Home / ಕವನ / ಕವಿತೆ / ಅಂಬಿಗನು

ಅಂಬಿಗನು

ಆರುಜನರಿವರರಿಗಳೆನ್ನಯ ಬೆನ್ನು ಹತ್ತಿರೆ ನಾನು ಬಯಸುವೆ |
ಪಾರುಗಾಣುತಲವರ ಹಸ್ತದಿ ದೂರ ಪೋಗ್ವುದಕೇ ||
ಮೂರಮಣ ನಾನೆಂತು ದಾಟುವೆ ಘೋರವಾದೀ ಭವದ ಸಾಗರ |
ತೋರು ದಾರಿಯ ನನಗೆ ನಿನ್ನಯ ಬೆಳಕು ತೋರುತಲಿ || ೧ ||

ಹಣ್ಣುಮಾಡಿಹರಿವರು ನನ್ನನು ಕಂಡಕಂಡಡೆ ಪೀಡಿಸುತ್ತಲಿ।
ಪೆಣ್ಣುಯೆನ್ನುವ ಕರುಣೆಯಿಲ್ಲದೆ ಪೊಡೆವರೆನ್ನನ್ನೂ ||
ಕಣ್ಣುಕಾಣದ ಕುರುಡಿಯಾಗಿಹೆ ಮಣ್ಣುಬೀಳಲಿ ಇವರ ಬಾಯೊಳು |
ಸಣ್ಣಗಾಗಿಯೆ ಅರೆಯುತಿರ್ಪರು ಸತತ ನನ್ನನ್ನು || ೨ ||

ಅಂಬಿಗಪ್ಪನೆ ಬೇಡಿಕೊಳ್ವೆನು ಪಾರುಮಾಡೆಲೊ ಯಿವರ ಕೈಯ್ಯಿಂ |
ನಂಬಿಬಂದಿಹಳನ್ನು ಕಾಯ್ದುದು ಧರ್ಮನಿನಗಲ್ಲೇ ||
ತುಂಬಿದ ಸಾಗರದ ತೀರದಿ ನಿಂತುಕೊಂಡಿಹೆ ಗತಿಯ ಕಾಣದೆ |
ಅಂಬರೀಷಗೆ ಮುಕುತಿಯಿತ್ತಿಹ ಹರಿಯೆ ಕಾಯನ್ನ || ೩ ||

ಹುಟ್ಟಿನಿಂದಲಿ ನೀರ ಕಡಿಯಲೊ ಸುಟ್ಟುಮೋರೆಯರಿನರ ತಪ್ಪಿಸೋ।
ಶ್ರೇಷ್ಠನಾವಿಕ ನೆನಿಸಿಕೊಂಬೆಯೊ ನೀನು ಜಗದೊಳಗೇ ||
ವುಟ್ಟ ಸೀರೆಯ ಪರಿವೆಯಿಲ್ಲದೆ ಕಷ್ಟಬಡುತಲಿ ಓಡಿ ಬಂದಿಹೆ |
ಕಷ್ಟನಳಿಯುತೆ ಶ್ರೇಷ್ಠಪದವಿಗೆ ಮುಟ್ಟಿಸೆನ್ನನ್ನೂ || ೪ ||

ಮೀನನಾಗುತೆ ಹೀನದೆಸೆಯೊಳು ಗ್ಲಾನಿಗೊಳ್ಳುತೆಬಿದ್ದಕಾಲಕೆ |
ಮಾನವರ ರಕ್ಷಣೆಯ ಮಾಡಲು ಮತ್ಸ್ಯ ನೀನಾದಿ ||
ದೀನರಕ್ಷಕ ಭೂರಮೆಯನೀಂ ಪೆತ್ತು ಬೆನ್ನೊಳು ಪಾರುಮಾಡಿದಿ |
ಕೂರ್ಮ ರೂಪದಿ ಹರಿಯೆ ನಾರಾಯಣನೆ ಭಗವಂತಾ || ೫ ||

