ಮಂಥನ – ೨

swirling-light-1209350_960_720Unsplash“ಅನು ನೀವು ಹೀಗೆ ಮಾಡಬಹುದಾ?” ಅಫೀಸಿಗಿನ್ನೂ ಅನು ಕಾಲಿಟ್ಟಿಲ್ಲ. ಆಗಲೇ ಬಾಣದಂತೆ ಪ್ರಶ್ನೆ ತೂರಿಬಂತು ಅಭಿಯಿಂದ.

“ಏನ್ ಮಾಡಿದೆ ಅಭಿ? ನಾನೇನು ಮಾಡಿಲ್ಲವಲ್ಲ” ಅಶ್ಚರ್ಯದಿಂದ ಕಣ್ಣಗಲಿಸಿ ಕೇಳಿದಳು.

“ಏನೂ ಮಾಡಿಲ್ವಾ. ಏನೂ ಮಾಡಿಲ್ವಾ. ಯಾಕ್ರಿ ಸುಳ್ಳು ಹೇಳ್ತೀರಾ ಒಂದೇ ಆಫೀಸಿನಲ್ಲಿದ್ದು ಒಂದೇ ಸೆಕ್ಷನ್ನಲ್ಲಿದ್ದು ಒಬ್ಬರಿಗೊಂತರಾ ಇನನ್ನಿಬ್ಬರಿಗೊಂತರಾ ಮಾಡಬಹುದಾ. “ರೀ ಅಭಿ. ಸಸ್ಪೆನ್ಸ್ ಕ್ರಿಯೇಟ್ ಮಾಡಬೇಡಿ. ಅದೇನು ಅಂತ ನೇರವಾಗಿ ಹೇಳಿ. ತಪ್ಪಾಗಿದ್ರೆ ಸಾರಿ ಕೇಳ್ತೀನಿ” ರೇಗಿದಳು.

“ಕೋಪ ಮಾತ್ರ ಬೇಗ ಬಂದುಬಿಡುತ್ತದೆ. ಸರಿ ಹೇಳೇ ಬಿಡ್ತೀನಿ? ನೆನ್ನೆ ಯಾಕ್ರಿ ಆಫೀಸಿಗೆ ಬಂದಿರಲಿಲ್ಲ. “ನೆನ್ನೆನಾ… ಅದೂ… ಅದೂ” ಮಾತು ನಿಲ್ಲಿಸಿದಳು. ಹುಟ್ಟಿದ ಹಬ್ಬ ಅಚರಿಸಿಕೊಳ್ಳೋಕೆ ರಜಾ ಹಾಕಿದ್ದೆ ಅಂತ ನಿಜಾ ಹೇಳೋಕೆ ಸಂಕೋಚ ಎನಿಸಿತು.

“ಹಾ ನಾನು ಹೇಳ್ತೀನಿ. ನೆನ್ನೆ ನಿಮ್ಮ ಹ್ಯಾಪಿ ಹ್ಯಾಪಿ ಬರ್ತ್‌ ಡೇ, ಬರ್ತ್‌ ಡೇ ಮಗು ಕೇಕ್ ಕಟ್ ಮಾಡುವಾಗ ಈ ಆಫೀಸಿನ ಬಡಪಾಯಿಗಳು ನೆನಪಿಗೆ ಬರಲಿಲ್ಲವೇನೋ” ಕೊಂಕಿಸಿ ನುಡಿದು ಹೇಗೆ ಕಂಡು ಹಿಡಿದಿದ್ದೇನೆ ಅಂತ ಕಣ್ಣು ಹೊಡೆದ.

“ಅಷ್ಟೇನಾ. ನಾನು ಏನಪ್ಪ ಅಂತ ಆಂದುಕೊಂಡಿದ್ದೆ . ನಾನೇನು ಫಿಲಂ ಸ್ಟಾರಾ, ಎಲ್ಲರನ್ನು ಕರೆದು ಬರ್ತ್‌-ಡೇ ಆಚರಿಕೊಳ್ಳೋಕೆ. ಏನೋ ಕೆಲಸ ಇತ್ತು. ರಜೆ ಹಾಕಿದ್ದೆ. ಅಮ್ಮ ಸಿಹಿ ಮಾಡಿದ್ದಳು ಅಷ್ಷೇ.”

