ನೇಸರು ಮೂಡಿತು ಮೂಡಲಲಿ
ತೇಜೋವಧೆಯೆದೆಯಾಳದಲಿ
ನಗೆ ಮಿನುಗಿತು ಹೊಸ ಮೊಗದಲ್ಲಿ
ಭಾವೋನ್ಮೀಲಿತ ಸಿಡಿಲಲ್ಲಿ!
ಕನಸಿನ ಕಣ್ಣಿನ ಬಣ್ಣದಲಿ
ಮನಸಿನ ಮಣ್ಣಿನ ಹಣ್ಣಿನಲಿ
ಕಾಣುವ ಕಾಣದ ರೂಪಿನಲಿ
ಬಾಣದ ಭೀಕರ ವೇಗದಲಿ
ಹಿಡಿಯಲು ನೆಗೆವುದು
ನೆಗೆಯಲು ಸಿಡಿವುದು
ಧರ್ಮದ ದೀಪ್ತಿಯ ನೆಳಲೇನು?
ಕರ್ಮದ ಮರ್ಮಕೆ – ಮಳಲೇನು?
ಜಾತಿಯ ಜೀವದ ಹೆಣವೇನು?
ಮಾತಿನ ಮಾಲೆಯ ಜೊತೆಯೇನು?
ಅರಿತವರಾರೈ ಯುಗ ಧರ್ಮ?
ಅರಿತವನೊಬ್ಬನೆ ವಿಶ್ವಾತ್ಮ!
*****
ಬೆಂಗಳೂರು: ೧೯೪೨

















