ಓ ತಾಯೆ ಬರದೆ ಮಾಯೆ ಈಯೆ ಒಂದು ಹಾಡನು
ಕಾಯೆ ನಿನ್ನ ಕಂದನನ್ನು ಬಾಯ ಬಿಡುತ ಬಂದನು
ಮೊದಲ ನುಡಿಗಳಾದರೇನು? ತೊದಲು ನುಡಿಗಳಿಲ್ಲವೇ?
ಹೃದಯದಲರ ನನ್ನಿವಾತು ಜಗಕೆ ರುಚಿಸಲಾರವೇ!
ಮೂಕನಾಗಿ ನೂಕಲಾರೆ ಸಾಕು ಬಾಳು ಬೇಸರ
ಲೋಕವೆಲ್ಲ ಕೈಯ ಬಿಟ್ಟರೆನಗೆ ನೀನೆ ಆಸರೆ
ಚಿತ್ರದಲ್ಲಿ ಬಿತ್ತು ಮುತ್ತಿನಂಥ ಮಾತನೊಂದನು
ಸುತ್ತು ಮುತ್ತು ಹತ್ತು ದಿಕ್ಕ ಹೇಳಲೆನ್ನ ಹಾಡನು
ಮನಕೆ, ಕೆಟ್ಟ ಕನಸಿನಂತೆ, ಹಾರ ಹರಿದ ಹೂಗಳಂತೆ
ಬನುದಿ ಬಟ್ಟೆ ತಪ್ಪಿದಂತೆ, ಅಲೆಯುತಿರುವುದೊಂದೆ ಚಿಂತೆ
ರಮಿಸು ಜೋಗುಳವನು ಪಾಡಿ ನಿನ್ನ ಮಗಳು ಅದುವೆ ಬಡವಿ
ಮಮತೆಯಿಂದ ಮೈ ಮೈದಡವಿ ನಿನ್ನ ಉಡಿಯೊಳದನು ಕೆಡವಿ
ಬಗೆಯ ಬಯಲು ಬಂಜೆಯಾಗಿ ಭೋರಿಡುತ್ತ ಬಿದ್ದಿದೆ
ನಗುವ ಜಗದ ಮಸಣವಾಗಿ ಹೊಗೆಯು ಮುತ್ತಿ ಕೊಂಡಿದೆ
ಹಾರಿಸದನು, ಆರಿಸದನು, ಊರು ನಿನ್ನ ಬಾವುಟ
ಊರು ಕೇರಿಗೆಲ್ಲ ತೋರಿ ಸಾರುತಿರಲಿ ಹೊಸ ದಿಟ
*****

















