Home / ಬಾಲ ಚಿಲುಮೆ / ಕಥೆ / ಚಕ್ರಧರನ ಕಥೆ

ಚಕ್ರಧರನ ಕಥೆ

ಒಂದಾನೊಂದು ಊರಿನಲ್ಲಿ ನಾಲ್ವರು ಮಿತ್ರರು ಇದ್ದರು. ಅವರು ದರಿದ್ರರು. ಒಂದು ದಿನ ಅವರು ನಾಲ್ವರೂ ಸೇರಿ ತಮ್ಮ ಬಡತನದ ವಿಚಾರವಾಗಿ ಚರ್ಚೆ ಮಾಡಿದರು:- ಹುಲಿ ಕರಡಿಗಳಿರುವ ವನದಲ್ಲಿ, ಜನವೇ ಇಲ್ಲದೆ, ಮುಳ್ಳು ಹಿಡಿದು ಹೋಗಿರುವ ಕಾಡುಗಳಲ್ಲಿ ಹುಲ್ಲುಹಾಸಿಕೊಂಡು ನಾರುಡೆ ಉಟ್ಟುಕೊಂಡು ಇದ್ದರೂ ಚಿಂತೆಯಿಲ್ಲ. ನೆಂಟರನಡುವೆ ಹಣವಿಲ್ಲದೆ ಬಾಳಬಾರದು.
ಜೊತೆಗೆ
ಸಿರಿಯು ತೊಲಗಲು ನರನ ಸಾಹಸ ವಿಫಲವಾಗುವುದು ||
ಸೇವೆ ಮಾಡಲು ತೃಪ್ತನಾಗದೆ ಒಡೆಯ ಒದೆಯುವನು |
ಬಂಧು ವರ್ಗವು ದೂರಗೈವುದು ಗುಣವು ಮರೆಯುವುದು ||
ಮಗನು ದೂರಕೆ ಸರಿವನಾಪದ ತಾನೆ ತಾನಹುದು ||
ಸಾಧು ಸತಿಯಳು ತಣ್ಣಗಿರುವಳು ಗೆಳೆಯ ಕ್ಳೈ ಬಿಡುವ ||೯||
ಶೂರನಾಗಲಿ ರೂಪನಾಗಲಿ ವಾಗ್ಮಿಯಾಗಿರಲಿ |
ಶಸ್ತ್ರ ಶಾಸ್ತ್ರವನೊಲಿಸಿಕೊಂಡವ ಧೀರನಾಗಿರಲಿ ||
ಅರ್ಥವಿದ್ದರೆ ಮಾತ್ರ ಪಡೆವನು ಮಾನಕೀರ್ತಿಗಳ |
ಅರ್ಥ ಮಹಿಮೆಯನೇನ ಪೇಳ್ವುದು ಚಿತ್ರಚಿತ್ರವದು ||೧೦||
ಅರ್ಥ ಕಳೆಯಲು ಪುರುಷನೆಂಥವನಾಗಲಿ|
ಬಿಡುವ ಸತ್ಯವ ಬಿಡುವ ಬಂಧುಬಾಂಧವರ||
ಬಿಡುವ ತಾಯಿಯ ಬಿಡುವ ಜನ್ಮದ ಭೂಮಿಯ|
ಬಿಡುವ ನಿಷ್ಟರ ನಡೆವ ನನ್ಯರದೇಶಕೆ ||೧೧||
ಅದರಿಂದ ನಾವು ಎಲ್ಲಾದರೂ ಹೋಗಿ ಹಣವನ್ನು ಸಂಪಾದಿಸಿಕೊಂಡೇ ಬರಬೇಕು.” ಎಂದು ನಿಶ್ಚಯ ಮಾಡಿಕೊ೦ಡು ಮಿತ್ರ ಬಾಂಧವರನ್ನೆಲ್ಲ ಬಿಟ್ಟು ಪ್ರಯಾಣ ಹೊರಟು, ಅವಂತೀ ದೇಶಕ್ಕೆ ಬಂದರು. ಅಲ್ಲಿ ಸಿಪ್ರಾ ನದಿಯಲ್ಲಿ ಮಿಂದು ಮಡಿಯಾಗಿ, ಅಲ್ಲಿನ ದೇವರಾದ ಮಹಾಕಾಲೇಶ್ವರನ ದರ್ಶನ ಮಾಡಿ ಬರುತ್ತಿರುವಾಗ ಅವರಿಗೆ ಭೈರವಾನಂದನೆಂಬ ಯೋಗಿಯು ಸಿಕ್ಕಿದನು. ಆತನನ್ನು ಇವರು ಭಕ್ತಿಯಿಂದ ನಮಸ್ಕಾರ ಮಾಡಲು ಆತನು ಇವರನ್ನು ತನ್ನ