ಹಂದಿರೂಪದಿ ಚಂದದಿಂದಲಿ ಮಂದಿ ಸಹಿತವೆ ಭೂರಮೆಯನೀ |
ಹಿಂದಕೆತ್ತಿದೆ ಕೋರೆಯಿಂದಲಿ ಜಗವನುದ್ಧರಿಸೆ ||
ಅಂದು ನಿನ್ನೀ ಸಾಹಸವ ಮೆಚ್ಚುತೆ ಚಂದ ಪೂಗಳವೃಷ್ಟಿಗೈದರ |
ತಂದೆ ಹರಿಯೆ ಭಾಪುಯೆನ್ನುತೆ ಸಂದದಿವಿಜಗಣಾ || ೬ ||

ದುಟ್ಟ ರಕ್ಕಸನನ್ನು ಶೀಳಲು ಶ್ರೇಷ್ಠನರಹರಿ ರೂಪಿನಿಂದಲಿ |
ನೆಟ್ಟನೆ ಹೊರಬಿದ್ದು ಬಂದಿಯೊ ಶೀಳಿಕ೦ಬವನೂ ||
ಅಟ್ಟಿ ರಕ್ಕಸನನ್ನು ಯಮಸದ ಕಾಗಕಾಯ್ದಿಯೊನಿನ್ನ ಭಕ್ತನ |
ಶೇಷ್ಠ ಪ್ರಹ್ಲಾದನನು ನಿನ್ನಮ ಮೊರೆಯ ಹೊಕ್ಕವನ || ೭ ||

ಕುಳ್ಳ ವಾಮನನಾಗಿ ಬರುತಲಿ ಬಿಕ್ಷೆ ಬೇಡುತೆ ಮೂರುಪಾದವ |
ಮಳ್ಳು ಮಾತಿಲಿ ದಾನ ಬೇಡುತೆ ಬಲಿಯ ವಂಚಿಸಿದೀ ||
ಸುಳ್ಳು ಬೀಳದ ಭಕ್ತ ಬಲಿಯೊಳು ಮೆಚ್ಚಿಕಾಯ್ದಿಯೊ ಗದೆಯ ಪಿಡಿಯುತೆ |
ವೊಲ್ಲೆನೆನ್ನದಲವನ ಬಾಗಿಲು ಪಾತಾಳದಲಿ ನೀನೂ || ೮ ||

ಕಾರ್ತವೀರ್ಯನು ತಂದೆ ಜಮದಗ್ನಿಯನು ಪೀಡಿಸೆ ಸಹಿಸಲಾರದೆ |
ಆರ್ತರಕ್ಷಕ ಬಂದೆ ಧಾವಿಸಿ ಕೊಡಲಿ ಪಿಡಿಯುತ್ತೆ ||
ಧೂರ್ತ ಕ್ಷತ್ರಿಯರನ್ನು ನೀಂ ಸಂಹರಿಸಿ ಜಗದಾಭಾರವಿಳಿಸಿದಿ |
ಮೂರ್ತ ರೂಪದಿ ಪ್ರಕಟವಾಗುವಿ ಕಾಲಕಾಲಕ್ಕೆ || ೯ ||

ಜಗದಿ ಸುಖಶಾಂತಿಗಳ ರಾಜ್ಯವ ನೆಲಿಸಲೋಸುವ ರಾಯನಾಮದಿ |
ಅಗಹರನೆ ಜನಿಸಿದ ಮಗನ ರೂಪದಿ ರಾಯದಶರಥಗೇ ||
ದುರುಳ ರಾವಣ ನಿನ್ನ ರಾಣಿಯ ಸೀತೆಯನು ಕದ್ದೊಯ್ಯಲಾಗಲೆ |
ಮರಣರಕ್ಕಸಗೆಸಗಿ ಪೊಳೆದೆಯೊ ಸೀತೆಸಹಿತಾಗಿ || ೧೦ ||

