ಮಂಥನ – ೮

swirling-light-1209350_960_720Unsplashಅನು ಎದ್ದ ಸಮಯವೇ ಸರಿ ಇರ್ಲಿಲ್ಲ ಅನ್ನಿಸುತ್ತೆ. ಆಫೀಸಿಗೆ ಲೇಟಾಗಿಬಿಟ್ಟತ್ತು. ಅವಸರವಾಗಿ ಗಾಡಿ ಸ್ಟಾರ್ಟ್ ಮಾಡಿ ನಾಲ್ಕು ಹೆಜ್ಜೆ ಮುಂದಿಟ್ಟಿರಲಿಲ್ಲ. ‘ಟಪ್” ಅಂತ ಟೈರ್ ಪಂಕ್ಚರ್. ‘ಥೂ’ ಎಂದು ಕೈನಿಯನ್ನು ಒದ್ದು ಹಿಂದಕ್ಕೆ ತಂದು ನಿಲ್ಲಿಸಿ ಹೊರಗೋಡಿದಳು. ಸುತ್ತಲೂ ಒಂದಾದರೂ ಆಟೋ ಕಾಣಿಸಲಿಲ್ಲ. ಪೀಕ್ ಅವರ್ ಬೇರೆ. ಆಟೋ ಎಲ್ಲಿರುತ್ತೆ? ಟೈಂ ನೋಡಿಕೊಂಡಳು. ಕಾಲುಗಂಟೆಯೊಳಗೆ ಆಫೀಸಿನಲ್ಲಿರಬೇಕು. ಏನು ಮಾಡುವುದು. ಮನಸ್ಸಿನಲ್ಲಿ ಬೈಯ್ದುಕೊಳ್ಳುತ್ತಲೇ ಬಸ್ ಸ್ಬಾಪ್ ತಲುಪಿದಳು. ಐದು ನಿಮಿಷ ಕಳೆದರೂ ಬಸ್ಸಿಲ್ಲ. ಹಾಗೆಲ್ಲ ತಮ್ಮ ಸಮಯಕ್ಕೆ ಈ ಬಸ್ಸುಗಳು ಬರುತ್ತವೆಯೇ? ಇವತ್ತು ರಜೆ ಹಾಕಿಬಿಡ್ತೀನಿ ಎಂದುಕೊಂಡು ಎಸ್.ಟಿ.ಡಿ. ಬೂತಿನತ್ತ ಧಾವಿಸಿದಳು. ಯಾವ ಕಾರಣಕ್ಕೂ ಲೇಟಾಗುವುದನ್ನು ಬಾಸ್ ಸಹಿಸರು. ಅದರಲ್ಲೂ ತಾನು ಪಂಕ್ಚುಯಲ್. ತನ್ನ ಬಗ್ಗೆ ಅಪಾರವಾದ ನಂಬಿಕೆ ಅವರಿಗೆ. ಆ ನಂಬಿಕೇನಾ ತಾನು ಕಳ್ಕೋಬಾರದು. ಒಂದು ದಿನ ರಜೆ ಹೋದ್ರೂ ಪರ್ವಾಗಿಲ್ಲ ಅಂದುಕೊಂಡು ಈ ದಿನ ಬರಲಾರೆ ಎಂದು ತಿಳಿಸಿದಳು.

ಪೋನ್ ಮಾಡಿ ಇತ್ತ ಬರುತ್ತಿದ್ದರೆ, ಕಾರು ನಿಲ್ಲಿಸಿ ರಾಕೇಶ ಬರ್ತಾ ಇದ್ದಾನೆ. ಪರಿಚಯದ ನಗೆ ಬೀರಿದಳು.

“ಹಾಯ್! ಏನಿಲ್ಲಿ ನೀವು?” ಪ್ರಶ್ನಿಸಿದ.

“ಕೈನಿದು ಟೈರ್ ಪಂಕ್ಚರ್ ಆಯ್ತಲ್ಲ. ಬಸ್ಸಾಗಲಿ, ಆಟೊ ಅಗಲಿ ಸಿಗಲಿಲ್ಲ. ಲೇಟಾಗಿ ಹೋದ್ರೆ ನಮ್ಮ ಬಾಸ್ ಸಹಿಸಲ್ಲ. ಅದಕ್ಕೆ ಇವತ್ತು ರಜಾ ಅಂತಾ ಪೋನ್ ಮಾಡಿದೆ. ನೀವೇನು ಇಲ್ಲಿ.”

“ನಂದೂ ಅದೇ ಕಥೆ, ಅಂದ್ರೆ ಟೈರ್ ಪಂಕ್ಚರ್ ಅಲ್ಲ. ಇವತ್ತು ಕ್ಲಿನಿಕ್‌ಗೆ ಹೋಗೋದಿಕ್ಕೆ ಅಗ್ತ ಇಲ್ಲ. ನಿಮ್ಹಾನ್ಸ್‌ಗೆ ಹೋಗಬೇಕಿತ್ತು. ಅದಕ್ಕೆ ಕ್ಲಿನಿಕ್‌ಗೆ ಬರಲ್ಲ ಅಂತ ಫೋನ್ ಮಾಡಬೇಕು.”

“ನಿಮ್ಹಾನ್ಸ್‌ಗಾ ಯಾಕೆ” ಆಶ್ಚರ್ಯ ಅವಳಿಗೆ.

“ನಿಮ್ಹಾನ್ಸ್‌ಗ್ಯಾಕೆ ಹೋಗ್ತಾರೆ ಹೇಳಿ. ಒಂದೋ ತಲೆ ಕೆಟ್ಟಿರಬೇಕು. ಎರಡೋ ಕೆಟ್ಟಿರೊ ತಲೆನಾ ರಿಪೇರಿ ಮಾಡೋಕೆ. ಯಾವುದಿರಬಹುದು ಹೇಳಿ” ಹಾಸ್ಯ ಮಾಡಿದ.

ಆತನ ಹಾಸ್ಯ ಪ್ರಜ್ಞೆ ಮೆಚ್ಚುತ್ತ ನಕ್ಕಳು. ನಗುತ್ತಲೇ, “ನಿಮಗಂತೂ ತಲೆ ಕೆಟ್ಟಿಲ್ಲ. ಕೆಟ್ಟಿದ್ರೆ ಹೀಗಿರ್ತಾ ಇರ್ಲಿಲ್ಲ. ಅಂದ್ರೆ ರಿಪೇರಿ ಮಾಡೋಕೆ ಅಂತಾ ಆಯ್ತು. ಅಂದ್ರೆ ನೀವು ಮನಸ್ಸಿನ ಡಾಕ್ಟರ್, ಶರೀರದ ಡಾಕ್ಟ್ರರಲ್ಲ.”

“ಯಾಕೆ ಗೊತ್ತಿರಲಿಲ್ಲವಾ ನಾನು ಹುಚ್ಚಾಸ್ಪತ್ರೆಯಲ್ಲಿ ಇದ್ದೀನಿ ಅಂತಾ” ಗಹಗಹಿಸಿ ನಕ್ಕ.

“ನೀವು ತುಂಬಾ ಚೆನ್ನಾಗಿ ಮಾತಾಡ್ತೀರಾ” ಮನಬಿಚ್ಚಿ ಹೇಳಿದಳು.

“ಥ್ಯಾಂಕ್ಸ್ ದ ಕಾಂಪ್ಲಿಮೆಂಟಟ್ಸ್‌, ಒಂದು ನಿಮಿಷ ಬಂದು ಬಿಡ್ತೀನಿ” ಅಂತಾ ಹೇಳಿ ಬೂತ್ ಹೊಕ್ಕು ಬಾಗಿಲು ಹಾಕಿಕೊಂಡ.

ಅವನು ಹೊರಬರುವ ತನಕ ಅವನ ಕಾರಿಗೊರಗಿ ಅತ್ತಲೇ ದೃಷ್ಟಿ ನೆಟ್ಟಳು.

ಸರಸರ ಬಂದವನೇ “ಕಾಯಿಸಿ ಬಿಟ್ಟೆ. ಎಲ್ಲಿ ಹೋಗಬೇಕು ನೀವು. ಡ್ರಾಪ್ ಮಾಡ್ತಿನಿ. ಆಫೀಸಿಗೆ ಬಿಡ್ಲಾ, ಮನೆಗೆ ಬಿಡ್ಲಾ.”

ಕೊಂಚ ಯೋಚಿಸಿದಳು. ರಜಾ ಅಂತ ಹೇಳಿ ಬಿಟ್ಟಿದ್ದೇನೆ. ಮತ್ತೆ ಹೋಗೋದು ಸರಿ ಇರಲ್ಲಾ. ಮತ್ತೆ ಮನೆಗೆ ಹೋದರೆ ಅಪ್ಪಾ ಮನೆಯಲ್ಲಿಯೇ ಇದ್ದಾರೆ. ಮನೆಯಲ್ಲಿಯೂ ಬೇಸರ. ಏನು ಮಾಡುವುದು.

“ಏನು ಡಿಸೈಡ್ ಮಾಡಿದ್ರಿ” ಏನೂ ಇಲ್ಲ ಎನ್ನುವಂತೆ ತಲೆಯಾಡಿಸಿದಳು.

“ಒಂದು ಕೆಲಸ ಮಾಡ್ತಿರಾ. ನನ್ನ ಜೊತೆ ಬನ್ನಿ. ನಿಮ್ಹಾನ್ಸ್ ನೋಡಿದ ಹಾಗೇ ಆಗುತ್ತೆ. ಅಲ್ಲಿನ ವಾತಾವರಣ ಹೇಗಿರುತ್ತೆ ಅನ್ನೋ ಪರಿಚಯವಾಗುತ್ತೆ. ಬನ್ನಿ ಕೂತ್ಕೊಳ್ಳಿ” ಏನೂ ಆಲೋಚಿಸಲು ಬಿಡದೆ ಬಾಯಿ ಕಟ್ಟಿ ಹಾಕಿಬಿಟ್ಟ. ಆಗಲ್ಲ ಅನ್ನಲಾಗಲೇ ಇಲ್ಲ ಅವಳಿಗೆ.

ಮುಂಬಾಗಿಲು ತರೆದು “ದಯಮಾಡಿಸಿ” ಅಂದ. ನಸು ನಕ್ಕು ಕಾರೊಳಗೆ ಕುಳಿತಳು. ನಗುವನ್ನು ಮುಖದ ತುಂಬ ತುಂಬಿಕೊಂಡ ರಾಕೇಶ ಚಾಲಕನ ಸೀಟಿನಲ್ಲಿ ಆಸೀನನಾಗಿ ಕಾರು ಚಲಾಯಿಸಿದ. ಅನು ಪಕ್ಕದಲ್ಲಿ ಕುಳಿತಿರುವುದು ಏನೋ ವಿಚಿತ್ರ ಸಂವೇದನೆ ತಂದಿಟ್ಟಿತ್ತು. ಹೊಸ ಉಲ್ಲಾಸ ಮೈ ಮನಸ್ಸಿನಲ್ಲಿ ತುಂಬಿಕೊಂಡಿತ್ತು. ಅವಳೆಡೆ ಓರೆನೋಟ ಬೀರಿದ ಅನು ಹೊರಗಡೆ ದೃಷ್ಟಿ ನೆಟ್ಟಿದ್ದಳು. ವಿಚಿತ್ರದ ಹುಡುಗಿ ಎಂದುಕೊಂಡ. ಕಾರು ಆಸ್ಪತ್ರೆಯ ಆವರಣದಲ್ಲಿ ನಿಂತಿತು.

ಆಸ್ಪತ್ರೆಯೊಳಗೆ ನೇರವಾಗಿ ಕರೆದೊಯ್ದ. ಕುತೂಹಲದಿಂದ ಸುತ್ತಲೂ ನೋಡುತ್ತ ರಾಕೇಶನ ಜೊತೆ ಹೆಜ್ಜೆ ಹಾಕಿದಳು. ಎದುರಿಗೆ ಸಿಕ್ಕ ನರ್ಸ್‌, ಡಾಕ್ಟರ್‌ಗಳೆಲ್ಲ ವಿಶ್ ಮಾಡುತ್ತಾ ಸಾಗುತ್ತಿದ್ದರೆ ಅವರೆಲ್ಲರಿಗೂ ಪ್ರತಿ ವಿಶ್ ಮಾಡಿ, ಮತ್ತೆ ಕೆಲವರಿಗೆ ತಾನೇ ವಿಶ್ ಮಾಡುತ್ತ ತನ್ನ ರೂಮಿನತ್ತ ಬಂದ.

“ಬನ್ನಿ ಅನು, ಇದೇ ನನ್ನ ಸಾಮ್ರಾಜ್ಯ. ಈ ಸಾಮ್ರಾಜ್ಯದ ಅಧಿಪತಿ ಒಂದಿಬ್ಬರು ಪೇಷೇಂಟ್ ಇದ್ದಾರೆ. ಅವರನ್ನು ವಿಚಾರಿಸಿ ಬಿಡ್ತಿನಿ. ಅಲ್ಲಿವರೆಗೂ ನೀವೇನು ಮಾಡ್ತಿರಾ. ಹಾ ಹೀಗೆ ಮಾಡಿ, ನೀವು ಆ ಕಡೆ ಕೂತ್ಕೊಂಡಿರಿ. ಮನಸ್ಸಿನ ಖಾಯಿಲೆ ಇದ್ದವರು ಹೇಗಿರುತ್ತಾರೆ ಅಂತ ತಿಳ್ಕೊಬಹುದು. ಆದರೆ ನೀವು ಇಲ್ಲಿದ್ದೀರಿ ಅಂತಾ ಪೇಷಂಟಿಗೆ ತಿಳಿಯೋದು ಬೇಡ. ಸೈಲಂಟಾಗಿ ಕೂತ್ಕೊಂಡಿರಿ” ಎಂದು ಹೇಳಿ ಹೊರಗಿದ್ದಾತನಿಗೆ ಪೇಷೆಂಟ್‌ನ್ನು ಕಳುಹಿಸಲು ತಿಳಿಸಿದ.

ಅನು ಕೂತ ಸ್ಥಳದಿಂದ ರಾಕೇಶ್ ಹಾಗೂ ಪೇಷೆಂಟ್ ಕಾಣಿಸುತ್ತಿದ್ದರು. ಆದರೆ ಅನು ಅವರಿಗೆ ಕಾಣುತ್ತಿರಲಿಲ್ಲ. ಒಳ್ಳೆ ಪ್ಲಾನ್ ಎಂದುಕೊಂಡು ರೂಮಿನತ್ತ ದೃಷ್ಟಿ ಹರಿಸಿದಳು.

ಡಾಕ್ಟರ್ ರೂಮಿನಂತೆ ಕಾಣಿಸಲೇ ಇಲ್ಲ. ಸುತ್ತಾ ಐದಾರು ಬೀರುಗಳು, ಗಾಜಿನ ಬೀರುಗಳು, ಬೀರುಗಳ ತುಂಬಾ ಎಂತೆಂತಹುದೋ ಸಾಮಾನುಗಳು. ಒಳ್ಳೆ ಮ್ಯೂಯಸಿಯಂನಲ್ಲಿದ್ದಂತೆ. ಎಲ್ಲೋ ಓದಿದ್ದು ನೆನಪಾಯಿತು. ಮಾನಸಿಕ ರೋಗಿಗಳಿಗೆ ಚಿತ್ರವಿಚಿತ್ರವಾದ ವಸ್ತುಗಳನ್ನು ಕೊಟ್ಟು ಅವರ ಮನದಾಳದ ಖಾಯಿಲೆಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದರು. ಬಣ್ಣದ ಬೊಂಬೆ, ಚಿತ್ರಗಳು, ಮಕ್ಕಳು ಆಡುವಂತಹ ಆಟದ ಸಾಮಾನುಗಳನ್ನು ಚಿಕಿತ್ಸೆಯ ವಸ್ತುಗಳಾಗಿ ಬಳಸುತ್ತಿದ್ದರೆಂದು ತಿಳಿದಿದ್ದಳು. ಇಲ್ಲಿಯೂ ಅಂತಹುದೇ ವಸ್ತುಗಳು ಬೀರುವನ್ನು ಅಲಂಕರಿಸಿದ್ದವು.

ಅಷ್ಟರಲ್ಲಿ ಒಬ್ಬಾತ ಒಳಬಂದ. ತಲೆತಗ್ಗಿಸಿ ಸಂಕೋಚದಿಂದ ಮುದುಡಿ ಕುಳಿತನು. ಆತ ಕುಳಿತ ರೀತಿ ಕಂಡು ಅನುವಿಗೆ ನಗು ಬಂತು. ಹೆಣ್ಣು ನೋಡಲು ಬಂದಾಗ ಸಿನಿಮಾದಲ್ಲಿ ತೋರಿಸುವ ಹೆಣ್ಣಿನಂತೆ ಕುಳಿತಿದ್ದ. ತನ್ನನ್ನು ನೋಡಲು ರಾಕೇಶ್ ಬಂದಾಗ ತಾನು ಈ ರೀತಿ ಕುಳಿತಿದ್ದೆನೇ? ಛೇ ನನ್ನ ಹೋಲಿಕೆಯೇ ಸರಿ ಅಲ್ಲ ಅಂದುಕೊಂಡಳು.

“ಹೇಳಿ ನಿಮ್ಮ ಸಮಸ್ಯೆ” ಆತ್ಮೀಯತೆಯ ಧ್ವನಿಯಲ್ಲಿ ತುಂಬಿ ಕೇಳಿದ.

ರಾಕೇಶ್ ನನ್ನು ಒಮ್ಮೆ ನೋಡಿದ ಆತ ಮತ್ತೂ ಸಂಕೋಚದಿಂದ.

“ನಿಮ್ಮ ಹೆಸರು ಹೇಳಿ. ಎಲ್ಲಿ ಕೆಲಸ ಮಾಡಿಕೊಂಡಿದ್ದಿರಾ.”

“ಶಿವಪ್ರಸಾದ್ ಬ್ಯಾಂಕಿನಲ್ಲಿದ್ದೀನಿ” ಸ್ವರ ಈಚೆ ಬರಲು ಕಷ್ಟಪಡುವಂತಿತ್ತು.

“ಮದ್ವೆ ಆಗಿದೆಯಾ?”

“ಇಲ್ಲಾ” ಅನ್ನುವಂತೆ ತಲೆಯಾಡಿಸಿದ.

“ಮದುವೆ ಗೊತ್ತಾಗಿದೆ. ಆದ್ರೆ ನಂಗೆ ತುಂಬಾ ಭಯ ಆಗ್ತಾ ಇದೆ” ಧ್ವನಿ ಕಂಪಿಸಿತು.