ಮಠಕ್ಕೆ ಕರೆದುಕೊಂಡು ಹೋದನು: “ನೀವು ಎಲ್ಲಿಂದ ಬಂದಿರಿ ಎಲ್ಲಿಗೆ ಹೊರಟರುವಿರಿ? ಏತಕ್ಕಾಗಿ ಹೋಗುತ್ತಿದ್ದೀರಿ?” ಎಂದು ಕೇಳಲು ಇವರು; ನಾವು “ಸಿದ್ಧಿಯನ್ನು ಸಂಪಾದಿಸಲು ಹೊರಟಿರುವೆವು. ನಮಗೆ ಧನವು ಬೇಕು. ಆ ಪ್ರಯತ್ನದಲ್ಲಿ ನಾವು ಸತ್ತರೂ ಚಿಂತೆಯಿಲ್ಲ. ಅದರಿಂದ ಧನಕ್ಕಾಗಿ ಬೇಕಾದ ಸಾಹಸ ಮಾಡಲು ಸಿದ್ಧರಾಗಿರುವೆವು : ಸಾಹಸಕ್ಕೆ ಸಿಕ್ಕಿದ್ದು ಯಾವುದು ತಾನೇ ಉಂಟು?
ಹಿಡಿದು ಮಾಡಿದೆ ಮಾನವನ ಹಿರಿದು ಯತ್ನ ||
ಸರಿದೂಗುವುದು ದೈವ ಮಾಡಿದ ಕಾರ್ಯವ ||೧೨||
ಬೇಕೆಂದುದ ಮಾಡುವ ಯತ್ನವ ಬಲ್ಲಾ ಪುರುಷ ||
ಮಾನವ ಮಾಡಿದ ಯತ್ನ | ಮೂಢರ ಕಣ್ಣಿನ ದೈವ ||೧೩||
ಕಷ್ಟವಿಲ್ಲದ ಸುಖವದಾನುದೀ ಲೋಕದೊಳು ದೊರೆಯುವುದು ||
ಪುರುಷೋತ್ತಮನು ಲಕ್ಷ್ಮಿಯನು ಪಡೆಯೆ ಮಥಿಸಿದನು ಸಾಗರವ ||೧೪||
ಅದರಿಂದ ತಾವು ಕೃಪೆಮಾಡಿ ನಮಗೆ ಧನವು ಲಭಿಸುವ ಉಪಾಯವನ್ನು ಹೇಳಿಕೊಡಬೇಕು. ಗುಹೆಗೆ ನುಗ್ಗೆನ್ನುವಿರಾ? ಶಾಕಿನಿಯನ್ನು ಒಲಿಸಿಕೊಳ್ಳಬೇಕು ಎನ್ನುವಿರಾ? ಸ್ಮಶಾನದಲ್ಲಿ ವಾಸಮಾಡು ಎನ್ನುವಿರಾ? ನಮ್ಮ ಮೈಯ ಮಾಂಸವನ್ನೇ ಕಿತ್ತು ಮಾರು ಎನ್ನುವಿರಾ? ತಾವು ಬಹಳವಾದ ಯೋಗ ಸಿದ್ಧಿಯನ್ನು ಪಡೆದವರು ಎಂದು ತಮ್ಮ ಕೀರ್ತಿಯನ್ನು ಕೇಳಿರುವೆವು. ನಾನು ಎಂತಹ ಸಾಹಸನನ್ನಾದರೂ ಮಾಡಲು ಸಿದ್ಧರಾಗಿರುವೆವು.
ದೊಡ್ಡಾಸೆಯ ಗೆಲುವೊಡೆ | ದೊಡ್ಡವನಾಗೈಯ್ಯ ||
ಬಡಬಾಗ್ನಿಯ ಧರಿಸಲು ಕಡಲ | ಲ್ಲದೆ ಕೊಳನಾಗುವುದೇನಯ್ಯಾ ||೧೫||
ಅದರಿಂದ ನಮ್ಮನ್ನು ಅನುಗ್ರಹಿಸಿ ಉದ್ಧಾರ ಮಾಡಬೇಕು.” ಎಂದು ನಮಸ್ಕಾರ ಮಾಡಿದರು. ಭೈರವಾನಂದರು ಇವರು ಯೋಗ್ಯರು ಎಂದು ತಿಳಿದು ಅವರಿಗೆ ನಾಲ್ಕು ಸಿದ್ಧವರ್ತಿಗಳನ್ನು ಮಾಡಿಕೊಟ್ಟು, “ಇವು ಸಿದ್ಧವರ್ತಿಗಳು. ಇದನ್ನು ತೆಗೆದುಕೊಂಡು ನೀವು ಹಿಮಾಲಯಕ್ಕೆ ಹೋಗಿ ಅಲ್ಲಿ ಎಲ್ಲಿ ನಿಮ್ಮ ಕೈಯಲ್ಲಿರುವ ಬತ್ತಿಯು ಬೀಳುವುದೋ ಅಲ್ಲಿ ಅಗೆಯಿರಿ. ಸೆಂಶಯವಿಲ್ಲದೆ ಅಲ್ಲಿ ನಿಮಗೆ ಧನವು ಸಿಕ್ಕುವುದು.” ಎಂದು ಹೇಳಿ ಆಶೀರ್ವಾದ ಮಾಡಿ ಕಳುಹಿಸಿಕೊಟ್ಟರು.
ಹಾಗೆಯೇ ಅವರು ಹಿಮಾಲಯದ ಭೂಮಿಗೆ ಹೋದರು. ಅಲ್ಲಿ ಹಾದಿ ಹಿಡಿದು ಹೋಗುತ್ತಿರುವಾಗ, ಒಬ್ಬನ ಕೈಯಲ್ಲಿದ್ದ ಬತ್ತಿಯು ನೆಲಕ್ಕೆಬಿತ್ತು. ಅವನು ಅಗೆದು ನೋಡಿದರೆ, ಅಲ್ಲಿ ತಾಮ್ರವು ಬೇಕಾದ ಹಾಗೆ ಸಿಕ್ಕಿತು. ಅವನು ಅದನ್ನು ತೆಗೆದುಕೊಳ್ಳೋಣ ಎನ್ನಲು ಮಿಕ್ಕವರು “ಬಿಡೋ, ಈ ತಾಮ್ರದಿಂದೇನು? ಎಷ್ಟು ತುಂಬಿಕೊಂಡು ಹೋದರೂ ನಮ್ಮ ಬಡತನ ಅಡಗುವುದಿಲ್ಲ. ಬೇಡ, ಬಿಡು. ಮುಂದೆ ಹೋಗೋಣ” ಎಂದು ತಡೆದರು. ಅವನು ಅದಕ್ಕೆ ಒಪ್ಪದೆ, “ನೀವು ಹೋಗಿ. ನನಗೆ ಇದೇ ಸಾಕು” ಎಂದು ತಾಮ್ರವನ್ನು ತನಗೆ ಬೇಕಾದಷ್ಟು ತೆಗೆದುಕೊಂಡು ಊರಿಗೆ ಹೋದನು.
ಮುಂದೆ ಹೋಗುತ್ತಿರಲು, ಇನ್ನೊಬ್ಬನ ಬತ್ತಿಯೂ ಬಿತ್ತು. ಅಲ್ಲಿ ಅಗೆದು ನೋಡಿದರೆ ಅದು ಬೆಳ್ಳಿಯ ನೆಲ. ಬತ್ತಿಯವನು “ಬನ್ನಿ, ಬೆಳ್ಳಿಯನ್ನು ತುಂಬಿಕೊಂಡು. ಹೋಗೋಣ?” ಎನ್ನಲು, ಇತರರು, “ಹಿಂದೆ ತಾಮ್ರ ಭೂಮಿಯಾಯಿತು. ಇದು ಬೆಳ್ಳಿಯ ಭೂಮಿ, ಮುಂದೆ ಚಿನ್ನದ ಭೂಮಿಯಿರಬೇಕು. ಇದು ಬೇಡ ಬಾ. ಹೋಗೋಣ?” ಎಂದರು. ಅವನು ಅದಕ್ಕೊಪ್ಪದೆ, “ನೀವು ಬೇಕಾದರೆ ಹೋಗಿ, ನಾನು ಬರುವುದಿಲ್ಲ.” ಎಂದು ತನಗೆ ಬೇಕಾದಷ್ಟು ಬೆಳ್ಳಿಯನ್ನು ತೆಗೆದುಕೊಂಡು ಊರಿಗೆ ಹೋದನು.
ಉಳಿದಿಬ್ಬರೂ ಮುಂದೆ ಹೋದರು. ಅವರಲ್ಲಿ ಒಬ್ಬನ ಕೈಯಲ್ಲಿದ್ದ ಬತ್ತಿಯು ಒಂದು ಕಡೆ ಬಿತ್ತು. ಅಲ್ಲಿ ಅಗೆದು ನೋಡಿದರೆ ಚಿನ್ನವು ತಾನೇ ತಾನಾಗಿತ್ತು. ಬತ್ತಿಯವನು, “ಬಾ. ಚಿನ್ನಕ್ಕಿಂತ ಇನ್ನೇನು? ಇದನ್ನು ಬೇಕಾದಷ್ಟು ತುಂಬಿಕೊಂಡು ಹೋಗೋಣ” ಎಂದನು. ಇನ್ನೊಬ್ಬನು “ಆಯ್ಯೋ ಮೂಢ, ಕಾಣೆಯಾ? ಮೊದಲು ತಾಮ್ರ, ಆಮೇಲೆ ಬೆಳ್ಳಿ, ಈಗ ಚಿನ್ನ. ಇನ್ನು ಮುಂದೆ ಹೋದರೆ ರತ್ನಗಳು ಇರಲೇ ಬೇಕು. ರತ್ನವೊಂದರಿಂದಲೇ ದಾರಿದ್ರ್ಯವೆಲ್ಲ ಹೋಗುವುದು. ಅದರಿಂದ ನಡೆ, ಮುಂದೆ ಹೋಗೋಣ. ಈ ಚಿನ್ನದ ಭಾರ ಹೊರುವವರು ಯಾರು?” ಎಂದನು. ಅದಕ್ಕವನು “ನೀನು ಹೋಗು. ನೀನು ಬರುವವರೆಗೂ ನಾನಿಲ್ಲಿ ಕಾದಿರುವೆನು” ಎಂದು ಅಲ್ಲಿಯೇ ನಿಂತನು.
