.’

‘ಹೌದು ಹಾಗೇ ಮಾಡ್ತೇನೆ. ನನಗೆ ಚಂದ್ರಕುಮಾರ ಬೇಕು. ಆತನ ಮಣ್ಣಿನ ಮನೆ ಬೇಕು.’ ಎಂದು ನಿರ್ಧರಿಸಿ ‘ಚಂದ್ರಕುಮಾರ, ಚಂದ್ರಕುಮಾರ’ ಎಂದು ಎಡೆಬಿಡದೆ ಹುಡುಕತೊಡಗಿದಳು. ಮಂಟಪದ ಬಳಿ ಬಂದು ನಿಂತಳು; ನೋಡಿದಳು. ದೂರದಲ್ಲಿ ಚಂದ್ರ ಕುಮಾರ ಕುದುರೆಯೇರಿ ಬರುತ್ತಿದ್ದಾನೆ. ರಾಜಕುಮಾರಿ ಮಂಟಪದ ಮಧ್ಯೆ ನಿಂತಿದ್ದಾಳೆ.

ಚಂದ್ರಕುಮಾರ ಬಂದ; ಕುದುರೆಯೇರಿ ಮಂಟಪವನ್ನು ಸುತ್ತುತ್ತ ರಾಜಕುಮಾರಿಯನ್ನು ಕೆಣಕತೊಡಗಿದ. ಈಕೆ ಆತ ಹತ್ತಿರ ಬಂದಾನೆಂದು ನಿರೀಕ್ಷಿಸುತ್ತ ನಿಂತಳು. ಆತನ ಕುದುರೆ ಇದ್ದಕ್ಕಿದ್ದಂತೆ ದೂರಕ್ಕೆ ಓಡತೊಡಗಿತು. ರಾಜಕುಮಾರಿ ಆತಂಕಿಸಿದಳು. ಯಾತನೆಯಿಂದ ಕೂಗಿದಳು.

‘ಚಂದ್ರಕುಮಾರ…’

…ಮಲಗಿದ್ದ ರಾಜಕುಮಾರಿ ‘ಚಂದ್ರಕುಮಾರ’ ಎಂದು ಕೂಗಿದ್ದು ಕೇಳಿಸಿ ಕಾವಲಿಗಿದ್ದ ಸಖಿಯರು ಒಳಗೋಡಿ ಬಂದರು. ಅಷ್ಟರಲ್ಲಿ ರಾಜಕುಮಾರಿ ಎದ್ದು ಕೂತಿದ್ದಳು. ಮುಖದಲ್ಲಿ ಬೆದರು ಭಾವದ ಬೆವರು ಅಂತರಂಗದ ಆತಂಕವನ್ನು ಹೇಳುತ್ತಿತ್ತು.

‘ರಾಜಕುಮಾರಿಯವರಿಗೆ ಏನಾಯ್ತು? ದುಃಸ್ವಪ್ನ ಬಿತ್ತೆ?’ ಎಂದು ಒಬ್ಬ ಸಖಿ ಕೇಳಿದಳು.

‘ಇಲ್ಲ… ಇಲ್ಲ… ದುಃಸ್ವಪ್ನ ಅಲ್ಲ. ಸ್ವಪ್ನ! ಸುಂದರವಾದ ಸ್ವಪ್ನ.’ – ರಾಜಕುಮಾರಿ ತನಗೆ ತಾನೇ ಹೇಳಿಕೊಂಡಳು. ಆದರೆ ಅದು ಬಾಯಿಂದ ಹೊರಬಿದ್ದು ಸಖಿಯರಿಗೆ ಆಶ್ಚರ್ಯವಾಯಿತು.

‘ಸುಂದರವಾದ ಸ್ವಪ್ನಕ್ಕೆ ಇಷ್ಟು ಭಯ ಯಾಕೆ ರಾಜಕುಮಾರಿ?’ – ಸಖಿ, ಮತ್ತೆ ಕೇಳಿದಳು.

‘ಭಯ ಇರೋದು ಯಾವಾಗಲೂ ಸುಂದರಸ್ವಪ್ನಕ್ಕೆ ಸಖಿ. ದುಃಸ್ವಪ್ನ ಬಿದ್ದಾಗ ಆ ಕ್ಷಣದಲ್ಲಿ ಭಯವಾಗುತ್ತೆ. ಆದರೆ ಸುಂದರ ಸ್ವಪ್ನಕ್ಕೆ ಕ್ಷಣಕ್ಷಣವೂ ಭಯ ಕಾಡಿಸುತ್ತೆ.’

‘ನಿಮ್ಮ ಮಾತಿಗೆ ಎದುರಾಡೋದು ಹೇಗೆ ರಾಜಕುಮಾರಿ? ಈಗ ನಿರಾತಂಕವಾಗಿ ಮಲಗಿ. ಬೆಳಗ್ಗೆ ತಾಯಿಯವರಿಗೆ ತಿಳಿಸಿ ತಕ್ಕ ಉಪಚಾರಕ್ಕೆ ವ್ಯವಸ್ಥೆ ಮಾಡುವೆ.’

‘ಬೇಡ, ಬೇಡ ಸಖಿ, ಯಾರಿಗೂ ತಿಳಿಸಬೇಡ.’

‘ಅರಮನೆಯಲ್ಲಿ ಸೇವೆ ಮಾಡುವಾಗ ಮುಚ್ಚಿಡುವುದು ಅಸಾಧ್ಯ ರಾಜಕುಮಾರಿ. ನೀವು ನಿದ್ರೆ ಮಾಡಿ, ಯಾವ ಭಯವೂ ಬೇಡ.’ – ಎಂದು ಹೇಳಿದ ಸಖಿ ಉಳಿದವರೊಂದಿಗೆ ಹೊರನಡೆದಳು.

ರಾಜಕುಮಾರಿಯ ಉದ್ವೇಗ ಮತ್ತಷ್ಟು ಹೆಚ್ಚಾಯಿತು. ಬೆಳಕು ಹರಿದಾಗ ಮತ್ತೇನು
ಕಾದಿದೆಯೋ ಎಂಬ ಪ್ರಶ್ನೆ ಒಳಗೆ ಕೊರೆಯತೊಡಗಿತು. ಒತ್ತಾಯಪೂರ್ವಕವಾಗಿ, ಕಣ್ಣು ಮುಚ್ಚಿದರೂ ಕುದುರೆಯ ಕೆನೆತ ನಿಲ್ಲಲಿಲ್ಲ. ಅದೇ ಕುದುರೆ! ಚಂದ್ರಕುಮಾರನ ಕುದುರೆ! ಅದೆಂಥ ಕೆನೆತ! ಅದೆಂಥ ಸೆಳೆತ!
* * *

ಮಾರನೇ ದಿನ ತಾಯಿಯ ಪ್ರಶ್ನೆಯನ್ನು ಎದುರಿಸುವುದು ರಾಜಕುಮಾರಿಗೆ ಅನಿವಾರ್ಯವಾಯಿತು.

‘ಅದೇನೋ ಚಂದ್ರಕುಮಾರ ಎಂದು ಚಡಪಡಿಸುತ್ತಿದ್ದೆಯಂತಲ್ಲ? ಚಂದ್ರಕುಮಾರನೆಂದರೆ ಆ ಮದನಿಕೆ ಬಯಸಿದ ಮೈನವನು ತಾನೆ?’- ತಾಯಿಯ ಪ್ರಶ್ನೆ.

‘ಅಲ್ಲ, ಆಕೆ ಬಯಸಿದ ಮೈನವನಲ್ಲ, ಮನಸ್ಸಿನವನು.’ – ರಾಜಕುಮಾರಿಯ ಉತ್ತರ.

‘ಏನು ಉತ್ತರ ಕೊಡ್ತಾ ಇದ್ದೀಯ ನೀನು? ಆ ಮದನಿಕೆಯ ಉತ್ತರಾಧಿಕಾರಿಯಂತೆ ಮಾಡುತ್ತಿರುವೆ.’

