ಮಗುವಾಗಿ ಇರುವಾಗ
ನೀನು
ಎಲ್ಲರ ಮುಖದ ನಗುವಾಗಿದ್ದಿ
ಮನಸಿಗೆ ಹಿತ
ಬದುಕಿಗೆ ಮಿತವಾಗಿ
ದೇವರ ದಯೆಯಾಗಿ
ಮುದ್ದಾದ
ಬಾಲಭಾವದ ಚೆಲುವಿನ ಖಣಿಯಾಗಿ
ಸುಖ-ಶಾಂತಿಯ ಮಡುವಾಗಿದ್ದಿ
ಯವ್ವನ ಬರುತಿರಲು ನೀನು ನಿನ್ನ
ಮೈಯ ಮಾಟಕೆ ಕಣ್ಣ ನೋಟಕೆ
ಹಮ್ಮಿನಧಿಕಾರಿಯಾದಿ
ಮೀರುವೆದೆಯು ಮೀರಿಸಿತು
ನಿನ್ನ ಭಾವ-ಬುದ್ದಿಯನು
ದೇಹಬಲದಿಂದ
ಲೋಕಗೆಲ್ಲುವೆನೆಂಬ
ಆತ್ಮವಿಶ್ವಾಸದ ಮಡು ತುಂಬಿ ಹರಿಯಿತು
ನೀನು ನಿನ್ನ ಚೆಲುವಿಗೆ
ಒಣ ಅಭಿಮಾನಿಯಾದೆ.
ಈಗೇಕೆ ಮರುಗುವೆ ಮರುಳೆ
ಮುಪ್ಪಿನ ಯೋಚನೆಗೆ ಯೋಜನೆಗೆ
ಹೌಹಾರಿ, ಹೆದರಿ
ಕನ್ನಡಿಯೆದುರಿಗೆ ನಿಂತು
ನರೆಕೂದಲನು ಹೆಕ್ಕುತ್ತ
ಹಣೆಯ, ಕಣ್ಣ ಸುತ್ತ ಹಬ್ಬಿರುವ
ಸುಕ್ಕನು ಕಂಡು
ಅಳಿದ ಮೈಕಟ್ಟು
ಜೋಲು ರಟ್ಟೆಯನು ಮುಟ್ಟಿ ಮುಟ್ಟಿ
‘ಅಯ್ಯಾ ಮುಪ್ಪೇ’ ಎಂದು
ನಿಡಿದುಸಿರು ಬಿಡುವೆಯೇಕೆ?
ಎಂದೊ ಒಂದು ದಿನ
ಅಳಿಯುವ, ಮುಳಿಯುವ
ಈ ಸೊತ್ತಿನ ಮೋಹವೇತಕೆ!
*****


