ಕೊನೆಯವನು ಮುಂದೆ ನಡೆದನು. ದಾರಿಯಲ್ಲಿ ಬಿಸಿಲಿನ ಝಳ ತಡೆಯಲಾರದಷ್ಟು ಆಯಿತು. ಬಾಯಾರಿಕೆ ತಾನೇ ತಾನಾಯಿತು. ಆ ಸಂಕಟದಲ್ಲಿ ದಾರಿಯು ತಪ್ಪಿ ಹೋಯಿತು. ಎಲ್ಲೆಲ್ಲೋ ಅಲೆಯುತ್ತ ಎದುರಿಗೆ ಒಬ್ಬನು ಬರುತ್ತಿರುವುದನ್ನು ಕಂಡನು. ಅವನಿಗೆ ತಲೆಯ ಮೇಲೆ ಸುತ್ತುತ್ತಿರುವ ಚಕ್ರ. ಅದರಿಂದ ನೆತ್ತಿಯಲ್ಲಿ ಆಗಿರುವ ಗಾಯದಿಂದ ರಕ್ತವು ಸುರದು ದೇಹವೆಲ್ಲಾ ರಕ್ತಮಯವಾಗಿದೆ. ಅವನನ್ನು ಕಂಡು ಹೊಸಬನು “ಅಯ್ಯಾ, ನೀನಾರು? ಇದೇನು ನಿನ್ನ ನೆತ್ತಿಯಲ್ಲಿ ಈ ಸುತ್ತುತ್ತಿರುವ ಚಕ್ರ? ಇಲ್ಲೆಲ್ಲಿ ಯಾದರೂ ನೀರಿರುವುದೇ ಹೇಳು?” ಎಂದು ಕೇಳಿದನು. ಅವನ ಮಾತು ಮುಗಿಯುತ್ತಿದ್ದ ಹಾಗೆಯೇ, ಆ ಚಕ್ರವು ಅವನ ತಲೆಯ ಮೇಲಿಂದ. ಹೊಸಬನ ತಲೆಯ ಮೇಲಕ್ಕೆ ಹಾರಿತು. ಅವನು
“ಅಯ್ಯೋ, ಇದೇನಿದು?” ಎಂದು ಕೇಳಿದನು.
“ನನಗೂ ಹೀಗೆಯೇ ಆಯಿತು.”
ಹಾಗಾದರೆ. ಇದು ತೀರುವುದು ಎಂದಿಗೆ? ಬಹಳ ನೋವಾಗುತ್ತಿರುವುದಲ್ಲಾ!”
“ನಿನ್ನಂತೆಯೇ ಸಿದ್ಧವರ್ತಿಯನ್ನು ತಂದಿರುವವನು ಯಾವನಾದರೂ ಬಂದು ನಿನ್ನನ್ನು ಮಾತನಾಡಿಸಿದಕ್ಕೆ ಆಗ ಇದು ನಿನ್ನ ತಲೆಮೇಲಿಂದ ಅವನ ತಲೆಯ ಮೇಲಕ್ಕೆ ನೆಗೆಯುವುದು.”
“ಹಾಗಾದಕ್ಕೆ ಇದು ನಿನ್ನ ತಲೆಯ ಮೇಲೆ ಎಷ್ಟು ದಿನದಿಂದ ಇತ್ತು?”
“ಈಗ ಭೂಮಿಯಲ್ಲಿ ಆಳುತ್ತಿರುವ ರಾಜನಾರು?”
“ವೀಣಾ ವತ್ಸರಾಜನು ಆಳುತ್ಮಿರುವನು?”
“ನಾನು ಕಾಲದ ಲೆಕ್ಕವನ್ನು ಅರಿಯೆ. ನನಗೆ ಹೀಗಾದಾಗ ಶೀರಾಮನು ರಾಜ್ಯವಾಳುತ್ತಿದ್ದನು. ನಾನೆ ದಾರಿದ್ರ್ಯದ ಸಂಕಟವನ್ನು ತಡೆಯಲಾರದೆ, ಸಿದ್ಧವರ್ತಿಯನ್ನು ಪಡೆದುಕೊಂಡು ಇಲ್ಲಿಗೆ
ಬಂದೆನು. ಆ ವೇಳೆಗೆ ಒಬ್ಬನು ಚಕ್ರಮಸ್ತಕನಾಗಿದ್ದನು. ನಾನು ಅವನನ್ನು ಕಂಡು ನೀನು ಕೇಳಿದಂತೆಯೇ ಕೇಳಿದೆನು. ನಿನಗೆ ಆದಂತೆ ನನಗೂ ಅಯಿತು.”
“ಅಯಿತು. ಹೀಗೆ ನೆತ್ತಿಯಲ್ಲಿ ಚಕ್ರವನ್ನು ಹೊತ್ತು ತಿರುಗುತ್ತಿದ್ದ ನಿನಗೆ ಅನ್ನ ನೀರು ಎಲ್ಲಿಂದ ಬರುತ್ತಿತ್ತು?”
