ಮರುಳ…
‘ಕುಡಿ’ಹಣ್ಣೆಂದು
ಮೆಟ್ಟಿದೆಯಾ?
ಹೆಂಗೂಸೆಂದು
ಅಟ್ಟಿದೆಯಾ?

ನಾನು ತಾಯಿಯಲ್ಲ
ನಾನು ಹೆಂಡತಿಯಲ್ಲ
ನಾನು ಮಗಳಲ್ಲ
ತೊಲಗಾಚೆ
ಇನ್ನು ನಾ ನಿನ್ನ
ಪೊರೆವವಳಲ್ಲ…

ನಾನು ಮಮತಯಲ್ಲ
ನಾನು ಸಹನೆಯಲ್ಲ
ನಾನು ಶಾಂತಿಯಲ್ಲ
ತೊಲಗಾಚೆ
ಇನ್ನು ನಾ ನಿನ್ನ
ನಂಬುವವಳಲ್ಲ…

ಈ ನೆಲ ಈ ನದಿ
ಈ ಹೂವು ಈ ಚಿಗುರು
ಈ ಚಿಕ್ಕೆ ಈ ಚಂದ್ರ
ನಿನ್ನಂತಹವನಿಗಲ್ಲ…

ಇನ್ನು ನಾನೆಂದರೆ
ದುಃಖ-ದುಃಸ್ವಪ್ನ

ಇನ್ನು ನಾನೆಂದರೆ
ಕೇಡು-ಕಾಠಿಣ್ಯ

ಇನ್ನು ನಾನೆಂದರೆ
ರೋಷ-ವಿಷ

ನನ್ನ ಘೋಷ
ನಿನ್ನ ನಾಶ

ನನ್ನ ಆಶೆ
ನಿನ್ನ ಬಲಿ

ನನ್ನ ವ್ಯಥೆ
ನಿನ್ನ ಚಿತೆ

‘ಚಂಡಿ ಚಾಮುಂಡಿ ನಾನ್’
ಗಂಡುಸೆ ಪಿಡಿದು ಚೆಂಡಾಡುವೆ ಕೇಳ್!

ನನ್ನ ಪ್ರಾರ್ಥನೆ:
ಓ… ಬ್ರಹ್ಮಾಂಡವೆ ಕಾದು
ಕೆನ್ನಾಲಗೆಯ ಚಾಚು
ಹರಿದು ಬರುವ ಸಮಸ್ತ ಬೀಜಗಳಿಗೆ
ಹುರಿವ ಬಾಣಲೆಯಾಗು

ಓ…ಕರುಳು ಬಳ್ಳಿಯೆ
ಗರಗಸವಳ್ಳಿಯಾಗು
ನಿಷ್ಕರುಣಿಯ ಕೊರಳಿಗೆ ಉರುಳಾಗು.
*****