ಪ್ರಿಯ ಪೂರ‍್ಣೀ,
ಹಂಸಭಾವಿಯಿಂದ ಬರೆದ ಈ ಹಿಂದಿನ ಪತ್ರದಲ್ಲಿ ಮಲೆನಾಡನ್ನು ಕುರಿತು ಅಷ್ಟೊಂದು ಬಣ್ಣಿಸಿರುವುದು ನಿನಗೆ ಸೇರಿಲ್ಲವೆಂದನ್ನಿಸಿದೆ. ಆದ್ದರಿಂದ ಸಿಡುಕಗೊಂಡ ಹೆಂಡತಿ ಅಡಿಗೆಯ ಮನೆಯಲ್ಲಿ ಪಾತ್ರೆಗಳನ್ನು ಕುಕ್ಕುವಂತೆ ನೀನು ನಿನ್ನಿನ ಪತ್ರವನ್ನು ಬರೆದಿರುವೆ. ಉಪ್ಪು, ಹುಳಿ ಕಾರವಿಲ್ಲದ ಆ ಪತ್ರವನ್ನು ನೋಡಿದ ಕೂಡಲೇ, ಸಿಟ್ಟು ಬಂದಾಗ, ಉದ್ದವಾಗುವ ನಿನ್ನ ಮೋರೆಯ ಚಿತ್ರವು ಕಣ್ಣಿಗೆ ಕಟ್ಟಿತು.
ಇಲ್ಲ. ನೀನೆಷ್ಟು ಜಂಭ ಕೊಚ್ಚಿಕೊಂಡರೂ ಈ ಒಂದು ವಿಷಯದಲ್ಲಿ ಮಾತ್ರ ನೀನು ಇತರರಂತೆ ಗಂಡನನ್ನು ನಂಬಲಾರದವಳೇ. ಅದರಲ್ಲೂ ಆ ಮಲೆನಾಡ ಹುಡುಗಿಯ ನೆನಹು ಬಂದಿತೆಂದರೆ ತೀರಿಯೇ ತೀರಿತು. ನಿನ್ನ ಒಳ್ಳೆಯ ಗುಣಗಳೆಲ್ಲಾ ತೆಳ್ಳಗಾಗಿ ಬಿಡುವವು; ನಾನೂ ಬೆಳ್ಳಗಾಗಿ ಬಿಡುವೆನು.
ನಾನು ಮಲೆನಾಡಿಗೆ ಹೋದ ಮೇಲೆ ಅಲ್ಲಿಗೆ ಹೋಗಿ ಬಂದಿರುವೆನೆಂದೇ ನಿನ್ನ ನಂಬಿಕೆ. ಇಲ್ಲವೆಂದು ಆಣೆ ಮಾಡಿದರೂ ನಂಬುವಂತಿಲ್ಲ. ಅದೇಕೆ ಆ ಊರಿನಲ್ಲಿ ಇದ್ದ ಒಂದು ಘಂಟೆಯ ಹೊತ್ತಿನಲ್ಲಿ ಅರ್ಧ ಘಂಟೆ ಅವರ ಮನೆಯಲ್ಲೇ ಕಳೆದೆನು. ಉಪಾಯವಿಲ್ಲ. ನಾನಾಗಿ ಅವರ ಮನೆಗೆ ಹೋಗಲಿಲ್ಲ. ಆ ಹುಡುಗಿಯ ಅಣ್ಣ ದಾರಿಯಲ್ಲಿ ಸಿಕ್ಕಿದನು. ಮನೆಗೆ ಬರಲೇಬೇಕೆಂದು ಹಠ ಹಿಡಿದನು. ನಾನು ನಿನ್ನಷ್ಟು ಹಠಮಾರಿಯಲ್ಲ. ಇಲ್ಲವೆನ್ನುವುದಕ್ಕೂ ಆಗಲಿಲ್ಲ. ಆತನನ್ನು ಹಿಂಬಾಲಿಸಿದೆನು. ಎದುರಿಗೇ ಆ ಹುಡುಗಿಯೂ ಬಂದಳು. ಎಲ್ಲರೂ ಕೂಡಿಕೊಂಡು ಮನೆಗೆ ಹೋದೆವು.