“ಅಷ್ಟೇನಾ. ತಾವು ಯಾರಿಗೂ ಪಾರ್ಟಿ ಕೊಡಲಿಲ್ಲ. ಹಾಗಾದರೆ ಸರಿ ಬಿಡಿ. ನನಗೆ ಸಿಕ್ಕಿದ ಇನ್ಫರ್ಮೇಷನ್ ತಪ್ಪು ಅಂದ ಹಾಗೆ ಆಯಿತು.”

“ಅಭಿ, ಇವಾಗ ನಿಮ್ಗೆ ಪಾರ್ಟಿ ಬೇಕು ತಾನೇ. ಆ ಪಾರ್ಟಿ ಇವತ್ತು ನಿಮ್ಗೆ ಕೊಡಿಸ್ತೀನಿ ಸರಿನಾ. ಆದ್ರೆ ಒಂದು ಕಂಡೀಷನ್. ನನ್ನ ಬರ್ತ್‌ ಡೇ ಪಾರ್ಟಿ ಅಂತ ಎಲ್ಲರಿಗೂ ಸಾರಬೇಡಿ. ನೀವು ಹಾಗೂ ಸುಶ್ಮಿತಾ ಮಾತ್ರ ನನ್ನ ಗೆಸ್ಟ್ ಆಯ್ತಾ. “ಸಂಜೆ ಆಫೀಸ್ ಮುಗಿದ ಕೂಡಲೇ ಗೋಕುಲ್‌ಗೆ ಹೋಗೋಣ. ಆಫೀಸಿನ ಸ್ಟಾಫ್ ಎಲ್ಲರಿಗೂ ಪಾರ್ಟಿ ಕೊಡಿಸುವಷ್ಟು ಭಾರ ನನ್ನ ಪರ್ಸಿಗಿಲ್ಲ ಸರಿನಾ. ಸಂಜೆ ಗೋಕುಲ್, ಮರಿಬೇಡಿ.”

ಅವಳು ಹೋಗುವುದನ್ನೇ ನೋಡುತ್ತಾ ಸಿಳ್ಳೆ ಹಾಕಿದ. “ಯಾವುದೋ ರೋಡ್ ರೋಮಿಯೋ ನಮ್ಮ ಕಛೇರಿಗೆ ಬಂದು ಬಿಟ್ಟಿದೆ. ಯಾವಾಗಿನಿಂದ ಇಂಥ ಕೆಲ್ಸ” ಸುಶ್ಮಿತಾ ಒಳಬರುತ್ತ ಅಭಿಯನ್ನು ಛೇಡಿಸಿದಳು.

“ಯಾವ ಕೆಲ್ಸ” ಅದೇ ಸುಂದರವಾದ ಹುಡ್ಗೀರನ್ನ ನೋಡ್ತಾ ಸಿಳ್ಳೆ ಹಾಕೋದು. “ತಮಗ್ಯಾಕೆ ಜಲಸ್. ತಮಗ್ಯಾರೂ ಸಿಳ್ಳೆ ಹಾಕೋರು ಇಲ್ಲಾ ಅಂಥಾನಾ” ಮತ್ತೆ ಬಾಣ ಹಿಂತಿರುಗಿಸಿದ.

“ಬೇಡಪ್ಬ. ಈ ರೋಡ್ ರೋಮಿಯೋಗಳ ಸಹವಾಸ. ಗಂಭೀರವಾದ, ಹ್ಯಾಂಡ್ಸಮ್ ಆದ ಹುಡುಗ ಸಿಕ್ಕರೆ ಬೇಕಾದರೆ ಒಂದು ಕೈ ನೋಡ್ತೀನಿ.” “ಯಾಕ್ರಿ, ನಾನು ಹ್ಯಾಂಡ್ಸಮ್ ಅಲ್ವಾ” ಅಳುಮುಖ ಮಾಡಿ ನುಡಿದ.