‘ಮದನಿಕೆಯ ಉತ್ತರಾಧಿಕಾರಿಯಲ್ಲ. ಮನುಷ್ಯ ಮನಸ್ಸಿನ ಉತ್ತರಾಧಿಕಾರಿ’ – ರಾಜಕುಮಾರಿ ಸ್ಪಷ್ಟವಾಗಿ ಉತ್ತರಿಸಿದಳು.

‘ನಿನಗೆಲ್ಲೊ ತಲೆ ಕೆಟ್ಟಿದೆ.’ – ತಾಯಿ ಗುಡುಗಿದಳು.

‘ಹೊಸದಾಗಿ ಯೋಚನೆ ಮಾಡಿದರೆ, ನಿಮ್ಮಂಥವರಿಗೆ ತಲೆಕೆಟ್ಟಿದೆ ಅನ್ನಿಸೋದು ಸ್ವಾಭಾವಿಕ.’

‘ನಾಲಿಗೆ ಬೆಳೀತಾ ಇದೆ. ನಿನಗೆ ಮಹಾರಾಜರೇ ಸರಿಯಾದ ಪಾಠ ಕಲಿಸುತ್ತಾರೆ.’

ಹೀಗೆ ಹೇಳಿದ ತಾಯಿ ಸಿಟ್ಟಿನಿಂದ ಹೊರಟು ಹೋದಳು. ಚಂಡೇರಾಯನಿಗೆ ನಡೆದದ್ದೆಲ್ಲ ತಿಳಿಸಿದಳು. ಚಂಡೇರಾಯ ಕೂತಲ್ಲೇ ಕುದಿಯತೊಡಗಿದ.

‘ಇದಕ್ಕೆಲ್ಲ ಒಂದು ಕೊನೆ ಕಾಣಿಸಲೇಬೇಕು’ ಎಂದು ಆರ್ಭಟಿಸಿದ. ಕೂತುಕೊಳ್ಳಲಾಗದೆ ಮೇಲೆದ್ದ. ಅತ್ತಿತ್ತ ಓಡಾಡಿದ. ಮುಷ್ಟಿ ಬಿಗಿಹಿಡಿದು ಚಡಪಡಿಸಿದ. ಕಡೆಗೆ ಸಮಾಧಾನ ಮಾಡಿಕೊಂಡು ಹೇಳಿದ.

‘ಇದು ನಮ್ಮ ವಂಶದ ಪ್ರತಿಷ್ಠೆಯ ಪ್ರಶ್ನೆ. ಆದ್ದರಿಂದ ದುಡುಕಬಾರದು. ನಾನೇ ಮಗಳ ಜೊತೆ ಮಾತನಾಡುವೆ.’ ಅದರಂತೆ ಚಂಡೇರಾಯ ಮಗಳನ್ನು ಭೇಟಿಯಾದ.

‘ನೋಡು ಮಗಳೆ, ನೀನು ಇಷ್ಟಪಟ್ಟವನನ್ನು ಮದುವೆಯಾಗಲು ನನ್ನ ಅಭ್ಯಂತರವಿಲ್ಲ. ಆದರೆ ಆತ ನಮಗೂ ಇಷ್ಟವಾಗಬೇಕು’ ಎಂದು ಮಾತು ಪ್ರಾರಂಭಿಸಿದ.

‘ನಿಮಗೆ ಇಷ್ಟವಾಗುವ ವ್ಯಕ್ತಿ ಹೇಗಿರಬೇಕು ಅಪ್ಪಾಜಿ?’ – ಮಗಳು ಕೇಳಿದಳು.

‘ಕುಲೀನ ಮನೆತನದವನಾಗಿರಬೇಕು. ಅಂದರೆ ರಾಜ ವಂಶಸ್ಥನಾಗಿರಬೇಕು. ಸಾಟಿಯಿಲ್ಲದ ತೋಳ್ಬಲವುಳ್ಳವನಾಗಿರಬೇಕು. ಇಷ್ಟರ ಮೇಲೆ ನೋಡಲು ಸುಂದರವಾಗಿರಬೇಕು ಎಂದರೆ ನನ್ನ ಅಭ್ಯಂತರವಿಲ್ಲ. ಈ ಗುಣಗಳುಳ್ಳ ಯಾರನ್ನು ಇಷ್ಟ ಪಟ್ಟರೂ ಸರಿ, ಏನೇ ಕಷ್ಟವಾದರೂ ಕರೆತಂದು ಮದುವೆ ಮಾಡಿಸುವೆ.’

‘ದಯವಿಟ್ಟು ರಾಜರಾಗಿ ಮಾತನಾಡಬೇಡಿ. ನನ್ನ ಅಪ್ಪಾಜಿಯಾಗಿ ಮಾತನಾಡಿ.’

‘ಅಪ್ಪಾಜಿಯಾಗಿಯೇ ಮಾತನಾಡುತ್ತಿರುವೆ ಮಗಳೆ. ಆದರೆ ನಾನು ಕೇವಲ ನಿನ್ನ ಅಪ್ಪಾಜಿಯಲ್ಲ. ಈ ರಾಜ್ಯದ ರಾಜ. ನೀನು ಕೇವಲ ನನ್ನ ಮಗಳಲ್ಲ. ಈ ರಾಜ್ಯದ ರಾಜಕುಮಾರಿ. ಇದನ್ನು ಬಿಟ್ಟು ಕೇವಲ ಅಪ್ಪಾಜಿ ಮತ್ತು ಮಗಳು ಅಂತ ಯೋಚನೆ ಮಾಡೋದು ಹೇಗೆ ಸಾಧ್ಯ ಹೇಳು? ಇವು ಒಂದರೊಳಗೊಂದು ಬೆರೆತಿರುವಾಗ ಬೇರ್ಪಡಿಸೋದು ಹೇಗೆ ಸಾಧ್ಯ? ನೀನೇ ಹೇಳು.’

‘ರಾಜಪ್ರಭುತ್ವ, ರಾಜವಂಶ ಅಂತ ಯೋಚನೆ ಮಾಡದೆ ಮನುಷ್ಯರು, ಮನುಷ್ಯ ಸಂಬಂಧ ಅಂತ ಯೋಚನೆ ಮಾಡಿದರೆ ಎಲ್ಲವೂ ಸಾಧ್ಯ.’

‘ಬಾಯಲ್ಲಿ ಹೇಳೋದು ಬಹಳ ಸುಲಭ. ಈ ವ್ಯವಸ್ಥೆಯ ಬೇರು ಭದ್ರವಾಗಿರಬೇಕಾದರೆ ನಾನು ರಾಜನಾಗಿ ಕೆಲವು ಕರ್ತವ್ಯಗಳನ್ನು ನಿರ್ವಹಿಸಲೇಬೇಕು.’

‘ತಂದೆಯಾಗಿಯೂ ಕೆಲವು ಕರ್ತವ್ಯಗಳನ್ನು ನಿರ್ವಹಿಸಬೇಕು. ಅಲ್ಲವೆ ಅಪ್ಪಾಜಿ?’

‘ಯಾರೀಗ ಇಲ್ಲ ಎಂದವರು? ನೇರವಾಗಿ ಮಾತನಾಡು.’

‘ನೇರವಾಗಿಯೇ ಮಾತನಾಡುವೆ ಅಪ್ಪಾಜಿ. ನನ್ನದೊಂದೇ ಪ್ರಶ್ನೆ. ರಾಜನಾಗಿದ್ದರಿಂದ ನಾನು ನಿಮ್ಮ ಮಗಳಾದೆನೋ, ತಂದೆಯಾದ್ದರಿಂದ ನಿಮ್ಮ ಮಗಳಾದೆನೋ? ದಯವಿಟ್ಟು ಹೇಳಿ.’