“ಯಾಕ್ರಿ ಭಯ. ಮದುವೆ ಅಂದ್ರೆ ಖುಷಿ ಅಲ್ಲವೇನ್ರಿ. ಹೆಂಡತಿ, ಪ್ರಣಯ, ರೋಮಾಂಚನ, ಖುಷಿ ತರಿಸುತ್ತೆ ಅಲ್ವೆ” ನಸುನಗುತ್ತಾ ರಾಕೇಶ್ ಕೇಳಿದ.

ಸ್ವಲ್ಪ ಹೊತ್ತು ತಲೆ ತಗ್ಗಿಸಿ ಕುಳಿತುಬಿಟ್ಟದ್ದ ಆತ ನಿಧಾನವಾಗಿ ತಲೆ ಎತ್ತಿ

“ಅದೇ, ರೋಮಾಂಚನ, ಖುಷಿ ನಂಗ್ಯಾಕೆ ಆಗ್ತ ಇಲ್ಲಾ ಡಾಕ್ಟರ್. ಹೆಂಡತಿ ಆಗೋಳ ಜೊತೆ ಇದ್ರೆ ಗಂಡಸಿಗಾಗಬೇಕಾದ ಯಾವ ಸಂವೇದನೆಯೂ ನನಗೆ ಅಗ್ತ ಇಲ್ಲ. ಹೆಣ್ಣು ಪಕ್ಕದಲ್ಲಿ ಇದ್ರೆ ಬಯಕೆಗಳು ಪುಟಿದೇಳುವುದಿಲ್ಲ. ಅವಳ್ನ ತಬ್ಬಿಕೊಳ್ಳಬೇಕು. ಅಪ್ಪಿ ಮುದ್ದಾಡಬೇಕು ಅಂತ ಅನ್ನಿಸುವುದೇ ಇಲ್ಲ. ಇದು ಹೀಗೇ ಮುಂದುವರಿದರೆ ಮುಂದೆ ಹೇಗೆ ಅಂತ ಯೋಚ್ನೆ ಆಗ್ತಾ ಇದೆ. ನಾನು ಮದ್ವೆ ಮಾಡ್ಕೊಂಡು ಪರಿಪೂರ್ಣ ಪುರುಷ ಆಗಿ ದಾಂಪತ್ಯ ನಡೆಸಲು ಸಾಧ್ಯವೇ” ಸಂಕೋಚ ಬದಿಗೊತ್ತಿ ಆರ್ತನಾಗಿ ಕೇಳಿಕೊಂಡ.

ಅರೆಕ್ಷಣ ಗಂಭೀರ ತಾಳಿದ ರಾಕೇಶ್ ಒಂದು ನಿಮಿಷ ಒಳಗೆ ಬನ್ನಿ ಎಂದು ಒಳಗೆ ಕರೆದೊಯ್ದ. ಅದೇನು ಪರೀಕ್ಷೆ ನಡೆಸಿದರೋ ಸ್ಪಲ್ಪ ಹೊತ್ತಾದ ನಂತರ ಹೊರ ಬಂದ ರಾಕೇಶ್ ‘ಕುತ್ಕೊಳ್ಳಿ’ ಎಂದು ಕೂರಲು ಹೇಳಿ ತಾನೂ ಕುಳಿತುಕೊಂಡ.

“ದೈಹಿಕವಾಗಿ ನೀವು ಸಂಪೂರ್ಣವಾಗಿ ಗಂಡಸೇ. ಇದರಲ್ಲಿ ಅನುಮಾನ ಬೇಡ. ಈಗ ಇರೋ ಸಮಸ್ಯೆ ಮಾನಸಿಕವಾದದ್ದು. ದಾಂಪತ್ಯ, ಗಂಡು ಹೆಣ್ಣಿನ ಸಂಬಂಧ ಇವೆಲ್ಲ ಮನಸ್ಸಿಗೆ ಸಂಬಂಧಿಸಿದಲ್ಲ. ಮನಸ್ಸಿನಲ್ಲಿ ಶೃಂಗಾರ ಭಾವನೆಗಳು ಉದ್ಭವವಾದ್ರೆ, ಆ ಭಾವನೆಗಳಿಗೆ ಶರೀರ ಸಹಕರಿಸುತ್ತೆ. ಆ ಭಾವನೆಗಳೇ ಹುಟ್ಟಲಿಲ್ಲ ಅಂದ್ರೆ ಶರೀರ ಸಹಕರಿಸೋಕೆ ಕಷ್ಟವಾಗುತ್ತೆ. ನೀವೀಗ ಮಾನಸಿಕವಾಗಿ ಸಿದ್ದರಾಗಬೇಕು. ಶೃಂಗಾರಭಂತ ಪುಸ್ತಕ ಓದಿ, ಸಿನಿಮಾ ನೋಡಿ, ಸುಂದರವಾದ ಹುಡುಗಿಯರನ್ನ ಕಣ್ತುಂಬ ನೋಡಿ. ಅವರೊಂದಿಗೆ ಶೃಂಗಾರತೆಯನ್ನು ಕಲ್ಪಿಸಿಕೊಳ್ಳಿ. ನಿಮ್ಮ ಮದುವೆಯಾಗೋ ಹುಡುಗಿ ಜೊತೆ ಮುಕ್ತವಾಗಿರಿ, ಸಂಕೋಚ ಕೀಳರಿಮೆ ಬೇಡ. ಮುಂದಿನ ಸಿಟ್ಟಿಂಗ್‌ನಲ್ಲಿ ನೀವು ಸಾಕಷ್ಟು ಇಂಪ್ರೂ ಆಗಿರಬೇಕು. ಆಯ್ತಾ. ಸದ್ಯಕ್ಕೆ ಈ ಮಾತ್ರೆ ಬರೆದುಕೊಡ್ತಿನಿ. ಇದು ಲೈಂಗಿಕಾಸಕ್ತಿ ಹೆಚ್ಚಿಸುವ ಮಾತ್ರೆ” ಮಾತ್ರೆ ಹೆಸರು ಚೀಟಿಯಲ್ಲಿ ಬರೆಯುತ್ತಾ

“ಎಷ್ಟು ಜನ ಇದ್ದೀರಿ ನೀವು ಮನೆಯಲ್ಲಿ.”

“ನಾಲ್ಕು ಜನ”

“ನಿಮ್ಮ ತಂದೆ ಏನು ಮಾಡ್ತಾರೆ.”

“ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಒಳ್ಳೆ ಸಂಪಾದನೆ. ಸಂಪಾದನೆ ಚೆನ್ನಾಗಿದೆ” ಅಂತಲೇ ಸರ್ಕಾರಿ ನೌಕರಿ ಬಿಟ್ಟು ಬಿಟ್ಟರು.”

“ಅಂದ್ರೆ ಮನೆಯಲ್ಲಿ ಧಾರ್ಮಿಕ ವಾತಾವರಣ ತುಂಬಿ ತುಳುಕ್ತಾ ಇದೆ. ಚಿಕ್ಕ ವಯಸ್ಸಿನಿಂದಲೇ ನಿಮಗೆ ದೇವ್ರು, ಭಕ್ತಿ, ಪೂಜೆ ಅಭ್ಯಾಸ ಆಗಿದೆ ಅಲ್ವಾ.”

ಹೌದೆನ್ನುವಂತೆ ತಲೆಯಾಡಿಸಿದ.

“ಇಂಗ್ಲೀಷ್ ಮೂವೀಸ್ ನೋಡ್ತಿರಾ.”

“ಇಲ್ಲ” ಎಂದ.

“ಒಂದೂ ನೋಡಿಲ್ವಾ.”

“ಸಿನಿಮಾ ನೋಡೊ ಅಭ್ಯಾಸನೇ ಬರಲಿಲ್ಲ. ಮೊದ ಮೊದಲು ಅಪ್ಪ ಒಪ್ತಾ ಇರಲಿಲ್ಲ. ಈಗ ನನಗೇ ಆಸಕ್ತಿ ಇಲ್ಲ.”

“ಒಂದೆರಡು ನೋಡಿ, ಆಮೇಲೆ ಆಸಕ್ತಿ ತಾನಾಗಿಯೇ ಬರುತ್ತದೆ.” ಗುಟ್ಟಿನಲ್ಲಿ ಕಿವಿಯಲ್ಲಿ ಏನೋ ಹೇಳಿದ. ಕೆಂಪಾದ ಆತ ಆಗಲಿ ಎನ್ನುವಂತೆ ತಲೆಯಾಡಿಸಿದ.

ಎಲ್ಲವನ್ನೂ ನೋಡುತ್ತಿದ್ದ ಅನು ಈ ಸಮಸ್ಯೆಯೂ ಮನಸ್ಸಿಗೆ ಸಂಬಂಧಿಸಿದ್ದೆ. ಇದೂ ಒಂದು ಖಾಯಿಲೆಯೇ ಎಂದು ಅಚ್ಚರಿಪಟ್ಟಳು. ಏಕೋ ಗಂಭೀರಳಾಗಿ ಬಿಟ್ಟಳು.

ಶಿವಪ್ರಕಾಶ್ ಹೊರಟುಹೋದ ಮೇಲೆ ಮತ್ತಿಬ್ಬರು ಒಳಬಂದರು. ಹಳ್ಳಿಯವರಂತೆ ನೋಡಿದ ಕೂಡಲೇ ಅನಿಸುತ್ತಿತ್ತು. ಅವರ ಹಿಂದೆಯೇ ವಿದ್ಯಾವಂತನಂತೆ ಕಾಣುತ್ತಿದ್ದಾತ ಒಳಬಂದ.

“ಕೂತ್ಕೊಳ್ಳಿ” ಅದೇ ಮೋಡಿ ಮಾಡುವ ನಗೆ, ಆತ್ಮೀಯತೆ.

ಬಂದವರಿಗೆ ಡಾಕ್ಟರೆಂದರೆ ಗೌರವ ಮೂಡುವುದಕ್ಕಿಂತಲೂ ಹೆಚ್ಚಾಗಿ, ಅಪರಿಚಿತರೆಂಬ ಭಾವ ಬಾರದ ಅದಷ್ಟೋ ದಿನಗಳಿಂದ ಚಿರಪರಿಚಿತನೆಂಬಂತೆ, ತಮಗೆ ಬೇಕಾದವರೊಬ್ಬರು ಇಲ್ಲಿದ್ದಾರೆ ಎಂಬ ಅನಿಸಿಕೆ ರಾಕೇಶ್ ಮೂಡಿಸುತ್ತಿದ್ದುದನ್ನು ಬೆರಗಿನಿಂದಲೇ ಅನು ನೋಡುತ್ತಿದ್ದಳು.

ಬಂದವರಲ್ಲಿ ಒಬ್ಬಾಕೆ ಸುಮಾರು ಮೂವತ್ತರ ಹೆಣ್ಣು ಮಗಳು. ಇನ್ನೊಬ್ಬಾತ ಆಕೆಯ ತಂದೆ ಇರಬೇಕು. ವಿದ್ಯಾವಂತನ್ಯಾರೋ ಗೊತ್ತಾಗಲಿಲ್ಲ.

“ಸಾರ್ ಇವರು ನಮ್ಮಣ್ಣ. ಇವಳು ಅವರ ಮಗಳು ಶಾರದ” ಪರಿಚಯಿಸಿದ ಆತ.

“ಹೇಳಿ ಏನು ಸಮಸ್ಯೆ” ಮೆಲುವಾಗಿ ಕೇಳಿದ.

ಶಾರದ ಕುಳಿತಲ್ಲಿಯೇ ಚಡಪಡಿಸಿದಳು. ಮೊಗದಲ್ಲಿ ಸಹೆಜತೆ ಇರಲಿಲ್ಲ. ಒಮ್ಮೆ ಉಗ್ರತೆ, ಒಮ್ಮೆ ವಿಷಣ್ಣತೆ, ಒಮ್ಮೆ ನಿರಾಶೆ ಕ್ಷಣಕ್ಕೊಂದು ಭಾವ.

“ಸಾರ್, ಶಾರದೆಗೆ ಮದುವೆ ಆಗಿ ಹತ್ತು ವರ್ಷ ಆಯ್ತು. ಈಗೆರಡು ವರ್ಷದಿಂದ ಹೇಗೇಗೋ ಆಡೋಕೆ ಶುರು ಮಾಡ್ತಾಳೆ. ಒಂದು ಮಗು ಇದೆ. ಇವರೆಲ್ಲ ಮೈ ಮೇಲೆ ದೇವರು ಬರುತ್ತೆ ಅಂತಾ ದಿನ ಅಂತಾ ಇದ್ರು. ಈಗ ದೆವ್ವನೇ ಬರುತ್ತೆ ಅಂತಾರೆ. ಮಾಟ ಮಂತ್ರ ಎಲ್ಲಾ ಆಯ್ತು. ಇಲ್ಲೂ ಒಂದು ಸಾರಿ ತೋರಿಸಿಬಿಡೋಣ ಅಂತ ಅವಳ ಗಂಡನ ಮನೆಯವರಿಗೆ ಗೊತ್ತಿಲ್ಲದಂತೆ ಕರ್ಕೊಂಡು ಬಂದಿದ್ದೀವಿ. ಹ್ಯಾಗಾದ್ರೂ ಇವಳಿಗೆ ವಾಸಿಮಾಡಿ ಸಾರ್ ಕಳಕಳಿಯಿಂದ ಕೇಳಿಕೊಂಡ.

“ನೀವು ಸ್ವಲ್ಪ ಹೊರಗಿರಿ” ಎಂದು ಇಬ್ಬರನ್ನು ಹೊರ ಕಳುಹಿಸಿದ.

“ದೇವರ ಮೇಲೆ ತುಂಬಾ ಭಕ್ತಿನಾ ಶಾರದ” ಮಲುವಾಗಿ ಕೇಳಿದನು.

“ಹೌದು” ಎಂದು ತಲೆ ಹಾಕಿದಳು.

“ಮಗನ ಹೆಸರೇನು, ಏನು ಓದುತ್ತಾ ಇದ್ದಾನೆ” ಪ್ರಶ್ನಿಸಿದ.

“ಮಂಜುನಾಥ. ನಾಲ್ಕನೇ ಕ್ಲಾಸು. ತುಂಬಾ ಇಡೀ ಸ್ಕೂಲಿಗೇ ಅವನು ಫಸ್ಟ್ ಬರ್‍ತಾ ಇದ್ದಾನೆ” ಉತ್ಸುಕಳಾಗಿ ಹೇಳತೊಡಗಿದಳು.

“ಹೌದಾ, ವೆರಿಗುಡ್, ಮಗನ್ನ ಮುಂದೆ ಏನು ಮಾಡಿಸಬೇಕು ಅಂತಾ ಇದ್ದೀರಾ.”

“ಡಾಕ್ಟ್ರು.”

“ನಂಥರಾ ಡಾಕ್ಟರು ಮಾಡಿಸ್ತೀರಾ, ಮಾಡ್ಸಿ ಮಾಡ್ಸಿ.”

“ನಿಮ್ಮೆಜಮಾನ್ರು ಏನ್ ಮಾಡ್ತಾ ಇದ್ದಾರೆ” ತಟ್ಟನೆ ಮುಖ ಕಪ್ಪಿಟ್ಟಿತು. ಉದ್ವೇಗದಿಂದ ತುಟಿ ಕಚ್ಚತೊಡಗಿದಳು. ಕೈಬೆರಳುಗಳನ್ನು ಬಿಗಿಯಾಗಿಸಿದಳು. ಕ್ರೂರತೆ ಇಣುಕಿತು.

ರಾಕೇಶ್‌ಗೆ ಅರ್ಥವಾಗಿಬಿಟ್ಟಿತು. ಶಾರದೆಯ ಖಾಯಿಲೆಯ ಮೂಲವೇನೆಂದು.

“ಮಗ ಯಾರ ಹಾಗೆ ಇದ್ದಾನೆ” ಪ್ರಶ್ನೆ ಬದಲಿಸಿದ.

ಅವಳ ವರ್ತನೆಯಲ್ಲಿಯೂ ತಟ್ಟನೆ ಬದಲಾವಣೆ ಕಾಣಿಸಿತು. ಮುಖ ಅರಳಿ

“ನನ್ನಂಗೆ ಇದ್ದಾನೆ. ಆದರೆ ಬಣ್ಣ ಸ್ವಲ್ಪ ಕಪ್ಪು. ಆದ್ರೇನಂತೆ, ಹುಡುಗ ತಾನೇ” ಎಂದಳು.

“ಮಗಳು ಬೇಕು ಅನ್ನಿಸಲಿಲ್ಲವೇ”

“ಬೇಡಪ್ಪ, ಈ ಹೆಣ್ಣು ಮಕ್ಕಳೇ ಹುಟ್ಟಬಾರದು. ಹೆಣ್ಣಾ ಗಿ ಹುಟ್ಟಿ ಸುಖ ಸುರ್ಕೊಳ್ಳೋದು ಅಷ್ಟರಲ್ಲೇ ಇದೆ. ಅದಕ್ಕೆ ಆಪರೇಷನ್ ಮಾಡಿಸಿಕೊಂಡು ಬಿಟ್ಟೆ”

“ನಿಮ್ಮಜಮಾನರೂ ಸಹ ಒಪ್ಪಿಕೊಂಡುಬಿಟ್ರಾ”

“ಅವರೆಲ್ಲಿ ಒಪ್ತಾರೆ, ಕಷ್ಟಪಡೋರು ನಾವು ತಾನೇ. ಅವರು ಹೇಳಿದಂಗೆ ಯಾಕೆ ಕೇಳಬೇಕು.”

“ಎಲ್ಲೀವರೆಗೂ ಓದಿದ್ದೀರಾ.”

“ಓದೋಕೆ ಎಲ್ಲಿ ಬಿಡ್ತಾರೆ. ೭ನೇ ಕ್ಲಾಸ್ ಫಸ್ಟ್ ಕ್ಲಾಸ್‌ನಲ್ಲಿ ಪಾಸು ಮಾಡಿದ್ದೆ. ಅಷ್ಟರಲ್ಲಿ ಸ್ಕೂಲ್ ಬಿಡಿಸಿಬಿಟ್ಟರು. ಹೈಸ್ಕೂಲಿಗೆ ದೂರ ಹೋಗಬೇಕಾಗಿತ್ತು. ಮನೆಯವರಿಗೆ ಅಷ್ಟು ದೂರ ಕಳಿಸೋಕೆ ಹೆದರಿಕೆ. ಹದಿನೆಂಟು ವರ್ಷಕ್ಕೆ ಮದ್ವೆ ಮಾಡಿಬಿಟ್ಟರು.”

“ಅದ್ಸರಿ ಯಾವ ದೇವರು ನಿಮ್ಮ ಮೇಲೆ ಬರ್ತಾ ಇತ್ತು.”

“ಮಂಜುನಾಥ. ನಮ್ಮ ಮನೆ ದೇವ್ರು. ಹಾಗಂತ ಎಲ್ಲಾ ಹೇಳ್ತಾರೆ. ನಂಗೇನೂ ಗೊತ್ತಾಗ್ತಾ ಇರಲಿಲ್ಲ.” ಅಮಾಯಕಳಾಗಿ ಹೇಳಿದಳು.

