ನೋಡಿಕೋ ಮುಖವ ಕನ್ನಡಿಯಲ್ಲಿ, ಇಂಥದನೆ
ಇನ್ನೊಂದ ಕೊಡು ಎಂದು ಕೇಳಿಕೋ. ನೀ ನಿನ್ನ
ಮತ್ತೆ ಸೃಷ್ಟಿಸಿಕೊಳದೆ ಬಿಟ್ಟಲ್ಲಿ ಲೋಕವನೆ
ವಂಚಿಸುವೆ, ಜೊತೆಗೆ ಹೆಣ್ಣೊಂದಕ್ಕೆ ತಾಯ್ತನವ.
ನಿನ್ನ ಪೌರುಷದ ಬಿತ್ತನೆಗೆ ಒಪ್ಪದ ಕನ್ನೆ
ಇರುವಳೇ ? ತಡೆಗಟ್ಟಿ ತನ್ನ ಪೀಳಿಗೆಯನ್ನೆ
ಆತ್ಮಮೋಹಕ್ಕೆ ಬಲಿಯಾಗುವವನಿರುವನೇ?
ನಿನ್ನ ತಾಯಿಯ ಚಿತ್ರ ಹೊಳೆವ ಕನ್ನಡಿ ನೀನೆ,
ತನ್ನ ಪ್ರಾಯದ ಸಿರಿವಸಂತ ಕಾಲವ ಅವಳು
ಕಾಣುವಳು ನಿನ್ನಲ್ಲಿ ಮುಂದೆ ಹಾಗೇ ನೀನೂ
ಕಾಣುವೆ ಸುಕ್ಕಾದ ನಿನ್ನೊಡಲ ಕಿಟಕಿಯೊಳು
ನಿನ್ನ ಗತಪ್ರಾಯದ ವಸಂತ ವೈಭವವನ್ನು
ಸ್ಮರಣೆಯುಳಿಸದೆ ಒಂಟಿ ಸಾಯುವೆನು ಎನಲು
ನಿನ್ನ ಜೊತೆಯೇ ಸಾಯುವುದು ನಿನ್ನ ಚೆಲುವೂ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 3
Look in thy glass and tell the face thou viewest