ಕುಂತು ಸಾಗುವ ವಾಹನವಿರಲೇನು ಕಷ್ಟವೋ ? ಯಾತ್ರೆಗೆ

ಮಂಕುತಿಮ್ಮನಂತೆನಗೂ ಕವನ ಬರೆವಿಷ್ಟ ಅಂದಿಗಿಂತಿಂದಿನ ಜೀವನವೆಷ್ಟೋ ಭ್ರಷ್ಟ ಗೊಂಡಿರಲೆನಗೆ ವಿಷಯದಾಯ್ಕೆಯೊಳಿಲ್ಲವರ ಕಷ್ಟ ಎಂತು ಬರೆದರು ಕವನವೆಂಬಾಧುನಿಕ ಬಗೆ ಬಟ್ಟೆ ಯಂತೂ ಸುಲಭಗೊಳಿಸಿಹುದೆನಗೆ ಕವಿ ಪಟ್ಟ - ವಿಜ್ಞಾನೇಶ್ವರಾ *****

ನೀರ ಭದ್ರತೆಗೆ ಇರಬೇಕಲ್ಲ ಕೊಡಪಾನ ?

ಸರೋವರದಂಥವರು ಸಾಧುಗಳಾದವರು ತ್ವರೆಯೊಳವರ ಬಳಿ ಸಾರಿದೊಡಲ್ಲಿ ಬೊಗಸೆ ನೀರನು ಹೀರಿ ತಣಿಯಲು ಬಹುದಾದೊಡಂ ದೂರ ದಾರಿಯ ದಣಿದ ಮಂದಿಗೆ ವಾರಿ ಸೇವೆಗೆ ಇರಲಿ ಬಿಂದಿಗೆಯೆಂದು ಬರೆದಿಹೆನಿಲ್ಲಿ ಕವನಗಳ - ವಿಜ್ಞಾನೇಶ್ವರಾ *****

ಈ ಜಗದೊಳೆಲ್ಲರೊಪ್ಪುವ ಮಾತನಾಡಿದವರುಂಟೇ ?

ಬೀಜ ವೃಕ್ಷದೊಳಾವುದಿಳೆಗೆ ಮೊದಲೆಂದು ವ್ಯಾಜ್ಯವಿಲ್ಲದಿದುವೆ ಸತ್ಯವೆನುತೊಂದು ರಾಜಿ ಮಾತನೊರೆವುದಾರಿಂಗೆಂದಾದೊಡಂ ಈ ಜಗದೊಳತಿ ಕಠಿಣ ಕಜ್ಜವಿರುತಿರಲೆನ್ನ ನ್ನ ಜ್ಞಾನದ ಮಿತಿಯಿದನು ಸೇರದಿರೆ ಮನ್ನಿಸಿರಿ - ವಿಜ್ಞಾನೇಶ್ವರಾ *****

ಎಲ್ಲರಂತಾನುಂ ಪ್ರಜಾರಾಜನಿರಲೇನು ತಪ್ಪು ? ಗೊಣಗಿದರೆ ?

ಬಲು ಸುಲಭ ಬಲು ಸುಲಭ ಲೋಕದ ತಪ್ಪನೆಣಿಸಿ ಪೇಳುವುದಾದೊಡೆಂತದನು ತಿದ್ದುವುದು ? ಎಲ್ಲ ದೋಷಕು ಮೂಲವಲ್ಲಲ್ಲೇ ವ್ಯಕ್ತಿ ದೋಷ ದೊಳಿರುತಿರಲು ಪ್ರಜಾ ಪ್ರಭುವನಾರು ತಿದ್ದುವುದು ? ಬಲು ಪ್ರಭಲವಿಂದೆಮ್ಮ ಕಾನೂನು ಪ್ರಭುವ ರಕ್ಷಿಸಲು -...

ಸಾಜ ಪ್ರಕೃತಿ ಗುಣ ಬದಲಿಸುವುದೆಂತು ?

ಈ ಜಗದ ಸ್ವರವಾಗಿ ಖಗ ಮೃಗಗಳಲ್ಲಲ್ಲಿ ಗೌಜಿಯೊಳು ಉಲಿವಂತೆ ಎನ್ನುಲಿವು ರಜ ನಲಿವು, ಜೊತೆಗಳುವು ಸಾಜ ಗುಣವಿದೆನ್ನದಿರುವುದಿಂತು ಈ ಜಗದ ಕಾವ್ಯದೊಳಿದೊಂದಕ್ಷರವು - ವಿಜ್ಞಾನೇಶ್ವರಾ ***** ರಜ = ಸ್ವಲ್ಪ ಸಾಜ = ಸಹಜ

ಮತ್ತಿನ್ನಾರಿಗೆಷ್ಟು ಕಷ್ಟವೋ ?

