ಓ ದೇವಿ ಓ ತಾಯಿ ವಿಶ್ವ ಸುಂದರ ಮಾಯಿ
ಕೂಗವ್ವ ವಿಶ್ವದಲಿ ದೇವಗಾನಾ
ನಿನ್ನ ದಿವ್ಯದ ಬೆಡಗು ಬೆಳಗಿನಾತ್ಮದ ಕೊಡಗು
ಬಾರವ್ವಾ ಉಣಿಸವ್ವಾ ಕ್ಷೀರಪಾನಾ

ತಾಯಿಯಂದರು ನೀನೆ ತಂದೆಯೆಂದರು ನೀನೆ
ಯೋಗ ಮಾಯೆಯು ನಿನ್ನ ಲೀಲೆಯಪ್ಪಾ
ಭುವಿಯ ಮಕ್ಕಳ ಸೊಕ್ಕು ಕಾಮದಾಸೆಯ ಉಕ್ಕು
ಸಿಡಿಲ ಬೆಂಕಿಗೆ ಸುಟ್ಟು ಕರಗಿಸವ್ವಾ

ಏನು ನಿನ್ನಯ ನಾಟ್ಯ ಯುಗದ ನರ್ತನ ಮಾಲೆ
ಕಲ್ಪಕಲ್ಪಕೆ ಐದು ಹೆಜ್ಜೆಯವ್ವಾ
ಬೆಳಕಿನಲಿ ಎರಡೆಜ್ಜೆ ಕತ್ತಲಲಿ ಎರಡೆಜ್ಜೆ
ನನ್ನ ಎದೆಯಲಿ ಒಂದು ಹೆಜ್ಜೆಯವ್ವಾ

ಏಳು ದೇವರ ದೇವಿ ಏಳು ಚಿನ್ನದ ದೇವಿ
ಲೋಕ ಮಾಯೆಯ ಸುಟ್ಟು ಜ್ಞಾನ ನೀಡು
ಏಳು ಸುಂದರ ದೇವಿ ಏಳುಕೊಳ್ಳದ ರಾಣಿ
ಏಳು ಎನ್ನೆದೆ ಸುಟ್ಟು, ಪಾನಮಾಡು
*****