ಕೊಟ್ಟ ಕಾಫಿಯ ಬಿಸಿ ಆರುವವರೆಗೆ ನಾನು ಅವರೆಲ್ಲರೊಂದಿಗೆ ಮಾತನಾಡಿದೆನು. ನಿನ್ನ ಸ್ನೇಹಿತೆಯೂ ಮಾತನಾಡಿದಳು. ನಿನ್ನ ಯೋಗ ಕ್ಷೇಮವೇ ಆಕೆ ಕೇಳಿದ ಪ್ರಶ್ನೆ. ಕೊನೆಗೆ ಧೈರ್ಯಮಾಡಿ ತಾವೆಷ್ಟು ಪತ್ರ ಬರೆದಿರಿ ನನ್ನ ಅಕ್ಕನಿಗೆ, ಎಂದು ಉಗುರು ಕಚ್ಚುತ್ತಾ ಈ ತೆಳ್ಳನೆಯ ಹುಡುಗಿ ಮೆಲ್ಲನೆ ನಗುತ್ತಲೇ ಕೇಳಿದಳು. ನನಗೆ ನೆನಪಾಯಿತು ನೀವಿಬ್ಬರೂ ಮೈಸೂರಿನಲ್ಲಿ ಕಾಲೇಜು ಹಾಸ್ಟಲಿನಲ್ಲಿದ್ದಾಗ ಮರುದಿನಕ್ಕೊಮ್ಮೆ ಆರಾರು ಪುಟದಲ್ಲಿ ಬರುತ್ತಿದ್ದ ನನ್ನ ಪತ್ರಗಳನ್ನು ಈ ಹುಡುಗಿ ತೂಕ ಮಾಡುತ್ತಿದ್ದಳೆಂಬುದು, ನೀನು ಪತ್ರ ಓದಿದಷ್ಟು ಕೀಟಲೆ ಮಾಡುತ್ತಿದ್ದಳು. ರೂಮು ಮೇಟ ಆಗಿದ್ದರಿಂದ ಕೆಲವು ಪತ್ರಗಳನ್ನು ಕದ್ದು ಓದಿರಬಹುದು, ಎಂದು ನೀನು ಹೇಳುತ್ತಿದ್ದೆಯಲ್ಲವೆ? ಅಲ್ಲದೆ ಕೆಲವು ಪತ್ರಗಳಲ್ಲಿನ ಹಲವು ವಿಷಯಗಳನ್ನು ನೀನೇ ಈ ಹುಡುಗಿಗೆ ಓದಿ ಹೇಳಿ ನಿನ್ನ ಗಂಡನ ರಸಿಕತನವನ್ನು ಕೊಚ್ಚಿಕೊಳ್ಳುತ್ತಿದ್ದೆಯೆಂದು ನೀನು ಆಗಿಂದಾಗ್ಗೆ ಈ ಮದುವೆಯಾಗದ ಕನ್ಯೆಯ ಬಗ್ಗೆ ಹೇಳುತ್ತಲೂ ಇದ್ದೆ, ಬರೆಯುತ್ತಲೂ ಇದ್ದೆ. ಅದೇ ಸಲಿಗೆ. ಮತ್ತು ನಮ್ಮ ಮನೆಯಲ್ಲಿ ಬಂದು ಇದ್ದ ಐದಾರು ದಿನಗಳ ಪರಿಚಯ, ಇವುಗಳಿಂದಾಗಿ ಈ ಹುಡುಗಿ ನನ್ನ ಪತ್ರ ಜೀವನದ ಬಗ್ಗೆ ತುಟಿತೆರೆದಳು. ಆಗ ಸರಿಯಾಗಿ, ಧೈರ್ಯವಾಗಿ ಕತ್ತೆತ್ತಿ ನೋಡಿದೆನು. ಕಣ್ಣು ಕಣ್ಣನ್ನು ನೋಡಿದವು. ಮುಖ ಮುಖವನ್ನು ನೋಡಿತು. ಪೂರ‍್ಣೀ,ಬರೆಯುತ್ತಿರುವ ನನ್ನ ಲೇಖನಿಯನ್ನು ವಂಚಿಸಲಾರೆ. ಒಂದು ನಿಮಿಷದ ಆಕೆಯ ನೋಟದಲ್ಲಿನ ಹಸಿವು ನನ್ನನ್ನು ಸುಡಲಾರಂಭಿಸಿತು. ನಾನು ಅದುವರೆಗೆ ಅಷ್ಟು ಚಪಲ ದೃಷ್ಟಿಯಿಂದ ಯಾರನ್ನೂ ನೋಡಿರಲಿಲ್ಲ. ಅಂದು ನೀನು ಸಿಟ್ಟು ಮಾಡಿಕೊಂಡುದುದು ಸರಿಯೇ ಎನ್ನಿಸುವುದು. ಅದೇ ಸಿಟ್ಟು ನನ್ನನ್ನು ಅಂದು ಕಾಪಾಡಿತು. ಅದರ ನೆನಪಾಗದಿದ್ದರೆ, ಮತ್ತೇನೂ ಅನಾಹುತ ಸಂಭವಿಸದಿದ್ದರೂ ನಾನು ಆಕೆಯನ್ನು ಪಾಪದ ದೃಷ್ಟಿಯಿಂದ ಮತ್ತೊಮ್ಮೆ ನೋಡಿಬಿಡಲು ಮನಸ್ಸು ಮಾಡುತ್ತಿದ್ದೆ. ತಡವರಿಸಿಕೊಂಡು ಚೇತರಿಸಿಕೊಂಡು, ಈ ಹುಡುಗಿಯ ಪ್ರಶ್ನೆಗೆ ಉತ್ತರ ಕೊಡಲು ಯತ್ನಿಸಿದೆ. ನಾನು ಉತ್ತರ ಕೊಡುವವರೆಗೂ ಆಕೆ ತನ್ನ ಅರಳಿದ ತುಟಿಯ ಮೇಲೆ ಲಾಸ್ಯವಾಡುತ್ತಿದ್ದ ಆ ತುಂಟ ತಿಳಿನಗೆಯನ್ನು ಹಿಂದಕ್ಕೆ ತೆಗೆದು ಕೊಳ್ಳಲೇ ಇಲ್ಲ!
