ಪತಿಯು ಮಡಿದ ಸುದ್ದಿಯು
ತಾ ರತಿಯು ಕೇಳಿದಳೋ
ಅಯ್ಯೋ ತಾ ರತಿಯು ಕೇಳಿದಳೋ
ಕ್ಷಿತಿಯೋಳು ಹೊರಳ್ವಳೋ ||ಪ||

ಅಯ್ಯೋ ಎನ್ನ ಪ್ರಾಣ ಪತಿಯೆ
ಪ್ರಾಣ ನೀಗಿದೆಯಾ
ಅಯ್ಯೋ ಪ್ರಾಣ ನೀಗಿದೆಯಾ
ಎನ್ನ ಕೈಯನಗಲಿದೆಯಾ ||೧||

ನಾ ಪ್ರೇಮದಿಂದ ಕೂಡಿದಂತೆ
ಪ್ರೀತಿ ಹೋಯಿತೆ
ಅಯ್ಯೋ ಪ್ರೀತಿ ಹೋಯಿತೆ
ರತಿ ಸುಖವು ತೀರಿತೆ ||೨||

ನಿನ್ನ ಪೋಲ್ವ ಪುರುಷರ
ಜಗದೊಳು ಇನ್ನ ಕಾಣೆನು
ಅಯ್ಯೋ ಇನ್ನೆಂತು ಕಾಂಬೆನೋ
ಎಂದಿಗೆ ಮರೆವೆನೋ ||೩||

ಲೇಸೆಂದು ತಿಳಿದು ಸಾರಿದೆತ್ತ
ಕಂಬನಿ ಮುಖವ ತೋರು
ಆ ನಿನ್ನ ಚೆಲುವ ರೂಪವಽ
ಬಾರೋ ರೂಪವ ||೪||

ಚಿತ್ರದಲ್ಲಿ ಬಾರದಿನ್ನೂ
ಮುತ್ತೈದೆ ತನವ
ಅಯ್ಯೋ ಎನ್ನ ಮುತ್ತೈದೆ ತನವ
ಉಳಿದೀತೆ ಇನ್ನೇನುವಽ ||೫||

ಈ ನತ್ತು ಮೂಗಿನೊಳಗೆ
ಮುರಿದು ಬಿತ್ತು ಭೂಮಿಗೆ
ಅಯ್ಯೋ ಬಿತ್ತಿಲ್ಲೋ ಭೂಮಿಗೆ
ಸುಳ್ಳೆಲ್ಲೋ ಕನಸಿಗೆ ||೬||

ಕಟ್ಟಿದ ಕರಿಮಣಿಯು
ತಾಳೀಯಿಟ್ಟ ವಸ್ತುವು
ಅಯ್ಯೋ ಆಯಿತು ವ್ಯರ್ಥವು
ಇನ್ನಾಯಿತು ವೃರ್ಥವೋ ||೭||

ಛೀ! ಸುಟ್ಟುಹೋಗಲಿನ್ನು
ಜನ್ಮ ಹುಟ್ಟಬಾರದು
ಇನ್ನೆಂದು ಹುಟ್ಟು ಬಾರದು ಅಯ್ಯೋ
ಎಂದಿಽಗೆ ಹೆಣ್ಣೆಂದು ||೮||

ಪ್ರಾಣ ಸಖನೆ ಹೋದೆ ಎತ್ತ
ಬಾರೋ ಎನ್ನು ತಾ
ಬಾ ಬಾರೋ
ಓಡೋಡಿ ಹುಡುಕುತಾ ||೯||

ರತಿ ರಾಣಿ ಹುಡಿಯೊಳ್ಹೊರಳಿ
ಹರಣ ಕಳೆವೆನೆನ್ನುತ
ತನ್ನ ಹರಣ ಕಳೆವೆನೆನ್ನುತ
ಬಾಯ್ಬಾಯ ಬಡಿಯುತ ||೧೦||
*****