Home / ಕವನ / ಕವಿತೆ / ದೇವರಾಟ ಕಣಗಂಡೆ ಸಂಶಿಯೊಳು

ದೇವರಾಟ ಕಣಗಂಡೆ ಸಂಶಿಯೊಳು

ದೇವರಾಟ ಕಣಗಂಡೆ ಸಂಶಿಯೊಳು
ಹಾವ ಕಡದು ಸತ್ತಿತೋ ಹುಡುಗಾ
ಜೀವ ಹೋಗಿ ಜನ ಮೌನವಾಯಿತೋ
ಕಾವಿಲಿಟ್ಟಳೋ ಬೆಡಗಾ
ಕಾವಲಿಟ್ಟಳೋ ಮೃತ್ಯುದೇವತೀ
ತಾ ಒದಗಿಸಿ ಅದರೊಳು ದಿಡಗಾ
ಸಾವು ಬಂತು ಹನ್ನೆರಡು ವರುಷಕೆ
ಆವ ಭಾವ ಆರಿಯದ ಯಡಗಾ
ಭಾವ ಶುದ್ಧವಿದು ಬ್ರಹ್ಮ ಲಿಖಿತದಲಿ
ತಾಯಿ ತಂದಿ ಗರ್ಭದ ಹಡಗಾ
ಯಾವ ಮಾತೇನಂತ ಹೇಳಲಿ
ಮಾಯ ಸಖಿಯ ಕೈಯನ ಕಡಗಾ
ಅಟವ ನೋಡಿ ಆವ ಸಾಯಕಾಗಿ ಒಂದು ಸರ್ಪಾ
ಈ ಪಾಯ ವಡವಿ ಯಮನೂರ ಒಡಿಯನಕ್ಷೇಪಾ
ಮುಂಚೆ ಹೇಳತಿದ್ದ ಅವರಪ್ಪಾ
ಬಹು ಛಾಯ ರಾಜನೆಂಬುವಂಥ ಹೆಸರಿನ ಟೋಪಾ
ಚಿಕ್ಕ ಪ್ರಾಯದ ಕಮ೯ದ ಪಾಪಾ
ಆವುಕಾವುಗಳು ತಿಳಿಯದೆ ಲೋಕದಿ
ಈ ವಿಸ್ತರ ಈ ಪರಿ ಹೀಗಾ
ಆಯಾಸಿಲ್ಲದೆ ಬ್ಯಾನಿ ಜನರು ಕಂಡು
ಸೇವಿ ನೆಡದಿತು ಪೊಡವಿಯ ಮ್ಯಾಗ ||೧||

ವಸುಧಿಯೊಳು ಹೊಸಮಾತು ಕೌತುಕುಕಾ
ಮುಸಲ್ಮಾನ ಜನ ಮಹಿಮಕುಲಾ
ಕೊಸರಿ ಬಂದು ಕಾಳುರಗ ಹೆಚ್ಚಿತು
ಹಸುಮಗನೀತನ ಪುಣ್ಯ ಫಲಾ
ವಿಷವು ಏರಿ ಅಸುಹಾರಿದ ಹೆಣವನು
ಹಸನಮಾಡಿ ಹುಗಿದಂಥ ಸ್ಥಳಾ
ಉಸುಕುಬೈಲಿ ಎರೆಮಣ್ಣಿನ ಗೋರಿಗೆ
ಶಿವಬ್ರಹ್ಮ ರಕ್ಕಸ ಜಾಲಾ
ಅಸಲ ತುರುಕರು ಜಾತಿ ಕಮ೯ದಲಿ
ಓದಕಿಮಾಡ್ಯಾರೋ ಬಿಸಮಿಲ್ಲಾ
ಹೆಸರಾದ ಸಂಶಿ ದೊಡ್ಡಗ್ರಾಮಯೆಂಬುವದು ಗೊತ್ತಾ
ದೆಸೆಗೆಟ್ಟು ಊರೊಳ್ಯಾವತ್ತಾ
ಕುಶಲದಿ ಗೌಡ ಕುಲಕರ್ಣಿ ರೈತ ಜನ ಜತ್ತಾ
ಹಸನಾದ ಸಾವಕಾರ ಸಹಿತ
ದಶದಿಕ್ಕಿಗ್ಹತ್ತಿತೋ ಸುದ್ದಿ ನೂತನೆಂಬೂತಾ
ಶಿವ ಬಲ್ಲಾ ಅವರ ಮಸಲತ್ತಾ
ಹುಸಿಯನಾಡಲಹುದಾಗದು ಲೋಕದಿ
ಬೆಸಿಗಿ ಬ್ಯಾರೆ ಡಂಬಕ ಭೋಗಾ
ತುಸುದಿನದೊಳಗಿದು ವಡದು ಹೋಗುತದ
ಕಸಮೂಲದ ಕರ್ಮದ ಪಡಗಾ ||೨||