“ಹ್ಯಾಂಡ್ಸಮ್ ಏನೋ ನಿಜಾ. ಆದರೆ ಗಂಭೀರವಾದ ಹುಡುಗ ಅಲ್ಲವಲ್ಲ” ಕೆಣಕಿದಳು.

“ನೋಡಿ ನನ್ನ ರೇಗಿಸಬೇಡಿ. ಹೀಗೆಲ್ಲಾ ರೇಗಿಸಿದರೆ ಸೀದಾ ನಿಮ್ಮ ಮನೆಗೇ ಬಂದು ನಿಮ್ಮಪ್ಟನ ಹತ್ತಿರ ಹೇಳಿ ಬಿಡ್ತಿನಿ. “ಏನಂತ” ಗಾಬರಿ ನಟಿಸಿದಳು.

“ಈ ಹುಡುಗೀನಾ ನಾನು ಮೆಚ್ಕೊಂಡಿದ್ದೀನಿ. ಕಾಲು ತೊಳೆದು ಧಾರೆ-ಎರೆದು ಕೊಡಿ ಅಂತಾ” ಸೀರಿಯಸ್ಸಾಗಿ ನುಡಿದ.

“ನಿಜವಾಗಲೂ ಬರ್ತೀರ” ನೋಟದಲ್ಲಿ ನೋಟ ಬೆರೆಸುತ್ತಾ ಕೇಳಿದಾಗ ತಟ್ಟನೆ ನೋಟ ಬದಲಿಸಿ ಬಿಟ್ಟ ಅಭಿ.

“ಸುಶ್ಮಿತಾ, ಇವತ್ತು ಬಂಪರ್ ಹೊಡೆದಿದೆ ನಮ್ಗೆ. ನಂಗೆ ನಿಮ್ಗೆ ಇಬ್ಬರಿಗೆ ಮಾತ್ರ ಸಂಜೆ ಅನು ಪಾರ್ಟಿ ಕೊಡಿಸ್ತಾ ಇದ್ದಾರೆ ಗೋಕುಲ್‌ನಲ್ಲಿ. ಸಂಜೆ ಸೀದಾ ಅಲ್ಲಿಗೆ. ಬಾಸ್ ಬರೋ ಹೊತ್ತಾಯ್ತು ನಾ ಬರ್ತೀನಿ” ಮಾತು ಮರೆಸಿ ಸರಸರ ತನ್ನ ಸೀಟಿಗೆ ನಡೆದ.

ಮೆಲ್ಲನೆ ನಕ್ಕು “ನಾಟಿ ಬಾಯ್‌” ಎಂದುಕೊಳ್ಳುತ್ತ ಒಳ ನಡೆದಳು.

ಸಂಜೆ ಗೋಕುಲ್‌ನಲ್ಲಿ ಮೂರು ಜನರು ತಮಗೆ ಬೇಕಾದುದನ್ನು ತರಿಸಿ ತಿಂದರು. ಬಿಲ್ ಕೊಡಲು ಅಭಿ ಮುಂದಾದಾಗ. “ಅಭಿ ಇದೇ ನಂಗಿಷ್ಟವಾಗಲ್ಲ. ನಾನಲ್ವಾ ಕೊಡಿಸೋಕೆ ಕರ್ಕೊಂಡು ಬಂದಿರೋದು. ಕೊಡು ಬಿಲ್ ಇಲ್ಲಿ. “ಹಾಗಲ್ಲ ಅನು. ಗಂಡಸಾಗಿ ನಾನಿರುವಾಗ ನೀವು ಬಿಲ್ ಕೊಡೋದು ಅಷ್ಟು ಚೆನ್ನಾಗಿರಲ್ಲ. “ಯಾಕೆ ಚೆನ್ನಾಗಿರಲ್ಲ, ಗಂಡಸರೇ ಕೊಡಬೇಕು ಅಂತ ರೂಲ್ಸ್‌ ಇದೆಯಾ. ಲುಕ್ ಅಭಿ. ಈ ಗಂಡು ಅನ್ನೋ ಅಹಂ ಬೇಡ. ನಿಮ್ಮ ಹಾಗೆ ನಾವೂ ಸಂಪಾದನೆ ಮಾಡ್ತ ಇದ್ದೀವಿ. ಈ ರೀತಿ ಎಲ್ಲಾ ನಂಗೆ ಹಿಡಿಸಲ್ಲ” ಎಂದವಳೇ ಅಭಿಯ ಕೈಯಿಂದ ಬಿಲ್ ಕಿತ್ಕೊಂಡು ಪರ್ಸಿನಿಂದ ಹಣ ತಗೆದು ಪ್ಲೇಟಿನಲ್ಲಿರಿಸಿದಳು.

