ಬೆಟ್ಟ ಅಡ್ಡವಾಗಿ ಕಂದಕದ
ತಳಹಾಯ್ದು ನಿರಂತರವಾಗಿ
ಹರಿದ ಹೊಳೆ ಬಯಲ ತೆರೆ
ತರದು ಕೊಂಡ ಹರುವಿನಲಿ
ಅರಿವು ಮುತ್ತಿ ಝಳುಝಳು ಈಜು.

ಜೊತೆ ಜೊತೆಯಲಿ ಕನಸು
ವಿಸ್ತೃತ ದಂಡೀ ಯಾತ್ರೆ
ಅರ್ಥ ಅನರ್ಥಗಳ ದಾರಿ
ತುಂಬ ತೆರೆದ ಹಸಿರು
ಹಕ್ಕಿ ಪಿಕ್ಕಿ ಹಾಡಿದ ಹಾಡು
ಸಾಹಸದ ಗಂಜಿಗಂಟದ ಜಾತ್ರೆ

ಕಾಲದೊಳಗೆ ಬಸಿರು ತೊಟ್ಟಿಲು
ಹೊಸ ಲಯದ ಝರುಕಿ ಬೇರೆ
ಬಾನನಲ್ಲಿ ಹೊಳೆವ ಚಂದ್ರ ಚುಕ್ಕಿ
ಸಹಜ ಬೆರಗಿನ ಕಣ್ಣುಗಳು
ಹೊಳೆದು ಹರಿದ ಪ್ರೀತಿ ಬದುಕು.
ರಸಕವಳದ ರಸಕಾವ್ಯ ಪಾತ್ರೆ

ಸಮುದ್ರ ಅಲೆಅಲೆಗಳು ಸೇರಿ
ಒಂದಾಗುವ ಬಯಕೆ ದಾರಿ
ಯಾರೂ ತೋರಿಸುವುದಿಲ್ಲ
ಒಡಲಲಿ ಹರಿದು ಆಸೆಗಳು
ಬೀಜಗಳಾಗಿ ಮೋಡಕಟ್ಟಿ ಹರಿದ ಮಳೆ ಹೊಳೆ
*****