ಒಂದೂರಿನಲ್ಲಿ ಮಂಥರನೆಂಬ ನೇಗೆಯವನಿದ್ದನು. ಒ೦ದು ದಿನ ಅವನ ಮಗ್ಗದ ಮರಮುಟ್ಟುಗಳೆಲ್ಲಾ ಮುರಿದು ಹೋಯಿತು. ಅದರಿಂದ ಮರವನ್ನು ತರಬೇಕೆಂದು ಒಂದು ಕೊಡಲಿ ತೆಗೆದುಕೊಂಡು ಕಾಡಿಗೆ ಹೊರಟನು. ಹಾಗೆಯೇ ತಿರುಗುತ್ತಾ ಸಮುದ್ರ ತೀರಕ್ಕೆ ಬಂದು, ಅಲ್ಲೊ೦ದು ಮರವನ್ನು ಕಂಡು ಅದನ್ನು ಕತ್ತರಿಸಬೇಕು ಎಂದುಕೊಂಡನು. ಆ ಮರದಲ್ಲಿ ಒ೦ದು ಯಕ್ಷವು ಇತ್ತು. ಅವನು ನೇಗೆಯವನ ಇಷ್ಟವನ್ನು ತಿಳಿದು ಅವನಿಗೆ ಕಾಣಿಸಿಕೊಂಡು “ಅಯ್ಯಾ, ಇದರಲ್ಲಿ ನಾನಿರುವೆನು. ಬೇರೆ ಮರವನ್ನು ನೋಡಿಕೊ. ಇಲ್ಲಿ ಸಮುದ್ರದ ಮೇಲಿನಿಂದ ಗಾಳಿಯು ಬೀಸುತ್ತ ನನಗೆ ಸುಖವಾಗಿರುವುದು. ಎಂದು ಕೇಳಿಕೊಂಡಿತು. ನೇಗೆಯವನು “ಅಯ್ಯಾ, ನಿಜ, ನಿನ್ನ ಸುಖ ನೋಡಿದರೆ ನನಗೇನು ಗತಿ? ದಿನವೂ ಮಗ್ಗ ನಡೆಯದಿದ್ದರೆ ನನ್ನ ಜೀವನ ಹೇಗೆ ಹೇಳು. ಇದೊಂದು ಮರ ಕಡಿದರೆ ನನಗೆ ಬೇಕಾದ ಪದಾರ್ಥಗಳೆಲ್ಲ ಆಗುವುವು” ಎಂದನು. ಯಕ್ಷವು “ಅಯ್ಯಾ, ಈ ಮರವನ್ನು ಬಿಡು. ನಿನಗೆ ಬೇಕಾದ ವರವನ್ನು ಕೊಡುವೆನು” ಎಂದಿತು. ನೇಗೆಯವನು “ಆಗಬಹುದು. ಆದರೆ ಹೋಗಿ ನನಗೆ ಬೇಕಾದ ವರವನ್ನು ಕೇಳಿ ಕೊಂಡು ಬಂದು ವರವನ್ನು ಕೇಳುವೆನು.” ಎಂದನು. ಯಕ್ಷವು ಒಪ್ಪಿತು.
ಅವನು ಬರುತ್ತ ದಾರಿಯಲ್ಲಿ ಅವನ ಸ್ನೇಹಿತನಾದ ನಾಪಿತನು ಸಿಕ್ಕಿದನು. “ಅವನಿಗೆ ಎಲ್ಲವನ್ನೂ ಹೇಳಿ “ಏನು ವರವನು, ಕೇಳಲಿ?” ಎನ್ನಲು, ಅವನು “ಒಂದು ರಾಜ್ಯವನ್ನು ಕೇಳಿಕೊ. ನೀನು ಅರಸು, ನಾನು ಮಂತ್ರಿ, ಆಗಿ ಸುಖವಾಗಿರೋಣ” ಎಂದನು. ನೇಗೆಯವನು “ಆಗಲಿ, ನನ್ನ ಹೆಂಡತಿಯನ್ನೂ ಕೇಳುವೆನು. ಅವಳೇನು ಹೇಳುವಳೋ ನೋಡೋಣ” ಎಂದನು. ಅವನು ಬೇಡ ಬೇಡ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ.