“ಮತ್ತೆ ಶುರುವಾಯತ್ತ ನಿಮ್ಮ ಜಗಳ. ಆಫೀಸಿನಲ್ಲಿ ತಪ್ಪಲ್ಲ, ಹೋಟೇಲಿನಲ್ಲೂ ತಪ್ಪೋದು ಬೇಡ್ವಾ. ಅಭಿ ನಿಮಗ್ಯಾಕೆ ಅನು ವಿಚಾರ ಅರ್ಥವಾಗಲ್ಲ. ಅವಳ ಹತ್ತಿರ ಗಂಡು ಅನ್ನೋ ಮೇಲರಿಮೆ ತೋರಿಸಿದರೆ ಅಷ್ಟೇ ದೂರ ಅಟ್ಟಿ ಬಿಡುತ್ತಾಳೆ. ನೀವು ಸ್ವಲ್ಪ ತಗ್ಗಿ ಬಗ್ಗಿ ನಡೆಯೋದು ಕಲೀಬೇಕು ಮಿಸ್ಟರ್ ಅಭಿಜಿತ್ ಸರ್.” ಆಗಬಹುದು ಸುಶ್‌ರವರೇ. ಇನ್ನು ಮೇಲೆ ಎಂದಿಗೂ ಹೀಗೆ ನಡೆದುಕೊಳ್ಳುವುದಿಲ್ಲ ಎಂದು ಅಣೆ ಮಾಡಿ ಹೇಳುತ್ತೇನೆ. ಅನುಷಾರವರು ಈ ಬಡಪಾಯಿಯನ್ನು ಮನ್ನಿಸುವಂತವರಾಗಬೇಕು” ನಾಟಕೀಯವಾಗಿ ನುಡಿದು ಕೈಗಳೆರಡನ್ನು ಜೋಡಿಸಿ ತಲೆಬಾಗಿದ.

“ಹಿಯರ್, ಹಿಯರ್. ಹೀಗೆ ಗಂಡುಗಳು ನಮ್ಮ ಮುಂದೆ ಸದಾ ತಲೆ ತಗ್ಗಿಸಬೇಕು. ಗೆಳತಿಯೆ ಈ ಸ್ನೇಹಿತನನ್ನು ಕ್ಷಮಿಸಿ ಬಿಡು” ಸುಶ್ಮಿತ ಲಘುವಾಗಿ ನುಡಿದಳು.

“ಸಾಕು ಎಲ್ಲಾ ಈ ಕಡೆನೇ ನೋಡ್ತಾ ಇದ್ದಾರೆ. ಹೋಗೋಣ್ವಾ” ಎದ್ದು ನಿಂತು ಅನು ಅವಸರಿಸಿದಳು.