“ಯಾವಾಗ್ಯಾವಾಗ ಬರ್ತಾ ಇತ್ತು. ಸ್ವಲ್ಪ ಹೇಳ್ತೀರಾ.”

“ಸೋಮವಾರನೇ ಜಾಸ್ತಿ. ಆವತ್ತೇ ದೇವರ ವಾರ ಅಲ್ವಾ.”

“ಸೋಮವಾರ ನಿಮ್ಮೆಜಮಾನ್ರು ಏನು ಕೆಲ್ಸ ಮಾಡ್ತಾರೆ ಸಾಧಾರಣವಾಗಿ.”

“ಅವತ್ತು ಹೊಲದ ಕೆಲ್ಸ, ತೋಟದ ಕೆಲ್ಸ ಮಾಡೋ ಹಾಗಿಲ್ಲ. ಅದಕ್ಕೆ ಅವರು ಪಟ್ಟಣಕ್ಕೆ ಹೋಗಿ ರಾತ್ರೆ ಎಷ್ಟು ಹೊತ್ತಿಗೋ ಬತ್ತಾರೆ” ಮತ್ತೆ ಉದ್ವೇಗ, ರೋಷ ದನಿಯಲ್ಲಿ.

“ಆಹಾ, ರಾತ್ರೆವರೆಗೂ ಏನ್ ಮಾಡ್ತಾರೆ ಶಾರದ ಅಲ್ಲಿ” ಆಸಕ್ತಿಯಿಂದ ಕೇಳಿದ ರಾಕೇಶ್.

“ಕುಡಿದು ತಿಂದು ಮಜಾ ಮಾಡಿ ಬರ್ತಾರೆ. ಬಂದ ಮೇಲೆ ನನ್ನ ಕೈಲಿ ಜಗಳ ತೆಗೆದು ಸಾಯೋ ಹಾಗೆ ಬಡೀತಾರೆ. ಅವರ ಹೊಡೆತ ತಾಳಲಾರದೆ ಅಪ್ಪನ ಮನೆಗೆ ಎಷ್ಟೋ ಸಲ ಹೋಗಿ ಬಿಡ್ತಿದ್ದೆ. ಮತ್ತೆ ಅಪ್ಪ ಸಮಾಧಾನ ಮಾಡಿ ಕರ್ಕೊಂಡು ಬಂದು ಬಿಡ್ತಾ ಇದ್ದರು” ಧ್ವನಿಯಲ್ಲಿ ಅಸಹಾಯಕತೆ, ನೋವು ಇಣುಕಿತು.

“ನೋಡಿ, ನಿಮಗೆ ಮಾತ್ರೆ ಬರ್ಕೊಡ್ತಿನಿ. ಹೊರಗಿರುವವರನ್ನು ಕರೆಯಿರಿ” ಎಂದ.

ಅವರು ಬಂದ ಮೇಲೆ “ಇನ್ನೊಂದು ವಾರ ಬಿಟ್ಕೊಂಡು ಬನ್ನಿ. ನಾಳೆ ನಾಡಿದ್ದರಲ್ಲಿ ನಿಮ್ಮ ಅಳಿಯನನ್ನ ಕರ್ಕೊಂಡು ಬನ್ನಿ. ಶಾರದೆಗೆ ಏನೂ ಖಾಯಿಲೆ ಇಲ್ಲ. ಅವಳ ಮೇಲೆ ಇನ್ನು ದೇವರೂ ಬರಲ್ಲ. ದೆವ್ವನೂ ಬರಲ್ಲ. ಈ ಮಾತ್ರೆ ನುಂಗಿದರೆ ಸರಿಹೋಗ್ತಾರೆ” ಭರವಸೆ ನೀಡಿದ. ಕೈಮುಗಿದು ಹೊರಟರು.

ಅವರು ಹೋದ ಕೂಡಲೇ ಮತ್ಯಾರೂ ಪೇಷೆಂಟ್ ಇಲ್ಲಾ ಅಂತಾ ಗೊತ್ತಾಗಿ “ಅನು ಬನ್ನಿ, ಬೋರಾಯ್ತಾ.”

“ಇಲ್ಲಾ. ವೆರಿ ಇಂಟ್ರೆಸ್ಟಿಂಗ್, ಇವೆಲ್ಲಾ ಖಾಯಿಲೆ ಅಂತಾನೇ ನನಗೆ ಗೊತ್ತಿರಲಿಲ್ಲ. ದಿನಾ ಬರಬೇಕು ಅನ್ನಿಸುತ್ತಾ ಇದೆ.”

“ನಿಜಾವಾಗಿ” ನಂಬದೇ ಕೇಳಿದ.

“ಪ್ರಾಮಿಸ್. ನಂಗೆ ಮೊದಲಿನಿಂದಲೂ ಡಾಕ್ಟ್ರರಾಗೋಕೆ ಇಷ್ಟ ಇತ್ತು. ಬೇರೆ ಊರಿಗೆ ಹೋಗಿ ಓದಬೇಕಲ್ಲ ಅಂತ ಅಮ್ಮ ಒಪ್ಪಲಿಲ್ಲ. ಹಾಗಾಗಿ ಇಂಜಿನಿಯರಿಂಗ್ ತಗೊಂಡೆ. ನಿಜಕ್ಕೂ ನಿಮ್ಮ ಕೆಲ್ಸ ತುಂಬಾ ಚೆನ್ನಾಗಿದೆ, ಆದ್ರೆ ಒಂದಂತೂ ನಿಜ. ತುಂಬಾ ಸಹನೆ ಬೇಕು ಅಲ್ವಾ.”

“ಖಂಡಿತಾ. ವೈದ್ಯನಾದವನಿಗೆ ಸಹನೆಯೇ ಮುಖ್ಯ. ಅದ್ಸರಿ ನನ್ನ ಡ್ಯೂಟಿ ಮುಗೀತು. ಈಗ ಸೀದಾ ನಮ್ಮ ಮನೆಗೆ ಹೋಗೋಣ್ವಾ” ಏಕೋ ಅನುಮಾನಿಸಿದಳು.

“ಪ್ಲೀಸ್, ಅನು. ಅಮ್ಮ ಅವತ್ತಿನಿಂದ ನಿಮ್ಮನ್ನು ಮಿಸ್ ಮಾಡ್ಕೋತಾ ಇದ್ದಾಳೆ. ಬನ್ನಿ. ಹೇಗೂ ಊಟದ ಸಮಯ. ಅಲ್ಲೇ ಊಟ ಮುಗಿಸಿದರಾಯ್ತು. ಆಮೇಲೆ ನಿಮ್ಮ ಮನೆಗೆ ನಾನೇ ಡ್ರಾಪ್ ಮಾಡ್ತಿನಿ.”

ಏನನಿಸಿತೋ ಸರಿ ಎಂದು ತಲೆಯಾಡಿಸಿದಳು.

ಮಗನ ಜೊತೆ ಅನುಷಳನ್ನು ನೋಡಿ ರಾಕೇಶ್ ಅಮ್ಮನಿಗೆ ತುಂಬಾ ಅಚ್ಚರಿ, ಜೊತೆಗೆ ಸಂತೋಷವಾಯ್ತು. ಬಾಯ್ತುಂಬ ನಗುತ್ತಾ ಸ್ವಾಗತಿಸಿದಳು.

“ನಿಮ್ಮ ತಂದೆ ತಾಯಿ ಚೆನ್ನಾಗಿದ್ದಾರಾ. ಅದ್ಸರಿ ರಾಕೇಶ್ ಎಲ್ಲಿ ಸಿಕ್ಕಿದ ನಿಂಗೆ.”

“ಫುಟ್ಪಾತಿನಲ್ಲಿ ಅಳ್ತಾ ನಿಂತಿದ್ದೆ. ಮಗು ತಪ್ಟಿಸಿಕೊಂಡು ಬಿಟ್ಟಿದೆ ಅಂತಾ ಸೀದಾ ಅಮ್ಮನ ಹತ್ರ ಕರ್ಕೊಂಡು ಬಂದ್ರು.”

“ಥೂ ಯಾವಾಗಲೂ ನಿಂದು ತಮಾಷೆನೇ. ಅನುಗೆ ಡ್ಯೂಟಿ ಇರ್ಲಿಲ್ಲವೇನೋ” ಗದರಿಸಿದರು.

“ಡ್ಯೂಟಿ ಇತ್ತು. ಆದರೆ ಇವತ್ತು ನಿನ್ ಕೈ ಊಟ ಮಾಡಲಿ ಅಂತಾ ಅವರ ಗಾಡಿ ಟೈರ್ ಪಂಕ್ಚರ್ ಆಯ್ತು. ನೀನು ಅಡುಗೆ ಮಾಡೋವರೆಗೂ ಸುಮ್ನೆ ಟೈಂ ಯಾಕೆ ವೇಸ್ಟ್ ಮಾಡಿಸಬೇಕು ಅಂತಾ ನಮ್ಮ ಆಸ್ಪತ್ರೆಗೆ ಕರ್ಕೊಂಡು ಹೋಗಿ ಅಲ್ಲೆಲ್ಲಾ ತೋರಿಸಿಕೊಂಡು ಸೀದಾ ಇಲ್ಲಿಗೆ ಕರ್ಕೊಂಡು ಬಂದಿದ್ದೀನಿ. ಅನುಗೆ ನಿನ್ನ ಕೈರುಚಿ ತೋರಿಸಿಬಿಡು. ಅವಳು ಅದನ್ನು ನೆನೆಸಿಕೊಂಡು ದಿನಾ ಇಲ್ಲಿಗೆ ಊಟಕ್ಕೆ ಬರಬೇಕು ಹಾಗೆ ಮಾಡ್ತಿಯಾ” ಅಮ್ಮನೆಡೆ ತಿರುಗಿ ಕಣ್ಹೊಡೆದ.

“ಅಲ್ಲೇನಿದೆ ಅಂತ ಕರ್ಕೊಂಡು ಹೋಗಿದ್ದೆ. ಹಾಯಾಗಿ ಯಾವುದಾದ್ರೂ ಸಿನಿಮಾಕ್ಕೊ ಹೋಟೇಲ್ಗೋ ಕರ್ಕೊಂಡು ಹೋಗೋದು ಬಿಟ್ಟು.”

“ಅಯ್ಯೋ ಅಲ್ಲೇನೂ ಇಲ್ವಾ. ಕೇಳು ಅನುನಾ. ಎಂತೆಂಥ ಪೇಷೆಂಟ್ಸ್ ಬಂದಿದ್ರೂ ಅಂತಾ. ತುಂಬಾ ಇಷ್ಟವಾಯಿತಂತೆ. ಅದಕ್ಕೆ ನನಗೆ ಆಲ್ಲೇ ಒಂದು ಕೆಲ್ಸ ಕೊಡ್ಸಿ ಅಂತಾ ದಾರಿಯುದ್ದಕ್ಕೂ ಕೇಳ್ಕೊಳ್ತಾ ಬಂದ್ರು ಅಲ್ವೇನ್ರಿ” “ಇಲ್ಲಾ ಇಲ್ಲಾ” ಅನು ತಲೆಯಾಡಿಸಿದಳು.

“ನಿನ್ನ ತಲೆ, ಹುಚ್ಚರ ಖಾಯಿಲೆ ವಾಸಿಮಾಡಿ ಮಾಡಿ ಅವರ ಖಾಯಿಲೆ ನಿಂಗೂ ಒಂದೊಂದ್ಸಲ ಬಂದುಬಿಡುತ್ತೆ. ಬರೀ ತಲೆಹರಟೆ.”

“ಏನಮ್ಮ ನೀನು. ನಾನು ಇಷ್ಟು ದೊಡ್ಡ ಡಾಕ್ಟರ್. ನನ್ನ ಮರ್ಯಾದೆನಾ ಅನು ಮುಂದೆ ಕಳೀತಾ ಇದ್ದಿಯಾ. ಇರು ನಿಂಗೆ ಪನಿಷ್ಮೆಂಟ್ ಕೊಡಿಸ್ತಿನಿ. ಅನು ನಿಮಗೇನು ಇಷ್ಟ. ಅಂದ್ರೆ ತಿನ್ನೋಕೆ ಏನು ಇಷ್ಟ.”

ಹೇಳಲು ಸಂಕೋಚಿಸಿದಳು. “ಹೋಗ್ಲಿ ನಾನೇ ಹೇಳ್ತೀನಿ ಈಗ ಜಾಮೂನ್ ಮಾಡಿ ಚಿಪ್ಸ್ ಕರೀಬೇಕು ಊಟಕ್ಕೆ. ಇದೇ ಶಿಕ್ಷೆ ನಿಂಗೆ” ಅಮ್ಮ ಮಗನ ಸಲುಗೆ ನೋಡಿಯೇ ನೋಡಿದಳು.

“ನಿಂಗೆ ಇಷ್ಟ ಅಂದ್ರೆ ಅನೂಗೂ ಇಷ್ಟ ಅಂತನಾ. ಆವತ್ತೇ ಅವರಮ್ಮ ಹೇಳಿದ್ರು. ನಮ್ಮ ಅನುವಿಗೆ ಮೈಸೂರುಪಾಕು ಇಷ್ಟ ಅಂತಾ. ನೀವು ಮಾತಾಡ್ತಾ ಕೂತಿರಿ. ಅರ್ಧ ಗಂಟೆಯಲ್ಲಿ ಅಡುಗೆ ರೆಡಿ ಮಾಡ್ತಿನಿ.”

“ಛೇ ಛೇ, ಏನೂ ಬೇಡಮ್ಮ ಈಗ ಮಾಡಿರುವ ಅಡುಗೆನೇ ಸಾಕು” ತಡೆಯಲು ಹೋದಳು.

“ಸುಮ್ನೆ ಇರಿ ಅನು. ನಿಮ್ಮ ನೆವದಲ್ಲಾದರೂ, ಇವತ್ತು ಸ್ಪೆಷಲ್ ಊಟ ಮಾಡೋಣ. ನೀ ಹೋಗಮ್ಮ ಮಾಡು” ಅಡುಗೆ ಮನೆಗೆ ಕಳುಹಿಸಿದ. ಒಳ ಹೋದವರು ಮತ್ತೆ ಹೊರಬಂದು

“ರಾಕೀ, ನಿಮ್ಮಪ್ಪನಿಗೂ ಫೋನ್ ಮಾಡೋ. ಅನು ಬಂದಿದ್ದಾಳೆ ಅಂತಾ. ಮೊದಲ್ನೇ ಸಲ ಬಂದಿದ್ದಾಳೆ. ಅವರು ಬರಲಿ” ಅವರ ಸಡಗರ ಕಂಡು ಮೂಕಳಾದಳು.

ರಾಕೇಶ್ ತಂದೆಗೆ ಫೋನ್ ಮಾಡಿದ.

ಹತ್ತೇ ನಿಮಿಷದಲ್ಲಿ ಬಂದಿಳಿದರು ಸ್ವಾಮಿನಾಥನ್ “ಯಾವಾಗ ಬಂದ್ಯಮ್ಮ ಅನು. ಚೆನ್ನಾದ್ದೀಯಾ. ಕುಸುಮ್ ನಿಂಗಿಷ್ಟ ಅಂತ ಐಸ್ ಕ್ರೀ ತಂದಿದ್ದೀನಿ. ಅನೂಗೂ ಹಾಕಿ ಕೊಡು. ಏನಯ್ಯ ರಾಕಿ, ಇವತ್ತು ಇಷ್ಟೊಂದು ಫ್ರೀಯಾಗಿದ್ದೀಯಾ” ಮಗನೆಡೆ ನೋಡಿ ಅನುವಿಗೆ ಕಾಣದಂತೆ ಕಣ್ಹೊಡೆದರು.

“ಅದ್ಸರಿ ಅನು, ಈವತ್ತು ಭಾನುವಾರ ಅಲ್ಲವಲ್ಲ. ನಿಂಗೆ ಹೇಗೆ ರಜೆ.”

“ಭಾನುವಾರನೇ ರಜಾ ಬರಬೇಕಾ ಡ್ಯಾಡ್ ನಮಗೆ ಬೇಕು ಅಂದ್ರೆ ಯಾವಾಗ ಬೇಕಾದ್ರೂ ರಜಾ ಬರುತ್ತೆ ಅಲ್ವೆ ಅನು.”

“ಬರುತ್ತೆ, ಬರುತ್ತೆ ನಿನ್ನಂಥ ಫಟಿಂಗಾ ಆದ್ರೆ ಯಾವಾಗ ಬೇಕಾದ್ರೂ ರಜಾ ಬರುತ್ತೆ. ನಿನ್ನಂಥ ಡಾಕ್ಟರ್ ಇದ್ದರೆ ಪೇಷೆಂಟ್‌ಗಳ ಗತಿ ಅಧೋಗತಿ. ಆದ್ರೆ ಅನು ಹಾಗಲ್ಲವಲ್ಲ. ಷೀ ಈಸ್ ಗುಡ್ ವರ್ಕರ್, ಒಳ್ಳೆ ಹೆಸರು ತಗೊಂಡಿದ್ದಾಳಂತೆ” ಮೆಚ್ಚುಗೆಯಿಂದ ನುಡಿದರು.

“ನೀವ್ಯಾಗ ಸಿ.ಐ.ಡಿ ಕೆಲ್ಸ ಮಾಡಿದ್ರಿ ಡ್ಯಾಡ್. ಅನು ಬಗ್ಗೆ ಎಲ್ಲಾ ತಿಳ್ಕೊಂಡುಬಿಟ್ಟಿದ್ದಿರಿ. ಅಮ್ಮನೂ ಆಗ ನನ್ನ ಡಿಗ್ರೇಡ್ ಮಾಡಿದಳು ಅನೂ ಮುಂದೆ. ಈಗ ನೀವೂ ಕೂಡ ಛೇ” ಬೇಸರ ನಟಿಸಿದ.

“ಹೌದೇನು, ಕುಸುಮ ಕೂಡ ಹಾಗೆ ಮಾಡಿದ್ಲಾ. ವೆರಿಗುಡ್ ಇವತ್ತಾದರೂ ಮಗನ ಕೆಳಗಿಳಿಸಿದಳಲ್ಲ. ಪ್ರತಿದಿನ ಪ್ರತಿಕ್ಷಣ ತಲೆ ಮೇಲೆ ಕೂರಿಸ್ಕೊಂಡಿರೋದನ್ನ ನೋಡಿ ನಂಗೆ ಹೊಟ್ಟೆ ಉರಿದು ಹೋಗ್ತಾ ಇತ್ತು.”