ನನಗೆ ಪೇಚಾಟಕ್ಕಿಟ್ಟುಕೊಂಡಿತು. ನನ್ನ ರಸಿಕತನದ ದಿವಾಳಿಯಾಗುವುದು. ಅದೂ ಮೂಗು ಬಲಿಯದ ಮಲೆನಾಡಿನ ಹುಡುಗಿಯ ಮುಂದೆ. ರಸ ಮತ್ತು ಅಲಂಕಾರಿಕ ಶಬ್ದಗಳನ್ನು ಆಗ, ಅಲ್ಲಿ ಉಪಯೋಗಿಸುವದಕ್ಕೂ ಭಯವಾಗಿದ್ದಿತು. ಆ ಅಗಲವಾದ ಕಣ್ಣುಗಳಲ್ಲಿ ದಂಡಕಾರಣ್ಯವನ್ನು ತಿಂದು ತೇಗುವಷ್ಟು ಹಸಿವಿದ್ದಿತು. ಬಕಾಸುರನ ಹಸಿವಿಗಿಂತ ಈ ಬಲಿತ ಹುಡುಗಿಯ ಹಸಿವು ಹೆಚ್ಚಾಗಿ ಕಾಣುತ್ತಿದ್ದಿತು. ಆದ್ದರಿಂದ ನಾನು ಸುಲಭವಾಗಿಯೇ ಉತ್ತರ ಕೊಡುತ್ತಾ ಈಗ ಪೂರ‍್ಣಿಗೆ ಪರೀಕ್ಷೆಯ ಕಾಲ, ಹೆಚ್ಚು ಪತ್ರ ಬರೆದು ಅವಳ ಓದಿನ ವೇಳೆಯನ್ನು ಕಳೆಯಲು ಇಷ್ಟವಿಲ್ಲ. ಬರಿಯ ಯೋಗಕ್ಷೇಮ ಉಭಯ ಕುಶಲೋಪರಿ ಸಾಂಪ್ರತ ಇದಿಷ್ಟನ್ನೇ ಬರೆಯುವೆನು ಎಂದುತ್ತರಕೊಟ್ಟೆನು. ಇಷ್ಟಕ್ಕೆ ಮುಗಿಯಿತೆಂದು ತಿಳಿದುಕೊಂಡಿದ್ದೆನು. ಆ ತುಂಟ ಹುಡುಗಿ ಮತ್ತು ತುಟಿತೆರೆದಳು, ನಾಲಗೆ ನೂಕಿದಳು. “ಹೊ, ಹೊ, ಬಾಬುಜೀ ಹಾಗಾದರೆ ಅಕ್ಕನು ಪರೀಕ್ಷೆ ಪಾಸು ಮಾಡಿದಂತೆಯೇ. ಯುವರ್ ಲೆಟರ್ಸ್ ಆರ್ ಹರ್ ಲೈಫ ಆಂಡ ಸ್ಪಿರಿಟ, ಪ್ಲೀಜ್ ಪ್ಲೀಜ್ ನನ್ನ ಸಲುವಾಗಿ ಇಂದೇ ಒಂದು ಎಕ್ಸಪ್ರೆಸ್ ಡೆಲಿವಿರಿ ಬರೆದು ಹಾಕಿರಿ,” ಎಂದು ಏನೋ ತಪ್ಪು ಮಾಡಿ ಕ್ಷಮೆ ಬೇಡುವಂತೆ ಅಂಗಲಾಚಿ ಬೇಡಿಕೊಂಡಳು. ಆಗ ಆಕೆಯ ಭಾವಾಭಿನಯ ಅದರಲ್ಲಿರುವ ಮೂದಲಿಕೆ, ಅವಳ ಗುಲಾಬಿ ಬಣ್ಣದ ಗಲ್ಲದ ಮೇಲಿದ್ದ ಕಿಡಿಗೇಡಿತನ ಇವೆಲ್ಲವನ್ನು ನಾನು ನೋಡದಿರಲಾಗಲಿಲ್ಲ. ನೋಡಿದೆನು. ಹೆದರಿಕೆಯೇಕೆ? ಸಬಲನಾದ ನಾನು ಅಬಲೆ ಅದರಲ್ಲೂ ನನ್ನ ಧರ್ಮ ಪತ್ನಿಯಾಗಿರುವ (ಅದೂ ಆರ್ಯ ಧರ್ಮ) ನಿನಗೆ ಇಲ್ಲಿಂದಲೇ ಇಷ್ಟು ದೂರದಿಂದಲೇ ಹೆದರಿಕೊಂಡರೆ, ನನಗೆ ನಮ್ಮ ಅಪ್ಪನು ಹೇಳಿಕೊಡುತ್ತಿದ್ದ ಗಂಡಸತನ ಎಲ್ಲಿ ಉಳಿದೀತು!