ಹೊರ ಬಂದರೆ ಬಾನೆಲ್ಲಾ ಮೋಡ ಕವಿದು ಕಪ್ಟಾಗಿಬಿಟ್ಟಿತ್ತು. “ಸುಶಿ ಸಖತ್ ಮಳೆ ಬರೋ ಹಾಗಿದೆ. ಏನೇ ಮಾಡೋದು. ನಾನು ಮನೆ ತಲುಪುವುದರಲ್ಲಿ ತೊಪ್ಬೆ ಅಗಿಬಿಡ್ತೀನಿ. ಮಳೇಲಿ ಕೈನೀಲಿ ಬರ್ತೀನಿ ಅಂದ್ರೆ ಅಮ್ಮ ಗಾಬರಿಪಡ್ತಾಳೆ” ಮೋಡಗಳನ್ನು ನೋಡುತ್ತ ಆತಂಕ ಪಟ್ಟಳು.

“ಅನು. ನಿಂಗೆ ಹೇಳೋದೇ ಮರ್ತಿದ್ದೆ ನೋಡು. ನಮ್ಮ ಮನೆಯವರೆಲ್ಲ ಇವತ್ತು ಊರಿಗೆ ಹೋಗಿದ್ದಾರೆ. ನಾನೊಬ್ಳೆ ಮನೇಲಿ. ಈವತ್ ನಮ್‌ ಮನೇಲೇ ಉಳ್ಕೊಳ್ಳೆ.”

“ಹಾಗೆ ಮಾಡಿ ಅನು. ಸುಶ್ಮಿತಾ ಮನೆ ಹತ್ತಿರದಲ್ಲಿದೆ ಅಲ್ವೆ. ಮಳೆ ಬರೋದ್ರೊಳಗೆ ಸೇರಿಕೊಂಡು ಬಿಡಬಹುದು. ಕಮಾನ್ ಹರಿ ಅಪ್ ಬೇಗ ಹೊರಡಿ” ಗಾಡಿ ಸ್ಟಾರ್ಟ್‌ ಮಾಡುತ್ತಾ ಅಭಿ ಅವರಿಬ್ಬರನ್ನು ವೇಗವಾಗಿ ಮನೆ ಸೇರಿಕೊಳ್ಳಲು ತಿಳಿಸಿದ.

ಮುಂದೇನೂ ತೋಚದೆ ಸುಶ್ಮಿತಳನ್ನು ಹಿಂಬಾಲಿಸಿದಳು.

ಮನೆ ಒಳಗೆ ಸೇರಿಕೊಳ್ಳುವುದಕ್ಕೂ ಸಿಡಿಲು ಗುಡುಗುಗಳ ಆರ್ಭಟ ಪ್ರಾರಂಭವಾಗಿ ಮಳೆ ಜೋರಾಗಿ ಸುರಿಯಲಾರಂಭಿಸಿತು.

“ಅಮ್ಮನಿಗೆ ತಿಳಿಸಬೇಕಾಗಿತ್ತು ಸುಶಿ. ಸುಮ್ನೆ ಹೆದರಿಕೊಳ್ತಾಳೆ.”

“ಫೋನ್ ಮಾಡು ಅನು. ನಾನು ಡ್ರೆಸ್ ಚೇಂಜ್ ಮಾಡಿ ಬರ್ತೀನಿ” ಎನ್ನುತ್ತ ಒಳಹೋದಳು.

ನೈಟಿ ಧರಿಸಿ “ಅನು ನೈಟಿ ಇಟ್ಟಿದ್ದೇನೆ. ನೀನು ಡ್ರೆಸ್ ಚೇಂಜ್ ಮಾಡು” ಎಂದಳು.

“ಸುಶ್ಮಿತಾ ಫೋನ್ ಡೆಡ್ ಕಣೇ. ಈಗೇನು ಮಾಡೋದು.”

“ಹೌದಾ. ಬೆಳಿಗ್ಗೆ ಸರಿ ಇತ್ತಲ್ಲ. ಜೋರಾಗಿ ಗಾಳಿ, ಮಳೆ ಬಂತಲ್ಲ ಎಲ್ಲೋ ಡೆಡ್ ಆಗಿದೆ. ಮಳೆ ನಿಲ್ಲಲಿ ತಾಳು ಎಸ್.ಟಿ.ಡಿ. ಗೆ ಹೋಗಿ ಮಾಡೋಣ” ಎಂದಳು.

