ಅಪರಿಚಿತ ಸಮುದ್ರದಲ್ಲಿ ಯಾನ ಮಾಡಿ ಬಂದವನಂತೆ
ಇಲ್ಲೇ ಬೇರು ಬಿಟ್ಟ ಈ ಜನರ ನಡುವೆ ನಾನು ಒಬ್ಬಂಟಿ.
ಅವರ ಮನೆ ತುಂಬಿ, ಅವರ ಮೇಜಿನ ಮೇಲೆಲ್ಲ ಹರಡಿರುವ ದಿನ ಅವರದ್ದೇ,
ನನಗೋ ಅವು ಬಹು ದೂರದ ಸತ್ಯಗಳು.
ಹೊಸ ಜಗತ್ತು ನನಗೆ ಕಾಣುತ್ತಿದೆ,
ಬಹುಶಃ ಚಂದ್ರನಂತೆ ನಿರ್ಜನವಾದ ಜಗತ್ತು,
ಅವರ ಒಂದೊಂದು ಭಾವವನ್ನೂ ಕೆದಕಿ ಕೆದಕಿ ನೋಡಿಕೊಳ್ಳಬೇಕು,
ಅವರ ಮಾತಿನ ದನಿಗೂ ಪರಿಚಿತ ಲಯವಿಲ್ಲ,
ನನ್ನೊಡನೆ ದೂರದಿಂದ ತಂದ ವಸ್ತುಗಳು,
ಇಲ್ಲಿರುವುದರೊಡನೆ ಹೋಲಿಸಿದರೆ, ವಿಚಿತ್ರ, ಬೇರೆ ಥರ :
ಅವರ ಜಗತ್ತಿನಲ್ಲಿ ಎಲ್ಲವೂ ಜೀವಂತ,
ಆದರೆ ನಾಚಿ, ಉಸಿರು ಬಿಡದೆ ಸುಮ್ಮನಿವೆ.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke