ಏರುವ ಹೊತ್ತಿನಲಿ
ಬದುಕು ಕಟ್ಟುವ, ಕಟ್ಟಿಕೊಳ್ಳುವ
ಕಾಯಕದಲಿ ನಿಯೋಜಿತನಾಗಿ
ಹೊರಬಂದೆ; ಮಣ್ಣಿಂದ ದೂರವಾದೆ.
ಜೀವ ಹೂ ಸಮಯದಲಿ
ಉತ್ಸಾಹದಲಿ ಬಳಸಿ ಅವಕಾಶ, ಪರಿಸರವ
ಸ್ನೇಹ ಸಹಕಾರ ನಂಬಿ
ಆಡುತ್ತಾ ಹಗುರಾಗಿ
ಕಚ್ಚೆ, ಕೈ, ಬಾಯಿ ವೈನಾಗಿರಿಸಿ
ಕಲಿಕೆಯನ್ನು ಗೌರವಿಸಿ
ಆಗುವುದಾದರೆ ನೆರವು ನೀಡಿ, ಸಾಂತ್ವನವ ಮಾಡಿ
ಆಗದಿರೆ ತೆಪ್ಪಗಿರಿ
ತಪ್ಪಿ ಕೇಡ ಬಗೆಯದಿರಿ
ಎಚ್ಚರಿರಿ ಕೊಂದುಕೊಳ್ಳದಿರಿ ನಿಲುವಿನಲಿ
ದುಡಿದೆ; ಪ್ರೀತಿ ಪಡೆದೆ
ಹೊಸ ಹೊಸ ಸಂಬಂಧಗಳ ಬೆಸೆದುಕೊಂಡೆ
ಜೀವನದ ಸಂಜೆಯಲಿ
ಕೊರಗುತಿರುವೆ
ಏನು ನೋಡಿದೆ? ಏನು ತಿಳಿದೆ?
ಎಂಬೀ ವಿಧದ ಪ್ರಶ್ನೆಗಳಿಗೆ ಉತ್ತರ ಸಿಗದೆ.
ಯೋಜಿಸುತ್ತಿರುವೆ
ಉಳಿಯಲಿಕೆ ಉಪಯುಕ್ತನಾಗಿ
ನಡೆಯಲಿಕೆ ಸಮಾಧಾನವಾಗಿ
ಕಾಪಿಟ್ಟು ಈ ಸಟ್ಟೆಯನು
ಅಧ್ಯಯನ ಯೋಗ್ಯವಾಗಿ.
*****
Latest posts by ವೆಂಕಟಪ್ಪ ಜಿ (see all)
- ಪುಣ್ಯ ಮೂರ್ತಿ - February 28, 2021
- ಯಾರಿಗೂ ಬರದಿರಲಿ! ಯಾರಿಗೂ ಬರದಿರಲಿ!! - February 21, 2021
- ಎದೆಯುಂಡ ಭಾವ - February 14, 2021