‘ಸುಮ್ಮನೆ ಇಂಥ ಪ್ರಶ್ನೆಗಳಿಂದ ನಮ್ಮ ತಲೆ ಕೆಡಿಸಬೇಡ. ನಿನ್ನ ತಲೆಯನ್ನೂ ಕೆಡಿಸಿಕೊಳ್ಳಬೇಡ. ಅರಮನೆಯಲ್ಲಿ ಅಸಂಬದ್ಧತೆಗೆ ಅವಕಾಶವಿಲ್ಲ.’ ಎಂದು ಹೇಳಿದವನೇ ಅಲ್ಲಿ ನಿಲ್ಲದೆ ಹೊರಟುಬಿಟ್ಟ.

ಮತ್ತದೇ ಭಾವದಲ್ಲಿ ರಾಜಕುಮಾರಿ ನಿಂತಳು. ಮನೆ ಮತ್ತು ಮನಗಳ ನಡುವಿನ ತಿಕ್ಕಾಟದ ತೀವ್ರತೆ ಹೆಚ್ಚಾಗುತ್ತ ಬಂದಂತೆ ಮಂಚದ ಮೇಲೆ ಕುಸಿದು ಕೂತಳು.

ಸ್ವಲ್ಪ ಹೊತ್ತಿನಲ್ಲಿ ಸಖಿಯೊಬ್ಬಳು ಒಳಬಂದು ಮಂತ್ರಿಗಳು ಬಂದಿರುವ ವಿಷಯವನ್ನು ತಿಳಿಸಿದಳು. ರಾಜಕುಮಾರಿ ಕಣ್ಣೀರು ಒರೆಸಿಕೊಂಡು, ಒಳಗೆ ಕರೆತರಲು ಹೇಳಿದಳು.

ಮಂತ್ರಿಗಳು ಒಳಗೆ ಬಂದಕೂಡಲೆ ತಾನೇ ಕೇಳಿದಳು: ‘ಯಾವ ರಾಜಾಜ್ಞೆಯನ್ನು ತಂದಿರುವಿರಿ ಮಂತ್ರಿಗಳೆ?’

‘ರಾಜಾಜ್ಞೆಯಲ್ಲ ರಾಜಕುಮಾರಿ, ತಂದೆಯ ಆಜ್ಞೆಯಾಗಿದೆ.’

‘ತಂದೆಯ ಆಜ್ಞೆ?’ – ಆಶ್ಚರ್ಯಪಡುತ್ತ ರಾಜಕುಮಾರಿ ಕೇಳಿದಳು – ‘ಏನೆಂದು ಆಜ್ಞೆಯಾಗಿದೆ ಮಂತ್ರಿಗಳೆ?’

‘ಯಾವ ಆಜ್ಞೆಯೂ ಆಗದಿರುವುದೇ ತಂದೆಯ ಆಜ್ಞೆ ಅಲ್ಲವೇನಮ್ಮ?’

‘ಒಗಟಿನಂತೆ ಮಾತನಾಡಬೇಡಿ ಮಂತ್ರಿಗಳೇ, ನನಗೆ ಅದೆಲ್ಲವನ್ನೂ ತಡೆದುಕೊಳ್ಳುವ ಶಕ್ತಿಯಿಲ್ಲ.’

‘ಇದರಲ್ಲಿ ಒಗಟೇನು ಬಂತು ರಾಜಕುಮಾರಿ? ರಾಜರು ಹೇಳಿದ್ದು ಇಷ್ಟೆ. ನನ್ನ ಮಗಳಿಗೆ ಯಾವುದೇ ನಿರ್ಬಂಧಗಳು ಬೇಡ. ಅನುಮಾನದಿಂದ ಭದ್ರತೆಯನ್ನು ಹೆಚ್ಚಿಸುವುದು ಬೇಡ. ನನಗೆ ನನ್ನ ಮಗಳ ಮೇಲೆ ನಂಬಿಕೆಯಿದೆ. ಇಷ್ಟು ಹೇಳಿದ ಅವರು ತಂದೆಯಾಗಿ ತನ್ನ ಕಾಳಜಿಯನ್ನು ನಿನಗೆ ಮನವರಿಕೆ ಮಾಡಿಕೊಡಲು ನನಗೆ ಹೇಳಿದ್ದಾರಮ್ಮ.’

‘ನಾನು ತಪ್ಪನ್ನು ಮಾಡದೇ ಇದ್ದಾಗ ಮನವರಿಕೆಯ ಪ್ರಶ್ನೆ ಎಲ್ಲಿ ಬಂತು ಮಂತ್ರಿಗಳೆ?’

‘ತಂದೆ-ಮಗಳು ಇಬ್ಬರೂ ತಪ್ಪು ಮಾಡಿಲ್ಲವೆಂದೇ ಭಾವಿಸಿದ್ದೀರಿ. ಇಬ್ಬರೂ ವಿರುದ್ಧ ದ್ರುವಗಳಲ್ಲಿ ನಿಂತಿರುವುದರಿಂದ ಪರಸ್ಪರ ತಪ್ಪು ಕಾಣಿಸುತ್ತಿದೆ.’

‘ಅದು ನಿಜ ಮಂತ್ರಿಗಳೆ. ಆದರೆ ಯಾರೋ ಒಬ್ಬರು ಸಲ್ಲದ ಕೆಲಸವನ್ನಂತೂ ಮಾಡುತ್ತಿರಬೇಕಲ್ಲವೆ?’

‘ಅವರ ದೃಷ್ಟಿಯಲ್ಲಿ ನೀನು, ನಿನ್ನ ದೃಷ್ಟಿಯಲ್ಲಿ ಅವರು ಸಲ್ಲದ ಕೆಲಸ ಮಾಡುತ್ತಿದ್ದಾರೆ. ಅಷ್ಟೆ.’

‘ಇಷ್ಟಂತೂ ನಿಜ. ಅವರು ಇದ್ದಂತೆಯೇ ಇರಬೇಕು ಎನ್ನುವವರು. ನಾನು ಬದಲಾಗಬೇಕು ಎನ್ನುವವಳು. ಆದ್ದರಿಂದ ಸಂಘರ್ಷ ಅನಿವಾರ್ಯ. ಅಲ್ಲವೆ ಮಂತ್ರಿಗಳೇ?’

‘ಸಂಘರ್ಷ ಬೇಡವೆಂದು ಹೇಳುವುದು ನನ್ನ ಕರ್ತವ್ಯ ರಾಜಕುಮಾರಿ. ಮನೆಯೊಳಗೆ ಸಾಮರಸ್ಯ ಸಾಧಿಸಬೇಕೆಂದು ಹೇಳುವವನು ನಾನು.’

‘ಈ ಮಾತನ್ನು ಅವರಿಗೇ ಹೇಳಬಹುದಲ್ಲ?’

‘ಅವರು ಎಷ್ಟಾದರೂ ಅಧಿಪತಿಗಳು, ಅನೂಚಾನವಾಗಿ ನಡೆದುಕೊಂಡು ಬಂದದ್ದನ್ನು ಮುನ್ನಡೆಸುವವರು.’

‘ಅದು ಮುನ್ನಡೆಯಲ್ಲ: ಹಿನ್ನಡೆ.’

‘ನಿನ್ನ ಅಭಿಪ್ರಾಯ ಏನೇ ಇರಲಿ, ಅರಮನೆಯ ವಿಷಯ ಬೀದಿ ಮಾತಾಗುವುದು ಬೇಡ. ನಿನ್ನ ಚಿಕ್ಕಮ್ಮ ಮಾಡಿದ ಅನಾಹುತವೇ ಸಾಕು. ಸಮಾಧಾನವಾಗಿ ಯೋಚಿಸು.’