ಅನೂ ಕೂಡ ಡ್ರೆಸ್ ಬದಲಿಸಿದಳು. ಟಿ.ವಿ. ಅನ್ ಮಾಡಿ ಸೋಫಾದ ಮೇಲೆ ಕುಳಿತು “ಸುಶಿ, ಅಡಿಗೆ ಏನೂ ಮಾಡಬೇಡ. ನಂಗಂತು ಹೊಟ್ಟೆ ತುಂಬಿ ಹೋಗಿದೆ. ನಿಂಗೆ ಬೇಕಿದ್ರೆ ಮಾಡ್ಕೊ”

ಅಡಿಗೆ ಮನೆಯಲ್ಲಿದ್ದ ಸುಶೀಗೆ ಕೂಗಿ ಹೇಳಿದಳು.

“ನಂಗೂ ಬೇಡ ಕಣೇ. ಹಾಲಿದೆ ಅದನ್ನೇ ಕುಡಿದು ಮಲಗೋಣ.”

ಅನುವಿನ ಬದಿಗೆ ಕೂರುತ್ತಾ ಟಿ.ವಿ. ನೋಡತೊಡಗಿದಳು.

“ಥೂ ಯಾವ ಚಾನೆಲ್ ಹಾಕಿದ್ರೂ ಲವ್ ಸ್ಬೋರಿ. ಹೀರೋ ಹೀರೊಯಿನ್‌ಗಳ ಕುಣಿತ. ಇವರಿಗೆ ಕಥೆಗಳೇ ಸಿಗಲ್ವಾ” ಬೇಸರಿಸಿಕೊಂಡಳು ಅನು.

“ಈ ವಯಸ್ಸಿನಲ್ಲಿ ಅಂತಹ ಕಥೆಗಳೇ ಅಲ್ವಾ ಇಷ್ಟವಾಗೋದು ಅನು. ಕಾಲೇಜು ಹುಡುಗ ಹುಡುಗಿಯರು ಇಂತಹ ಸಿನಿಮಾ ಅಂದ್ರೆ ಮುಗಿಬೀಳ್ತಾರೆ ನಿಂಗ್ಯಾಕೆ ಇಷ್ಟವಾಗಲ್ಲ. “ಏನೋಪ್ಪ” ಪ್ರೀತಿ ಪ್ರೇಮ ಅಂದ್ರೆನೇ ಒಂಥರಾ ಅಲರ್ಜಿ. ಇನ್ನು ಅದೇ ಸಿನಿಮಾ ನೋಡ್ತಾ ಇದ್ರೆ ನಂಗೆ ಹುಚ್ಚು ಹಿಡಿಯುತ್ತೆ ಅಷ್ಟೆ.”

“ಅನು, ನೀನು ಯಾರನ್ನೂ ಪ್ರೀತಿಸಲಿಲ್ಲವಾ. ಕಾಲೇಜಿನ ದಿನಗಳಲ್ಲೂ.” ಎಲ್ಲಾ ಗೊತ್ತಿದ್ದೂ ಯಾವುದಕ್ಕೋ ಪೀಠಿಕೆ ಹಾಕಿದಳು.

“ನಾನಾ, ಪ್ರೀತಿನಾ, ಅಯ್ಯೋ ಸುಶೀ, ಲವ್ ಅಂದ್ರೆ ಮಾರು ದೂರ ಹಾರೋಳು ನಾನು. ಹುಡುಗರ ಸ್ನೇಹನೇ ನಾನು ಮಾಡ್ತ ಇರಲಿಲ್ಲ. ಒಂದೇ ಕಾಲೇಜಿನಲ್ಲಿದ್ರೂ, ಒಂದೇ ಕ್ಲಾಸಿನಲ್ಲಿದ್ರೂ ದೂರಾನೇ ಇರ್ತಿದ್ದೆ. ಗಂಡಸರು ಅಂದ್ರೆ ಏನೋ ಒಂಥರ ನನಗೆ” ಛಾನಲ್ ಬದಲಿಸುತ್ತಾ ನುಡಿದಳು.

“ಈ ಅಭಿ ಒಬ್ನೆ ನಂಗೆ ಇಷ್ಟೊಂದು ಕ್ಲೋಸ್ ಆಗಿರೋದು. ತಾನಾಗಿಯೇ ಮೇಲೆ ಬಿದ್ದು ಬಿದ್ದು ನನ್ನ ಫ್ರೆಂಡ್‌ಶಿಪ್ ಮಾಡ್ಕೊಂಡುಬಿಟ್ಟ.”

“ಅಭಿ ಬಗ್ಗೆ ನಿನ್ನ ಅಭಿಪ್ರಾಯ ಏನು ಅನು” ಅವಳ ಮುಖವನ್ನೇ ದಿಟ್ಟಿಸುತ್ತಾ ಸುಶ್ಮಿತಾ ಕೇಳಿದಳು.

“ಹೀ ಈಸ್ ವೆರಿ ನೈಸ್ ಬಾಯ್‌”

“ಅಷ್ಟೇನಾ” ಒತ್ತಿ ಕೇಳಿದಳು.

ಟಿ.ವಿ. ಅಫ್ ಮಾಡಿದ ಅನು “ಯಾಕೆ ಸುಶೀ, ಹಾಗೆ ಕೇಳ್ತಾ ಇದ್ದಿಯಾ. ಏನಾದರೂ ಅನುಮಾನನಾ. ಈ ಅನು ಯಾವತ್ತೂ ಯಾವ ಗಂಡಿಗೂ ಅಂತಹ ಸಲುಗೆ ಕೊಡಲ್ಲ” ಆತ್ಮ ವಿಶ್ವಾಸ ತುಂಬಿ ತುಳುಕಾಡುತ್ತಿತ್ತು ಮಾತಿನಲ್ಲಿ.

“ತಪ್ಪು ತಿಳ್ಕೋಬೇಡ ಅನು. ಅಭಿ ಒಳ್ಳೆ ಹುಡುಗ. ಬುದ್ಧಿವಂತ. ನಿನ್ನಷ್ಟೇ ಓದಿದ್ದಾನೆ. ಈ ಸ್ನೇಹ ಮತ್ಯಾವುದರಲ್ಲೋ ಕೊನೆಯಾಗಲಿ ಅಂತ ಅವನು ಬಯಸಿದರೆ” ನಿಲ್ಲಿಸಿದಳು.

“ನೆವರ್. ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ಸ್ನೇಹ, ಸ್ನೇಹವಾಗಿಯೇ ಉಳಿಯಬೇಕು. ಮತ್ಯಾವುದರಲ್ಲಿಯೂ ಕೊನೆಯಾಗೋಕೆ ನಂಗೆ ಇಷ್ಟ ಇಲ್ಲಾ” ಕಟುವಾಗಿ ನುಡಿದಳು.