ಅವನು ಬಂದು ಹೆಂಡತಿಗೆ ಹೇಳಿದನು: ನಾಪಿತನು ಹೇಳದುದನ್ನು ಕೇಳಿ, ಅವಳು “ಯಾರನ್ನು ಕೇಳಿದರೂ ಕೇಳಬಹುದು. ಅವನನ್ನು ಕೇಳುವುದೆ? ರಾಜ್ಯವೆಂದರೇನು? ಸುಮ್ಮನಾಯಿತೆ? ರಾಮನ ಗತಿ ಏನಾಯಿತು? ಪಾಂಡವರಿಗೇನಾಯಿತು? ರಾಜನಾದರೆ ಅಣ್ಣ ತಮ್ಮಂದಿರು, ಪುತ್ರ ಮಿತ್ರರು, ಕೂಡ ಅವನನ್ನು ರಾಜ್ಯಕ್ಕಾಗಿ ಕೊಲ್ಲುವುದಕ್ಕೆ ಸಿದ್ದರಾಗಿರುವರು. ಅದರಿಂದ ರಾಜ್ಯ ಬೇಡ. ಈಗ ನಿನಗೆ ಒಂದು ತಲೆ ಎರಡು ತೋಳು ಇವೆ. ಇದರಿಂದ ಒಂದು ದುಪ್ಪಟಿಯನ್ನು ನೇಯುವೆ. ಹೋಗಿ ಇನ್ನೊಂದು ತಲೆ, ಇನ್ನೆರಡು ತೋಳು ಕೇಳಿಕೊ. ಅಗ ಎರಡು ದುಪಟಿಗಳಾಗುವುವು. ಒಂದನ್ನು ಮಾರಿದರೆ ಮನೆಯ ವೆಚ್ಚಕ್ಕಾಗುವುದು. ಇನೊಂದು ಮಾರಿದರೆ ಸುಖಕ್ಕಾಗುವುದು. ನಮಗೆ ಅಷ್ಟು ಸಾಕು” ಎಂದಳು.
ನೇಗೆಯವನಿಗೆ ಹೆಂಡತಿಯ ಮಾತು ಸರಿ ಎನ್ನಿಸಿತು. ಅದರಂತೆ ಹೋಗಿ ಯಕ್ಷವನ್ನು ಕೇಳಲು, ಅದು ಹಾಗೆಯೇ ಆಗಲಿ ಎಂದು ವರವನ್ನು ಕೊಟ್ಟತು. ನೇಗೆಯವನಿಗೆ ಎರಡನೆಯ ತಲೆ ಇನ್ನೆರಡು ತೋಳು ಹುಟ್ಟಿದುವು. ವರವು ಸಿಕ್ಕಿತೆಂದು ಸಂತೋಷದಿಂದ ಅವನೂ ಊರಿಗೆ ಬಂದನು. ಆದರೆ ಊರಿನವರು “ಇದು ಯಾವುದೋ ಭೂತ, ನಮ್ಮ ಊರಿಗೆ ಬರುತ್ತಿದೆ” ಎಂದು ಕಲ್ಲು ಹೊಡೆದು ಅವನನ್ನು ಕೊಂದರು. ಅದರಿಂದ “ತನಗುಂ ಮತಿಯಿಲ್ಲದೆ” ಎಂಬ ಗಾದೆಯನ್ನು ಹೇಳಿದೆನು. ನಿಜ ಯಾರೇ ಆಗಲಿ, ಆಶಾ ಪಿಶಾಚಿಯು ಹಿಡಿದಾಗ ಅಪಹಾಸ್ಯಕ್ಕೆ ಗುರಿಯಾಗುವರು. ಸಂದೇಹವೇನು? ಕೇಳಿಲ್ಲವೆ? :-
ಫಲಿಸದ ಕಾರ್ಯದ ಫಲವಂ ಚಿಂತಿಸಿ |
ಕೆಲಸವ ಮಾಡುವೆನೆನ್ನಲು ನಿಜವಾಗಿ ॥
ಅಪಜಯ ತಪ್ಪದು ತಪ್ಪದು ನಗೆಪಾಡು |
ಸೋಮನ ತಂದೆಯು ಸಾಕ್ಷಿಯು ತಾನಿದಕೆ ॥ ೨೮ ॥
ಎಂದನು. ಸುವರ್ಣಸಿದ್ಧಿಯು “ಅದು ಹೇಗೆ?” ಎನ್ನಲು, ಚಕ್ರಧರನು ಹೇಳಿದನು,
*****
ಸೋಮನ ತಂದೆಯ ಕಥೆ ಓದಿ