ಪ್ರಿಯ ಕಿಟಿ,
ಇವತ್ತು ನಿನಗೊಂದು ನಿರಾಸೆಯ ಸಂಗತಿಯ ಹೇಳುವುದಿದೆ. ನಮ್ಮ ಯಹೂದಿ ಮಿತ್ರರನ್ನೆಲ್ಲಾ ಗುಂಪು ಗುಂಪಾಗಿ ಎಳೆದೊಯ್ಯಲಾಗುತ್ತಿದೆ. ಒಂದು ಚೂರು ಕರುಣೆ ಇಲ್ಲದವರಂತೆ, ಗೆಸ್ಟಪೋ [ ನಾಝಿ ಸರಕಾರದಲ್ಲಿಯ ಸಿಕ್ರೇಟ್ ಪೋಲಿಸರು]ಗಳು ಇವರನ್ನಲ್ಲೆಲ್ಲಾ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ. ದನದ ಗಾಡಿಗಳಲ್ಲಿ ತುಂಬಿ ತುರುಕಿ, ವೆಸ್ಟರ ಬ್ರಾಕ್‌ನ ಡ್ರೆಂಟ್ ಎಂಬಲ್ಲಿಯ ಬೃಹತ್ ಯಹೂದಿ ಕ್ಯಾಂಪ್‌ಗಳಿಗೆ ರವಾನಿಸಲಾಗುತ್ತಿದೆ. ವೆಸ್ಟರ್‌ಬ್ರಾಕ್ ಹೆಸರು ಭಯ ಮೂಡಿಸುತ್ತೆ: ಶೌಚದ ಸಣ್ಣಕೋಣೆಯಲ್ಲಿ ನೂರಾರು ಜನರನ್ನು ತುರುಕಲಾಗುತ್ತದೆ. ಅಲ್ಲದೇ ಅಲ್ಲಿ ಬೇಕಾದಷ್ಟು ಶೌಚಾಲಯಗಳು ಇಲ್ಲ. ಪ್ರತ್ಯೇಕ ವಾಸದ ವ್ಯವಸ್ಥೆಗಳಿಲ್ಲ. ಎಲ್ಲ ಗಂಡು ಹೆಣ್ಣು, ಮಕ್ಕಳು ಎಲ್ಲರೂ ಒಂದೆ ಕಡೆ ನಿದ್ರಿಸಬೇಕು. ಇದರಿಂದಾಗಿ ಭಯಬೀಳಿಸುವಂತಹ ಅನೈತಿಕ ಸಂಗತಿಗಳ ಕೇಳಬೇಕಾಗಿದೆ. ಅಲ್ಲಿರುವ ಅನೇಕ ಮಹಿಳೆಯರು, ಮತ್ತು ಹುಡುಗಿಯರೂ ಕೂಡಾ ಯಾವ ಕ್ಷಣದಲ್ಲಾದರೂ ಗರ್ಭಿಣಿಯರಾಗಬಹುದು.
ಅಲ್ಲಿಂದ ಪಾರಾಗುವುದು ಕೂಡಾ ಅಸಾಧ್ಯವೇ. ಕ್ಯಾಂಪಿನಲ್ಲಿಯ ಬಹಳ ಜನರು ತಮ್ಮ ಬೋಳಿಸಿದ ತಲೆಯಿಂದ ಮತ್ತು ಕೆಲವರು ತಮ್ಮ ಯಹೂದಿ ಹೊರ ಚಹರೆಯಿಂದ ಕ್ಯಾಂಪಿನ ಜನರೆಂದು ಗೊತ್ತಾಗುತ್ತಿದ್ದರು.
ಹಾಲಂಡಿನಲ್ಲಿ ಕೂಡಾ ಇದು ಇಷ್ಟೇ ಕೆಟ್ಟದ್ದಾಗಿರಬಹುದೇನೋ? ದೂರದ ಮತ್ತು ಕ್ರೂರ ಪ್ರದೇಶಗಳಿಗೆ ಇಂತವರು ಕಳಿಸಲ್ಪಡುತ್ತಿರುವರೇನೋ? ಅವರಲ್ಲಿ ಬಹಳಷ್ಟು ಜನ ಕೊಲೆಗೀಡಾಗುತ್ತಿರಬಹುದೆಂದು ನಮ್ಮ ಊಹೆ. ಇವರನ್ನೆಲ್ಲಾ ಉಸಿರುಗಟ್ಟಿಸಿ ಕೊಲ್ಲಲಾಗುತ್ತಿದ್ದ ಸಂಗತಿಯನ್ನು ಇಂಗ್ಲಿಷ ರೇಡಿಯೋ ಪ್ರಸಾರಮಾಡುತ್ತದೆ.