ಅರ್ಧ ಪತ್ರ ಓದಿ ಅಷ್ಟಕ್ಕೇ ಸಿಟ್ಟಾಗಬೇಡ. ಇನ್ನೂ ಇದರ ಉತ್ತರಾರ್ಧವಿದೆ.
ಮಲೆನಾಡ ಹುಡುಗಿಯ ಈ ಮರು ಪ್ರಶ್ನೆಗೆ ಉತ್ತರ ಕೊಡಲು ಮನಸ್ಸು ಬರಲಿಲ್ಲ. ಅಷ್ಟರೊಳಗಾಗಿ ಆಕೆಯ ತಾಯಿ ತಮ್ಮಂದಿರು ಯೋಗಕ್ಷೇಮದ ಸಮಾಚಾರವನ್ನು ಎತ್ತಿಕೊಂಡರು. ಆಕೆಗೆ ಇನ್ನೂ ಮಾತಾಡಬೇಕೆಂಬ ಆಶೆ ಇದ್ದಿತು. ಅವಕಾಶ ಸಿಕ್ಕಲೇ ಇಲ್ಲ. ನಾನು ಊರು ಬಿಡುವ ಹೊತ್ತಾಯಿತು. ಎದ್ದು ಹೊರಟೆನು. ಸದ್ದಿಲ್ಲದೆಯೇ ಈಕೆಯೂ ನನ್ನ ಜೊತೆಯಲ್ಲೇ ಬಂದಳು. ಗಾಬರಿಯಾಗಬೇಡ, ನಾನು ಹೋಗುವ ದಾರಿಯಲ್ಲಿರುವ ತನ್ನ ಶಾಲೆಗಾಗಿ, ಶಾಲೆಯ ದೂರವನ್ನು ಇಬ್ಬರೂ ಒಟ್ಟಿಗೇ ನಡೆದವು. ಮತ್ತೆಂದು ಬರುವಿರಿ ಎಂಬುದೊಂದೇ ನಾಲ್ಕು ಫರ್ಲಾಂಗಿನ ದಾರಿಗೆ ಕೇಳಿದ ಒಂದು ಪ್ರಶ್ನೆ. ಧ್ವಜದಂತೆ ತಲೆಎತ್ತಿ ನಲಿಯುತ್ತಿದ್ದ ಆ ಮುಖವು ಭೂಮಿಯತ್ತ ಬಗ್ಗಿದ್ದಿತು. ದೃಷ್ಟಿ ಕಾಲಿನ ಬೆರಳುಗಳ ಮೇಲೆ ಇದ್ದಿತು. ನಾನು, ಹೇಗೆ ಹೇಳಲಿ ಮತ್ತು ಮಲೆನಾಡಿನ ಸಂಚಾರಕ್ಕೆ ನಾನು ಬರಬೇಕಾದ ಅಗತ್ಯ ಬಂದಾಗ ಬರುವೆನು ಎಂದು ಹೇಳಿದೆನು. ಹೋಗಿ ಪತ್ರ ಬರೆಯರಿ ಎನ್ನುವ ಹೊತ್ತಿಗೆ ಶಾಲೆ ಸಿಕ್ಕಿತು. ಸಂಜೆ ಹಂಸಬಾವಿಗೆ ಬಂದು ಬಿಟ್ಟೆನು.
