ಬಾರ ಪಾತರಗಿತ್ತಿ ಚನ್ನಿ
ನಿನಗ ಯಾತರ ಚಿಂತಿಯು
ಹೂವು ಹೂವಿನ ತೇರು ಎಳಿಯ
ನೀನ ಕಳಸದ ಗಿತ್ತಿಯು

ಹಸಿರು ಹೂವು ಗುಡ್ಡ ಬೆಟ್ಟಾ
ನಿನ್ನ ಮಂಚಾ ತೂಗ್ಯವ
ಮುಗುಲ ಮ್ಯಾಲಿನ ತಂಪುಗಾಳಿ
ನಿನ್ನ ಪಕ್ಕಾ ತೊಳೆದವ

ದೇವರಾಯನ ಮನಿಯ ತೋರ
ನೀನ ಪಾರ್‍ವತಿ ರೂಪಸಿ
ನೀನ ಊರ್‍ವಸಿ ನೀನ ಮೇನಕಿ
ಜೀವ ಚೇತನ ರಸಮತಿ

ನಿನ್ನ ರೆಕ್ಕಿಯ ಮ್ಯಾಗ ಹತ್ತಲೆ
ಬ್ರಹ್ಮ ತತ್ತ್ವಕ ಹಾರಲೆ
ನಿನ್ನ ಡುಬ್ಬಕ ಹತ್ತಿ ನಿಲ್ಲಲೆ
ಶಿವನ ಅರಮನಿ ಸೇರಲೆ
*****