ಏಳು ಕುದುರಿಯ ಗಾಡಿ ಭಾಳ ಹುರುಪಿಲೆ ಏರಿ
ಗಾಲಿ ಮುರಿದುದ ಕಂಡು ಗಾಬರ್‍ಯಾದೆ
ಬೀಳಲಾರದ ಜನ್ಮ ಆಳಕೊಳ್ಳಕ್ಕೆ ಬಿದ್ದು
ಗೂಳಿಬಿದ್ದುದ ಕಂಡು ಗುಮ್ಮಗಾದೆ

ಕತ್ತಲೆಯ ದರ್‍ಯಾಗ ಕೈಕಾಲು ಮುರಿದಾಗ
ಎತ್ತಯ್ಯ ಮೇಲೆತ್ತು ಪ್ರೀತಿ ತಂದೆ
ಕುಂಟೆತ್ತು ತುಂಟೆತ್ತು ಗುಳ್ಳಾಗಗೊಡದಂತೆ
ಸದೆಬಡೆದು ಸುದ್ದಾಗಿ ತಿದ್ದು ತಂದೆ

ಈ ನಾಯಿ ಆ ನಾಯಿ ಊರನಾಯಿಯು ಕೂಡಿ
ಕೂಗ್ಯಾವು ಹಾಡ್ಯಾವು ನಾಡಿನೊಳಗೆ
ತಂಗಾಳಿ ಅತ್ತಾವು ಸುಳಿಗಾಳಿ ಸತ್ತಾವು
ಬಿರುಗಾಳಿ ಧೂಳ್ಗಾಳಿ ದೆವ್ವಗಳಿಗೆ

ಪುಸ್ತಕದ ಈಜ್ಞಾನ ಮಸ್ತಕಕೆ ಏರಿತ್ತು
ಪುಸ್ತಕದ ಹುಳುವಾಗಿ ಹೋದೆನಯ್ಯ
ಶಿವನ ಸುಂದರ ಜ್ಞಾನ ವಿಪುಲ ಅಮೃತಪಾನ
ಕುನ್ನಿಯಲಿ ನನ್ನಿಯನು ಬಿತ್ತಿತಯ್ಯ

ಎದಿಯಾಗ ಶಿವತಂದಿ ಮನದಾಗ ಶಿವತಂದಿ
ಕಣಕಣದಿ ಶಿವತಂದಿ ತುಂಬಿಬರಲಿ
ಕುಂತಾಗ ನಿಂತಾಗ ನಡೆದಾಗ ನುಡಿದಾಗ
ಕಡೆತನಕ ಶಿವತಂದಿ ತೀಡಿಬರಲಿ
*****