ಹೂಡು ಎತ್ತು ಬಂಡಿ ಈ ಕ್ಷಣಕ ಕೊಟ್ಟರೆ
ಜೋಡ ಕಂದೂರಿ ಮಾಡುವೆನೆಂದು
ಕಿವುಡ ಕುರುಡ ಕುಂಟ ಮುಂಡ ಮುಕರ‍್ಯಾ
ಬೋಡಮೂಕ ಬಾಯ್ಬೇಕೆಂದು
ಜಾಡ ಬಣಜಿಗರು ವ್ಯವಹಾರಾಗಲೆಂದು
ಕೋಡಗನ್ಹಾಂಗ ಕುಣಿಯುತ ಬಂದು
ಬಾಡ ಮಾರುವಾ ಬಾಗುವಾನರು
ನೀಡುತಿಹರು ಸಕ್ಕರಿ ಒಯ್ದು
ಹಾಡುವ ಚೌಡಕಿಯ ಜೋಗಿ ಜಂಗಮ ಫಕ್ಕೀರಾ
ಆಡುವ ಡೊಂಬ ಜಾತಿಗಾರಾ
ಪಾಡಾಗಿ ಪದಗಳ್ಹೇಳುವ ದಾಸ ದೂರ ದೂರಾ
ಕೇಡಿಗ ಕಿಳ್ಳಿಕ್ಯಾತರ ಮೋಡಿಕಾರಾ
ಪುಂಗಿ ಬಾರಿಸುವಂತ ಕೊರವರಾ
ಗಾಡೀಗ ಗೊಲ್ಲ ಹಾವಗಾರಾ
ಆಡಲೇನು ಅತಿ ಚೋದ್ಯವಾಯಿತು
ರೂಢಿ ಜನಕೆ ಈಗ ಈಗ
ಕಾಡ ಅಡವಿಯೊಳು ಸತ್ತದವಕ ಜನ
ಮಾಡಿದಲ್ಲೋ ಸಿಂಗರ ಹೀಂಗಾ ||೩||
ಇಷ್ಟು ಇರಲಿ ಈ ಮಾತು ಇಲ್ಲಿಗೆ
ಕೆಟ್ಟ ನಡತಿ ಹೆಂಗಸರ ಚಾಳಿ
ಹೊಟ್ಟಿನೂವು ಹೊಲಿಕಟ್ಟು ಮುಂಚಿಗೆ
ಮುಟ್ಟಾಗದ ಮಳ್ಳೇರು ಕೇಳಿ
ಸಿಟ್ಟಿಲೆ ಗಂಡಸರು ಬಿಟ್ಟರೆ ಉಡಲಿಕ್ಕೆ
ಬಟ್ಟಿಗಾಣದೆ ತೊಳಲಾಡುವ ಸೂಳಿ
ಮಿಟ್ಟಿಯಂತ ಮಿಂಡ ಮನಿಗೆ ಬಾ ಆಂತಾಳ
ಕಟ್ಟಳಿ ಮನದನ್ನ ಹಳಹಳಿ
ಕಟ್ಟಗಡಿಕೆರ ಮಾತಿಗೆ ಮರುಳಾಗಿ ಗೆಳತೇರೆಲ್ಲರೂ ಜೋಡಿ
ಹೊರಟಾರೋ ಬರಬೇಕಂತ ನೋಡಿ
ಪಟಿಪಿತಾಂಬರುಟ್ಟಾರೋ ಗೆಳತೆರೆಲ್ಲರೂ ಜೋಡಿ
ರೊಟ್ಟಿ ಬುತ್ತಿ ಕಟ್ಟ್ಯಾರೋ ಲಗುಮಾಡಿ
ತಟ್ಟಾನೆ ಕೂಡ್ರುವ ಸಿಂಗರದ ಸಸ್ಸರಟ ಗಾಡಿ
ಗಟ್ಟ್ಯಾಗಿ ಹತ್ತುವ ಚಕ್ಕಡಿ
ಸೃಷ್ಟಿಯೊಳಗಿನ ಸ್ತ್ರೀಜನ ಬರತದ
ಅಷ್ಟ ದಿಕ್ಕಿಲಿ ಬ್ಯಾಗ ಬ್ಯಾಗ
ಹುಟ್ಟಬಂಜಿಯರು ಮಕ್ಕಳ ಬೇಡತಾರ ತಮ್ಮ ಮನಸಿನ್ಯಾಗಾ ||೪||