ಬಹುಶಃ ಇದು ಸಾಯಿಸಲು ಇರುವ ಶೀಘ್ರ ಮಾರ್ಗ.ನಾನು ತುಂಬಾ ವಿಚಲಿತಗೊಂಡಿದ್ದೇನೆ. ಮೇಪ್ ಈ ಎಲ್ಲಾ ಕಣ್ಣೀರಿನ ಕಥೆಗಳನ್ನು ಹೇಳುವಾಗ ನನ್ನ ಕಣ್ಣೀರು ಬತ್ತಿ ಹೋಗಿತ್ತು. ಆಕೆ ಕೂಡಾ ನನ್ನಷ್ಟೇ ಘಾಸಿಗೊಂಡಿದ್ದಳು. ಮೊನ್ನೆ ಮೊನ್ನೆಯ ಉದಾಹರಣೆ, ಒಬ್ಬ ವಯಸ್ಸಾದ ಬಡ ಯಹೂದಿ ಹೆಂಗಸೊಬ್ಬಳು ತನ್ನ ಮನೆಬಾಗಿಲ ಬಳಿ ಕುಳಿತಿದ್ದಳು: ಆಕೆಗೆ ಅಲ್ಲಿಯೇ ಕಾಯುವಂತೆ ಹೇಳಿ ಗೆಸ್ಟಪೋಗಳು ಆಕೆಯನ್ನು ಕರೆದೊಯ್ಯಲು ಕಾರು ತರಲು ಹೋಗಿದ್ದರು. ಆಕಾಶದಲ್ಲಿ ಹಾರುತ್ತಿದ್ದ ಇಂಗ್ಲಿಷ ವಿಮಾನಗಳ ಕಡೆ ಶೂಟ್ ಮಾಡುತ್ತಿದ್ದ ಗನ್‌ಗಳು , ಸರ್ಚ ಲೈಟ್‌ಗಳ ಕಣ್ಣು ಕೋರೈಸುವ ಬೆಳಕು ಇವುಗಳನ್ನೆಲ್ಲಾ ಕಂಡು ಆ ಬಡ ಮುದುಕಿ ವಿಪರೀತ ಹೆದರಿದ್ದಳು. ಆದರೆ ಮೇಪ್‌ಗೆ ಆಕೆಯನ್ನು ಕರೆದುಕೊಂಡು ಹೋಗಿ ರಕ್ಷಿಸಲು ಆಗಲಿಲ್ಲ. ಅಲ್ಲಿ ಆ ಸಮಯದಲ್ಲಿ ಆ ಧೈರ್ಯ ಯಾರಿಗೂ ಇರಲಿಲ್ಲ. ಜರ್ಮನ್ನರು ಸ್ವಲ್ಪವೂ ಕರುಣೆ ಇಲ್ಲದಂತೆ ಹೊಡೆ ಬಡಿಯುತ್ತಲೇ ಇದ್ದರು. ಎಲಿ ವೊಸನ್ ಕೂಡಾ ತಟಸ್ಥಳಾಗಿದ್ದಾಳೆ. ಆಕೆಯ ಬಾಯ್‌ಫ್ರೆಂಡ್ ಜರ್ಮನಿಗೆ ಹೋಗಬೇಕಾಗಿದೆ. ತಮ್ಮ ಮನೆಗಳ ಮೇಲೆ ಹಾರಾಡುವ ವಿಮಾನಗಳಲ್ಲಿಯ ಯೋಧರು ಎಲ್ಲಾದರೂ ಮಿಲಿಯನ್ ಕೀಲೋ ತೂಕದ ಬಾಂಬಗಳನ್ನು ಈ ಡರ್‍ಕನ ತಲೆ ಮೇಲೆ ಎಸೆದು ಬಿಟ್ಟರೆ ಎಂದು ಆಕೆ ಹೆದರಿದ್ದಾಳೆ. ಆತ ಮಿಲಿಯನ್ ಬಾಂಬುಗಳನ್ನು ಸಹಿಸಲಾರ ಆದರೆ ಒಂದೇ ಒಂದು ಸಾಕು ಎಂಬ ಜೋಕು ಸಪ್ಪೆಯೆನಿಸುತ್ತದೆ. ಡರ್‍ಕ ಮಾತ್ರ ಹೋಗುತ್ತಿಲ್ಲ. ಟ್ರೇನ್‌ಗಟ್ಟಲೆ ಹುಡುಗರನ್ನು ಪ್ರತಿನಿತ್ಯ ಕರೆದೊಯ್ಯಲಾಗುತ್ತದೆ. ದಾರಿ ಮಧ್ಯೆ ಎಲ್ಲಿಯಾದರೂ ಟ್ರೇನು ನಿಂತರೆ ಕೆಲವೊಮ್ಮೆ ಈ ಹುಡುಗರು ಕೆಲವರು ಅಲ್ಲಿಂದ ಗೊತ್ತಿಲ್ಲದಂತೆ ಪಾರಾಗುವರು. ಅದರಲ್ಲಿ ಕೆಲವರು ಮಾತ್ರ ಯಶಸ್ವಿಯಾಗುವರು. ಹಾಗೆಂದು ಇದೇ ನಾನು ಕೇಳಿದ ಕೊನೆಯ ಕೆಟ್ಟ ಸುದ್ದಿಯಲ್ಲ. ನೀನೆಂದಾದರೂ ಒತ್ತೆಯಾಳುಗಳ ಕುರಿತಾಗಿ ಕೇಳಿದ್ದೆಯಾ? ಅದು ವಿಧ್ವಂಸಕಕ್ಕೆ ಇರುವ ಇತ್ತೀಚಿನ ಹೊಸ ಶಿಕ್ಷೆ. ಅದರಂತಹ ದಾರುಣವಾದ ಸಂಗತಿಯನ್ನು ನೀನು ಊಹಿಸಬಲ್ಲೆಯಾ?
ಪ್ರಮುಖ ಪ್ರಜೆಗಳು, ಮುಗ್ಧ ಜನರುಗಳೆಲ್ಲಾ ತಮ್ಮ ಅದೃಷ್ಟವನ್ನು ಕಾಯುತ್ತ ಕೂರುವಂತೆ ಸೆರೆಮನೆಯಲ್ಲಿ ದೂಡಲಾಗುತ್ತದೆ. ವಿಧ್ವಂಸಕ್ಕೆ ಕಾರಣರಾದವರು ಸಿಗದೇ ಹೋದಲ್ಲಿ ಈ ಗೆಸ್ಟಪೋಗಳು [ ನಾಝೀ ಪೋಲಿಸರು] ಒಂದೈದು ಒತ್ತೆಯಾಳುಗಳನ್ನು ಗೋಡೆಗೆ ಹಿಡಿದು ಜಜ್ಜಿ ಸಾಯಿಸುತ್ತಾರೆ. ಅವರ ಸಾವಿನ ಸುದ್ದಿ ಸಂಗತಿಗಳು ಆಗಾಗ ಪೇಪರುಗಳಲ್ಲಿ ಬರುತ್ತಲೇ ಇರುತ್ತದೆ. ಇಂತಹ ಉದ್ರಿಕ್ತ ಕ್ರಮವನ್ನು ಆಕಸ್ಮಿಕ ದುರ್ಘಟನೆ ಎಂದು ಬಣ್ಣಿಸಲಾಗುತ್ತದೆ. ಜರ್ಮನ್‌ರು ಅದೆಷ್ಟು ಒಳ್ಳೆಯವರು. ಒಂದು ಕಾಲಕ್ಕೆ ನಾನೂ ಅವರಲ್ಲಿ ಒಬ್ಬಳಾಗಿದ್ದೆ ಎಂಬುದನ್ನು ಯೋಚಿಸಿದರೆ! ಇಲ್ಲ, ಹಿಟ್ಲರ್ ನಮ್ಮ ರಾಷ್ಟ್ರೀಯತೆಯನ್ನು ಬಹು ಹಿಂದೆಯೇ ಕಸಿದುಕೊಂಡಿದ್ದಾನೆ. ಜರ್ಮನ್‌ರು ಮತ್ತು ಯಹೂದಿಗಳು ಇಂದು ಜಗತ್ತಿನಲ್ಲಿ ಬದ್ಧ ವೈರಿಗಳು.
ನಿನ್ನ,
ಆನ್