ಪೂರ‍್ಣಿಮಾ, ನಿಜವಾಗಿಯೂ ಹೇಳುವುದಾದರೆ, ಈ ಹುಡುಗಿಯು ಮನೆಯಲ್ಲಿ ಆಕೆ ಮಾಡಿದ ತಿಳಿ ಮೂದಲಿಕೆ ನನ್ನನ್ನು ಅಷ್ಟು ಭಾವಾಪನ್ನನಾಗಿ ಮಾಡಲಿಲ್ಲ. ದಾರಿಯಲ್ಲಿ ನನ್ನೊಡನೆ ನಡೆವಾಗ ಭೂಮಿಯಷ್ಟು ಭಾರವಾಗಿ ಆಕೆ ಇಡುತ್ತಿದ್ದ ಹೆಜ್ಜೆ, ಆಕೆಯ ಎದೆಯಲ್ಲಿ ಬಡಿಯುತ್ತಿರುವ ಭಾವನೆಗಳ ಬಡಿತದ ಸದ್ದು ನನ್ನನ್ನು ವ್ಯಾಕುಲಕ್ಕೀಡು ಮಾಡಿತು. ಈ ವ್ಯಾಕುಲದಲ್ಲಿ ಅನರ್ಥವೇನೂ ಇಲ್ಲ ಮಹಾರಾಯತೀ. ನನ್ನ ಈ ಪತ್ರದ ಮುಂದಿನ ಮಾತುಗಳನ್ನು ಸರಿಯಾಗಿ ಮನನ ಮಾಡಿಕೋ.
ಹುಬ್ಬಳ್ಳಿಯನ್ನು ತಲುಪಿದ ಮರುದಿನವೇ ನಿನಗೆ ಪತ್ರಬರೆದ ಕೂಡಲೇ ಅದೇ ಘಳಿಗೆಯಲ್ಲೇ ಈ ಹುಡುಗಿಗೂ ಒಂದು ಪತ್ರ ಬರೆದೆ. ಏನು ಬರೆದನೋ ಎಷ್ಟು ಬರೆದನೋ ಹೇಗೆ ಬರೆದನೊ ತಿಳಿಯದು. ನನಗೆ ನೆನಪಿರುವ ಮಟ್ಟಿಗೆ ಆಕೆಯ ಜೀವನದಲ್ಲಿ ಮೂಡಿರುವ ಒಂದು ವೇದನೆಯನ್ನು ಪರಿಹರಿಸಲು, ಆಕೆಯನ್ನು ಆಶಾವಾದಿಯನ್ನಾಗಿ ಮಾಡಲು, ಸರ್ವಸಾಮಾನ್ಯವಾದ ಸ್ತ್ರೀ ಜೀವನದ ಸಿದ್ಧಾಂತ ಮತ್ತು ಸಾಹಿತ್ಯವನ್ನು ಬಣ್ಣಿಸಿರಬಹುದು.
ನನ್ನ ಪತ್ರಕ್ಕೆ ಮೂರು ದಿನಗಳೊಳಗಾಗಿ ಈ ಹುಡುಗಿಯ ಉತ್ತರ ಬಂದೇ ಬಿಟ್ಟಿತು. ಆ ಉತ್ತರವನ್ನು ಓದಿದ ಮೇಲೆಯೇ ನಿನಗೆಲ್ಲವನ್ನು ನಿವೇದಿಸಿಬಿಡುವ ಪ್ರೇರಣೆಯಾಯಿತು.
ಆ ಪತ್ರ ದೊಡ್ಡದಾಗಿದೆ. ಅರ್ಧ ಇಂಗ್ಲಿಷ್ ಅರ್ಧ ಕನ್ನಡದಲ್ಲಿದೆ. ನಾನು ಆಕೆಯ ಕಣ್ಣುಗಳಲ್ಲಿ ಯಾವ ಬಕಾಸುರನ ಹಸಿವನ್ನು ಕಂಡಿದ್ದೇನೋ ಅದೇ ದಾಹ, ಆದೇ ಹಸಿವು, ಅದೇ ಆತುರ, ಈ ಪತ್ರದಲ್ಲಿ ತುಂಬಿಕೊಂಡಿದ್ದಿತು. ಭಾವನೆಗಳನ್ನು ಬಣ್ಣಿಸಿ ಬರೆಯಲು ಹೋಗಿ ಆಕೆ ಸಫಲಗಳಾಗಿದ್ದರೂ ತನ್ನ ನೋವನ್ನು ನನಗೆ ಮುಟ್ಟಿಸುವುದರಲ್ಲಿ ಯಶಸ್ವಿಯಾಗಿರುವಳು. ಇದರಲ್ಲಿನ ಈ ಕೆಳಗಿನ ಮಾತುಗಳು ಮಾತ್ರ ನನ್ನ ಸಹಾನುಭೂತಿಯನ್ನೆಲ್ಲಾ ಕಸಿದುಕೊಂಡಿವೆ.
“ಅಣ್ಣಾ, ನನಗೆ ಪತ್ರ ಬರೆಯುವರೆಲ್ಲರೂ, ಇಂತ ನಿನ್ನ ಅಣ್ಣ, ನಿನ್ನ ಒಡಹುಟ್ಟು, ನಿನ್ನ ಸಹೋದರ, ಎಂದು ಬರೆಯುವರೇ ಇರುವರು. ನೀವಂತೂ ನನ್ನ ಅಣ್ಣನಿಗೆ ಅಣ್ಣನಷ್ಟು ಹಿರಿಯರು. ಪೂರ‍್ಣಕ್ಕನ ಭಾಗ್ಯದದೇವರು. ನೀವು ಉಪದೇಶ ಮಾಡುವದೇನೋ ಸರಿ. ಆದರೆ ಎಲ್ಲರಿಗೂ ನಾನು ತಂಗಿಯೇ ಆಗಿರಬೇಕಾಗಿದೆ ಅಣ್ಣಾ. ಸಾಹಿತಿಗಳ ಸಾಹಿತ್ಯದ ಶಬ್ದಕೋಶದಲ್ಲಿ ಎಲ್ಲ ಅರ್ಥಗಳಿಗೂ ಒಂದೇ ಶಬ್ದವೇ ಇರುವುದೇನಣ್ಣಾ? ನನ್ನ ಜೀವನದ ಆಶೋತ್ತರಗಳ ಬಗ್ಗೆ ಅಕ್ಕನು ಎನೂ ಹೇಳಿಲ್ಲವೆ? ನಾನೆಷ್ಟು ಭಾವಜೀವಿ ಸಾಹಿತಿಯಲ್ಲದಿದ್ದರೂ ಸಾಹಿತಿಗಳ ಪೂಜಾರಿಣಿ, ಈ ಒಂದು ತಪ್ಪಿನಿಂದಲೇ ನಾನಿಂತು ಕೊರಗಿಗೀಡಾಗಬೇಕೇ? ನಿಮ್ಮ ಪತ್ರ ನನಗೆ ಬಾಳಿನಲ್ಲಿ ಬೆಳಕಿನ ಆಶೆಯನ್ನು ಕೊಡುತ್ತಿದೆ. ಆದರೆ (I can’t be happy) ನನಗೆ ಸುಖವಿಲ್ಲ; ಸುಖ ಸಿಕ್ಕುವುದಿಲ್ಲ. ನಾನು ಪಾಪ ಮಾಡದಿದ್ದರೂ ಪಾಪದ ಪ್ರೇರಣೆಯಿಂದ ಅಪರಿಶುದ್ಧಳಾಗಿರುವೆನು. ಅಕ್ಕನ ಜೊತೆಯಲ್ಲಿ ಓದುತ್ತಿದ್ದಾಗ, ಅಕ್ಕ ನಿಮ್ಮನ್ನು ಹಾಡಿ, ನೀವಲ್ಲಿ ಇಲ್ಲದಿದ್ದರೂ ನಿಮ್ಮೊಂದಿಗೆ ಕೂಡಿ ಇರುತ್ತಿದ್ದ ಭಾವನಾಜೀವನದ ಚಿತ್ರವನ್ನು ನೋಡಿನೋಡಿ ನಾನು ಜಗತ್ತಿನತ್ತ ಆಶೆಯಿಂದ ನೋಡುತ್ತಿದ್ದೆನು. ನಿಮ್ಮನ್ನು ಅಕ್ಕನ ಜೊತೆಯಲ್ಲಿ ನೋಡಬೇಕೆಂಬ ಆಶೆಯಿಂದಲೇ ನಾನು ಹುಬ್ಬಳ್ಳಿಗೆ ಬಂದೆನು. ನಾನು ನನ್ನ ಕಣ್ಣುಗಳನ್ನು ಮುಚ್ಚುವುದಾಗಲಿಲ್ಲ. ನೋಡಿದೆನು; ನಿಮ್ಮಿಬ್ಬರ ಜೀವನದ ಲೀಲಾ ವಿನೋದವನ್ನು ಕಂಡು ಸಂತೋಷಪಟ್ಟೆನು. ಈ ಸಂತೋಷದ ಜೊತೆಗೆ ಅಣ್ಣಾ, ಸ್ವಲ್ಪ ಕರುಬಿದೆನು, ಸುಳ್ಳೇಕೆ ಹೇಳಲಿ, ಅದು ಸ್ತ್ರೀಗೆ ಸಹಜವಾದುದು.