“ಈಗ ಸಮಾಧಾನ ಅಯ್ತು” ಐಸ್ ಕ್ರೀಂ ಕಪ್‌ಗೆ ಐಸ್ ಕ್ರೀಂ ಹಾಕಿ ತಂದಿತ್ತ ಕುಸುಮ ಅಣಕಿಸಿದರು.

“ನೋಡಮ್ಮ ಅನು. ಇವನು ಹುಟ್ಟಿದ್ದೇ ಹುಟ್ಟಿದ್ದು. ನನ್ನ ಮೇಲಿನ ಇಂಟ್ರೆಸ್ಟ್ ಕಡಿಮೆ ಮಾಡ್ಕೊಂಡುಬಿಟ್ಟಳು. ಇವನಿದ್ದಾನಲ್ಲ ಈ ರಾಕಿ, ಈ ಮನೇಲಿ ನಂಗೆ ರೈವಲ್ ಕಣಮ್ಮ. ಅದಕ್ಕೆ ನಂಗೊಬ್ಳು ಮಗಳ್ನ ಕೊಡು ಅಂತಾ ಬೇಡಿಕೊಂಡೆ. ಉಹೂಂ ಕೂಡಲೇ ಇಲ್ಲಾ. ಈಗ ನೋಡು ನನ್ನ ಪರಿಸ್ಥಿತಿನಾ. ಅಮ್ಮ ಮಗಾ ಯಾವಾಗಲೂ ಒಂದು. ನಾನೊಬ್ನೆ ಒಂಟಿ” ನೋವಿನ ನಟನೆ ಮಾಡಿದರು.

ಅವರ ನಟನೆ ನೋಡಿ ಅನು ನಕ್ಕುಬಿಟ್ಟಳು. ತಾನೊಬ್ಬಳು ಬೇರೆಯವಳು ಇಲ್ಲಿದ್ದಾಳೆ ಅನ್ನೋ ವರ್ತನೆಯೇ ಅವರಲ್ಲಿರಲಿಲ್ಲ. ಆ ಮನೆಯ ಸದಸ್ಯರಲ್ಲಿ ಅನುವೂ ಒಬ್ಬಳೇ ಎಂಬಂತೆ ಟ್ರೀಟ್ ಮಾಡುತ್ತಿದ್ದರು ಎಲ್ಲರೂ. ಈ ಅಪೂರ್ವ ಸಂಸಾರ ನೋಡಿ ಅನೂ ನಿಜಕ್ಕೂ ಸಂತಸಪಟ್ಟಳು.

ಕುಸುಮ ಊಟಕ್ಕೆ ಏಳಿಸಿದರು. ತಟ್ಟೆ ಭರ್ತಿ ತುಂಬಿದ ಅಷ್ಟೊಂದು ಖಾದ್ಯಗಳನ್ನು ಕಂಡು ಅನುಗೆ ಅಚ್ಚರಿಯಾಯಿತು.

“ಆಂಟಿ ಇಷ್ಟು ಬೇಗ ಇದನ್ನೆಲ್ಲ ಹೇಗೆ ಮಾಡಿದ್ರಿ” ಕಣ್ಣರಳಿಸಿ ಕೇಳಿದಳು.

“ನಿಮಗೆ ಗೊತ್ತಿಲ್ವಾ, ಅಮ್ಮನಿಗೆ ಜಾದು ಬರುತ್ತೆ. ಏನ್ ಬೇಕಾದ್ರೂ ಮಾಡ್ತಾಳೆ. ಅವಳಿಗೆ ಸಿಟ್ಟು ಬಂದರೆ ನನ್ನನ್ನ ಡ್ಯಾಡಿನಾ ನಾಯಿ ಕೋತಿ ಮಾಡಿಬಿಡ್ತಾಳೆ. ಅದಕ್ಕೆ ನಮ್ಗೆ ಹೆದರಿಕೆ. ಅಮ್ಮನ ಮುಂದೆ ನಾನೇನು ಮಾತಾಡಲ್ಲ. ಅಪ್ಪನ್ನ ನೋಡಿ ಹೇಗೆ ಸೈಲೆಂಟಾಗಿ ಕೂತಿದ್ದಾರೆ ಅಲ್ವಾ ಡ್ಯಾಡ್.”

ನಗು ತಡೆಯಲಾಗಲಿಲ್ಲ. ಗಟ್ಟಿಯಾಗಿ ನಕ್ಕುಬಿಟ್ಟಳು ಅನು.

“ಏಯ್ ತರಲೆ ಏನೇನೋ ಹೇಳಬೇಡ. ಬಾಯಿ ಮುಚ್ಕೊಂಡು ಊಟ ಮಾಡು” ಕುಸುಮ ರಾಕಿಯ ತಲೆ ಮೊಟಕಿದರು. “ಬಾಯಿ ಮುಚ್ಕೊಂಡು ಹ್ಯಾಗಮ್ಮ ಊಟ ಮಾಡೋದು” ದೊಡ್ಡ ಸಮಸ್ಯೆ ಎದುರಿಸುವಂತೆ ಕೇಳಿದ.

“ಅನು, ಊಟ ಮಾಡು, ಇನ್‌ಸ್ವಲ್ಪ ಹಾಕೇ. ಅನುಗೆ ಮೈಸೂರುಪಾಕು ಅಂದ್ರೆ ಇಷ್ಟ ಅಲ್ವೆ” ಸ್ವಾಮಿನಾಥ್ ಒತ್ತಾಯಿಸಿದರು.

ತನಗೇನಿಷ್ಟ ಅನ್ನೋದನ್ನ ಹೇಗೆ ನೆನಪಿಟ್ಟುಕೊಂಡಿದ್ದಾರೆ ಈ ದಂಪತಿಗಳು. ಸಣ್ಣ ಪುಟ್ಟ ವಿಷಯಕ್ಕೆಲ್ಲ ಎಷ್ಟೊಂದು ಪ್ರಾಮುಖ್ಯತೆ ನೀಡಿದ್ದಾರೆ. ಎಂತಹ ಸುಂದರ ಸಂಸಾರ. ಗಂಡನಿಗೆ ತಕ್ಕ ಹೆಂಡತಿ ಹೆಂಡತಿಗೆ ತಕ್ಕ ಗಂಡ. ಇವರಿಬ್ಬರಿಗೂ ತಕ್ಕ ಮಗ.

ಸೊಸೆನೂ ಇಂತವಳೇ ಸೇರಿಬಿಟ್ಟರೆ ಹಾಲು ಸಕ್ಕರೆಯೊಳಗೆ ಕೇಸರಿ ಸೇರಿಸಿದಂತಾಗುತ್ತದೆ. ಇಂಥ ಸಂಸಾರವೂ ಇರುತ್ತೆ ಅನ್ನೋ ಕಲ್ಪನೆ ಕೂಡ ನನಗೆ ಇರಲಿಲ್ಲ. ಸ್ವಾಮಿನಾಥನ್ ದಂಪತಿಗಳು ಎಷ್ಟೊಂದು ಅನ್ಯೋನ್ಯತೆಯಿಂದ ಇದ್ದಾರೆ. ಸ್ನೇಹಿತರಂತೆ ಪರಸ್ಪರ ರೇಗಿಸುತ್ತಾ ಛೇಡಿಸುತ್ತಾ, ಅಮ್ಮ ಮಗ ಅಪ್ಪಾ ಎನ್ನುವುದೇ ಮರೆಸಿಬಿಡುತ್ತಾರೆ. ಆ ಸಂಸಾರವನ್ನು ನೋಡಿಯೇ ಹೊಟ್ಟೆ ತುಂಬಿದಂತಾಗಿತ್ತು. ಅದರ ಜೊತೆಗೆ ಮೂವರ ಬಲವಂತ ಬೇರೆ. ಊಟ ಜಾಸ್ತಿಯೇ ಆಯಿತು ಅನುವಿಗೆ.

“ಅನು ಈ ವಯಸ್ನಲ್ಲಿ ಹೆಣ್ಣು ಮಕ್ಕಳು ಹೇಗೆ ತಿನ್ನಬೇಕು ಗೊತ್ತಾ. ನಿನ್ನೂಟ ಏನೂ ಸಾಲದು. ಅದಕ್ಕೇ ಹೀಗೆ ಇದ್ದಿಯಾ. ನಿಮ್ಮ ಆಂಟಿ ನೋಡು ಹೇಗೆ ಪೈಲ್ವಾನಿ ಥರಾ ಇದ್ದಾಳೆ. ಒಂದೇ ಕೈಲಿ ನನ್ನ ಎತ್ತಿ ಎಸೆದು ಬಿಡುತ್ತಾಳೆ ಬೇಕಾದರೆ. ಹಾಗೆ ಎಸೆದೇ ನೋಡು ನನ್ನ ಹಲ್ಲು ಮುಂದು ಹೋಗಿರೋದು” ಸೀರಿಯಸ್ಸಾಗಿ ಹೇಳಿದರು.

“ಅಯ್ಯೋ ಆಂಟಿ ನಂಗೆ ತಡೆಯೋಕೆ ಆಗ್ತಾ ಇಲ್ಲ” ಹೊಟ್ಟೆ ಹಿಡಿದು ನಗತೊಡಗಿದಳು.

ಊಟ ಮಾಡುವುದನ್ನು ಬಿಟ್ಟು ರಾಕೇಶ್ ಅವಳ ನಗುವನ್ನು ಆಸ್ವಾದಿಸತೊಡಗಿದ.

ಕುಸುಮ ಕೂಡ ನಗುತ್ತಾ “ಹಾಗೆ ಎತ್ತಿ ಎಸೆದು ಅವರ್‍ನ ಒಂದು ಕಂಟ್ರೋಲಲ್ಲಿ ಇಟ್ಕೊಂಡಿದ್ದೀನಿ. ಇಲ್ಲದೇ ಇದ್ರೆ ಏನಾಗಿ ಹೋಗ್ತಾ ಇತ್ತೊ. ಈ ಗಂಡಸರಿಗೆ ಹೀಗೆ ಬುದ್ಧಿ ಕಲಿಸಬೇಕು ಅನು. ಇಲ್ದೇ ಇದ್ರೆ ನಮ್ಮನ್ನು ತುಳಿದು ನಮ್ಮ ಮೇಲೆ ನಿಂತ್ಕೊಂಡು ಬಿಡ್ತಾರೆ” ಉಪದೇಶಿಸಿದರು.

“ಕಲಿಸು, ಕಲಿಸು ಯಾವ ಬಡಪಾಯಿ ಕಾಯ್ತ ಇದ್ದಾನೋ ಅನುಭವಿಸೋಕೆ” ರಾಕೇಶ್ ರೇಗಿಸಿದ.

ಈ ಸರಸ ವಾತಾವರಣದಲ್ಲಿ ಸಮಯ ಕಳೆದಿದ್ದೇ ತಿಳಿಯಲಿಲ್ಲ ಅನುವಿಗೆ. ಊಟದ ನಂತರ ಅನು ರಾಕೇಶ್ ಎದ್ದರೂ ಸ್ವಾಮಿನಾಥನ್ ಏಳಲಿಲ್ಲ.

“ಕುಸುಮ, ಕೂತ್ಕೊ. ನಾನು ನಿಂಗೆ ಬಡಿಸ್ತಿನಿ” ಎನ್ನುತ್ತ ಬಲವಂತವಾಗಿ ಕೂರಿಸಿ, ತಟ್ಟೆ ತುಂಬಿ “ತಿನ್ನು ತಿನ್ನು” ಎನ್ನುತ್ತಾ. ಒತ್ತಾಯಿಸಿದರು. ಆಕೆಯ ಊಟ ಮುಗಿಯುವ ತನಕ ಕಂಪನಿ ಕೊಟ್ಟು, ಊಟವಾದ ಮೇಲೆಯೇ ಅನು ರಾಕೇಶ್‌ರನ್ನು ಸೇರಿಕೊಂಡಿದ್ದು.

ತಮ್ಮ ಮನೆಯಲ್ಲಿ ಅಮ್ಮನೊಂದಿಗೆ ಅಪ್ಪಾ ಎಂದಾದರೂ ಹೀಗೆ ನಡೆದುಕೊಂಡಿದ್ದನ್ನು ಕಂಡಿರಲಿಲ್ಲ. ತನ್ನ ಊಟ ಮುಗಿಸಿದ ಕೂಡಲೇ ಅಮ್ಮನನ್ನು ತಿಂದೆಯಾ ಬಿಟ್ಟೆಯಾ ಎಂದು ವಿಚಾರಿಸದೆ ಎದ್ದು ಬಿಡುವ ಅಪ್ಪನಿಗೂ ಸ್ವಾಮಿನಾಥ್‌ಗೂ ಹೋಲಿಸಿದಳು. ಅಜಗಜಾಂತರ ವ್ಯತ್ಯಾಸ ಎನಿಸಿ ನಿಟ್ಟುಸಿರು ಬಿಟ್ಟಳು.

ಕುಸುಮ ಇನ್ನೂ ಅಡುಗೆ ಮನೆಯಲ್ಲಿದ್ದರು. “ಏನಾದರೂ ಹೆಲ್ಪ್ ಮಾಡಲಾ ಆಂಟಿ” ಎಂದಳು.

“ಏನೂ ಬೇಡಮ್ಮ, ನೀನು ಮಾತಾಡ್ತ ಕೂತ್ಕೊಂಡು ಇರು. ಪಾತ್ರೆನೆಲ್ಲ ಸಿಂಕಿಗೆ ಹಾಕಿ ಬರ್ತಿನಿ. ಕೆಲಸದವಳು ಬರ್ತಾಳೆ” ಎಂದು ಅವಳನ್ನು ಹೊರ ಕಳಿಸಿದರು.

ಅದೂ ಇದೂ ಮಾತಾಡ್ತ ಸ್ವಾಮಿನಾಥನ್ “ನೀನ್ಯಾಕೆ ಬೇರೆಯವರ ಹತ್ತಿರ ಕೆಲ್ಸಕ್ಕಿದ್ದೀಯಾ. ನಿಂದೇ ಸ್ವಂತ ಆಫೀಸ್ ತೆರೆಯಬಹುದಿತ್ತಲ್ವೆ” ಎಂದರು.

“ಅನುಭವ ಆಗಲಿ ಅಂತ ಸೇರ್ಕೊಂಡಿದ್ದೀನಿ ಅಂಕಲ್. ಅವಕಾಶ ಸಿಕ್ಕಿದರೆ ಫಾರಿನ್ ಗೂ ಹೋಗಬೇಕು ಅಂದ್ಕೊಂಡಿದ್ದೀನಿ. ಅಪ್ಲೈ ಮಾಡ್ತ ಇದ್ದೀನಿ. ನಮ್ಮ ಅಮ್ಮಂದೆ ಪ್ರಾಬ್ಲಮ್. ಹೋಗೋಕೆ ಬಿಡಲ್ಲ.”

“ನಮ್ಮ ರಾಕಿನೂ ಹೋಗಬೇಕು ಅಂತಾ ಇದ್ದಾನೆ. ಸದ್ಯಕ್ಕೆ ಬೇಡ ಅಂತ ನಾವೇ ನಿಧಾನಿಸುತ್ತಾ ಇದ್ದೀವಿ” ಏನೋ ಹೇಳಬೇಕು ಅಂದುಕೊಂಡರು. ಯಾಕೋ ಸುಮ್ಮನಾಗಿಬಿಟ್ಟರು.

ಇಡೀ ದಿನ ರಾಕೇಶನೊಂದಿಗೆ, ಅವರ ಹೆತ್ತವರೊಂದಿಗೆ ಅನು ಕಳೆದಿದ್ದಳು. ಆದರೆ ಒಂದೇ ಒಂದು ಬಾರಿ ಕೂಡ ಅನುವನ್ನು ತಾವು ನೋಡಿ ಬಂದ ಹೆಣ್ಣು ಅನ್ನುವುದನ್ನು ತೋರ್ಪಡಿಸಲಿಲ. ತುಂಬ ದಿನದ ಪರಿಚಿತಳೊಂದಿಗೆ ಆತ್ಮೀಯವಾಗಿ ನಡೆದುಕೊಂಡಿದ್ದರೇ ವಿನಃ ಮೂವರಲ್ಲಿಯೂ ಅಪರಿಚಿತ ಭಾವನೆ ಸುಳಿದಿರಲಿಲ್ಲ. ಇವರು ತನ್ನನ್ನು ನೋಡಲು ಬಂದಿದ್ದೇ ಸುಳ್ಳೇನೋ ಎನಿಸುವಂತಿತ್ತು. ಎಷ್ಟೊಂದು ಸೌಹಾರ್ದತೆ, ಎಷ್ಟೊಂದು ಆತ್ಮೀಯತೆ, ಸ್ನೇಹಪರತೆ. ಒಂದೇ ದಿನದಲ್ಲಿ ಇಡೀ ಸಂಸಾರ ಅವಳನ್ನು ಮಂತ್ರಮುಗ್ಧಗೊಳಿಸಿತ್ತು. ಅವರಿಗೂ ಅನು ಬಹು ಇಷ್ಟವಾಗಿ ಬಿಟ್ಟಿದ್ದಳು.

ತಾನು ಹೊರಡುವೆನೆಂದಾಗ ಅವರ್ಯಾರಿಗೂ ಕಳುಹಿಸಿಕೊಡಲು ಇಷ್ಟವೇ ಇರಲಿಲ್ಲ. ಇನ್ನೊಮ್ಮೆ ಬಾ. ಬರ್‍ತಾ ಇರು ಅಂತಾ ಪದೇ ಪದೇ ಹೇಳುತ್ತಾ ಬೀಳ್ಕೊಟ್ಪರು.

ರಾಕೇಶ್ ಮನೆಯವರಿಗೂ ತಂದು ಬಿಟ್ಟ. ಅವಳು ಕೆಳಗಿಳಿಯುತ್ತಾ “ಬನ್ನಿ ಒಳಗೆ” ಎಂದಳು.

“ಇನ್ನೊಮ್ಮೆ ಬರ್‍ತಿನಿ. ಮತ್ಯಾವಾಗ ಸಿಗ್ತಿರಿ. ಫೋನ್ ಮಾಡಿ.” ಎಂದ್ಹೇಳಿ ಕೈ ಬೀಸಿದ. ಪ್ರತಿಯಾಗಿ ಕೈಬೀಸಿದಳು.

ಬಾಗಿಲ ಬಳಿ ಬಂದು ಬೆಲ್ ಮಾಡಿದಳು. ಬಾಗಿಲು ತೆರೆದ ನೀಲಾ, “ಇಷ್ಟು ಬೇಗ ಅನು.” ಕೇಳಿದಳು “ಆಫೀಸಿರಲಿಲ್ಲವೇನು?”

“ಆಫೀಸು ಎಲ್ಲಿಗೆ ಹೋಗುತ್ತೆ, ನಾನು ಆಫೀಸಿಗೆ ಹೋಗಿದ್ರೆ ತಾನೇ?”