ಮಂತ್ರಿಗಳ ಜೊತೆ ಮತ್ತೆ ಮಾತನಾಡುವುದು ಪ್ರಯೋಜನಕರವಲ್ಲ ಎನ್ನಿಸಿ ರಾಜಕುಮಾರಿ ಮೌನ ವಹಿಸಿದಳು. ಆಗ ಅವರೇ ಮತ್ತೆ ಮಾತನಾಡಿದರು. ಆತುರ ಅನೇಕ ಅನಾಹುತಗಳಿಗೆ ಕಾರಣವಾಗುತ್ತೆ. ತಾಳ್ಮೆ ಮತ್ತಷ್ಟು ತೀವ್ರತೆ ತರುತ್ತೆ, ಸರಿಯಾಗಿ ಯೋಚನೆ ಮಾಡಮ್ಮ. ಇಷ್ಟಂತೂ ನಿಜ. ನಿನಗೆ ಯಾವುದೇ ನಿರ್ಬಂಧಗಳನ್ನೂ ವಿಧಿಸಬಾರದು ಅಂತ ನಿಮ್ಮ ತಂದೆ ತೀರ್ಮಾನ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಚಂದ್ರಕುಮಾರನಿಗೂ ಕೊಡಬಾರದೆಂದು ರಾಜರು ನಿರ್ಧರಿಸಿದ್ದಾರೆ. ನಾನಿನ್ನು ಬರ್‍ತೇನೆ’ ಎಂದು ಹೇಳಿದ ಮಂತ್ರಿಗಳು ಭಾರವಾದ ಮನಸ್ಸಿನಿಂದಲೇ ನಿರ್ಗಮಿಸಿದರು.
* * *

ಚಂಡೇರಾಯನ ತೀರ್ಮಾನಗಳು ತಿಳಿದ ಮೇಲೆ ಮದಾಲಸೆಯ ಮನಸ್ಸು ಸ್ವಲ್ಪವಾದರೂ ತಿಳಿಯಾಯಿತು. ತನ್ನ ತಂದೆ ಮೊದಲಿನಷ್ಟು ಬಿಗಿಯಾಗಿಲ್ಲ ಎಂದು ಭಾವಿಸಿದಳು. ಮನಸ್ಸಿಗೆ ಲಗ್ಗೆಯಿಟ್ಟ ಬಣ್ಣದ ಹಕ್ಕಿಗಳು ರೆಕ್ಕೆ ಬಿಚ್ಚಿ ಸಂಭ್ರಮಿಸತೊಡಗಿದವು. ಎತ್ತರೆತ್ತರ ಹಾರುತ್ತ ಹಾರಾಡತೊಡಗಿದವು.

‘ರಾತ್ರಿಯಾದ ಕೂಡಲೇ ರಾಜಕುಮಾರಿಗೆ ಚಂದ್ರಕುಮಾರನು ವಿದ್ಯಾಗುರುಗಳ ಊರಿನಿಂದ ಹಿಂತಿರುಗುವ ಸಮಯದ ಸೆಳೆತ ಶುರುವಾಯಿತು. ಇಂದೇ ಭೇಟಿಯಾಗಿಬಿಡಲೆ ಎಂದು ತವಕಿಸಿದಳು. ಸೋಲದ ರೆಕ್ಕೆಗಳು ಲಯಬದ್ಧವಾಗಿ ಬಡಿಯುತ್ತಲೇ ಇದ್ದವು. ಹಕ್ಕಿಗಳು ತೇಲುತ್ತಲೇ ಇದ್ದವು.

ಸಮಯಕ್ಕೆ ಸರಿಯಾಗಿ ತನ್ನ ಕೊಠಡಿಯಿಂದ ಹೊರಬಿದ್ದಳು. ಅಲ್ಲಿದ್ದ ಸಖಿಯರು ಮುಗುಳ್ನಕ್ಕರು. ಮಾತಾಡಲಿಲ್ಲ. ಏನು, ಯಾಕೆ, ಎಲ್ಲಿಗೆ-ಏನೊಂದೂ ಕೇಳಲಿಲ್ಲ. ಮದಾಲಸೆ ಮತ್ತಷ್ಟು ಉತ್ತೇಜಿತಳಾದಳು. ನಿಂತಲ್ಲೇ ನಿರ್ಧರಿಸಿದಳು. ಯಾರನ್ನೂ ಮಾತಾಡಿಸದೆ ಮುಂದಡಿಯಿಟ್ಟಳು.

ಮದಾಲಸೆ ಸೀದಾ ಸುರಂಗ ಮಾರ್ಗದ ಬಳಿಗೆ ಬಂದಳು. ಅತ್ತಿತ್ತ ನೋಡಿ ಒಳಗೆ ಇಳಿದಳು. ಒಳಗೆ ಹೋಗುವಾಗ ವಿಚಿತ್ರ ಭಾವನೆಗಳು. ಭಯ, ಆತಂಕ, ಆಸೆ, ಆಕಾಂಕ್ಷೆ, ನಿರೀಕ್ಷೆ ಎಲ್ಲವೂ ಬೆರೆತು ಓಡ ತೊಡಗಿದಳು.

ಸ್ವಲ್ಪ ಹೊತ್ತಿನಲ್ಲಿ ಮಂಟಪದ ಬಳಿ ಸುರಂಗಮಾರ್ಗದಿಂದ ಹೊರಬಂದಳು. ಬೆಳದಿಂಗಳ ಬಯಕೆಯಲ್ಲಿ ಮೂರ್ತಿವೆತ್ತ ಮನಸ್ಸಾಗಿ ಮುಂದಡಿಯಿಟ್ಟಳು. ಮಂಟಪದ ಮಧ್ಯಕ್ಕೆ ಬಂದು ನಿಂತಳು; ರೋಮಾಂಚನವಾಯಿತು. ಮೈ ಮಲ್ಲಿಗೆಯಾಗಿ ನಿರೀಕ್ಷೆಯಿಂದ ದಿಟ್ಟಿಸ ತೊಡಗಿದಳು.

ಕೆಲಕ್ಷಣಗಳು ಕಳೆಯುವುದರಲ್ಲಿ ಕುದುರೆಯ ಸದ್ದು ಕೇಳಿಸ ತೊಡಗಿತು. ಮೈಯೆಲ್ಲ ಕಣ್ಣಾಗಿ ನಿಂತಳು. ಚಂದ್ರಕುಮಾರ ಬಂದೇಬಿಟ್ಟ! ಕುದುರೆಯೇರಿದ ಚಂದ್ರಕುಮಾರ ಮಂಟಪದ ಬಳಿ ಬಂದು ಈಕೆಯನ್ನು ನೋಡಿ ಕೇಳಿದ.

‘ಯಾರು?’

‘ನಾನು ನಿಮ್ಮವಳು.’

‘ನಾನು ನನ್ನವಳು ಅಂತ ಭಾವಿಸಿದಾಗ ಮಾತ್ರ ನಿನ್ನ ಮಾತು ನಿಜವಾಗುತ್ತೆ.’

‘ನಾನು ನಿಜವೇ ಹೊರತು ಸುಳ್ಳಲ್ಲ.’

‘ನನ್ನ ನಿಜ ಇರೋದು ರಾಜಕುಮಾರೀಲಿ.’

‘ನಾನು ರಾಜಕುಮಾರಿ.’

ಚಂದ್ರಕುಮಾರ ಆಶ್ಚರ್ಯ- ಆನಂದಗಳಿಂದ ಕುದುರೆ ಇಳಿದ. ಎರಡು ಹೆಜ್ಜೆ ಮುಂದೆ ಬಂದು ನಿಂತು ಮತ್ತೆ ದಿಟ್ಟಿಸಿದ.

‘ನಾನು ಖಂಡಿತ ರಾಜಕುಮಾರಿ. ಅವತ್ತು ನೀವು ನೋಡಿದ್ರಲ್ಲ. ಅದೇ ರಾಜಕುಮಾರಿ’

ಚಂದ್ರಕುಮಾರನ ಮನಸ್ಸಿನಲ್ಲಿ ಕುದುರೆ ಕೆನೆದು ಓಡತೊಡಗಿದ ಅನುಭವ. ನಿಂತಲ್ಲಿಂದ ಒಂದೇ ಉಸಿರಿಗೆ ಮಂಟಪದೊಳಗೆ ಬಂದ. ಮತ್ತಷ್ಟು ಹತ್ತಿರದಿಂದ ನೋಡಿದ.

