ಪಿಸುಮಾತು ಆಡೋಣ ಬಾ ಕತ್ತಲೆ
ಬೆಳಕೆಂಬ ಮಾಯೆ ಬರಿ ಬೆತ್ತಲೆ!

ಬೆಳಕು ಬೆಂಕಿಯಾಗುವುದ ಕುರಿತು
ಬೆಂಕಿ ಬೆಳಕುಗಳ ಅಂತರ ಅರಿತು
ಬೆಂಕಿಯೇ ಬೆಳಕಾಗದ ಹೊರತು
ಕಲ್ಲು ಅರಳೀತು ಹೇಗೆ?
ಮಾತು ಮೀಟೀತು ಹೇಗೆ?

ಪಿಸುಮಾತು ಆಡೋಣ ಬಾ ಕತ್ತಲೆ
ಬೆಳಕೆಂಬ ಮಾಯೆ ಬರಿ ಬೆತ್ತಲೆ!

ಕತ್ತಲ ಕತೆಯ ಬೆಳಕೇನು ಬಲ್ಲದು
ಚಿತ್ತದಲಿ ರಂಗವಲ್ಲಿಯ ಹೊಳಪು
ಅಂಗಳದ ತುಂಬ ಅರಳೀತು ಮಾತು
ಜಂಬ ಪಡಬೇಡ ಬೆಳಕೆ
ಹಗಲು ತುಂಬುವ ಕೊಳಕೆ
ಬತ್ತಲಾಗುವ ನಿನಗೆ ಬೇಕು ಕತ್ತಲ ಸೀರೆ
ಮತ್ತೆ ಸೀರೆ ಸೆಳೆಯುವ ಹುಚ್ಚು ದರಬಾರೆ ?

ಪಿಸುಮಾತು ಆಡೋಣ ಬಾ ಕತ್ತಲೆ
ಬೆಳಕೆಂಬ ಮಾಯೆ ಬರಿ ಬೆತ್ತಲೆ!
*****