“ಮತ್ತೆಲ್ಲಿ ಹೋಗಿದ್ದೆ ಇಷ್ಟು ಹೊತ್ತಿನ ತನಕ.” ಧಾವಂತಿಸಿದಳು.

“ಬಾಗಿಲಲ್ಲೆ ಎಲ್ಲಾ ಹೇಳಬೇಕಾ. ಸ್ವಲ್ಪ ಒಳಗೆ ಬಂದು ಕುಳಿತು ಹೇಳ್ತೀನಿ ಬಾ”

ಒಳಬಂದು ಸೋಫಾದ ಮೇಲೆ ಕುಳಿತು, “ಕೇಳಿಸ್ಕೋ, ಗಾಡಿಪಂಕ್ಚರ್ ಆಯ್ತು. ಅಟೋದಲ್ಲಿ ಹೋಗ್ತೀನಿ ಅಂತ ಹೇಳಿ ಹೋದೆ ಅಲ್ವಾ. ಒಂದು ಅಟೋ ಆದ್ರೂ ಸಿಗಲಿಲ್ಲ. ಬಸ್‌ಸ್ಟಾಪ್‌ಗೆ ಹೋದೆ, ಬಸ್ಸು ಸಿಗುತ್ತೇನೋ ಅಂತ. ಬಸ್ಸು ಸಿಗಲಿಲ್ಲ. ಇನ್ನು ಲೇಟಾಗಿ ಹೋಗಿ ಆ ಬಾಸ್ ಹತ್ತಿರ ಯಾಕೆ ಅನ್ನಿಸಿಕೊಳ್ಳಬೇಕು ಅಂತ ಆಫೀಸಿಗೆ ಬರಲ್ಲಾ ಅಂತಾ ಫೋನ್ ಮಾಡ್ದೆ. ನಾನು ಪೋನ್ ಮಾಡಿ ಬರುವಾಗ ರಾಕೇಶ ಸಿಕ್ಕಿದ್ದರು. ಅವರೂ ಫೋನ್ ಮಾಡೋಕೆ ಬರ್‍ತಾ ಇದ್ದರು. ಮನೆಗೆ ಡ್ರಾಪ್ ಕೊಡ್ತೀನಿ ಅಂದ್ರು. ಮನೆಗೆ ಬರೋಕೆ ಬೇಸರ ಆಯ್ತು. ಇನ್ನು ಆಫೀಸಿಗೂ ಹೋಗೋ ಹಾಗಿರಲಿಲ್ಲ. ನಮ್ಮ ಆಸ್ಪತ್ರೆಗೆ ಬನ್ನಿ ಅಂದ್ರು. ನಿಮ್ಹಾನ್ ಲಂತೆ ಅವರು ಡಾಕ್ಟರಾಗಿರೋದು. ಸರಿ, ಹುಚ್ಚರನ್ನಾದರೂ ನೋಡ್ಕೊಂಡು ಬರೋಣ ಅಂತ ಅವರ ಜೊತೆ ಹೋದೆ. ಅಲ್ಲಿಂದ ಮಧ್ಯಾಹ್ನ ಊಟಕ್ಕೆ ಅವರ ಮನೆಗೆ ಕರ್ಕೊಂಡು ಹೋದರು.

“ಎಂಥ ಸಂಸಾರ ಅಮ್ಮ ಅದು. ಗಂಡ, ಹೆಂಡತಿ, ಮಗ ಒಬ್ಬರಿಗಿಂತ ಒಬ್ಬರು ಒಳ್ಳೆಯವರು. ಅದೇನು ಪ್ರೀತಿ, ವಿಶ್ವಾಸ, ಅನ್ನೋನ್ಶತೆ. ಅಬ್ಬಾ, ಅವರ ಸಂಸಾರ ನೋಡ್ತಾ ಇದ್ದರೆ ಮನಸ್ಸು ತುಂಬಿ ಬರುತ್ತದೆ. ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಕೊಡೋ ಗೌರವ, ಆದರ ನಿಜವಾಗಲೂ ಅಮ್ಮ ಅವರಿಬ್ಬರೂ ಮೇಡ್ ಫಾರ್ ಈಚ್ ಅದರ್. ಅವರಿಗೆ ತಕ್ಕ ಮಗ ಒಳ್ಳೆ ಫ್ರೆಂಡ್ ಥರ ಇದ್ದಾರಮ್ಮ. ಮೂರು ಜನಾನೂ ನನ್ನನ್ನು ಹಾಗೇ ಟ್ರೀಟ್ ಮಾಡಿದ್ರು. ಅದೇನು ಉಪಚಾರ. ಅವರು ಇಲ್ಲಿಗೆ ಬಂದಿದ್ದಾಗ ಯಾವಾಗ್ಲೋ ನಂಗೆ ಮೈಸೂರು ಪಾಕ್ ಇಷ್ಟ ಅಂತ ಹೇಳಿದ್ಯಾ. ಅದು ಹೇಗೆ ನೆನಪಿಟ್ಬುಕೊಂಡಿದ್ದಾರೆ ಅಂತಾ. ಅರ್ಧ ಗಂಟೇಲಿ ಸ್ವೀಟ್ ಮಾಡಿ ಭರ್ಜರಿ ಅಡುಗೆನೇ ಮಾಡಿ ಬಿಟ್ಟರು ಕುಸುಮ ಆಂಟಿ. ಮೈಸೂರು ಪಾಕ್ ಕೂಡ ಎಷ್ಟು ಚೆನ್ನಾಗಿ ಮಾಡಿದ್ರೂ ಅಂತಿಯಾ.”

ಅನು ಹೇಳುತ್ತಿದ್ದರೆ ನೀಲಾ ಬೆರಗಿನಿಂದ ನೋಡ್ತಾ ಇದ್ದಾಳೆ. ಬರೀ ನೋಡೋದಿಕ್ಕೆ ಅಷ್ಟೆ ಅವರು ಬಂದಿದ್ದು. ಇನ್ನು ಏನೂ ಮುಂದುವರಿದಿಲ್ಲ. ಆಗಲೇ ಅವರು ಇಷ್ಟೊಂದು ಪ್ರೀತಿ ವಿಶ್ವಾಸ ತೋರಿಸ್ತಾ ಇದ್ದಾರಲ್ಲ. ಈ ಮದ್ವೆ ನಡೆದ್ರೆ ಅನೂ ನಿಜಕ್ಕೂ ಪುಣ್ಯ ಮಾಡಿರ್‍ತಾಳೆ. ಒಳ್ಳೆ ಮನೆ ಸೇರ್‍ತಾಳೆ. ಇಲ್ಲಿ ಬರೀ ನೋವೇ ಉಂಡಿದ್ದಾಳೆ. ಆಮೇಲೆ ಆ ಜನ ಅಮೃತವನ್ನ ಸುರಿಸಿಬಿಡುತ್ತಾರೇನೋ, ಭಗವಂತ ಅನು ಒಪ್ಪುವ ಹಾಗೆ ಮಾಡಪ್ಪ.

“ಏನಮ್ಮ ನಾನು ಹೇಳ್ತಾನೇ ಇದ್ದೀನಿ. ನೀನು ಹಾಹೂ ಅನ್ನದ ಕೂತ್ಕೊಂಡು ಬಿಟ್ಟಿದ್ದೀಯಾ?”

“ಅವರ ಗುಣ, ಸ್ವಭಾವ ಎಂತಹದು ಅಂತ ಅವತ್ತೇ ಗೊತ್ತಾಗಿತ್ತು ಅನು. ತುಂಬಿದ ಕೊಡದಂತವರು. ಹುಡುಗ ಕೂಡಾ ಅದೆಷ್ಟು ಗಾಂಭೀರ್ಯವಾಗಿದ್ದ ಆವತ್ತಿನದನ್ನು ಮೆಲುಕು ಹಾಕಿದಳು.

“ಅಯ್ಯೋ ಅಮ್ಮ, ರಾಕೇಶ್ ತುಂಬಾ ಹಾಸ್ಯ ಸ್ವಭಾವದವರು ಕಣಮ್ಮ. ಅವರ ಅಪ್ಪನೂ ಅಷ್ಟೆ. ನಂಗಂತೂ ಅವರ ಮಾತು ಕೇಳಿ ಕೇಳಿ ನಕ್ಕು ನಕ್ಕು ಸಾಕಾಯ್ತು. ಟೈಂ ಹೋಗಿದ್ದೆ ಗೊತ್ತಾಗಲಿಲ್ಲ.” ನೆನೆಸಿಕೊಂಡು ನಕ್ಕಳು. ಬೆಳದಿಂಗಳೇ ನಕ್ಕಂತೆ ಕಂಡಿತು ನೀಲಳಿಗೆ. ಪ್ರೀತಿಯಿಂದ ಮಗಳ ಮುಖವನ್ನ ದಿಟ್ಟಿಸಿದಳು.

“ನನ್ನ ಮುಖನೇ ಯಾಕೆ ನೋಡ್ತಾ ಇದ್ದಿಯಾ. ಅಯ್ಯೋ ಪಂಕ್ಚರ್ ಹಾಕಿಸಬೇಕಿತ್ತಲ್ಲ, ಅಮ್ಮಾ ಗಾಡಿ ಬಿಟ್ಟು ಬರ್‍ತೀನಿ.” ನೆನಪಾಗಿ ಮೇಲೆದ್ದಳು.

“ಕೂತ್ಕೋ, ನಿನ್ನ ಗಾಡಿ ಸರಿಮಾಡಿಸಿದ್ದೀನಿ. ನಿಮ್ಮಪ್ಪನ ಅಫೀಸಿನಿಂದ ಹುಡುಗ ಬಂದಿದ್ದ ಪಂಕ್ಚರ್ ಹಾಕಿಸಿ ತಂದಿಡು ಅಂತ ರೆಡಿ ಮಾಡಿಸಿದ್ದೀನಿ. ಸ್ವಲ್ಪ ಹೊತ್ತು ಮಲಕ್ಕೋ ಹೋಗು.” ಪ್ರೀತಿಯಿಂದ ತಲೆ ಸವರಿಸಿದಳು.

“ಥ್ಯಾಂಕ್ಯೂ ಮಮ್ಮಿ. ಅದಕ್ಕೆ ನೀನಂದರೆ ನಂಗಿಷ್ಟ. ನಂಗೇನು ಬೇಕು ಅದನ್ನ ಊಹಿಸಿಕೊಂಡೇ ಮಾಡಿ ಬಿಟ್ಟಿರ್ತಿಯಾ ನನ್ನ ಮುದ್ದು ಅಮ್ಮ.” ಎರಡೂ ಕೈ ಬಳಸಿ ಮಗುವಿನಂತೆ ಮುದ್ದು ಗರೆದಳು.

“ಬಾರೊ ಚಿನ್ನ ತಾಚಿ ಮಾಡಿಸ್ತಿನಿ” ಅವಳೂ ಮುದ್ದು ಮಾಡುತ್ತಾ ಮಗಳನ್ನು ಕೈಗಳಿಂದ ಬಳಸಿ ಅವಳ ರೂಮಿಗೆ ಕರೆದೊಯ್ದು ಮಲಗಿಸಿದಳು.

“ಇನ್ನೊಂದು ಗಂಟೆಯವರೆಗೂ ಏಳಬಾರಮ. ಓ.ಕೆ.” ಆಜ್ಞೆ ಮಾಡಿ ಬಾಗಿಲು ಎಳೆದುಕೊಂಡು ಹೊರಬಂದಳು.

ಕತ್ತಿನವರೆಗೂ ಹೊದಿಕೆ ಎಳೆದುಕೊಂಡ ಅನು, ರಾಕೇಶ್ ಮನೆಯನ್ನೇ ಕಲ್ಪಿಸಿಕೊಳ್ಳುತ್ತಾ ಅವರ ನಗೆ ಚಟಾಕಿಗಳನ್ನು ನೆನೆಸಿಕೊಳ್ಳುತ್ತಾ ಹಾಗೆಯೇ ನಿದ್ದೆ ಹೋದಳು. ಹೊಟ್ಟೆ ಭಾರವಾಗಿತ್ತು. ಮನಸ್ಸು ತುಂಬಿತ್ತು. ಹಾಗಾಗಿ ಹಾಯಾಗಿ ನಿದ್ರೆಗೆ ಇಳಿದುಬಿಟ್ಟಳು.

ರಾತ್ರಿ ರಾಕೇಶನ ಮನೆಯಲ್ಲಿ ಅನುವಿನದೇ ವಿಚಾರ. ಸ್ವಾಮಿನಾಥನ್‌ಗಂತೂ ಅನು ಬಹಳಷ್ಟು ಹಿಡಿಸಿದ್ದಳು. ಹಾಗಾಗಿ ಆದಷ್ಟು ಬೇಗ ಅವಳನ್ನು ಮನೆ ತುಂಬಿಸಿಕೊಳ್ಳುವ ವಿಚಾರ ಮಾಡಹತ್ತಿದರು. ರಾತ್ರಿ ಊಟಕ್ಕೆ ಕುಳಿತಾಗ ಪೀಠಿಕೆ ಹಾಕಿದರು.

“ಕುಸುಮ, ಆ ಹುಡುಗಿ ಇದ್ದಷ್ಟು ಹೊತ್ತು ಮನೆಗೆ ಅದೇನು ಕಳೆ ಇತ್ತಲ್ವಾ?”

“ಹೌದುರೀ. ಅನೂನೇ ಈ ಮನೆಗೆ ಸೊಸೆಯಾಗಿ ಬಂದ್ರೆ ಎಷ್ಟು ಚೆನ್ನ.”

“ಅವಳೇ ಕಣೆ ಈ ಮನೆ ಸೊಸೆ. ಓದಿದ್ದಾಳೆ, ಬುದ್ದಿವಂತೆ, ನೋಡೋಕೂ ಅದೆಷ್ಟು ಲಕ್ಷಣವಾಗಿದ್ದಾಳೆ. ಅಷ್ಟಿದ್ದರೂ ಚೂರಾದ್ರೂ ಅಹಂಕಾರವಾಗಲಿ ಬಿಗುಮಾನವಾಗಲಿ ಇಲ್ಲ. ಸರಳವಾದ ಹುಡುಗಿ. ಹೀಗೆ ನಮ್ಮೆಲ್ಲರ ಜೊತೆ ಬೆರೆತು ಹೋದಳು. ಚೊಕ್ಕ ಚಿನ್ನ ಕಣೆ ಅವಳು. ಈಗಿನ ಕಾಲದ ಹುಡುಗಿರಂತೆ ಚಲ್ಲಾಟವಿಲ್ಲ, ಹುಡುಗಾಟವಿಲ್ಲ. ಈ ವಯಸ್ಸಿಗೆ ಅದೇನು ಗಾಂಭೀರ್ಯ, ಹಿರಿಯರು ಅಂದ್ರೆ ಅದೇನು ಮರ್ಯಾದೆ. ರಾಕೇಶ್ ಜೊತೆಗೆ ಕೂಡ ಅಷ್ಟೇ ಸಂಯಮದ ನಡವಳಿಕೆ. ಈ ಮನೆಗೆ ಸೊಸೆಯಾಗಿ ಬರ್‍ತೀನಿ ಅನ್ನೋ ಭಾವನೆ ಕೂಡ ತೋರಿಸದಂತೆ ನಡ್ಕೊಂಡಳು. ಹಸುಮಗು ತರಾ ಸ್ವಭಾವ. ನಂಗಂತು ಅನುನಾ ಕಳಿಸೋಕೇ ಮನಸ್ಸು ಬರಲಿಲ್ಲ.”

ನಸುನಗುತ್ತ ರಾಕೇಶ ಅಪ್ಪನ ಹೊಗಳಿಕೆಯನ್ನು ಕೇಳಿಸಿಕೊಳ್ಳುತ್ತಾ ಇದ್ದಾನೆ. ಅಪ್ಪನ ಅಭಿಪ್ರಾಯ ಅವನದೂ ಆಗಿತ್ತು. ಈ ಕಾಲದಲ್ಲಿ ಇಂತಹ ಹುಡುಗಿಯರು ಇರ್‍ತಾರಾ ಅನಿಸಿತ್ತು. ಬಿಂಕ, ಬಿನ್ನಾಣ, ವಯ್ಯಾರ, ಚಲ್ಲಾಟ ಇದಾವುದನ್ನೂ ಅವಳಲ್ಲಿ ಕಾಣಲಾಗಲೇ ಇಲ್ಲ. ಸೀದಾಸಾದಾ ಹುಡುಗಿ. ಹುಚ್ಚು ಅಲಂಕಾರವಾಗಲಿ, ಕುಲು ಕುಲು ನಗೆಯಾಗಲಿ, ಒಬ್ಬ ಹುಡುಗನ ಜತೆಗೆ ಇದ್ದೇನೆ ಅನ್ನೋ ಭಾವನೆಗಳಾಗಲಿ ಅವಳಲ್ಲಿ ಸುಳಿಯಲೇ ಇಲ್ಲ. ಯಾವಕೃತಕತೆಯ ಪ್ರದರ್ಶನವೂ ಇಲ್ಲದ, ಯಾವ ಅಳುಕು ಇಲ್ಲದೆ ತನ್ನ ಜೊತೆ ಬಂದುಬಿಟ್ಟಳಲ್ಲ. ಆಸ್ಪತ್ರೆಯಲ್ಲೂ ಅದೆಷ್ಟು ಆಸಕ್ತಿಯಿಂದ ಎಲ್ಲವನ್ನು ಕೇಳಿಸಿಕೊಂಡಿದ್ದಳು. ತುಂಬಾ ಅಸಕ್ತಿನೂ ಇದೆ. ನಂಗೆ ಸಪೋರ್ಟ್‌ ಕೂಡ ಮಾಡ್ತಾಳೆ. ಆದರೆ ಏನೋ ಅಸಹಜತೆ ಇದ್ದಂತೆ ಭಾಸವಾಗಿತ್ತು. ಆ ಗಂಭೀರ ನಡೆನುಡಿಯಲ್ಲೂ ಏನೋ ವ್ಯಥೆ, ಆ ಅಗಲವಾದ ಕಣ್ಣುಗಳ ಆಳದಲ್ಲೆಲ್ಲೋ ನೋವಿನ ಎಳೆ ತನಗಷ್ಟು ಗೋಚರಿಸಿತ್ತು. ತಟ್ಟನೆ ಎತ್ತಲೋ ಮನಸ್ಸು ಸರಿದು ಹೋಗುವುದನ್ನು ಗಮನಿಸಿದ್ದ.

