ಶನಿಯಂತೆ ನನ್ನ ಬೆನ್ನು ಹತ್ತಿದವನೆ
ನನ್ನ ಮಗನೇ ಜನಮೇಜಯನೆ
ಕೇಳು :
ನನ್ನ ನೆರಳಾಗಬೇಡ
ಬೆಳಕಾಗುವುದೂ ಬೇಡ
ನನ್ನ ಧ್ವನಿಯಾಗಬೇಡ
ಪರಾಕು ಕೂಗಬೇಡ
ಮೂರು ಕಾಸಿನವನೆ
ನನ್ನ ಮುಖಕ್ಕೆ ಕನ್ನಡಿಯಾಗದಿರಯ್ಯ
ಕಾಫಿ ಹೋಟೆಲಿನಲ್ಲಿ ಸಿನಿಮಾದಲ್ಲಿ ಧ್ಯಾನದಲ್ಲಿ
ಎಲ್ಲೆಲ್ಲು ಬೆಂಬತ್ತಿ ಹಲ್ಲು ಗಿಂಜದಿರಯ್ಯ ಎಂಥಾ ಧೈರ್ಯ
ಹಳೆ ವಠಾರದ ವಾಸನೆ ಸೂಸುವವನೆ
ಅಪಾಯದ ತಲೆಬುರುಡೆಯವನೆ
ಎಲೆಹುಳದಂತೆ ಕುಪ್ಪಳಿಸುವವನೆ
ಆಚೆಗೆ ನೆಗೆ
ತೆಗೆ ಇಲ್ಲಿಂದ ನಿನ್ನ ಬಿಡಾರ ನಕ್ಷತ್ರಕನೆ
ಹುಗಿದುಹೋಗು ಬಿದ್ದ ನಿನ್ನೆಗಳಲ್ಲಿ
ನಾನು ಉಸಿರಾಡುವುದಕ್ಕೆ ಬಿಡು ಸ್ವಚ್ಛಂದದಲ್ಲಿ
ಬಡ್ಡೀಮಗನೆ ಥೂ.
*****