“ಅಯ್ಯ ಶಿವನಽಽ….,’ ಸೊಸ್ತ್ಯಾರು ಮಕ್ಕಳು ನೂಲತಿದ್ದರ ನನ್ನ ಗತಿ ಹಿಂಗ್ಯಾಂಕ ಆಗತಿತ್ತೊ ಯಪ್ಪಾ!…….. ಇವರೆಲ್ಯಾರೇ ದಗದಾ ಮಾಡವರಽ ದಗದಾ? ಹತ್ತಿ ಅರೀಲಾಕ ಕಲ್ಲ ಇಡ್ರೇ ಅಂದರ ನಡಾ ನೂಸತೈತಿ. ಪಿಂಡ್ರಿ ನೂಸತಾವು…. ಅಂತಾರು! ಒಂದಽ ಒಂದ ಧಡೆ ಕಾಳು ಆರೂದ್ರಾಗಽ ಚರೀನ ಕಟ್ತಾರ ಮ್ಯಾಗಿಂದ ತೆಳತನಕಾ! ಇದರಾ ಬದರಾ ಕಟ್ಟೀ ಮ್ಯಾಗ ಕುಂತು ಚಕ್ಕಂದ ಆಡಲಾಕ ಕಲ್ತಾರ ಚಕ್ಕಂದಾ!!!

“ಎಮ್ಮಿ ಮೈತೊಳಕೊಂಡ ಬಾ ಅಂದರ ಹಳ್ಳದ ದಂಡಿ ಮ್ಯಾಗ ಹಿಂಬಡಾ ತಿಕ್ಕೊಂತಽ ಕೂಂಡ್ರತಾಳ ನನ್ನ ಸೊಸಿ….! ಎಮ್ಮಿ ಬಾಲಕ್ಕ ಹತ್ತಿದ್ದ ಹೆಂಡಿ (ಶೆಗಣಿ) ಹಂಗಽ ಇರತೈತಿ…ಈ ಚದುರಿಽ ಮುರಕಾ ಮಾಡಿಕೊತೇಽ ತಿರತಿರಗಿ ಹಿಂಬಡಾ ನೋಡಿಕೋತಽ ಬರತಿರತಾಳ ಓಣಿಗುಂಟ. ಇಕಿ ಹೀಂಗ ಬರೂದರೊಳಗಽ ಎಮ್ಮಿ, ಕರೀಗೆ ಹಾಲುಣಸಿ ಬಿಟ್ಟಿರತೈತಿ… ಆತಲ್ಲಾ ಮುಗದಽ ಹೋತು”

“ಇವರನ್ನ ಸಂತಿ ಮಾಡಿಕೊಂಡು ಬರಲಾಕ ಕಳಸೂದಽ ಪಂಚೇತಿ ಐತ್ರಿ…. ಮುಂಗೈ ಮ್ಯಾಲಿನ ಹಚ್ಚೀಬಟ್ಟು ನೋಡಿಕೋತ ತಕ್ಕಡೀ ಹಿಡಿದರ ಏಲ್ಯಾರೆ ತೂಕ ಆಕ್ಕೈತೆ? ಆದರಾಗೂ ಕಳಕೊಳ್ಳೊದಽ ಮಾತ್ರ. ಬೆಣ್ಣೀ ಮಾರಿ ಕಂಡ್ಹಾಳ (ಕನ್ನಡಿ) ಕೊಳ್ಳೂ ಅವರನ್ನ ನೀ ಎಲ್ಲ್ಯಾರ ನೋಡೀದೀಯಾ ಯಪ್ಪಾ? ಹುಟ್ಟಿ ಮೂರಿಪ್ಪತ್ತರ ಮ್ಯಾಲೆ ಹತ್ತವರಸ ಆದೂ……. ನಾ ಹೆಣ ಮಗಳ ಇನ್ನೂವರಿಗೂ ಒಂದಿನಾ ಕಂಡ್ಹಂಳ್ಳ ಕೈಯಾಗ ಹಿಡಿದಿಲ್ಲ…? ಈಕಿ ನನ್ನ ಸೊಸಿ!… ಮುಚ್ಚೌಲು ಕೊಟ್ಟು ಕಂಡ್ಹಳ್ಳ ಕೊಂಡುಕೊಂಡು ಬಂದಾಳ. ಇದಕ್ಕ ಏನಿನ್ನ ಹಣೀಹಣೀ ಗಟ್ಟಿಸಿಕೊಂಡ್ರನಽ ಸರಿ! ಸಂತಿಗೆ ಹೋಗೂ ದಂದರಽ ಎಲ್ಲಮ್ಮನ ಜಾತರಿಗ್ಹೋದ್ಹಾಂಗ ಮಾಡ್ತಾರ! ಇವರ ಆದವಾನೀ ಕರೆ ಅಂಚಿನಸೀರಿ ಇವರ ಜರಾಗೊಂಡೇವಹಚ್ಚಿದ ಚೆಪ್ಪಲಿ ಏನ ಹೇಳ್ಯೂ ಯಪ್ಪಾ; ಎಲ್ಲಾ ದಿವಸಾನಽ ಉಪರಾಟೇ ಬಂದಾವು!