ಅಪ್ಪನ ಜೊತೆ ಮಾತನಾಡುವಾಗಲೂ ಕೆಲ ನಿಮಿಷ ಎಲ್ಲೋ ಕಳೆದು ಹೋಗಿದ್ದಳು. ಏನನ್ನೋ ಸದಾ ಚಿಂತಿಸುತ್ತಿರುವ ಮುಖಭಾವ. ಏನಿರಬಹುದು. ಅಪ್ಪ, ಅಮ್ಮನ ಒಬ್ಬಳೇ ಮುದ್ದಿನ ಮಗಳು. ಆದರೂ ಈ ವ್ಯಥೆ, ನೋವು ಏಕೆ? ಮನ ಮಂಥನದ ಮಡುವಾಯಿತು.

“ಎನ್ ರಾಕಿ ಎಲ್ಲಿ ಹೋಗಿದ್ದೀಯಾ, ಅನು ಜೊತೆ ಕನಸು ಕಾಣ್ತಾ ಇದ್ದಿಯಾ. ನಿಮ್ಮಪ್ಪ ಆಗಲಿಂದ ಮಾತಾಡ್ತಾನೇ ಇದ್ದಾರೆ. ನೀನು ಏನೊ? ಯೋಚನೆ ಮಾಡ್ತಾ ಇದ್ದಿಯಲ್ಲ.”

ಎಚ್ಚೆತ್ತು, “ಏನೂ ಇಲ್ಲಮ್ಮ” ಅಂದ.

“ಏನೂ ಇಲ್ಲ ಅಂದ್ರೆ ಹೇಗೆ, ಇಡೀ ದಿನ ಹುಡುಗಿ ನಿನ್ನ ಜೊತೇಲಿ ಇದ್ದಾಳೆ. ಏನೋ ಸವಿನೆನಪು ಕಾಡ್ತಾ ಇರಬಹುದು.” ಹೆಂಡತಿಯೆಡೆ ನೋಡಿ ತುಂಟತನದಿಂದ ನಕ್ಕರು ಸ್ವಾಮಿನಾಥ್.

“ಅದ್ಸರಿ, ಮದ್ವೆ ಯಾವಾಗ ಇಟ್ಟುಕೊಳ್ಳೋಣ. ಭವಿಷ್ಯದ ಬದುಕಿನ ಬಗ್ಗೆ ಏನೇನು ಮಾತಾಡಿಕೊಂಡ್ರಿ.”

“ಛೇ, ಅದೆಲ್ಲ ಮಾತಾಡೋಕೆ ಆಗಲಿಲ್ಲ ಅಪ್ಪಾ. ಅವಸರ ಯಾಕೆ ನಿಧಾನವಾಗಿ ಕೇಳಿದರಾಯ್ತು.”

“ನಿಧಾನವಾದ್ರೆ ಹೇಗಪ್ಪ, ನಮ್ಮ ಕೈಲಿ ತಡಯೋಕೆ ಆಗಲ್ಲ. ಈ ಮನೆಗೆ ಮಹಾಲಕ್ಷ್ಮಿ ಬೇಗ ಬಂದು ನಮ್ಮ ಕೈಗೊಂದು ಕೂಸು ಕೊಟ್ಟು ಬಿಡಬೇಕು. ನಿಧಾನ ಅಂದ್ರೆಲ್ಲ ಆಗಲ್ಲ.” ವಿರೋಧಿಸಿದರು.

“ಅಪ್ಪಾ, ನಾವಿನ್ನು ಈಗಾ ತಾನೇ ಫ್ರೆಂಡ್ಸ್ ಆಗಿದ್ದೀವಿ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಬೇಡ್ವಾ? ಸ್ವಲ್ಪ. ದಿನ ಕಳೀಲಿ ಇರಿ. ನಾವೇ ಗುಡ್ ನ್ಯೂಸ್ ಹೇಳ್ತೀವಿ. ಅಲ್ಲಿವರೆಗೂ ಅನು ಮುಂದೆ ಈ ವಿಷಯ ಮಾತಾಡಬೇಡಿ.” ತಾಕೀತು ಮಾಡಿದ.

ತನ್ನವಳಾಗುವವಳ ಪೂರ್ತಿ ಸ್ಟಡಿ ಮಾಡೇ ಬಿಡಬೇಕೆಂದು ನಿರ್ಧರಿಸಿದ. ಅನುವಿಗೆ ಗೊತ್ತಾಗದಂತೆ ಅವಳ ಬಗ್ಗೆ ತಿಳಿಯುವ ಪ್ರಯತ್ನ ನಡೆಸಿದ.

ಆಸ್ಪತ್ರೆಯ ಕೆಲಸಗಳ ನಡುವೆ ತನ್ನ ಬಗ್ಗೆ ಯೋಚಿಸಲು ರಾಕೇಶನಿಗೆ ಸಮಯವೇ ಸಿಗಲಿಲ್ಲ. ಆಸ್ಪತ್ರೆಯಲ್ಲಿ ಮುಳುಗಿ ಹೋದ. ಶಿವಪ್ರಸಾದ್ ಈಗ ಎಲ್ಲಾ ಗಂಡಸರಂತೆ ಇದ್ದ. ತನಗೆ ಚಿಕಿತ್ಸೆ ನೀಡಿ ಎಲ್ಲರಂತೆ ಮಾಡಿದ ರಾಕೇಶ್ಗೆ ಕೃತಜ್ಞನಾಗಿದ್ದ. ನೆಮ್ಮದಿಯಿಂದ ಮದುವೆಯಾಗಲು ನಿರ್ಧರಿಸಿದ್ದ. ಮದುವೆಯಾಗುವ ಹುಡುಗಿಯನ್ನು ಜೊತೆಯಲ್ಲಿ ಕರೆತಂದು ರಾಕೇಶ್‌ಗೆ ಪರಿಚಯಿಸಿ ಲಗ್ನ ಪತ್ರಿಕೆ ನೀಡಿದ. ಮದುವೆಗೆ ಬರಲೇಬೇಕೆಂದು ಒತ್ತಾಯಿಸಿದ್ದ.

ಶಿವಪ್ರಸಾದ್ ಎಲ್ಲರಂತಾಗಿ ಮದುವೆಯ ಬಗ್ಗೆ ಕನಸು ಕಾಣಲಾರಂಭಿಸಿದ್ದು ರಾಕೇಶ್‌ಗೆ ಸಂತಸ ತಂದಿತು. ತಾನೇನಾದರೂ ಇಲ್ಲಿಗೆ ಬಾರದೆ ಇದ್ದಲ್ಲಿ ನಿಜಕ್ಕೂ ತನ್ನ ಜೀವನವೇ ಹಾಳಾಗಿ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಿದ್ದ. ದೇವರಂತೆ ನನಗೆ ಬದುಕು ನೀಡಿದಿರಿ ಎಂದು ಕೊಂಡಾಡುವಾಗ ತನ್ನ ವೃತ್ತಿ ಬದುಕಿನ ಸಾರ್ಥಕತೆಯನ್ನು ಅನುಭವಿಸಿದ್ದ.

ಶಾರದೆಯ ಗಂಡನನ್ನು ಕರೆಸಿ ಹೊರಗಿನ ಚಾಳಿಯನ್ನೆಲ್ಲ ಬಿಟ್ಟು ಹೆಂಡತಿಯೊಡನೆ ಪ್ರೀತಿಯಿಂದಿರುವಂತೆ ಉಪದೇಶಿಸಿದ. ಬದಲಾಗದೆ ಹೋದಲ್ಲಿ ಶಾರದೆ ಏನಾದರೂ ಮಾಡಿಕೊಂಡು ಸತ್ತರೆ ಅದಕ್ಕೆ ನೀನೇ ಕಾರಣವೆಂದು ಪೋಲೀಸರಿಗೆ ತಿಳಿಸಿ ಅರೆಸ್ಟ್ ಮಾಡಿಸುವುದಾಗಿ ಹೆದರಿಸಿದ. ಪಾಪ ಅತನೂ ಅಮಾಯಕನೇ. ಹೆದರಿಬಿಟ್ಟ. ಜೊತೆಗೆ ಹೊರಗಿನ ಹೆಣ್ಣುಗಳ ಸಹವಾಸದಿಂದ ಏಡ್ಸ್ ಬರುವುದಾಗಿ, ಏಡ್ಸ್ ಬಂದರೆ ಅದಕ್ಕೆ ಚಿಕಿತ್ಸೆಯೇ ಇಲ್ಲವೆಂದು ಮನದಟ್ಟು ಮಾಡಿದ.

ಅಷ್ಟೊಂದು ಚೆನ್ನಾಗಿರೋ ಹೆಂಡತಿ, ಮುದ್ದಾದ ಮಗು ಇದ್ದರೂ ಯಾಕೆ ಈ ದುರಭ್ಯಾಸ ನೆಮ್ಮದಿಯಾಗಿದ್ದು ಮಗನ ಅಭ್ಯುದಯದತ್ತ ಗಮನ ಹರಿಸೆಂದು ಹಿರಿಯಣ್ಣನಂತೆ ಕುಳಿತು ಬುದ್ಧಿ ಹೇಳಿದ. ಇವೆಲ್ಲವೂ ಅವನಲ್ಲಿ ಕೆಲಸ ಮಾಡಿತು. ದೊಡ್ಡ ಮನುಷ್ಯರಂತಿರೊ ಡಾಕ್ಟರ್ ಹೇಳಿದ ಮೇಲೆ ಅವರ ಮಾತನ್ನ ಕೇಳಲೇಬೇಕು ಎಂದು ಆತ ನಿರ್ಧಾರ ಮಾಡಿದ.

ಯಾವಾಗ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತ ಹೊರಗಿನ ಚಾಳಿ ಬಿಟ್ಟು ಮನೆಯಲ್ಲಿಯೇ ಇರತೊಡಗಿದನೋ ಆವಾಗಲಿಂದ ಶಾರದೆಯ ಮೈ ಮೇಲೆ ದೆವ್ವವಾಗಲಿ, ದೇವರಾಗಲಿ ಬರುವುದು ನಿಂತೇ ಹೋಯಿತು.

ಇಂತಹ ಎಷ್ಟೋ ಪ್ರಕರಣಗಳು ಇಲ್ಲಿವರೆಗೂ ಬಾರದ ಜನರ ಮೌಢ್ಯದಿಂದ ದುರಂತವನ್ನಪ್ಪುತ್ತಿರುವುದು ಸಹಜವಾಗಿತ್ತು. ಇಂದಿಗೂ ಕೂಡ ಮನೋವೈದ್ಯರನ್ನು ಕಾಣಲು ಜನ ಹೆದರುತ್ತಾರೆ. ಎಲ್ಲಿ ಹುಚ್ಚು ಎನ್ನುವ ಹಣೆ ಪಟ್ಟಿ ಅಂಟಿಬಿಡುವುದೋ ಎಂದು ಹಿಂತೆಗೆಯುತ್ತಾರೆ. ಆಸ್ಪತ್ರೆಗಳಲ್ಲಿರುವ ಎಷ್ಟೋ ಕೇಸುಗಳು ಹೀಗೆ ವೈದ್ಯರ ಚಿಕಿತ್ಸೆಗೆ ಬಗ್ಗದೆ ಶಾಶ್ವತವಾಗಿ ಮಾನಸಿಕ ಅಸ್ವಸ್ಥರಾಗಿದ್ದಾರೆ. ಪ್ರಾರಂಭದಲ್ಲಿಯೇ ಬಂದರೆ ಕೇವಲ ಮಾತುಕತೆಗಳಲ್ಲಿಯೇ ಎಷ್ಟೋ ರೋಗಗಳನ್ನು ವಾಸಿ ಮಾಡಿಬಿಡಬಹುದು. ಒಂದೆರಡು ಸಿಟ್ಟಿಂಗ್‌ಗಳೇ ಸಾಕು. ಮನಸ್ಸಿನ ಖಾಯಿಲೆಗಳನ್ನು ವಾಸಿಮಾಡಲು. ಅಪ್ತ ಸಮಲೋಚನೆಗಳಿಂದಲೇ ಸೂಕ್ಷ್ಮ ಮನಸ್ಸು ಗಳಿಗೆ ಬಡಿದಿರುವ ಕರಾಳ ಛಾಯೆಯ ತರಿಸಿಬಿಟ್ಟರುವ ಎಷ್ಟೋ ಪ್ರಕರಣಗಳು ತನ್ನ ಮುಂದಿವೆ. ಈ ಜನತೆಯ ಮೌಢ್ಯ ಕರಗುವುದೆಂದೋ, ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಅಪಾಯ ಗಡಿ ಮುಟ್ಟಿರುವ ರೋಗಿಗಳ ಸಂಖ್ಯೆ ಕಡಿಮೆಯಾಗುವುದೆಂದೂ ಯೋಚಿಸುತ್ತ ಕುಳಿತವನಿಗೆ ಹೊರಗೆ ಯಾರೊ ಬಂದಿದ್ದರಿಂದ ಅಟೆಂಡರ್‌ಗೆ ತಿಳಿಸಿದ ಕರೆ ತಾ ಎಂದು ಬರುವವರನ್ನು ಎದಿರುಗೊಳ್ಳುವ ಸಿದ್ದತೆ ನಡೆಸಿದ ರಾಕೇಶ್.

ದಂಪತಿಗಳಿರಬೇಕು. ಇನ್ನು ಚಿಕ್ಕ ವಯಸ್ಸು. ಜೊತೆಯಲ್ಲಿ ಮುದ್ದಾದ ಮಗು. ಯಾರಿಗಪ್ಪ ಖಾಯಿಲೆ ಎಂದುಕೊಂಡ.

ಗಂಡನೇ ಮೊದಲು ಪ್ರಾರಂಭಿಸಿದ.

“ಈಕೆ ನನ್ನ ಹೆಂಡತಿ ಶಾಲು, ನಮಗೆ ಒಬ್ಬಳೇ ಮಗಳು. ಮಗಳ ಮೇಲೆ ನಮ್ಮಿಬ್ಬರಿಗೂ ತುಂಬಾ ಪ್ರೀತಿ ಶಾಲಿನಿಗಂತೂ ನನ್ನ ಎರಡರಷ್ಟು ಅಕ್ಕರೆ, ಈಗೊಂದು ವಾರದಿಂದ ವಿಚಿತ್ರವಾಗಿ ಆಡ್ತಾ ಇದ್ದಾಳೆ” ಮುಂದೆ ಹೇಳಲಾರದೆ ನಿಲ್ಲಿಸಿದ.

ಶಾಲಿನಿ ತಲೆ ತಗ್ಗಿಸಿ ಕುಳಿತುಬಿಟ್ಟಿದ್ದಳು.

“ಪರ್‍ವಾಗಿಲ್ಲ ಹೇಳಿ, ಹೇಗೆ ಆಡ್ತಾರೆ ಶಾಲಿನಿ.”

ಹೇಗೆ ಹೇಳುವುದೆಂದು ತಿಳಿಯದೆ ಅರೆಕ್ಷಣ ಒದ್ದಾಡಿದ. ರಾಕೇಶ್ ಅವನಿಗೆ ಸಮಯ ಕೊಟ್ಟು ಸುಮ್ಮನೆ ಅವನನ್ನು ನೋಡುತ್ತಾ ಕುಳಿತ.

“ಸಾರ್, ಇವಳ ಮನಸ್ಸಿನಲ್ಲಿ ಏನೇನೋ ಕೆಟ್ಟ ಕಲ್ಪನೆಗಳು ತುಂಬಿಕೊಂಡುಬಿಟ್ಟಿವೆ. ನಮ್ಮ ಮಗುವನ್ನು ಯಾರಾದ್ರೂ ಕಿಡ್ನ್ಯಾಪ್ ಮಾಡಿ, ಅತ್ಯಾಚಾರ ಮಾಡಿ ಸಾಯಿಸಿಬಿಡ್ತಾರೆ ಅಂತ ಸದಾ ಅಳ್ತಾ, ಮಗು ಜೀವಂತವಾಗಿದ್ರೆ ತಾನೇ ಹಾಗಾಗೋದಿಕ್ಕೆ ಸಾಧ್ಯ. ಅವಳು ಬದುಕುವುದೇ ಬೇಡ ಅಂದುಕೊಂಡು ತಾನೇ ಮಗುನಾ ಸಾಯಿಸೋಕೆ ಪ್ರಯತ್ನಪಡ್ತಳೆ. ಅವಳ ಜೊತೆ ಮಗುನಾ ಬಿಡೋದಿಕ್ಕೆ ಭಯವಾಗುತ್ತೆ. ನಾನೂ ಸಾಯ್ತಿನಿ. ಅವಳನ್ನೂ ಸಾಯಿಸ್ತಿನಿ ಅಂತಾ ಗೊಳೋ ಅಂತಾ ಅಳ್ತಾಳೆ. ಯಾರು ಎಷ್ಟು ಸಮಾಧಾನ ಮಾಡಿದ್ರೂ ಮಾಡಿಕೊಳ್ಳಲ್ಲ. ಹಾಗೆಲ್ಲ ಆಗಲ್ಲ ಅಂದ್ರೂ ನಂಬಲ್ಲ. ನಂಗಂತೂ ಸಾಕಾಗಿ ಹೋಗಿದೆ ಸಾರ್.”

ತನ್ನ ಪಾಡಿಗೆ ತಾನು ಆಡಿಕೊಳ್ಳುತ್ತಿದ್ದ ಮಗುವಿನಡೆ ದೃಷ್ಟಿ ಹರಿಸಿದ ರಾಕೇಶ. ಮೂರು ವರ್ಷದ ಮುದ್ದಾದ ಕೂಸು. ನೋಡಿದವರನ್ನ ತಟ್ಟನೆ ಸೆಳೆಯುವ ಮುಗ್ಧತೆ, ಆಕರ್ಷಣೆ.

“ಹಲೋ ಏನ್ ಪುಟ್ಟ ನಿನ್ನ ಹೆಸರು.” ಕನ್ನೆ ಹಿಂಡುತ್ತ ಕೇಳಿದ.

“ಧಾರವಿ” ಮುದ್ದಾಗಿ ಉಲಿಯಿತು.

“ಬರ್‍ತಿಯ ನನ್ನ ಹತ್ತಿರ. ಚಾಕಲೇಟು ಕೊಡ್ತಿನಿ.” ಕೈ ನೀಡಿದ.

“ಬೇಡಾ, ಬೇಡಾ. ಹೋಗಬೇಡ ಧಾರವಿ, ಯಾರ ಹತ್ರನೂ ಹೋಗಬೇಡ.” ಜೋರಾಗಿ ಚೀರಿದಳು ಶಾಲಿನಿ.