‘ಹೌದು, ಅದೇ ರಾಜಕುಮಾರಿ!’

‘ನಾನು ನಿನ್ನನ್ನು ಬಿಟ್ಟು ಇರಲಾರೆ ಚಂದ್ರಕುಮಾರ’ – ರಾಜಕುಮಾರಿ ನಿವೇದಿಸಿಕೊಳ್ಳತೊಡಗಿದಳು. ‘ಅಂದು ನಿನ್ನನ್ನು ನೋಡಿದಾಗಿನಿಂದ ನನಗೆ ನಿನ್ನದೇ ಚಿಂತೆ.’

‘ನನಗೂ ಅಷ್ಟೇ ರಾಜಕುಮಾರಿ. ಕತೆಗಳಲ್ಲಿ ಕೇಳಿದ ಪ್ರಸಂಗ ಇವತ್ತು ನನ್ನ ಜೀವನದಲ್ಲೇ ಆಗ್ತಾ ಇದೆ. ಒಬ್ಬ ಸಾಮಾನ್ಯ ಪ್ರಜೆ ರಾಜಕುಮಾರಿಯ ಬಳಿ ಪ್ರೇಮದ ಮಾತಾಡ್ತಾ ಇದಾನೆ.’ ಚಂದ್ರಕುಮಾರ ಉದ್ವೇಗದಿಂದ ಹೇಳಿದ.

‘ಪ್ರೇಮ ಪ್ರೀತಿಗಳ ಮುಂದೆ ಪ್ರಜೆ-ಪ್ರಭು ಎಲ್ಲವೂ ಗೌಣ ಚಂದ್ರಕುಮಾರ. ನಾನು ನಿನ್ನನ್ನು ಮದುವೆಯಾಗಬೇಕು. ಈ ರಾಜ್ಯ ಬಿಟ್ಟು ಬೇರೆ ಕಡೆ ಹೋದರೂ ಪರವಾಗಿಲ್ಲ, ನಾವಿಬ್ಬರೂ ಒಟ್ಟಿಗೇ ಬಾಳಬೇಕು.’

‘ನನ್ನಾಸೆಯೂ ಅದೇ ರಾಜಕುಮಾರಿ.’

‘ರಾಜಕುಮಾರಿ ಅಲ್ಲ, ಮದಾಲಸೆ.’

‘ಮದಾಲಸೆ, ನಾನೆಷ್ಟು ಕನಸು ಕಟ್ಟಿದ್ದೆ ಗೊತ್ತಾ? ರಾಜಕುಮಾರಿ, ಸಾಮಾನ್ಯ ಮನುಷ್ಯನನ್ನ ಪ್ರೀತಿಸಿದ್ದು, ಮದುವೆ ಆಗಿ ಕಷ್ಟಪಟ್ಟು, ಕಡೆಗೆ ಸುಖವಾಗಿ ರಾಜ್ಯಭಾರ ಮಾಡಿದ ಕತೆಗಳನ್ನ ಕೇಳಿ ನನ್ನ ಕನಸಲ್ಲೂ ಒಬ್ಬ ರಾಜಕುಮಾರೀನ ಕಲ್ಪಿಸಿಕೊಂಡೆ. ನನಗೆ ರಾಜ್ಯವೂ ಬೇಡ, ಅದರ ಭಾರವೂ ಬೇಡ. ನೀನಷ್ಟೇ ಸಾಕು.’

‘ನನಗೂ ಅಷ್ಟೇ. ನೀನು ಕೇಳಿದ ಕತೆ ಚರಿತ್ರೆಯಾಗಬೇಕು. ಸುಳ್ಳು ಪ್ರತಿಷ್ಠೆ ಸುಟ್ಟುಹೋಗಿ ಪ್ರೇಮದ ಪ್ರತಿಷ್ಠಾಪನೆಯಾಗಬೇಕು.’

‘ಇದಕ್ಕೆ ರಾಜರು ಅಡ್ಡ ಬರೋದಿಲ್ವೆ ಮದಾಲಸೆ.’

‘ಈಗ ಸ್ವಲ್ಪ ಮೃದುವಾದ ಹಾಗೆ ಕಾಣುತ್ತೆ. ಒಪ್ಪಿಸೋಕೆ ಪ್ರಯತ್ನ ಮಾಡ್ತೇನೆ. ಆದ್ರೆ ಒಂದು ಮಾತು. ಅವರು ಒಪ್ಪಲಿ ಒಪ್ಪದೇ ಇರಲಿ, ನಮ್ಮ ಬಾಳು ನಮ್ಮದು.’

ಮದಾಲಸೆ ಹತ್ತಿರ ಬಂದಳು. ಆಕೆಯನ್ನೇ ದಿಟ್ಟಿಸಿದ. ಚಂದ್ರಕುಮಾರ ಬಿಗಿದಪ್ಪಿಕೊಂಡ. ಅಪ್ಪುಗೆ ತಾನಾಗಿಯೇ ಸಡಿಲಗೊಂಡಾಗ ಹೊರಟು ನಿಂತ.

‘ಮತ್ತೆ ಭೇಟಿ ಯಾವಾಗ?’ – ಮದಾಲಸೆ ಕೇಳಿದಳು.

‘ಮತ್ತೆ ಮತ್ತೆ ಭೇಟಿಯಾಗೋದು ಅಷ್ಟು ಒಳ್ಳೇದಲ್ಲ, ಮತ್ತೆ ಮೂರನೇ ದಿನಕ್ಕೆ ಮಂಟಪದಲ್ಲೇ ಭೇಟಿಯಾಗೋಣ. ಬರ್‍ತೀನಿ.’

ಚಂದ್ರಕುಮಾರ ಕುದುರೆ ಹತ್ತಿದ. ಈಕೆಯ ಕಡೆಗೆ ಕೈಬೀಸಿ ಹೊರಟ. ಮದಾಲಸೆ ಮರೆಯಾಗುವವರೆಗೂ ನೋಡುತ್ತ ನಿಂತಿದ್ದಳು. ಆತ ಮರಗಳ ಮಧ್ಯೆ ಮರೆಯಾಗುತ್ತಿದ್ದಂತೆ ಮಂಟಪದಿಂದ ಇಳಿಯ ತೊಡಗಿದಳು.

ಇದ್ದಕ್ಕಿದ್ದಂತೆ ‘ಅಯ್ಯೋ! ಮದಾಲಸೆ’ ಎಂಬ ಕೂಗು ಕೇಳಿಸಿತು. ಮರಗಳ ಮಧ್ಯದಿಂದ ಈ ಕೂಗು ಬಂದಿತು. ಅದು ಚಂದ್ರಕುಮಾರನದೇ ದನಿಯೆಂದು ಮದಾಲಸೆಗೆ ಗಾಬರಿಯಾಯಿತು.

ಮದಾಲಸೆ ಅಲ್ಲಿಂದ ಓಡಿದಳು. ಎಲ್ಲ ಅನಿಷ್ಟಗಳ ಬುತ್ತಿ ಹೊತ್ತು ಬೆತ್ತಲಾದಂಥ ಭಯಾತಂಕಗಳಿಂದ ದೌಡಿ ಬಂದಳು. ಇಲ್ಲಿ ಮರಗಳ ನಡುವೆ ನೋಡಿದಳು.

ಚಂದ್ರಕುಮಾರ ಸತ್ತು ಬಿದ್ದಿದ್ದ! ಕುದುರೆ ತಬ್ಬಿಬ್ಬಾಗಿ ಕೆನೆಯುತ್ತ ಮತ್ತೆ ಮೌನವಾಯಿತು.