“ಅನು ಒಂದೇ ಸಲ ನಿರ್ಧಾರಕ್ಕೆ ಬರಬೇಡ. ಎಂದಾದರೂ ಒಂದು ದಿನ ನೀನು ಮದ್ವೆ ಅಗಲೇಬೇಕು ಅದು ಅಗೋದೇ ಆದರೆ ಈ ಅಭಿನೇ ಯಾಕೆ ಆಗಬಾರದು. ಅವನಿಗೂ ಈ ಬಗ್ಗೆ ಆಸಕ್ತಿ ಇದೆ ಅನ್ನಿಸುತ್ತೆ.” ಈ ಜೀವನದಲ್ಲಿ ನನ್ನ ನಿರ್ಧಾರವೇ ಅಂತಿಮ ನಿರ್ಧಾರ ಸುಶಿ. ಪ್ರೀತಿ ಪ್ರೇಮ ಮದುವೆ ಇದ್ಯಾವುದೂ ಈ ಬಾಳಿನಲ್ಲಿ ಬಾರದಂತಹ ವಿಷಯಗಳು. ನಿಜಾ ಹೇಳಬೇಕು ಅಂದ್ರೆ ಗಂಡಸರನ್ನ ಕಂಡರೆ ನಂಗೊಂಥರಾ ಹೇಸಿಗೆ, ಜಿಗುಪ್ಸೆ, ತಿರಸ್ಕಾರ. ಇಷ್ಟು ವಿದ್ಯಾವಂತೆಯಾಗಿ ಆ ರೀತಿ ತೋರಿಸಿಕೊಂಡರೆ ನನ್ನ ಫೂಲ್ ಅಂತಾರೆ ಅಂತಾ ಮನಸ್ಸಿನ ಭಾವನೆಗಳಿಗೆ ಬೇಡಿ ತೊಡಿಸಿ, ಎಲ್ಲರೊಂದಿಗೆ ಸಹಜವಾಗಿರೋಕೆ ಪ್ರಯತ್ನಿಸುತ್ತೇನೆ. ಅಭಿ ಜೊತೆ ಕೂಡ ಅಷ್ಟೆ. ಅತ ನನ್ನ ಸಹೋದ್ಯೋಗಿ, ಗೆಳೆಯ ಒಳ್ಳೆ ಹುಡುಗ ಅಷ್ಟೆ.”

“ನೀನು ತಪ್ಪು ಮಾಡ್ತ ಇದ್ದಿಯಾ ಅನು. ನಿನ್ನ ಭಾವನೆಗಳನ್ನು ನೀನು ಬದಲಾಯಿಸಿಕೊಳ್ಳಬೇಕು. ಪ್ರಕೃತಿಯ ಧರ್ಮಕ್ಕೆ ವಿರೋಧವಾಗಿ ನಾವು ಹೋಗೋಕೆ ಸಾಧ್ಯವಿಲ್ಲ. ಅಭಿ ಅಲ್ಲದೆ ಇದ್ರೆ ಮತ್ತೊಬ್ಬ ಯಾರನ್ನಾದರೂ ಸರಿ ನೀನು ಮದ್ವೆ ಅಗಲೇಬೇಕು. ಈಗಾಗಲೇ ನೊಂದಿರೋ ನಿಮ್ಮ ತಾಯಿನಾ ಮತ್ತೆ ನೋಯಿಸಬೇಡ. ಬದಲಾಗೋಕೆ ಪ್ರಯತ್ನ ಪಡು ಅನು. ಕತ್ತಲೆಯ ಹಿಂದೆ ಬೆಳಕು ಇರುತ್ತೆ. ಕೆಟ್ಟದರ ಮತ್ತೊಂದು ಮುಖ ಒಳ್ಳೆಯತನ. ಇದನ್ನು ಅರ್ಥಮಾಡಿಕೊಂಡರೆ ಸಾಕು. ಪ್ರಪಂಚದಲ್ಲಿ ಕೆಟ್ಟತನದ ಪಾಲು ಎಷ್ಟೋ, ಒಳ್ಳೇತನದ ಪಾಲು ಅಷ್ಟೇ ಇದೆ. ಬದಲಾಗು ಅನು” ಗಂಭೀರವಾಗಿ ಉಪದೇಶಿಸಿದಳು.

“ಪ್ರಯತ್ನ ಪಡ್ತೀನಿ ಸುಶಿ. ಆದರೆ ಗೆಲುವಂತೂ ಸಾಧ್ಯ ಇಲ್ಲಾ. ಮಳೆ ನಿಂತಿದೆ ಫೋನ್ ಮಾಡಿ ಬರೋಣ ಬಾ” ಎದ್ದಳು ಮಾತು ಬೆಳೆಸಲು ಇಚ್ಬಿಸದೆ. ಬಾಗಿಲಿಗೆ ಬೀಗ ಹಾಕಿ ಬೂತಿನತ್ತ ಹೆಜ್ಜೆ ಹಾಕಿದರು.
******

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂದಾನೋ ದೇವರೇ
Next post ಸೂರ್ಯನೂ ಅಷ್ಟೆ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…