ಕಣ್ಣೀರು ಬತ್ತಿಹೋದ ನನ್ನ
ಗುಳಿಬಿದ್ದ ಕಣ್ಣುಗಳಲ್ಲಿ
ನೋವಿನ ಸೆಳಕು
ಏಕೆಂದರೆ
ಮೊಗ್ಗಗಳು ಬಿರಿವಾಗ
ಹಸಿರುಟ್ಟು ನಲಿವಾಗ
ನನ್ನ ಸುಕ್ಕುಗಟ್ಟಿದ
ಕಪ್ಪು ಮುತ್ತಿದ
ಕಣ್ಣುಗಳು ಯಾತನೆಯಿಂದ
ಹನಿಗೂಡುತ್ತಿದ್ದವು.
ಎಣ್ಣಿಗಟ್ಟಿ ಮಸುಕಾದ
ಭಾರವಾಗಿ ಜೋತುಬಿದ್ದ
ನನ್ನ ಮೂಗುತಿ
ಅವ್ವನ ಹರಿದ ಸೀರೆಗೆ
ತೇಪೆಗಳ ಜೋಡಿಸಲು
ಕಾಲಿಗೆ ಗೆಜ್ಜೆ ಕಟ್ಟಿ
ಉಟ್ಟಿರುವ ಪೊರೆಗಳ ಕಳಚಿ ಬಿಚ್ಚಿದ್ದೆ.
ಕೊಳೆಯನು ಗಂಗೆಯಲಿ
ಹರಿಯಬಿಟ್ಟ ನಾನು
ಹೃದಯದಲಿ ಇಂದಿಗೂ
ಪವಿತ್ರ ಗಂಗೋತ್ರಿಯಾಗಿದ್ದೆ
ಬದುಕಿನ ಮುಸ್ಸಂಜೆಯಲಿ
ಬಿರಿಯಲ್ಲಿರುವ
ಮೊಗ್ಗುಗಳ ಕಂಡು
ಯಾತನೆ ಪಡುತ್ತಿರುವ ನಾನು
ತುಂಬಿ ಬಂದ ಕಣ್ಣುಗಳಲ್ಲಿ
ಕನಸುಗಳ ಕಾಣುತ್ತಿದ್ದೆ.
ಹೊಸಕಿ ಹಾಕಿದ ನನ್ನ
ವಸಂತಗಳ ನೆನೆಯುತ್ತಿದ್ದೆ.
*****