“ಗಂಡಂದಿರ ಅಂಜಿಕ್ಯಂತ!… ಇದಕೇಳ್ರಿ ನಗ್ಗೇಡು….! ಗಂಡಂದಿರ ಅಂಜಿಕೆ ಇವರಿಗೆ ಎಲ್ಲೈತೊ ನನ್ನ ಮಗನಽ! ಹೆಂಡಂದಿರ ಸೀರಿ ಒಗೆಯೊ ಈ ಹೊಲಸ ಗೋಳು, ಹೆಣತಿನ್ನ ಅಂಜಿಕ್ಯಾಗಿಡತಾವಽ….! ಇವು ಎಲ್ಯಾರೆ ಬಲೂರೀ…. ಹಾಕ್ಕೊಂತ ಗೊಬ್ಬರ ಬಂಡೀನ ಹೊಡೀಬೇಕು. ಹೆಂಡರು ಇವರ ಮಾತ ಕೇಳಿದರ ಮಳೀಬೆಳಿ ಯಾಕ ಹೋಗತಿತ್ತು!”

“ಈಗಿನ ಕಾಲನಽ ಬ್ಯಾರೆ ಬಂದೈತಿ! ನೂಲವರೆಲ್ಲಾ ಸತ್ತಸತ್ತ ಹೋದರು….; ಇಲ್ಲೆ ಈ ನ್ಯಾಮದೇವರ ಕಟ್ಟೀಮ್ಯಾಗ ಆರಾರು ತಾಸು ರಾತ್ರೀ ತಂಕಾ ‘ರಂವ್‌ ರಂವ್‌’ ಅಂತ ನೂಲೂದಽ ನೂಲದು….; ಸೇರು ಹಂಜೀ ನೂಲೂದರೊಳಗ ಗಿರಪಾವು ಕಡ್ಲೀ ತಿಂತಿದ್ಲು ನಮ್ಮ ಅತ್ತಿ….! ಈಗಿನ ಹೆಣ್ಣಽ! ಹಾಲೂ ಅನ್ನಾ ಉಂಡು ಹಾಸು ಹೊಯ್ಯಽ ನನ್ನ ಮಗಳಽ ಅಂದರಽ ನಾ ಊರನ್ನ ನೋಡಿಕೊಂತಽ ನೀರ ತರತೀವಿ ಅಂತಾವು, ತಮ್ಮಾ…? ನೋಡೊಽ ಯಪ್ಪಾ ನೋಡು; ನಾ ಬೇದಽ ಬೆಯ್ಯತೇನು, ಅವಕ್ಕ ಏನಾರೆ ಬುದ್ದಿ ಐತೇ ನೋಡು ಹ್ಯಾಂಗ ಖಿಸಿ ಖಿಸಿ ಹಲ್ಲ ಕಿಸೂತಾವ! ಸುಟ್ಟಶಿವಾ ಮರತಾನ್ನ ನನ್ನ! ಏನು ಮಾಡೂದೈತಿ?…. ಅಷ್ಟಽ ಉಪ್ಪು ಮೆಣಸಿನಕಾಯಿ ಆದೀತು. ಬಡತನದ ಜಲಮ ಯಪ್ಪಾ….! ಕಾರಹುಣ್ಣವೀ ಆಗಾಣಾ ಜಂತ್ರಾ ಇಡತೇನಿ ತಮ್ಮಾ! ಇವರೀಗೇನ ಇಲ್ಲಿದ್ರೂ? ನನಗ್ಯಾಂಗ ಬಿಟ್ಟೀ-ತಪ್ಪಾ ನೋಡ್ರಿ!!!”
*****