“ನೋಡಿದ್ರಾ ಸಾರ್, ಹೀಗೆ ಯಾವ ಗಂಡಸರೂ ಮಗೂನಾ ಮಾತನಾಡಿಸಬಾರದು. ಮುಖಕ್ಕೆ ಹೊಡೆದಂತೆ ಹೇಳಿಬಿಡ್ತಾಳೆ. ಬೀದಿಲಿ ಹೋಗೋರು ಮಾತಾಡಿಸುವಂತಿಲ್ಲ, ಮನೆಗೆ ಬಂದವರೂ ಮಾತಾಡಿಸುವಂತಿಲ್ಲ. ಅದು ಹೋಗ್ಲಿ, ನಮಗೆ ಪರಿಚಯದವರು, ನನ್ನ ಫ್ರೆಂಡ್ಸ್ ಯಾರೂ ಈ ಮಗು ಕಡೆ ನೋಡೋ ಹಾಗೆ ಇಲ್ಲಾ. ಇವಳಿಂದ ಎಲ್ಲರ ಮುಂದೂ ಅವಮಾನವಾಗಿಬಟ್ಟಿದೆ. ಪ್ರಪಂಚದಲ್ಲಿ ಯಾರಿಗೂ ಇಲ್ಲದೆ ಇರೋ ಮಗಳ ಸಾರ್ ಇವಳಿಗೆ ಇರುವುದು? ನಾನು ಹೆತ್ತ ತಂದೆ ತಾನೇ? ನನಗಿಂತಲೂ ಕಾಳಜಿನಾ ಇವಳಿಗೆ.” ಬೇಸತ್ತು ಜಿಗುಪ್ಸೆಯಿಂದ ನುಡಿದ.

“ಕೂಲ್‌ಡೌನ್. ಏನಾಗಿದೆ ಅಂತ ಬೇಸರ ಮಾಡ್ಕೊತಿದಿರಾ. ಪ್ರತಿಯೊಬ್ಬ ತಾಯಿಗೂ ಹೀಗೆ ತಮ್ಮ ಮಗು ಕಾಳಜಿ. ತಂದೆಗಿಂತಲೂ ತಾಯಿಗೇ ಹೆಚ್ಚಿನ ಸೆಂಟಮೆಂಟ್. ನೀವೇನು ವರಿ ಮಾಡ್ಕೋಬೇಡಿ. ನಿಮ್ಮಾಕೆಗೆ ಏನೂ ಆಗಿಲ್ಲ. ಮಗು ಮೇಲೆ ಹೆಚ್ಚಿನ ಪ್ರೀತಿ ಅವರನ್ನ ಹೀಗೆ ಮಾಡ್ತಾ ಇದೆ, ನಾನು ಮಾತಾಡ್ತಿನಿ. ನೀವು ಮಗುವಾ ಕರ್ಕೊಂಡು ಹೊರಗಡೆ ಹೋಗಿ.”

ಆತ ಮರು ಮಾತಾಡದೆ ಮಗುವನ್ನು ಎತ್ತಿಕೊಂಡು ಹೊರಡಲು ಅನುವಾದ ತಕ್ಷಣವೇ ಮಗುನ ಕೈಯಿಂದ ಕರ್‍ಕೊಂಡು ಬಿಗಿಯಾಗಿ ಅಪ್ಪಿಕೊಂಡು, “ನಾಕಳಿಸಲ್ಲ, ನನ್ನ ಮಗಳು ನನ್ನ ಕಣ್ಣು ಮುಂದೆನೇ ಇರಬೇಕು, ಮುಖದಲ್ಲಿ ಉನ್ಮಾದತೆ.

ಆತ ಕೆಂಪಗಾಗಿ ಹೋದ. “ಮಗು ಇಲ್ಲೇ ಇರಲಿ ಬಿಡಿ, ನೀವು ಹೋಗಿ.” ಆಚೆ ಕಳಿಸಿದ.

“ಶಾಲಿನಿ, ಮಗು ಈಗ ನಿಮ್ಮ ಹತ್ರನೇ ಇದೆಯಲ್ಲ. ಅವಳನ್ನ ಬಿಡಿ ಆಟ ಆಡಿಕೊಂಡಿರಲಿ. ನೋಡಿ ಹೇಗೆ ಹೆದರಿದೆ, ಶಾಲಿನಿ ಬಿಡಿ. ಇಲ್ಯಾರು ಇಲ್ಲವಲ್ಲ. ಅನುಮಾನಿಸುತ್ತ ಇಷ್ಟವಿಲ್ಲದವಳಂತೆ ಮೆಲ್ಲನೆ ಕೆಳಗೆ ಬಿಟ್ಟಳು. ಅದು ತನ್ನ ಕೈಯಲ್ಲಿದ್ದ ಬಾಲಿನೊಂದಿಗೆ ಆಟವಾಡತೊಡಗಿತು.

“ಶಾಲಿನಿ, ಈ ಪುಟ್ಟ ಮಗೂನಾ ಯಾರಾದ್ರೂ ಅತ್ಯಾಚಾರ ಮಾಡೋಕೆ ಸಾಧ್ಯಾನಾ.”

“ಯಾಕೆ ಇಲ್ಲಾ ಪಾಪಿ ನನ್ನ ಮಕ್ಕಳು ವಯಸ್ಸು, ಪುಟ್ಟ ಮಕ್ಕಳು ಅಂತಾ ನೋಡ್ತಾರಾ?” ರೋಷದಿಂದ ತತ್ತರಿಸಿದಳು.

“ಎಕ್ಸೈಟ್ ಆಗಬೇಡಿ. ಹೀಗಾಗಿರುವುದನ್ನು ಎಲ್ಲಾದರೂ ನೋಡಿದ್ರಾ?”

“ದಿನಾ ಪೇಪರಲ್ಲಿ ನೋಡಲ್ವಾ, ಆವತ್ತೊಂದು ದಿನ ಟಿವಿಲೂ ತೋರಿಸಿದರಲ್ಲ.”

ಯಾವನೋ ರಾಕ್ಷಸ ಆ ಹುಡುಗಿನಾ ರೇಪ್ ಮಾಡಿ, ಪೆಟ್ರೋಲ್ ಹಾಕಿಕೊಂದು ಬಿಟ್ಟನಲ್ಲ. ಆ ಮಗೂಗೆ ಅದೆಷ್ಟು ನೋವಾಗಿರಬಹುದು. ಅದು ಎಷ್ಟು ನೋವಿನಿಂದ ಚೀರಾಡ್ತೋ, ಆ ನೋವನ್ನ ಹೇಗೆ ಸಹಿಸ್ತೋ, ಪರಮಾತ್ಮ ಆ ದೇವರು ಎಲ್ಲಿದ್ದಾನೆ. ಅವನು ಇದ್ದಿದ್ದರೆ ಹಸುಳೆಗೆ ಈ ರೀತಿ ಮಾಡ್ತಾ ಇದ್ನ. ಆ ಮಗು ಅಮ್ಮ ಅಮ್ಮ ಅಂತಲೇ ಪ್ರಾಣ ಬಿಟ್ಟಿರಬೇಕು.” ಗೊಳೋ ಅಂತ ಅಳೋಕೆ ಪ್ರಾರಂಭಿಸಿಬಿಟ್ಟಳು. ತನ್ನ ಕಣ್ಣ ಮುಂದೆಯೇ ಆ ಘಟನೆ ನಡೆದಿದೆ. ತನ್ನ ಮಗುವೇ ಪ್ರಾಣಬಿಟ್ಟಿದೆ ಅನ್ನುವ ಥರಾ ದುಃಖಿಸುತ್ತಾ ಇರುವುದನ್ನು ನೋಡಿ ರಾಕೇಶ್‌ಗೆ ಖೇದವೆನಿಸಿತು.

ತಾನಾಗೆಯೇ ಸಮಾಧಾನಿಸಿಕೊಳ್ಳುವತನಕ ಸುಮ್ಮನಿದ್ದು ಬಿಟ್ಟ. ನಿಧಾನವಾಗಿ ಆಕೆ ಸ್ಥಿಮಿತಕ್ಕೆ ಬಂದು ಕಣ್ಣೀರು ಒರೆಸಿಕೊಂಡಳು.

“ಶಾಲಿನಿಯವರೇ, ಪ್ರಪಂಚದಲ್ಲಿ ಎಷ್ಟು ಹೆಣ್ಣು ಮಕ್ಕಳಿರಬಹುದು. ಆ ಎಲ್ಲಾ ಹೆಣ್ಣು ಮಕ್ಕಳಿಗೂ ಹೀಗೆ ಅಗುತ್ತಾ. ದುರದೃಷ್ಟ ಎಲ್ಲೋ ಒಂದೊಂದು ಸಲ ಹೀಗಾಗಬಹುದು. ಅದು ನಿಮ್ಮ ಮಗೂಗೆ ಯಾಕೆ ಆಗುತ್ತೇ ಹೇಳಿ. ಒಂದು ವೇಳೆ ಹಾಗೆ ಆಯ್ತು ಅನ್ನಿ. ಅದನ್ನೆಲ್ಲ ಎದುರಿಸೋ ಶಕ್ತಿ ನಮ್ಮ ಮನಸ್ಸಿಗೆ ಬರಬೇಕು.”

“ಹಾಗನ್ನಬೇಡಿ. ನನ್ನಿಂದ ತಡ್ಯೋಶಕ್ತಿ ಇಲ್ಲಾ. ನನ್ನ ಮಗಳಿಗೆ ಏನೂ ಆಗಬಾರದು.” ಅಂಗಲಾಚಿ ಬೇಡಿಕೊಂಡಳು.

“ಹೋಗ್ಲಿಬಿಡಿ, ನಿಮ್ಮ ಮಗುವಿಗೆ ಏನೂ ಆಗುವುದು ಬೇಡ. ನೀವು ಪುಸ್ತಕಗಳನ್ನು ಓದುತ್ತಿರಾ.”

“ಹೌದು” ಎಂದಳು.

“ಯಾವ ಯಾವ ಪುಸ್ತಕ ಓದ್ತೀರಿ.”

“ಎಲ್ಲಾ ಪತ್ರಿಕೆನೂ ಓದ್ತೀನಿ, ಸುಧಾ, ತರಂಗ, ಪ್ರಿಯಾಂಕ, ಹಾಯ್- ಬೆಂಗಳೂರು ಎಲ್ಲಾನೂ ಓದ್ತಿನಿ.”

“ಅಷ್ಟೊಂದು ಹುಚ್ಚಾ ನಿಮಗೆ.”

“ಆ” ಅಂತ ಕೇಳಿದಳು.

“ಅಂದ್ರೆ ಓದೋ ಹುಚ್ಚು ಅಂತ.”

“ಓದುವುದು ಅಂದ್ರೆ ನಂಗೆ ತುಂಬಾ ಇಷ್ಟ. ಅದಕ್ಕೆ ಲೈಬ್ರರೀಲಿ ಎಲ್ಲಾ ಪುಸ್ತಕ ತಂದು ಓತ್ತೀನಿ.”

“ಇತ್ತೀಚೆಗೆ ಏನು ಓದಿದ್ರಿ.”

“ಈಗೇನು ಓದ್ತ ಇಲ್ಲಾ ಓದೋಕೆ ಭಯ”

“ಯಾವಾಗಲಿಂದ ಭಯ ಶುರುವಾಯ್ತು.”

“ಹೋದ ತಿಂಗಳು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಅಂತ ಬಂದಿತ್ತಲ್ಲ. ಸುಮಾರು ಹತ್ತು ಪುಟಗಳಷ್ಟು ಈ ವಿಷಯವೇ ಕೊಟ್ಟಿದ್ದರು. ಅದನ್ನ ಓದ್ತಾ ಓದ್ತಾ ನಂಗೆ ಭಯ ಶುರುವಾಗಿ ಬಿಡ್ತು. ಅವತ್ತು ಸಂಜೆ-ಟಿವಿ. ನ್ಯೂಸ್ನಲ್ಲಿ ಕೂಡ ಅಂತಹುದೇ ಘಟನೆ ನಡೆದದ್ದನ್ನು ತೋರಿಸಿದರು. ನಂಗೆ ಏನೇನೋ ನೆನಪಾಗಿಬಿಡ್ತು.” ತಟ್ಟನೆ ನಾಲಿಗೆ ಕಚ್ಚಿಕೊಂಡಳು.

“ನೋಡಿ, ಅಪಘಾತ ಆಗುತ್ತೆ ಅಂತ ವಾಹನಗಳಲ್ಲಿ ಓಡಾಡುವುದನ್ನು ಬಿಡಲು ಸಾಧ್ಯವೇ? ಎಲ್ಲೋ ಯಾರಿಗೂ ಏನೋ ಆಯ್ತು ಅಂತ ಅದು ನಮಗೆ ಆಗಿದೆ ಅನ್ನುವ ಈ ಸೂಕ್ಷ್ಮತೆ ಒಳ್ಳೆಯದಲ್ಲ ಶಾಲಿನಿ. ದುರಂತಗಳನ್ನು ಕಂಡಾಗ ಮನಸ್ಸು ಮರುಗುತ್ತದೆ. ದ್ರವಿಸುತ್ತದೆ. ಆದರೆ ಅದನ್ನ ಸ್ವಲ್ಪ ಹೊತ್ತಲ್ಲಿ ಮನಸ್ಸು ಮರೆತುಬಿಡುತ್ತದೆ. ಮರೆಯಲೇಬೇಕು. ಹಾಗಾದಾಗ ಮಾತ್ರ ಈ ಭೂಮಿ ಮೇಲೆ ಬದುಕುವುದಕ್ಕೆ ಸಾಧ್ಯ. ಇಷ್ಟೊಂದು ಸಂವೇದನೆ ಒಳ್ಳೆಯದಲ್ಲ ಶಾಲಿನಿ. ಮನಸ್ಸನ್ನ ಗಟ್ಟಿ ಮಾಡಿಕೊಳ್ಳಿ. ಏನೇ ಬಂದರೂ ಎದುರಿಸುವುದನ್ನ ನಾವು ಕಲಿಬೇಕು. ನಿಮ್ಮ ಮಗಳಿಗೆ ಏನೂ ಆಗುವುದಿಲ್ಲ. ಧೈರ್ಯತಂದುಕೊಳ್ಳಿ. ಮನಸ್ಸನ್ನ ಬೇರೆಡೆಗೆ ತಿರುಗಿಸೊ ತರಾ ಹವ್ಯಾಸ ಬೆಳೆಸಿಕೊಳ್ಳಿ. ಮನಸ್ಸನ್ನ ಖಾಲಿಬಿಡಬೇಡಿ. ಖಾಲಿ ಮನಸ್ಸು ಏನೇನು ಆಲೋಚನೆ ಮಾಡಿ ಆರೋಗ್ಯ ಕೆಡಿಸುತ್ತದೆ. ಇವತ್ತಿನಿಂದಲೇ ನಿಮ್ಮ ಮನಸ್ಸನ್ನು ಯಾವುದಾದರಲ್ಲಿ ತೊಡಗಿಸಿಕೊಳ್ಳಿ.”

ಮನದಾಳಕ್ಕೆ ಮಾತುಗಳು ನಿಧಾನವಾಗಿ ಇಳಿಯುತ್ತಿದ್ದವು.

“ನಾ ಹೇಳಿದ್ದನ್ನ ಫಾಲೋ ಮಾಡ್ತಿರಲ್ಲ, ನೀವು ಹೊರಗೆ ಹೋಗಿ ನಿಮ್ಮನೆಯವರನ್ನ ಕಳುಹಿಸಿ, ಮಗು ಇಲ್ಲೆ ಇರಲಿ.” ಪರೀಕ್ಷಿಸುವಂತೆ ಶಾಲಿನಿಗೆ ಹೇಳಿದ.

ಮಗುವಿನ ಕೈಹಿಡಿದವಳು ಡಾಕ್ಟರ್ ಮುಖ ನೋಡಿದಳು. ‘ಭಯನಾ’ ಪ್ರಶ್ನಿಸಿದ.

ಮತ್ತೇನೆನಿಸಿತೇನೋ ಮಗುವಿನ ಕೈಬಿಟ್ಟು ಹೊರ ಹೋದಳು. ಗೆಲುವಿನ. ನಗೆ ನಕ್ಕ ರಾಕೇಶ್.

ಒಳಬಂದಾತನಿಗೆ, “ನಿಮ್ಮಾಕೆ ಖಂಡಿತಾ ಹುಷಾರಾಗುತ್ತಾರೆ. ನೀವು ಬೇಗ ಕರೆದುಕೊಂಡು ಬಂದು ಒಳ್ಳೆಯದು ಮಾಡಿದ್ರಿ. ಈಗಿನ್ನೂ ಸ್ಪಾರ್ಟಿಂಗ್ ಸ್ಟೇಜ್. ಹಾಗಾಗಿ ಬೇಗ ಹುಷಾರಾಗಿ ಬಿಡ್ತಾರೆ. ಅವರ ಮನಸ್ಸು ತುಂಬಾ ಸೂಕ್ಷ್ಮವಾಗಿದೆ.

ಹುಷಾರಾಗಿ ನೋಡಿಕೊಳ್ಳಿ. ಮಕ್ಕಳ ಮೇಲಾಗುವ ಅತ್ಯಾಚಾರಗಳನ್ನು ಕಲ್ಪಿಸಿಕೊಂಡು ಅವರ ಮನಸ್ಸಿಗೆ ಆಘಾತವಾಗಿದೆ. ತನ್ನ ಮಗಳಿಗೂ ಅಂತಹ ಸ್ಥಿತಿ ಬಂದರೆ ಅನ್ನೋ ಊಹೆ ಮಾಡಿ ಉನ್ಮಾದ ತಂದುಕೊಂಡಿದ್ದಾರೆ. ಸದಾ ಅದನ್ನೇ ಯೋಚಿಸಿ ಯೋಚಿಸಿ ಹೀಗಾಗಿದ್ದಾರೆ. ಅವರ ಮನಸ್ಸು ಆ ರೀತಿ ಆಲೋಚನೆ ಮಾಡದಂತೆ ಎಚ್ಚರಿಕೆ ವಹಿಸಿ. ಅಂತಹ ಸುದ್ದಿ ಕೇಳದಂತೆ, ನೋಡದಂತೆ ಸ್ವಲ್ಪ ದಿನ ಗಮನಿಸುತ್ತಾ ಇರಿ. ಏನಾದರೂ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ಉನ್ಮಾದ ಕಡಿಮೆಯಾಗೋ ಹಾಗೇ ಮಾತ್ರೆ ಕೊಡ್ತಿನಿ. ರಾತ್ರಿ ಚೆನ್ನಾಗಿ ನಿದ್ರೆ ಬರುವಂತೆ ಕೂಡ ಮಾತ್ರೆ ಕೊಡ್ತಿನಿ. ಮುಂದಿನ ವಾರ ಕರ್ಕೊಂಡು ಬರಬೇಕು. ನೋಡಿ ಮಗುನಾ ಈಗ ಇಲ್ಲೇ ಬಿಡೋಕೆ ಒಪ್ಪಿಕೊಂಡು ಬಿಟ್ಟರು ನಿಮ್ಮಾಕೆ. ಶುಭ ಸೂಚನೆ.”

