ನಿನ್ನ ನೋಡದೆಯೆ ನೋಡಿದೆನು ಹಲವು ಬಾರಿ
ನನ್ನೆದುರು ಮಿಸುಕಿದರೆ ಎನಿತೊ ಒಂದು ಸಾರಿ

ನೀನು ಸುಂದರಿಯಂತೆ
ತುಂಬುಗಲ್ಲದ ಚೆಲುವಿ
ಅರೆ ಬಿರಿದ ತುಟಿಯ ಒಲವಿ
ನೀನು ಸಂಪಿಗೆಯ ಹೂವಂತೆ……

ನಿನ್ನ ಕಂಪನು ಹೊಗಳಿದರು
ಸ್ವರದ ಇಂಪನು ಸುರುವಿದರು
ನಿನ್ನ ನಗೆಯಲೆ ಬೆರೆತು
ನನ್ನ ಹೃದಯವ ಕಲಕಿದರು.

ನಿನ್ನ ಗುಣದ ಮಾಲೆಯ ನೆಯ್ದು ನನಗುಡಿಸಿದರು
ನಿನ್ನ ನಡೆ-ನುಡಿ-ನೋಟಗಳ ಅದರೊಳಗೆ ಬೆರಸಿದರು
ತಿಳಿಯದಲೆ ಹೃದಯ ವೀಣೆಯ ಮಿಡಿದು
ನನ್ನಂಗದಲಿ ಪ್ರೇಮಗೀತೆಯ ನುಡಿಸಿದರು.

ಎಂತೋ…..ಏನೋ, ನಾನರಿಯೆ ವಾರಿ
ಅಂತು ನೋಡಬೇಕೆನಿಸುತಿದೆ ಒಂದು ಸಾರಿ

ನನ್ನೊಡನೆ ನಿನ್ನನಿರಿಸಿ ನೋಡಿದರು
ಜೊನ್ನ-ಚಾತಕದ ಜೋಡಿ
ಚಂದ್ರಿಕೆ-ಚಕೋರದ ಗಾಡಿ
ಏನು ದೈವದ ಮೋಡಿ
ಎಂದುಲಿದು ಕೈಬಡಿದು ನಗೆಯಾಡಿದರು.

ನೀನೆ ಒಂದಿನಿತು ನಿನ್ನ ಪರಿಯನು ಹೇಳು
ನಾನು ಕಲ್ಪಿಸಿ ಬರಿದೆ ನಿನ್ನ ಮಾಡಲೆ ಕೀಳು?
ತಡಬೇಡ ಹೇಳು….ಬೆಡಗಿ
ನನ್ನುಸಿರ ವೇಗ ಹೆಚ್ಚುತಿದೆ ಹಾಳು
ನಿನ್ನೆದೆಯ ಮಧುವುಣಿಸು ದಯೆದೋರಿ
ಚೆನ್ನೆ…. ನೋಡಬೇಕೆನಿಸುತಿದೆ ಒಂದೆ ಸಾರಿ.
*****