ಒಂದು ಮಾತಿನಲ್ಲಿ ನಾನು ನಿಮಗೆ ನನ್ನ ಜೀವನದ ರಹಸ್ಯವನ್ನು ಹೇಳಿಬಿಡಲೇ? ನಿಮ್ಮ ಮಗಳು ಲೀಲಳಿಗೆ ೧೨ ವರುಷವಾಗಿದ್ದರೆ, ನನಗೆ ಇನ್ನು ಹತ್ತು ವರುಷಗಳಷ್ಟೇ ಹೆಚ್ಚಾಗಿದೆ. ಆದ್ದರಿಂದ ನಿಮ್ಮಲ್ಲಿ ನಿಮ್ಮಂತಹ ಹೆಣ್ಣು ಗರುಳಿನವರಲ್ಲಿ ಮುಚ್ಚಿಕೊಳ್ಳುವುದೇನಿದೆ? ನಾನು ಈ ವಯಸ್ಸಿಗೇ ಸನ್ನಿವೇಶಗಳ ಸುಳಿಗೆ ಸಿಕ್ಕಿ ಹೋಗಿರುವೆನು. ಕಾಮ ಪ್ರೇಮಗಳ ವ್ಯಾಪ್ತಿಯನ್ನು ಪುಸ್ತಕದಲ್ಲಿ ಓದಿರುವೆನು. ಜನರ ಬಾಯಲ್ಲಿ ಕೇಳಿರುವೆನು, ಆದರೆ ನನ್ನನ್ನು ವಿವಾಹವಾಗುವೆನೆಂದು ಬರುವವರ ಬಳಿಯಲ್ಲಿರುವುದು ಕಾಮವೋ ಪ್ರೇಮವೋ ಗೊತ್ತಾಗುತ್ತಿಲ್ಲ. ನಾನು ಆಶೆಯ ಮಹಲಿನ ಮಹಲೇರಿ ಕುಳಿತು ಅಲ್ಲಿ ಬೀಸುವ ಗಾಳಿ ಬೀಸಲು ಎಲ್ಲವನ್ನೂ ತಿನ್ನುತ್ತ ಕುಳಿತಿರುವೆನು. ನನಗೆ ವಿವಾಹವಾಗಬೇಕೆಂಬ ಆತುರವಿದೆ. (ನನ್ನ ನಾಚಿಕೆಗೇಡಿ ತನಕ್ಕೆ ಕ್ಷಮಿಸಿರಿ) ನನ್ನ ತಂದೆ ತಾಯಂದಿರಿಗಾದರೂ ಈ ಬೆಳೆದ ಹೆಣ್ಣು ತಲೆಯಶೂಲೆಯಾಗಿದೆ. ನಮ್ಮಲ್ಲಿ ವರದಕ್ಷಿಣೆಯ ಕಾಟವಿಲ್ಲ. ನಾವೂ ಕನ್ಯಾ ಶುಲ್ಕವನ್ನು ಕೇಳುವುದಿಲ್ಲ. ಆದರೂ ನಾನು ಓದಿರುವ ತಪ್ಪಿಗಾಗಿ ನನ್ನ ಮನಸ್ಸಿಗೊಪ್ಪುವವರನ್ನು ಆರಿಸಿಕೊಳ್ಳುವ ಒಂದು ಸ್ವಾತಂತ್ರ್ಯಸಿಕ್ಕಿದೆ. ಅದೇ ನನ್ನ ಇಂದಿನ ಪರಿಸ್ಥಿತಿಗೆ ಮೂಲ ಕಾರಣ. ನನಗೆ ಕೆಲವು ವರಗಳು ಬೇಡವಾಗಿದ್ದರೆ ನಾನೊಪ್ಪಿದ ಕೆಲವರಿಗೆ ನನ್ನ ಓದು ನನ್ನ ಆಧುನಿಕತೆ ಬೇಡವಾಗಿದೆ. ಕೊನೆಗೊಮ್ಮೆ ನನಗನ್ನಿಸಿದೆ ನಾನು ಮದುವೆಯಾಗದೆ ಹೀಗೆಯೇ ಇದ್ದು ಬಿಡಲೇ? ಏನಣ್ಣಾ, ಇದು ಸಾಧ್ಯವೆ ತಿಳಿಸು.”
ಆಕೆಯ ಪತ್ರ ಮುಗಿಯಿತು.
ಪೂರ‍್ಣೀ,ಏನಿದು ನಿನ್ನ ಗೆಳತಿಯ ಸಮಸ್ಯೆ? ನನಗೆ ಸಹಾನುಭೂತಿ, ಅನುತಾಪವಿದೆ, ಈ ಹೆಣ್ಣಿನ ಹೃದಯವು ಕೊರಗುತಿದೆ ಎಂದು ಮರುಗುವೆನು. ಆದರೂ ಆಕೆ ಕೇಳುವ ಪ್ರಶ್ನೆ ತಾನು ಎಂದಿಗೂ ಯಾವತ್ತಿಗೂ ಅವಿವಾಹಿತೆಯಾಗಿರಲು ಸಾಧ್ಯವೆ? ಈ ಪ್ರಶ್ನೆಗೆ ನನಗೆ ಉತ್ತರಕೊಡಲು ನೀನೇ ಬಲು ತಕ್ಕವಳು, ಆದ್ದರಿಂದಲೇ ಎಲ್ಲವನ್ನೂ ನಿನ್ನ ಮುಂದೆ ಹೇಳಿ ಬಿಟ್ಟೆನು. ಪಾಪ, ಆಕೆಯ ಮೇಲಿನ ಅಂದಿನ ಸಿಟ್ಟನ್ನು ಬಿಡು. ಏನಾದರೂ ಉತ್ತರ ಬರೆ. ಸ್ತ್ರೀ ಯಾವಾಗಲೂ ಅವಿವಾಹಿತೆಯಾಗಿರುವುದು ಸಾಧ್ಯವೇ ಪೂರ‍್ಣೀ? ಯೋಚಿಸು. ಒಂದು ಸಾಂತ್ವನಪರ ಪತ್ರವನ್ನು ಬರೆ. ಅಥವಾ ಏನು ಬರೆಯಬೇಕೆಂಬುದನ್ನು ನನಗೆ ತಿಳಿಸು.