ಮಾತನಾಡದ ಮೌನವದು ಕಷ್ಟ ಮಹತಿಯ ಮಾತದಿನ್ನಷ್ಟು ಕಷ್ಟ ಮನದೊಳ್ ಮೌನವತಿ ಕಷ್ಟ ಮತ್ತಾನು ಸುಮ್ಮನಿರಲರಿಯದ ಕಷ್ಟ ಮುದ್ರಿಸಿದ ಕವನವಿದೀಗ ನಿಮ್ಮಯ ಕಷ್ಟ - ವಿಜ್ಞಾನೇಶ್ವರಾ *****

ಮನೆ ಸ್ವಂತ ಪರಿಶ್ರಮದೊಳಾದರೆ ಅಷ್ಟೇ ಸಾಲದೇ ?

ಮನೆಯ ಕಟ್ಟುವೊಡಲ್ಲಿ ಬಡವ ತಾ ಧನದ ಮಿತಿಯೊಳದರ ಸೌಂದರ್‍ಯ ವನವಗಣಿಪ ತೆರದೊಳೆನ್ನ ಕವನವು ಘನ ವಿದ್ವಾಂಸನಾನಲ್ಲ ಛಂದ ಬಂಧ ದನುಭವವಿಲ್ಲ ಹೂವೆಲ್ಲದಕು ಘಮವಿಲ್ಲ - ವಿಜ್ಞಾನೇಶ್ವರಾ *****

ಕೆಟ್ಟದೊಳ್ಳೆಯದೆಂದಿದೆಯಾ ? ಕಳ್ಳತನದೊಳಗೆ ?

ಓಟುಗಳ್ಳರು ಕೆಲರವರ ಮಾತುಗಳ್ಳರು ನೋಟುಗಳ್ಳರು ಕೆಲರವರ ಕೆಲಸಗಳ್ಳರು ತಟ್ಟಿ ನೋಡಿದೊಡೆಲ್ಲರಲು ಅಡಗಿಹರು ಕಳ್ಳರು ಇಷ್ಟು ಸಾಕೆನುವದೃಷ್ಟ ಬಲುಕಷ್ಟವೆನ್ನ ತೋಟದ ಪಟ್ಟಿಯನೇರಿಸಲು ಗಿಡ ಕದಿವೆ ನಾ ಕಾಡಿಂದ - ವಿಜ್ಞಾನೇಶ್ವರಾ *****

ಸಕ್ಕರೆ ರೋಗವತಿ ವೇಗದವಘಡವಲ್ಲವೇ ?

ಲೋಕದ ಡೊಂಕ ತಿದ್ದುವುದೆನ್ನ ಕಾಳಜಿಯಲ್ಲ ಲೋಕ ಶೋಕವನಿಳಿಸೆ ರಸ್ತೆಯೊಳು ಡೊಂಕಿರ ಬೇಕದುವೆ ಅವಘಡದ ವೇಗವಿಳಿಸುವುದು ಶಿಕ್ಷಣವೆಂದಾ ಡೊಂಕು ಕಬ್ಬನಗಿದು ತಿನ್ನದೆ ಸಕ್ಕರೆಗೊಳಿಸುವಾತುರಕೆನ್ನ ಕೊರಗಿಹುದು - ವಿಜ್ಞಾನೇಶ್ವರಾ *****

ಅದು ಆದರ್ಶವಾದೀತೇ ? ಹೇಳಿದಂತೆ ಕೇಡ ಮಾಡಿದರೆ ?

ಆದರ್ಶವೆಂದೈಶ್ವರ್‍ಯ, ಆರೋಗ್ಯ, ಆನಂದದಾ ಹದದ ಬಗೆಗೇನಷ್ಟೆ ಪೇಳಿದರು ಕೇಳಿದರು ಸ್ವಂತ ಕದು ಉಳಿಯುವುದು ಕಡಿಮೆಯೆಂದದನು ಪೇ ಳದುಳಿದೊಡೆಮಗೆ ನಷ್ಟ ಬಹಳುಂಟು ಸಾಧಿಸಿದೊಂದೆರಡು ದೃಷ್ಟಾಂತದೊಳೆಲ್ಲರಾ ಬದುಕುಂಟು - ವಿಜ್ಞಾನೇಶ್ವರಾ *****