ಎಂಥ ವಂಚಕನೆ ಕೃಷ್ಣ
ಹೊಂಚಿ ಮರೆಗೆ ನಿಲುವ!
ಪಾರಾದೆವು ಎನುತಿರುವಾಗ
ಹಾರಿ ಹೊರಗೆ ಬರುವ
ಕಾಡುವ ತುಂಟ, ದಾರಿಯ ತಡೆದು
ಎಂಬ ಅಳುಕು ಹೊರಗೆ;
ಕಾಡದೆ ಸುಮ್ಮನೆ ಬಿಡದಿರಲಿ
ಎಂಬ ಆಸೆ ಒಳಗೆ!
ಪೀಡಿಸಲಿ ಹರಿ ಹಾಲಿಗೆ ಬೆಣ್ಣೆಗೆ
ಎನ್ನುವ ಬಯಕೆ ದಿನವೂ
ಕೂಡುವ ದಾರಿ ಹತ್ತಿರ ಬರಲು
ಕುಣಿವುದು ಮೈ ಕಣಕಣವೂ
ಬಾರೋ ಕೃಷ್ಣಾ! ಹಾಲು ಬೆಣ್ಣೆಯ
ತಂದೆವು ನಿನಗೆ ಸೋತು
ಕಾಡೋ ನಮ್ಮನು, ಬೇಡ ಎನುವೆವು
ಅದೆಲ್ಲ ತುಟಿತುದಿ ಮಾತು!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.