ಸ್ವಾಮಿ, ಇದೆ ಕಡೆಗೀಟು;
ತಲೆತಲಾಂತರದಿಂದ
ನಮ್ಮ ನಿಮ್ಮಜ್ಜ ಪಿಜ್ಜಂದಿರೆಲ್ಲರು ಬೆಸೆದ
ಎಂಥ ಘನ ಬಾದರಾಯಣ ದೈತ್ಯಬಂಧವೂ
ದಾಟಬಾರದ ಕಟ್ಟಕಡೆಗಟ್ಟು ಇದರೀಚೆ
ಏನಿದ್ದರೂ ನನ್ನ ಸ್ವಂತ, ಅಪ್ಪಟ ನನ್ನ
ಬದುಕು ನನ್ನದೆ ನಾಚು. ಹಾ! ನಿಲ್ಲಿ ನುಗ್ಗದಿರಿ;
ಭಂಡತನದಲಿ ಹಾಗೆ ದಬ್ಬಿದಿರೊ, ಸಿಹಿಮೊಲ್ಲೆ
ಮಾತು ಮೊಸರನ್ನದಲಿ ಕಲ್ಲಾಗಿ ಹವೆ ತುಂಬ
ಸಿಡಿಯುವುದು ಮದ್ದು ಲಾಟೀಪೆಟ್ಬು ಕಲ್ಲೇಟು.
ಸುತ್ತ ನಡೆಸಿರಿ
ಹಂಡೆ ಕಳ್ಳು ಹೇರಿದ ನಿಮ್ಮ ದೆವ್ವಲಾರಿಯ
ಇದ್ದರದಕೆ ತೆಗೆದೇ ಬ್ರೇಕ,
ಧಮ್ಮಸ್ಸಿನಲಿ ಕುಟ್ಟಿ ಜಡಿದ ಸೆಟೆಗಲ್ಲುಗಳು
ಕಿತ್ತೆದ್ದು ಸಿಡಿದು ಮುಖಕೇ ಬೀಸಿ ಬಡಿವನಕ,

ಸರ್ಕಲ್ಲ ಸುತ್ತ ಬಿದ್ದಿದೆ ಹರಿದಮೈ-ರಸ್ತೆ;
ನಡುವೆ ಇಷ್ಟಗಲ ಹಾಯಾಗಿ ಸಿರಿಮೈಯೆತ್ತಿ
ತೂಗುತಿದೆ ಹಸಿರು. ಸ್ವಾಮೀ ನಿಮ್ಮ ಮೋಟಾರು
ಹತ್ತದಿರಲಷ್ಟೆ ಸರ್ಕಲ್ಲಿನಂಚ! ಹತ್ತಿತೋ
ಹುಲ್ಲೆ ಸತ್ತೀತು, ಇಲ್ಲವೆ ಕಲ್ಲ ತಡೆ ಬಡಿದು
ಲಾರಿ ಉರುಳೀತು, ಮದ್ಯದ ಡೊಳ್ಳು ಪಾಲಾಗಿ
ಕೆಟ್ಟ ಜನ ಹುಯ್ಲ ಎಬ್ಬಿಸಿ ಕೇಕೆ ಹಾಕುತ್ತ
ರಕ್ತದಂಥಾ ಮದ್ಯ ಮಣ್ಣಿನಲಿ ಇಂಗೀತು.
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)