ಈಕೆ ಹೇಳುವುದೆಲ್ಲವೂ ನಿಜವಾದರೆ ಪ್ರೇಮವು ಕುರುಡೇನು? ಯೋಚಿಸು. ಆದರೆ ಪ್ರೀತಿಸುವುದು ಪ್ರಕೃತಿಯ ಸಹಜಧರ್ಮ, ಪ್ರೀತಿಯ ರೀತಿ ರೂಪಗಳು ಬೇರಿದ್ದರೂ ಪ್ರತಿಯೊಬ್ಬರೂ ಏನನ್ನಾದರೂ ಪ್ರೀತಿಸಲೇ ಬೇಕಲ್ಲವೆ? ಈ ಹುಡುಗಿ ಬಯಸುವುದು ತಾನೊಬ್ಬರನ್ನು ಪ್ರೀತಿಸುವದನ್ನು, ತನ್ನನ್ನು ಇನ್ನೊಬ್ಬರು ಪ್ರೀತಿಸುವದನ್ನು. ಪಾಲುಗಾರನನ್ನು ಕಾಣದಿದ್ದರೂ ಒಟ್ಟಿನಲ್ಲಿ ಈಕೆ ದಾಂಪತ್ಯ ಜೀವನವನ್ನು ಪ್ರೀತಿಸುತ್ತಿರುವಳು ಅಂದ ಮೇಲೆ ಇಂದಾಗಲೀ ನಾಳೆಯಾಗಲೀ ಈಕೆ ಮದುವೆಯಾಗಲೇ ಬೇಕಲ್ಲವೆ? ಬೇಡ, ಇದು ಪುರುಷ ಜಾತಿಯ ಪ್ರಶ್ನೆಯಲ್ಲಿ ಸ್ತ್ರೀ ಜಾತಿಯ ಸಮಸ್ಯೆ. ನೀನೆ ಉತ್ತರಿಸು, ನೋಡಬೇಕು, ಆ ಉತ್ತರದ ಪ್ರತಿಯೊಂದನ್ನು ನನಗೂ ಕಳುಹಿಸು. ನೀನೆಂತು ನಿನ್ನ ಬುರುಡೆಯನ್ನು ಉಪಯೋಗಿಸಿರುವಿ ಎಂಬುದನ್ನು ನಾನೂ ತಿಲಿದುಕೊಳ್ಳುವೆನು. ಈಗ ಕಲಿತ ಹುಡುಗಿಯರ ಭವಿಷ್ಯದ ಮುಂದಿರುವ ನಾಜೂಕಾದ ಪ್ರಶ್ನೆ ಇದು.
ಇನ್ನೇನು, ಈಗಲಾದರೂ ನಿನ್ನ ಮಲೆನಾಡ ಹುಡುಗಿಯ ಬಗ್ಗೆ, ಅಲ್ಲ ನನ್ನ ವಿಚಾರದಲ್ಲಿ, ಅನ್ಯಥಾ ತಿಳಿದುಕೊಳ್ಳುವುದಿಲ್ಲವಲ್ಲ? ಪಾಪ ಆಕೆಯ ಮದುವೆಯ ಪೌರೋಹಿತ್ಯವನ್ನು ವಹಿಸಿ ಪುಣ್ಯ ಕಟ್ಟಿಕೋ.
ಲೀಲಾ, ಶಂಕರ, ರಾಘವರ ಬಗ್ಗೆ ಒಂದಿಷ್ಟು ಸಾಹಿತ್ಯವನ್ನು ನಿನ್ನ ಪತ್ರದ ಒಕ್ಕಣಿಕೆಯಲ್ಲಿ ಸೇರಿಸು. ನೀನೊಬ್ಬಳೇ ಏನು ಅವರಿಗೆ ಹೊಣೆ? ಹಣ ಕಳುಹಿಸುವುದಷ್ಟೇ ನನ್ನ ಕೆಲಸವೇನು?
ಇತಿ ನಿನ್ನ ಎದೆಯನ್ನ
*****
