“ಥ್ಯಾಂಕ್ಯೂ. ಸರ್, ಇಷ್ಟು ಭರವಸೆ ನೀಡಿದರಲ್ಲ ಅಷ್ಟು ಸಾಕು ಅವಳು ಹುಷಾರಾದಷ್ಟೆ ಸಂತೋಷ ಆಗ್ತಾ ಇದೆ. ನೀವು ಹೇಳಿದಂತೆ ಮಾಡ್ತಿನಿ. ಮಗುನಾ ಇಷ್ಟು ಸುಲಭವಾಗಿ ಬಿಟ್ಟು ಹೊರಗೆ ಬರುತ್ತಾಳೆ ಅಂತ ನಾನು ಅಂದುಕೊಂಡಿರಲೇ ಇಲ್ಲ. ಒಂದು ಕ್ಷಣ ಕೂಡ ಧಾರವಿ ಅವಳ ಕಣ್ಮುಂದಿನಿಂದ ದೂರ ಆಗುವ ಹಾಗಿರಲಿಲ್ಲ. ಸದಾ ಕಣ್ರೆಪ್ಪೆಯಂತೆ ಕಾಯ್ತ ಇದ್ದಳು. ಈ ವಿಪರೀತ ನೋಡಿ ನೋಡಿ ಸಾಕಾಗಿ ಹೋಗಿದ್ದೆ.”

ನಿಜವಾದ ಸಂತಸ ಆತನ ಮುಖದಲ್ಲಿ ಎದ್ದು ಕಾಣುತ್ತಿತ್ತು.

“ನಾಲ್ಕು ಸಿಟ್ಟಿಂಗ್ ಬೇಕಾಗಬಹುದು. ವಾರವಾರ ಕರೆತನ್ನಿ. ಈ ಟ್ರೀಟ್‌ಮೆಂಟಿನಲ್ಲಿ ಔಷಧಿ ಮಾತ್ರೆಗಿಂತ ನಿಮ್ಮಾಕೆ ಮನಸ್ಸು ನನಗೆ ಸಹಕರಿಸಬೇಕು. ನಾ ಹೇಳಿದಂತೆ ಕೇಳಿದರೆ ಇನ್ನೆರಡು ತಿಂಗಳಲ್ಲಿ ಮಾಮೂಲಿ ಸ್ಟೇಜ್‌ಗೆ ಬರುತ್ತಾರೆ. ವಾರವಾರ ಕರೆತರುವುದನ್ನ ಮಾತ್ರ ತಪ್ಪಿಸಬೇಡಿ.”

“ಇಲ್ಲಾ ಸಾರ್, ಎಷ್ಟು ಕಷ್ಟವಾದ್ರೂ ಪರ್‍ವಾಗಿಲ್ಲ ಶಾಲಿನಿ ಮೊದಲಿನ ಥರಾ ಆಗಿಬಿಟ್ಟರೆ ಸಾಕು. ಖಂಡಿತಾ ಕರ್ಕೊಂಡು ಬರ್‍ತಿವಿ.” ರಾಕೇಶನ ಮಾತಿನಲ್ಲಿ ಆತನಿಗೆ ಭರವಸೆ ಬಂದಿತ್ತು.

ಅವರು ಅತ್ತ ಹೋದೋಡನೆಯೇ ಒಂದೆರಡು ಸಾರಿ ಕರ್‍ಕೊಂಡು ಬಂದು ಪೂರಾ ಗುಣವಾಗೋಕೂ ಮುಂಚೆನೇ ತನ್ನ ಟ್ರೀಟ್‌ಮೆಂಟ್ ನಿಲ್ಲಿಸಿ ಮಗಳ ಇಡೀ ಬಾಳು ಹಾಳು ಮಾಡಿದ ಶೆಟ್ಟರ ನೆನಪಾಯಿತು.

ಒಬ್ಬಳೇ ಮಗಳು. ಬೇಕಾದಷ್ಟು ಆಸ್ತಿ ಇತ್ತು. ಮಗಳನ್ನು ಹೊರಗೆ ಕಳಿಸಲಾರದ ಮನಸ್ಥಿತಿಯಲ್ಲಿ, ಯೋಗ್ಯನಾದ ಹುಡುಗನನ್ನು ಹುಡುಕಿ ಮನೆ ಅಳಿಯನನ್ನಾಗಿ ಮಾಡಿಕೊಂಡಿದ್ದರು. ಹುಡುಗ ವಿದ್ಯಾವಂತ, ರೂಪವಂತ. ಬಡತನದ ದೆಸೆಯಿಂದಾಗಿ, ಶೆಟ್ಟರ ಮಗಳು ವಾಣಿ ಸಾಧಾರಣವಿದ್ದರೂ ಒಪ್ಪಿಕೊಂಡುಬಿಟ್ಟಿದ್ದ. ಒಂದು ಮಗುವೂ ಆಯಿತು.

ವಾಣಿಗೂ ಸದಾ ಸಂಶಯ. ಫಿಲಂಸ್ಬಾರ್ ತರಾ ಇರೋ ಗಂಡ ಯಾರಾದ್ರೂ ತೆಳ್ಳಗೆ, ಬೆಳ್ಳಗೆ ಇರೋ ಹುಡುಗಿಯ ಬಲೆಗೆ ಎಲ್ಲಿ ಬಿದ್ದು ಬಿಡುತ್ತಾನೋ ಎಂದು ಸದಾ ಎಚ್ಚರಿಕೆಯಿಂದ ಕಾಯುತ್ತಿದ್ದಳು. ಮನೆಯ ಮುಂದೆಯೇ ಅಂಗಡಿ. ಅಂಗಡಿಗೆ ಬರುವ ಗಿರಾಕಿಗಳಲ್ಲಿ ಯಾರಾದರೂ ತನ್ನ ಗಂಡನಿಗೆ ಮರುಳು ಮಾಡಿದರೆ, ಹಾಗೆಂದು ಕೊಂಡೇ ತಾನೂ ಕೂಡ ಅಂಗಡಿಯಲ್ಲಿ ಕುಳಿತುಬಿಡುತ್ತಿದ್ದಳು. ಪಾಪ ವಾಸುವಿಗೆ ಆ ಕೆಟ್ಟ ಬುದ್ದಿಯೇ ಇರಲಿಲ್ಲ, ಆದರೆ ವಾಣಿ ನಂಬುತ್ತಿರಲಿಲ್ಲ.

ಈ ವಿಷಯಕ್ಕಾಗಿಯೇ ಪ್ರತಿದಿನ ಜಗಳ ಅವರಲ್ಲಿ. ವಾಸುವಿಗೂ ಸಾಕಾಗಿ ಹೋಯಿತು. ಯಾರ ಜೊತೆ ಮಾತಾಡಿದ್ರೂ ಅವರ ಜೊತೆ ಸಂಬಂಧ ಕಲ್ಪಿಸಿ ಮಾತನಾಡುವ ಹೆಂಡತಿ ಬಗ್ಗೆ ರೋಸಿ ಹೋದ. ಅದೊಂದು ದಿನ ಒಬ್ಬಾಕೆ ಬಂದು ಸಾಮಾನು ಲಿಸ್ಪ್ ಕೊಟ್ಟು ಏನೋ ಮಾತಾಡಿಕೊಂಡು ನಕ್ಕಿದ್ದಳು. ವಾಸು ಕೂಡ ಪ್ರತಿಯಾಗಿ ನಕ್ಕಿದ್ದ. ಸರಿ ಯುದ್ಧ ಆರಂಭವಾಗಿಯೇ ಬಿಟ್ಟಿತು. ಮಾತು ಮಾತಿಗೆ ಬೆಳೆದು ಕೋಪದಲ್ಲಿ ವಾಸು ತೂಕ ಮಾಡುತ್ತಿದ್ದ ಬಟ್ಟನ್ನೆ ಎತ್ತಿ ವಾಣಿಗೆ ಕುಕ್ಕಿಬಿಟ್ಟದ್ದ. ಏಟು ಎಲ್ಲಿಗೆ ತಗುಲಿತೋ ಅಥವಾ ಗಂಡ ಹೊಡೆದನೆಂಬ ಶಾಕ್‌ಗೂ ವಾಣಿ ಸಂಪೂರ್ಣ ಮಂಕಾಗಿಬಿಟ್ಟಳು. ಮೊದಲಿನ ಚಟುವಟಿಕೆ ಇಲ್ಲವೇ ಇಲ್ಲ. ಗಾಬರಿಗೊಂಡ ವಾಸು ಇಲ್ಲಿಗೆ ಕರೆತಂದಿದ್ದ. ನಿಧಾನವಾಗಿಯಾದರೂ ವಾಣಿ ಮೊದಲಿನಂತಾಗುವ ಭರವಸೆ ತನ್ನಲ್ಲಿತ್ತು. ಒಂದಾರು ತಿಂಗಳಾದರೂ ಬೇಕಿತ್ತು ಟ್ರೀಟ್‌ಮೆಂಟಿಗೆ.

ಸ್ವಲ್ಪ ಚೇತರಿಸಿಕೊಂಡು ವಾಣಿ ಗೆಲುವಾಗಿದ್ದಳು. ಅಷ್ಟರಲ್ಲಿ ಶೆಟ್ಟರು ಇಲ್ಲಿಗೆ ಕರೆತರುವುದನ್ನು ಸಂಪೂರ್ಣವಾಗಿ ವಿರೋಧಿಸಿಬಿಟ್ಟರು. ತಮ್ಮ ಮಗಳು ಹುಚ್ಚಿ ಯಲ್ಲ, ಮತ್ಯಾಕೆ ಹುಚ್ಚಾಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಈಗಾಗಲೇ ತಮ್ಮನೆಂಟರಿಷ್ಟರೆಲ್ಲ ಆಡಿಕೊಳ್ಳುತ್ತಿದ್ದಾರೆ. ಏನಾದರೂ ಸರಿ ಆಸ್ಪತ್ರೆಗೆ ಕಳಿಸಲ್ಲ ಅಂತಾ ಹಠ ಹಿಡಿದು ಕುಳಿತುಬಿಟ್ಪರು. ಮಗಳ ಆರೋಗ್ಯಕ್ಕಿಂತ ನೆಂಟರಿಷ್ಟರ ಮಾತುಗಳೇ ಹೆಚ್ಚಾಗಿತ್ತು. ಸಾಲದ್ದಕ್ಕೆ ಕೊಂಚ ಗೆಲುವಾಗಿದ್ದಳಲ್ಲ, ಇನ್ನು ಸರಿ ಹೋಗಿಬಿಡುತ್ತಾಳೆ ಅನ್ನೋ ಧೈರ್ಯ ಬೇರೆ.

ವಾಸು ಎಷ್ಟೇ ಹೇಳಿದ್ರೂ ಕೇಳಲಿಲ್ಲ. ಅವರ ಹಠಕ್ಕೆ ಮಣಿದು ಸುಮ್ಮನಾಗಿಬಿಟ್ಟ.

ಹುಡುಗಿಯ ಬಾಳು ಹಾಳಾಗಬಾರದೆಂದು ಸ್ವತಃ ತಾನೇ ಅವರ ಮನೆಗೆ ಹೋಗಿದ್ದರೂ ಖಡಾಖಂಡಿತವಾಗಿ ನಿರಾಕರಿಸಿಬಿಟ್ಟಿದ್ದರು. ಏನೂ ಮಾಡಲಾರದೆ ವಾಣಿಗಾಗಿ ಮರುಗುತ್ತಾ ಕೈಚೆಲ್ಲಿದ್ದ.

ಯಾವಾಗ ಮಾತ್ರೆಗಳನ್ನು ನಿಲ್ಲಿಸಿಬಿಟ್ಟಿರೊ ಅವುಗಳ ಪ್ರಭಾವದಿಂದ ಗೆಲುವಾಗಿರುತ್ತಿದ್ದ ವಾಣಿ ಮತ್ತೇ ಮಂಕಾಗತೊಡಗಿದಳು. ದೇವರು, ಮಂತ್ರ, ತಂತ್ರ ಅಂತಾ ಇಡೀ ವರ್ಷ ಕಳೆದುಬಿಟ್ಟರು. ಯಾವ ಮಂತ್ರಕ್ಕೂ, ಯಾವ ದೇವರಿಗೂ ವಾಣಿಯನ್ನು ಸರಿ ಮಾಡಲಾಗಿರಲಿಲ್ಲ. ಕೊನೆಗೆ ಸೋತು ಇತ್ತ ಬಂದಿದ್ದರು. ಆದರೆ ಕೈಮೀರಿ ಹೋಗಿತ್ತು. ಖಾಯಿಲೆ ಹಳೆಯದಾಗಿಬಿಟ್ಟಿತ್ತು. ಇನ್ನೆಂದೂ ಆಕೆಯನ್ನು ಮೊದಲಿನ ವಾಣಿಯನ್ನಾಗಿ ಮಾಡಲು ಸಾಧ್ಯವಿರಲಿಲ್ಲ.

ಆದರೂ ಧೈರ್ಯಗೆಡದೆ ಮತ್ತೇ ಟ್ರೀಟ್ಮೆಂಟ್ ಪ್ರಾರಂಭಿಸಿದ್ದ. ಸ್ವಲ್ಪ ಸುಧಾರಿಸಿದಳು. ಸಣ್ಣ ಮಗುವಿನಂತೆ ಎಲ್ಲವನ್ನು ಹೇಳಬೇಕಾಗಿತ್ತು.

ಮುಖ ತೊಳಿ, ಸ್ನಾನ ಮಾಡು, ಊಟ ಮಾಡು, ಹೀಗೆ ಪ್ರತಿಯೊಂದು ಹೇಳಿ ಹೇಳಿ ಮಾಡಿಸಬೇಕಿತ್ತು.

ಹೇಳದಿದ್ದರೆ ಅಂದೆಲ್ಲ ಸುಮ್ಮನೇ ಇದ್ದು ಬಿಡುತ್ತಿದ್ದಳು. ಒಳಿತಾವುದು, ಕೆಡುಕು ಯಾವುದು, ಸಂತೋಷ ಅಂದ್ರೇನು, ದುಃಖ ಅಂದ್ರೇನು ಇವ್ಯಾವುದರ ಸಂವೇದನೆ ಆಕೆಗಿರಲಿಲ್ಲ. ಮೊದಲಿನಂತೆ ಮಂಕಾಗಿ ಇರದಿದ್ದರೂ ಸ್ವತಃ ತಾನೇ ಮಾಡುವಷ್ಟು ಬುದ್ದಿ ಓಡುತ್ತಿರಲಿಲ್ಲ.

ಯಾರಾದರೂ ನಕ್ಕರೆ ಪ್ರತಿಯಾಗಿ ನಗುತ್ತಾಳೆ. ಮಾತಾಡಿದರೆ ಹೌದು, ಇಲ್ಲಾ ಎನ್ನುತ್ತಾಳೆ. ಸ್ನಾನ ಮಾಡಿಸಿ, ತಿಂಡಿ ತಿನ್ನಿಸಿ ತಲೆಬಾಚಿ ನೀಟಾಗಿ ಸೀರೆ ಉಡಿಸಿ ಕೂರಿಸಿದರೆ ಬೊಂಬೆಯಂತೆ ಕೂರುತ್ತಾಳೆ. ಯಾರಾದರೂ ಬಂದು ಏಳಿಸುವವರೆಗೂ ಹಾಗೆಯೇ ಕುಳಿತಿರುತ್ತಾಳೆ. ತಾಯಿಯೋ, ಗಂಡನೋ ಏಳಿಸಿ ಊಟ ಮಾಡಿಸಿ ಮಲಗಿಸಿದರೆ ಮತ್ತೆ ಯಾರಾದರೂ ಬಂದು ಏಳಿಸಬೇಕು. ಪ್ರತಿಕ್ರಿಯೆ ತೋರದ ಜೀವಂತ ಗೊಂಬೆ. ತಮ್ಮ ಮಗಳ ಬಾಳನ್ನು ತಾವೇ ಹಾಳು ಮಾಡಿದ ಕೃತ್ಯಕ್ಕಾಗಿ ಪತ್ಚಾತ್ತಾಪ ಪಡುತ್ತಾ ವಿಧಿಯನ್ನು ಹಳಿಯುತ್ತಾರೆ ಶೆಟ್ಟರ ದಂಪತಿಗಳು. ಎಷ್ಟು ದಿನ ತಾನೇ ವಾಸು ಈ ಹೆಂಡತಿಗಾಗಿ ತನ್ನ ಯೌವನವನ್ನು ಹಾಳು ಮಾಡಿಕೊಂಡಾನು. ಯಾರಿಗೂ ತಿಳಿಯದಂತೆ ಹೊರಗೊಂದು ಸಂಬಂಧ ವಿರಿಸಿಕೊಂಡಿದ್ದಾನೆ. ಹಾಗೆಂದು ಹೆಂಡತಿಯ ಬಗ್ಗೆ ತಿರಸ್ಕಾರವಿಲ್ಲ. ಪ್ರೀತಿಯಿಂದಲೇ ನೋಡಿಕೊಳ್ಳುತ್ತಾನೆ. ಅತ್ತೆ, ಮಾವರನ್ನು ಗೌರವದಿಂದಲೇ ಕಾಣುತ್ತಾನೆ. ಹೇಗೋ ಒಂದು ಮಗುವಿದೆಯಲ್ಲಾ ಎಂದು ಮೊಮ್ಮಗನನ್ನು ನೋಡಿಕೊಳ್ಳುತ್ತಾ, ಮಗಳನ್ನು ನೋಡಿಕೊಳ್ಳುತ್ತಾ ವಾಸುವಿನ ಹೊರಗಿನ ಸಂಬಂಧದ ಬಗ್ಗೆ ತಿಳಿದರೂ ತಿಳಿಯದಂತೆ ಸುಮ್ಮನಿದ್ದು ಬಿಟ್ಟಿದ್ದಾರೆ. ವಾಣಿ ಸಾಯುವ ತನಕವೂ ಚಕಿತ್ಸೆ ಪಡೆಯುತ್ತಲೆ ಇರಬೇಕು. ಎಂದಾದರೊಮ್ಮೆ ತನ್ನ ಟ್ರೀಟ್‌ಮೆಂಟ್ ಫಲಿಸಿ ವಾಣಿ ಮೊದಲಿನಂತಾಗುತ್ತಾಳೆ ಎಂಬ ಆಶಾಕಿರಣ ತನ್ನದು. ವಾಚ್ ನೋಡಿಕೊಂಡ ಓಹ್ ಆಗ್ಲೆ ಎರಡು ಗಂಟೆ. ಅಮ್ಮ ಕಾಯ್ತ ಇರ್‍ತಾಳೆ ಎಂದುಕೊಂಡು ಮನೆಗೆ ಹೊರಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಮುದ್ದು ಚಿಲಿಪಿಲಿ ಗಿಣಿಯೇ
Next post ಬಿ.ಡಿ.ಎ ಬುಲ್ಡೋಜರ್‍

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…