ಚಂದ್ರಕುಮಾರ ಇರಿತಕ್ಕೆ ಬಲಿಯಾಗಿದ್ದ, ರಕ್ತದ ಮಡುವಿನಲ್ಲಿ ಮೃತ್ಯು ಬಡಿದು ಚೂರಾದ ಕನಸಿನ ಅವಶೇಷವಾಗಿದ್ದ. ಮದಾಲಸೆ ಗಳಗಳನೆ ಅತ್ತಳು. ತನ್ನ ಬಾಳು ಬೆಂಕಿಗೆ ಬಿದ್ದು ಬೂದಿಯಾಯಿತೆಂದು ಗೋಳಾಡಿದಳು. ಆಗ ರಾಜಭಟರು ಬಂದರು, ಆಕೆಯ ತೋಳುಗಳನ್ನು ಹಿಡಿದರು.

‘ಯಾರು ನೀವು? ನಿಮಗೆಷ್ಟು ಸೊಕ್ಕು ನನ್ನ ಮೈಮುಟ್ಟಲು?’

‘ನಿಮ್ಮನ್ನು ಎಳೆತರಲು ರಾಜಾಜ್ಞೆಯಾಗಿದೆ’

– ಒಬ್ಬ ರಾಜಭಟ ಉತ್ತರಿಸಿದ.

‘ಹಾಗಾದರೆ ಚಂದ್ರಕುಮಾರನ ಮೃತ್ಯು?’

‘ಅದೂ ರಾಜಾಜ್ಞೆ!’

‘ನಿಮ್ಮ ರಾಜಾಜ್ಞೆಗೆ ಬೆಂಕಿ ಬೀಳಲಿ. ಸುಳ್ಳು ಪ್ರತಿಷ್ಠೆ ಸುಟ್ಟು ಹೋಗಲಿ’ ಎಂದು ಸಿಡಿದ ಮದಾಲಸೆ ರಾಜಭಟರನ್ನು ಪಕ್ಕಕ್ಕೆ ದಬ್ಬಿದಳು. ಚಂದ್ರಕುಮಾರನ ಶವದ ಬಳಿಗೆ ಬಂದಳು. ತನ್ನ ಹೆಬ್ಬೆರಳನ್ನು ರಕ್ತದಲ್ಲಿ ಅದ್ದಿ ಹಣೆಗೆ ಇಟ್ಟುಕೊಂಡಳು. ಆಗ ಮತ್ತೆ ರಾಜಭಟರು ಬಂದು ಈಕೆಯನ್ನು ಹಿಡಿದುಕೊಂಡರು.

‘ಬನ್ನಿ, ಅರಮನೆಗೆ ಬನ್ನಿ’

‘ಅರಮನೆಗೊ ಸೆರೆಮನೆಗೊ?’

ಮದಾಲಸೆಯ ಪ್ರಶ್ನೆಗೆ ರಾಜಭಟರು ತಲೆ ತಗಿಸಿದರು.

ಈಕೆ ಚಂದ್ರಕುಮಾರನ ಹೆಣವನ್ನು ನೋಡುತ್ತ ನೋಡುತ್ತ ನಗಲಾರಂಭಿಸಿದಳು. ರಾಜಭಟರು ತೋಳನ್ನು ಬಿಗಿಯಾಗಿ ಹಿಡಿದು ಎಳೆದೊಯ್ಯತೊಡಗಿದರು. ಮದಾಲಸೆಯು ಅವರನ್ನು ಝಾಡಿಸಿ ನೂಕಿ ವಿಕಟವಾಗಿ ನಗುತ್ತ ಹುಚ್ಚಿಯಂತೆ ಓಡಿದಳು.
* * *

ಶಿವಕುಮಾರ್ ಇಷ್ಟೆಲ್ಲ ಹೇಳಿ ಮುಗಿಸಿದಾಗ ವಿಚಿತ್ರಮೌನ ಆವರಿಸಿತ್ತು. ಎಲ್ಲರೂ ನೋವು ತಿನ್ನುತ್ತ ಕೂತಂತೆ ಕಾಣುತ್ತಿತ್ತು. ಆತ ಎಲ್ಲರ ಮುಖಗಳನ್ನು ದಿಟ್ಟಿಸಿದ. ಯಾರೂ ಮಾತನಾಡಲಿಲ್ಲ. ಮಂಜುಳ ಏನಾದರೂ ಪ್ರತಿಕ್ರಿಯಿಸಬಹುದೆಂದು ಮತ್ತೊಮ್ಮೆ ಆಕೆಯ ಕಡೆ ನೋಡಿದ. ಆಕೆ ಸುಮ್ಮನೆ ದಿಟ್ಟಿಸಿದಳು. ಕಡೆಗೆ ತಾನೇ ಮಾತು ಪ್ರಾರಂಭಿಸಿದ.

‘ಯಾಕ್ ಎಲ್ರೂ ಸುಮ್ನೆ ಕೂತ್ಕಂಡ್ರಿ?’ ಆಗ ಕಂಡಕ್ಟರ್ ಕೆಂಚಪ್ಪ ಬಾಯಿತೆಗೆದ.

‘ಸುಮ್ಮೆ ಕುಂತ್ಕಳ್ದೆ ಇನ್ನೇನ್ ಮಾಡೋದು ಕುಮಾರಣ್ಣ? ಜೀವನ ದಾಗೆ ಏನೆಲ್ಲ ಆಗ್ತೈತೆ ಏನ್ಕತೆ! ಆ ರಾಜ ಅದ್ಯಾಕ್ ಹಂಗ್ ಮಾಡ್ದ ಅಂಬ್ತ?’

ಈತನ ಮಾತು ಕೇಳಿದ ಲಕ್ಷ್ಮಿ ಮುದ್ದು ಮುದ್ದಾಗಿ ತನ್ನದೇ ವ್ಯಾಖ್ಯಾನ ಮಾಡಿದಳು:

‘ನಿನ್‌ತರಾ ಒಬ್ಬ ಕಂಡಕ್ಟರಿದ್ದಿದ್ರೆ ಆ ಮಹಾರಾಜನ್ ಬಸ್ಸು ಸರ್‍ಯಾಗ್ ಓಡಾದು. ನಿನ್ನರ ಯಾರೂ ಇರ್‍ಲಿಲ್ಲ. ಜತ್ಗೆ ಬ್ರೇಕೂ ಇರ್‍ಲಿಲ್ಲ. ಅದ್ಕೇ ಯಾರಾರ್ ಮೇಲೊ ಹರ್‍ಕೊಂಡೋಗೇಬಿಡ್ತು’ ಕೆಂಚಪ್ಪ ಉತ್ಸಾಹಿತನಾದ.

‘ನೀನ್ ಹೇಳಿದ್ದು ಸರಿಕಣಮ್ಮ, ಡ್ರೈವರ್ ಒಬ್ನೇ ಇದ್ರೆ ಎಲ್ಲಾ ಆಗೋಗ್‌ತೈತಾ? ಕಂಡಕ್ಟರು ಭಾಳ ಮುಖ್ಯ. ಜನನ ಸರಿದೂಗ್ಸಾನು ಯಾವಾಗ್ಲೂ ನಾನೇ. ಡ್ರೈವರ್‍ಗೇನ್ ಕಷ್ಟ. ಸೀದಾ ಗಾಡಿ ಹೊಡ್ಕಂಡೋಗಾದೇ ಕೆಲ್ಸ. ಕಂಡಕ್ಟರು ಸರ್‍ಯಾಗಿದ್ರೆ ಡ್ರೈವರೂ ಕಂಟ್ರೋಲಿಗ್ ಬತ್ತಾನೆ. ಜತ್ಗೆ ಜನಾನೂ ಸರ್‍ಯಾಗಿರ್‍ಬೇಕು. ಇಲ್ದಿದ್ರೆ ಬಸ್ಸಿನ್ ಗತಿ ಯದ್ವಾತದ್ವಾ ಆಗ್ತೈತೆ. ಒಟ್ನಲ್ಲಿ ರಾಜ್ಯಭಾರ ಅಂಬಾದು ಒಂದು ಬಸ್ಸಿದ್ದಂಗೆ ಅಷ್ಟೆ.’