“ಅಯ್ಯಾ, ಇಲ್ಲಿರುವ ನಿಧಿಗಳನ್ನು ಸಿದ್ಧರು ಹೊತ್ತುಕೊಂಡು ಹೋಗುವರೆಂದು ಕುಬೇರನು ಇಲ್ಲಿ ಈ ಭಯವನ್ನು ಸೃಷ್ಟಿಸಿರುವನು. ಅದರಿಂದಲೇ ಇಲ್ಲಿಗೆ ಒಬ್ಬರೂ ಬರುವುದಿಲ್ಲ. ಯಾರಾದರೂ
ಇಲ್ಲಿಗೆ ಅಪ್ಪಿತಪ್ಪಿ ಬಂದರೆ ಅವನಿಗೆ ಹಸಿವು “ಬಾಯಾರಿಕೆ ನಿದ್ದೆಗಳು ತಪ್ಪುವುವು. ಮುಪ್ಪು ಮರಣಗಳು ಇಲ್ಲವಾಗುವುವು. ಹೀಗೆ ವೇದನೆಯನ್ನು ಮಾತ್ರ ಅನುಭವಿಸುತ್ತ ತಿರುಗುತ್ತಲಿರುವನು. ಅದರಿಂದ ಇನ್ನು ನನಗೆ ಅಪ್ಪಣೆಯನ್ನು ಕೊಡು. ನಾನು ಮನೆಗೆ ಹೋಗುವೆನು.”
ಎಂದು ಹೇಳಿ ಹಳೆಬನು ಹೋದನು.
ಇತ್ತ ಚಿನ್ನವನ್ನು ಪಡೆದ ಮೂರನೆಯವನು ಬಹುಕಾಲವಾದರೂ ಮುಂದೆ ಹೋದ ಮಿತ್ರನು ಬರಲಿಲ್ಲವೆಂದು ಅವನನ್ನು ಹುಡುಕಿಕೊಂಡು ಬಂದನು. ಚಕ್ರಧರನು ನೋವಿನಿಂದ ಕುಯ್ಯೋ
ಮೊರ್ರೋ ಎಂದು. ಅಳುತ್ತಾ ತಿರುಗುತ್ತಿದ್ದನು. ಅದನ್ನು ಕಂಡು ಮೂರನೆಯವನು ಇದೇನೆಂದು ಕೇಳಲು “ನನ್ನ ಹಣೆಯ ಬರಹ” ಎಂದು ಎಲ್ಲವನ್ನೂ ಹೇಳಿದನು. ಅದನ್ನು ಕೇಳಿ ಅವನು ಇವನನ್ನು ಚೆನ್ನಾಗಿ ಬಯ್ದು “ನಾನು ಬೇಡವೆಂದು ಎಷ್ಟು ಹೇಳಿದರೂ
ಕೇಳದೆ ಇಂದು ಈ ಅವಸ್ಥೆಗೆ ಗುರಿಯಾದೆ. ಏನು ಮಾಡುವುದು? ನೀನು ವಿದ್ಯಾವಂತನಾದರೂ ಸತ್ಕುಲದಲ್ಲಿ ಹುಟ್ಟಿದವನಾದರೂ ಬುದ್ಧಿನಂತನಲ್ಲ! ಹಿರಿಯರು ಹೇಳುವುದಿಲ್ಲವೆ?
ದೊಡ್ಡದು ಬುದ್ಧಿಯು ವಿದ್ಯೆಯು ತಾನಲ್ಲ ॥
ಬುದ್ಧಿಯ ಪಡೆಯದೆ ವಿದ್ಯೆಯ ಪಡೆದವ ॥
ಆದನು ಸಿಂಹಕೆ ತಾ ತುತ್ತು ॥ ೧೬ ॥
ಚಕ್ರಧರನು ಕೇಳಿದನು: “ಅದು ಹೇಗೆ?” ಎಂದು. ಸುವರ್ಣಸಿದ್ಧಿಯು ಹೇಳಿದನು:
*****
ಒದಿದ ದಡ್ಡರ ಕಥೆ ಓದಿ
Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...