ಕೃಷ್ಣ ನೆಂಟಭಿಧಾನದಿಂದಲಿ ಪುಟ್ಟಿ ಜಗದೊಳು ಕೊಂದೆಕಂಸನ |
ವಿಷ್ಣುಪ್ರಿಯಭಾಗ್ವತದ ತತ್ವವ ಜಗಕೆ ಬೀರಿದಿಯೋ |
ಕೃಷ್ಣೆ ಪತಿ ಪಾಂಡವರ ರಕ್ಷಿಸೆ ಶ್ರೇಷ್ಠ ಸಾರಥಿಯಾಗಿ ಪಾರ್ಥನ |
ಶ್ರೇಷ್ಠ ಗೀತೆಯ ಮರ್ಮವನು ನೀಂ ನರಗೆ ಬೋಧಿಸಿದಿ || ೧೧||

ಅರುಹ ಲೋಸುಗ ಜಗಕೆ ನಿಃಸಾರತೆಯ ಸಂಸಾರದಲಿ ತೋರುವ |
ಪರಮ ಯೋಗಿಯ ರೂಪಿನಿಂದಲಿ ಬುದ್ಧನೀನಾದೀ ||
ಕರುಣೆಪೂರಿತ ಹಿಂಸೆಯರಿಯದ ಗಾಂಧಿಯೆಂಬಾ ಸುತನ ಕಳುಹಿದಿ |
ಪರಮ ನಿನ್ನಯ ತತ್ವಬೀರಲು ಜಗದಿ ಶಾಶ್ಚತವ || ೧೨ ||

ದುರುಳನೊರ್ವನು ಗಾಂಧಿದೇಹವ ಕೆಡಹಲಾತನ ಪ್ರಾಣವಕ್ಕಿಯು |
ಭರದೆ ಹಾರಿತು ನಭಕೆ ಪೊಳೆಯಲು ಚಂದ್ರ ಮಂಡಳದಿ ||
ಮರುಳು ಜನರಿಹ ಗಾಂಧಿ ತತ್ವವ ಮರೆತು ತಮ್ಮೊಳು ಜಗಳಗೈವರು !
ಬಿಗಿದು ನಿಂತಿದೆ ಕದನ ಸೂಚತ ಮುಗಿಲು ವಿಶ್ಯ ದೊಳೊ || ೧೩ ||

ಜಾತಿವರ್ಣಗಳೆಂಬ ನೆಪದಿಂ ಕೋತಿಯಂದದಿ ಕಲಹಗೈಯುತೆ।
ಸ್ವಾರ್ಥಪೂರಿತ ಜನರು ಜಗದೊಳು ಮೆರೆವರೆಲ್ಲೆಲ್ಲಾ ||
ಭೀತಿಯಿಂದಲಿ ಕಾಣುತಿರ್ಪರು ಬಂಧು ಜನಗಳು ತಮ್ಮತಮ್ಮೊಳು
ನೀತಿ ಬೋಧಿಸೆ ನಿನ್ನಗತ್ಯವು ಯಿಂದು ತಾನಿಹುದು || ೧೪ ||

ಕಲಿಯ ಮದವನು ಯಿಳಿಸೆ ನಿನ್ನಯ ಕಲ್ಕಿಯವತಾರಕ್ಕೆ ಸಮಯವು |
ಒದಗಿ ಬಂದಿದೆ ಬಾರೊ ಹರಿಯೆ ಭಾರವಿಳಿಯುದಕೇ ||
ಗಲಿತವಾಗಿಹ ನೀತಿಯೆಮ್ಮೊಳು ಮೆರಿಸಿ ಬಳಯುತರನ್ನು ಮಾಡುತೆ |
ಹರಿಸೋ ಮಾನವ ಕುಲವ ಹರಿಯೇ ಸನ್ಮಾರ್ಗತೋರುತಲೀ || ೧೫ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...