ಕೆಂಚಪ್ಪ ಮಾತು ಮುಗಿಸುವುದನ್ನೇ ಕಾದಿದ್ದ ಕುಮಾರ್ ‘ಅಲ್ಲ, ಆ ರಾಜಂದೇ ಎಲ್ಲಾ ತಪ್ಪು ಅಂತ ಹೇಳ್ತಿದ್ದೀಯಲ್ಲ? ಒಂದು ರಾಜ್ಯ, ಒಂದು ಸಮಾಜ ಅಂದ್ರೆ ಕಟ್ಟುಪಾಡುಗಳು ಇರುತ್ತೆ. ರಾಜನಾದೋನು ರಾಜ್ಯಾನೂ ನೋಡ್ಬೇಕು. ವಂಶದ ಗೌರವಾನೂ ನೋಡ್ಬೇಕು. ಆದ್ರಿಂದ ಅಡ್ಡಾದಿಡ್ಡಿ ನಡ್ಕೊಳ್ಳೋದಿಕ್ಕೆ ಅವಕಾಶ ಕೊಡಬಾರದು’ ಎಂದು ವಾದಿಸಿದ.

ಈಗ ಮಂಜುಳ ಮಾತಾಡಲೇಬೇಕಾಯಿತು.

‘ಅಲ್ಲ ಕುಮಾರ್, ನೀವು ರಾಜ ವ್ಯವಸ್ಥೆಯ ಕೇಂದ್ರದಲ್ಲಿ ನಿಂತು ಸಮಸ್ಯೆ ನೋಡ್ತಿದ್ದೀರಿ. ಒಂದು ಮಾನಸಿಕ ದೂರ ಕಾಪಾಡ್ಕೊಂಡು ನೋಡ್ತಾ ಇಲ್ಲ’ ಎಂದಳು.

‘ಒಬ್ಬ ರಾಜನಿಗೆ, ರಾಜನ ಸಾಮ್ರಾಜ್ಯಕ್ಕೆ, ಒಂದು ಚರಿತ್ರೆ ಇರುತ್ತೆ. ಆ ಚರಿತ್ರೆಗೆ ಒಂದು ಘನತೆ ಇರುತ್ತೆ. ಅವನೇ ಮೌಲ್ಯರಕ್ಷಕನಾಗಿ ಚರಿತ್ರೆನ ಉಳಿಸಬೇಕು; ಬೆಳಸಬೇಕು. ಇದನ್ನ ಅರ್ಥ ಮಾಡ್ಕೊಳ್ಳಿ ಮೊದ್ಲು.’ ಶಿವಕುಮಾರ್ ವಾದಿಸತೊಡಗಿದ.

‘ಚರಿತ್ರೆ ಅನ್ನೋದು ಜನಗಳಿಲ್ಲದೆ ಸೃಷ್ಟಿ ಆಗೊಲ್ಲ ಕುಮಾರ್, ರಾಜನೂ ಅಷ್ಟೆ, ಜನಗಳಿಲ್ಲದೆ ರಾಜ ಇಲ್ಲ. ಆದರೆ ರಾಜ ಇಲ್ದೆ ಜನಗಳಿರಬಹುದು.’

‘ನಿಮ್ದು ಯಾವಾಗ್ಲೂ ಒಂದು ವಾದ ಇದ್ದೇ ಇರುತ್ತೆ. ನಾನೂ ರಾಜ ಮಾಡಿದ್ದೆಲ್ಲ ಸರಿ ಅಂತ ಹೇಳೊಲ್ಲ ಮಂಜುಳ ಅವರೇ. ಆದ್ರೆ ರಾಜನನ್ನು ಸಂಪೂರ್ಣ ಹೀಗಳೆಯೋದು ನನಗೆ ಸಹಿಸೊಲ್ಲ.’

‘ಇರ್‍ಲಿ ಬಿಡಿ, ಈ ಚರ್ಚೆ ಇವತ್ತಿಗೇ ಮುಗಿಯೋದಿಲ್ಲ. ಒಟ್ಟಿನಲ್ಲಿ ಇಷ್ಟು ಮಾತ್ರ ನಿಜ.’ ನಿಮ್ಮೂರಿನ ಚರಿತ್ರೆ ನಿಜಕ್ಕೂ ಸಂಕಟಮಯವಾಗಿದೆ. ಇದು ನನಗೆ ಬಹಳ ಮುಖ್ಯ ಅನ್ಸುತ್ತೆ.’

‘ನೋ ನೋ. ನಮ್ಮೂರ ಚರಿತ್ರೆಗೆ ಅದರದೇ ಆದ ವೈಭವ ಇದೆ. ನನಗೆ ಅದೇ ಮುಖ್ಯ.’

‘ಇರಬಹುದು ಕುಮಾರ್, ಆದ್ರೆ ನೀವು ಹೇಳಿದ ಘಟನೆಗಳಲ್ಲಿ ಸಂಕಟದ ಒಂದು ಚರಿತ್ರೆ ಇದೆಯಲ್ಲ, ಅದು ಈ ದೇಶದಲ್ಲೇ ಮಹತ್ವದ್ದು ಅಂತ ನನ್ನ ಅಭಿಪ್ರಾಯ. ಆಗ್ಲೆ ಹೇಳಿದ್ನಲ್ಲ, ಈ ಚರ್ಚೆ ಮುಂದುವರೆಯುತ್ತೆ ಅಂತ. ಈಗ ನನಗೆ ಬೇಕಾದ್ದೂ ಅವಿವಾಹಿತ ಹೆಣ್ಣು-ಗಂಡು ಮಂಟಪಕ್ಕೆ ಯಾಕ್ ಹೋಗಬಾರದು ಅಂತ?’

‘ಚಂದ್ರಕುಮಾರನ ಹತ್ಯೆ ಆದಮೇಲೆ ರಾಜಕುಮಾರಿಗೆ ಹುಚ್ಚು ಹಿಡೀತು. ಈಗ ರಾಜ ಯಾವ ಆಜೇನೂ ಮಾಡ್ದೆ ಇದ್ರೂ ಹತ್ಯೆ-ಹುಚ್ಚು ಎರಡೂ ವಿಷ್ಯ ಗೊತ್ತಿದ್ದ ಜನಕ್ಕೆ ಈ ಮಂಟಪ ಅವಿವಾಹಿತರಿಗೆ ಅನಿಷ್ಟಕಾರಕ ಅನ್ನಿಸ್ತು. ಬರ್‍ತಾ ಬರ್‍ತಾ ಅವಿವಾಹಿತ ಗಂಡು-ಹೆಣ್ಣು ಒಟ್ಟಿಗೇ ಮಂಟಪದ ಆವರಣಕ್ಕೆ ಹೋದರೆ ಸ್ವಪ್ನ ಲೋಕಕ್ಕೆ ಹೋದಂತಾಗಿ, ಪ್ರೇಮ ಹುಟ್ಟುತ್ತೆ, ಮದ್ವೆ ಆಗುತ್ತೆ ಅನ್ನೋ ನಂಬಿಕೆ ಬೆಳೀತು. ಹೀಗೆ ಇದು ‘ಸ್ವಪ್ನ ಮಂಟಪ’ ಅಂತ ಕರೆಸ್ಕೊಂಡು, ಅವಿವಾಹಿತ ಹೆಣ್ಣು-ಗಂಡು ಒಟ್ಟಿಗೇ ಪ್ರವೇಶ ಮಾಡೋಕೆ ನಿಷೇಧವೂ ಬಂತು.