ಅಣ್ಣ ಜ್ಞಾನಿಗಳು ಹೇಳುವೆ ಆ ಹೆಣ
ಮಣ್ಣಿನೊಳಗ್ಹುಗುದರು ಮೂರುದಿನಕ
ಕಣ್ಣಿಟ್ಟಳು ಮಹಾತ್ಮದ ಲಕ್ಷ್ಮಿ
ಸಣ್ಣಹುಡುಗನ ಪುಣ್ಯದ ಘನಕ
ಬಣ್ಣಿಸಿ ಪೇಳುವೆ ಬಹುತರ ಲೋಕದಿ
ಹೆಣಿದ ಸುಳ್ಳಿನ ಸಂಧಾನಕ
ನುಣ್ಣಗೆ ಹದಿನೆಂಟು ಜಾತಿ ಜನಂಗಳು
ಇನ್ನೊದಗುವ ಕರ್ಮದ ರಿಣಕ
ಉಣ್ಣಿ ಹತ್ತಿದ ಎತ್ತು
ಗಿಣ್ಣಿ ರೋಗಾಪತ್ತು ಧನ್ಯನಾಗಿ ನಡಕೊಂಬುದಕ
ಹುಣ್ಣು ಹುಗಳು ಜ್ವರ ವಾಯು ಶೂಲಿ ನರ
ತನ್ನ ಬ್ಯಾನಿ ನೋವಿನ ಗುಣಕ
ಚನ್ನಾಗಿ ನಿನ್ನ ತನು ಮನದಿ ತಿಳಿದು ನೋಡಣ್ಣಾ
ಅನ್ಯಾಯ ಕಲಿಯುಗದವರ್ನಾ
ಸೊನ್ನೀಲಿ ಸುಮ್ಮನಿರು ಸುಗುಣನಾದರೆ ಇನ್ನಾ
ಮುನ್ನಾ ಅರವು ಹಿಡಿದು ನಡಿ ಜಾಣಾ
ಕರ್ನಾಟಕ ದೇಶ ನಡುಮಧ್ಯ ಶಿಶುವಿನಾಳ ಸ್ಥಾನಾ
ನಿರ್ಣೈಸಿ ನಿಜದಿ ಕವಿತವನಾ
ಕುನ್ನಿ ಮನುಜರು ಮಾಡುವ ಕಪಟಕೆ
ಕುಹಕತನದಲಿ ಈಗಾ
ರನ್ನಮಾತು ಇದು ಸಹಜಸಾರ ತಿಳಿ
ನಿನ್ನ್ಮನದೊಳು ಬೇಗಾ
*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...