ಅಲ್ಲೀವರೆಗೆ ಸುಮ್ಮನಿದ್ದ ಸಿದ್ದಣ್ಣ ‘ನೋಡಿದ್ರೆನಮ್ಮ ನನ್ನ ಮಗ ಎಷ್ಟು ಚೆನ್ನಾಗ್ ಕತೆ ಹೇಳ್ತಾನೆ. ನಮ್ಮೂರಿನ ಕತೆ ಹೇಳಾದ್ರಾಗೆ ನನ್ನ ಮಗನ್ನ ಯಾರೂ ಮೀರ್‍ಸೋಲ್ಲ ಬಿಡ್ರಿ?’ ಎಂದು ಹೆಮ್ಮೆಯಿಂದ ಹೇಳಿದ.

‘ಖಂಡಿತ ಚನ್ನಾಗ್ ಕತೆ ಹೇಳ್ತಾರೆ; ಕಣ್ಣಿಗೆ ಕಟ್ಟೋ ಹಾಗೆ ಹೇಳ್ತಾರೆ. ಇದೂ ಒಂದು ಪ್ರತಿಭೇನೇ.’ ಎಂದು ಮಂಜುಳ ಹೇಳಿದಾಗ ಆಗ ಚರಿತ್ರೆಯ ಪ್ರಸ್ತಾಪ ಮಾಡದೆ ‘ಕತೆ’ ಎಂದದ್ದನ್ನೂ ಗಮನಿಸದೆ ಶಿವಕುಮಾರ್ ಉಬ್ಬಿಹೋದ. ಆಗ ಮಂಜುಳ ‘ಚರಿತ್ರೆ ಬಗ್ಗೆ ಇನ್ನು ಸ್ವಲ್ಪ ವೈಚಾರಿಕವಾದ್ರೆ, ಕತೆ ಅಂಶ ಕಡಿಮೆ ಮಾಡಿದ್ರೆ ಎಲ್ಲಾ ಸರಿಯೋಗುತ್ತೆ’ ಎಂದು ತುಂಟ ನೋಟ ಬೀರಿದಳು. ಆಕೆಯ ತುಂಟ ನೋಟದಿಂದ ಖುಷಿಗೊಂಡ ಕುಮಾರ್ ‘ಅನ್ನಿ ಅನ್ನಿ ನೀವು ಅನ್ನದೆ ಇನ್ನು ಯಾರು ಅನ್ಬೇಕು’ ಎಂದ. ಕೂಡಲೇ ತಾಯಿ ಕರಿಯಮ್ಮ ‘ಅದೇನಪ್ಪ ಅಂತಾ ವಿಸೇಸ ಆಯಮ್ನೇ ಅನ್ನೋ ಅಂತಾದು’ ಎಂದು ತುಸು ಸಿಡುಕಿನಿಂದಲೇ ಕೇಳಿದಳು. ಕುಮಾರನಿಗೆ ಸಂದರ್ಭದ ಅರಿವಾಗಿ ‘ಅದೇ ಕಣಮ್ಮ, ಇಲ್ಲಿರೋರಲ್ಲಿ ಈ ಮೇಡಮ್ಮೇ ಅಷ್ಟು ಇಷ್ಟು ಓಡ್ಕೊಂಡಿದ್ದಾರೆ. ಅದಕ್ಕೆ ಹಾಗಂದೆ’ ಎಂದು ಸಮಾಧಾನಿಸಿ ತುಂಟತನದಿಂದ ಮಂಜುಳಾ ಕಡೆಗೆ ನೋಡಿದ. ಮಂಜುಳ ಮುಸಿಮುಸಿ ನಕ್ಕಳು. ಆಗ ಕುಮಾರನಿಗೆ ಆಕೆಯೇ ರಾಜಕುಮಾರಿಯಂತೆ ಕಂಡಳು.

ರಾಜಕುಮಾರಿ ಮಂಜುಳಾ ಹಿಂದೆ ರಾಜಕುಮಾರ ಶಿವಕುಮಾರ ಓಲೈಸುತ್ತ ಹೋಗುವ ದೃಶ್ಯ ಮನಸ್ಸಿನಲ್ಲಿ ಮೂಡುತ್ತಿದ್ದಂತೆ ಲಕ್ಷ್ಮಿ ಯಾವಾಗಿನ ಮುಗ್ಧತೆಯಿಂದ ಒಟ್ನಲ್ಲಿ ಡೈವರು ಎಷ್ಟೇ ದೊಡ್ಡನಾದ್ರು ಕಂಡಕ್ಟರು ಅಷ್ಟೇ ಮುಖ್ಯ ಅನ್ನೋದು ಇವತ್ತು ಗೊತ್ತಾತು. ಇಷ್ಟು ಸಾಕು ಇವತ್ಗೆ. ಮಲೀಕಮಾನ ಬರ್ರಿ’ ಎಂದು ಹೇಳುತ್ತಾ ಎದ್ದಳು. ಆಗ ಮಂಜುಳ ‘ಇನ್ನೊಂದು ವಿಷಯ ಉಳಿದಿದೆ ಇರು ಲಕ್ಷ್ಮಿ’ ಎಂದು ಹೇಳಿ ಕುಮಾರನ ಕಡೆ ತಿರುಗಿ ‘ಆ ಮಂಟಪದ ಹತ್ರ ಒಬ್ಬ ಯುವತೀನ ನೋಡಿದ್ವಲ್ಲ. ನೀವು ಹುಚ್ಚಿ ಅಂದ್ರಿ, ಆಕೆ ರಾಜಕುಮಾರಿ ಅಂತ ಹೇಳ್ಕೊಳ್ತಾ ಇದ್ಲು. ನೀವು ಹೇಳಿದ ಘಟನೆಗಳಲ್ಲೂ ರಾಜಕುಮಾರಿ ಹುಚ್ಚಿ ಆಗ್ತಾಳೆ. ಈ ಹುಚ್ಚಿ ತಾನೇ ರಾಜಕುಮಾರಿ ಅಂತ ತಿಳ್ಕೊಂಡಿದಾಳೆ. ಇವೆರಡಕ್ಕೂ ಏನಾದ್ರು ಸಂಬಂಧ ಇದೆಯಾ? ಎಂದು ಕೇಳಿದಳು.

‘ಒಂದು ರೀತಿ ಇದೆ, ಇನ್ನೊಂದ್ ರೀತಿ ಇಲ್ಲ, ಈಕೆ ಯಾಕೆ ಹುಚ್ಚಿ ಆಗಿದ್ದು ಅಂತ ನನಗಿಂತ ನಮ್ಮಮ್ಮನಿಗೆ ಸರಿಯಾಗ್ ಗೊತ್ತಿದೆ’ ಎಂದು ಕುಮಾರ್‌ ಕರಿಯಮ್ಮನ ಕಡೆ ನೋಡಿದ.

ಕರಿಯಮ್ಮನಿಗೆ ಮಾತು ಮಂದುವರೆಸುವ ಉತ್ಸಾಹ ಇರಲಿಲ್ಲ. ‘ಯಾವತ್ತಾನ ಹೇಳಿದ್ರಾತು. ಇವತ್ತಿಗೆ ಸಾಕು ಮಲೀಕಾ ಹೋಗ್ರಿ’ ಎಂದಳು. ಮಂಜುಳಾಗೆ ಒತ್ತಾಯಿಸುವ ಧೈರ್ಯ ಬರಲಿಲ್ಲ. ಸುಮ್ಮನಾದಳು. ಆದರೆ ಹುಚ್ಚಿಯ ವಿವರಗಳನ್ನು ತಿಳಿಯುವ ಕುತೂಹಲ ಬೆಳೆಯತೊಡಗಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ನಕ್ಷತ್ರ ನೋಡಿ ಅಳೆವವನಲ್ಲ ನಾಳೆಗಳ

ಸಣ್ಣ ಕತೆ

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys