ಮಂಜು ಬೀಳುವದೆಂದು
ಬೆದರಿ ನಿಂತಿಹ ಕನ್ಯೆ!
ಅಂಜದಿರು, ಮೈಚಳಿಯ ಬಿಟ್ಟು ನಿಲ್ಲು.
ಸುರಿದು ಮುಗಿಲೊಳಗಿಂದ
ಹಿಮವು ಬಿದ್ದಿರಲೇನು?
ನಿಂತ ನೀರಾದರೇನಾಣೆಕಲ್ಲು?
ನಿನ್ನ ಕೊಳದಲ್ಲಿರುವ
ಕೆಂಪು ಮೀನಗಳೆಲ್ಲ
ಮಿನುಗದಲೆ ಮುಗಿದಿಹವು ಮಂಜಿನಲ್ಲಿ.
ದಿನದಿನಕೆ ಕಣ್ತೆರೆವ
ನೀರ್ವೂಗಳೆಲ್ಲಿಹವು?
ಮುಚ್ಚಿಹವು ಹಿಮಕುಂಡದಂಚಿನಲ್ಲಿ.
ದುಂಡುಮಲ್ಲಿಗೆಯಂಥ
ಮೈಯಳ್ಳ ಕೋಮಲೆಯೆ!
ನಿಂತೆ ತುದಿದಂಡೆಗತಿ ಖಿನ್ನಳಾಗಿ!
ಮಾಗಿಯಲಿ ತುಂಬಿದ್ದ
ಮೊಗಸಿರಿಯು ಕಳೆದಿರಲು
ಯೋಚಿಸುವೆ ನೀನಿಂದು ಭಿನ್ನಳಾಗಿ!
ಬೆದರದಿರು. ಬಂದೀತ-
ದೊಂದು ದಿನ ಮಧುಮಾಸ.
ಮತ್ತೆ ಕರಗೀತಂತೆ ಆಣೆಕಲ್ಲು.
ಹಿಮವಲ್ಲ, ಹಿಮಕರನ
ಹುಣ್ಣಿಮೆಯು ಬೆಳಗೀತು.
ಮೂಡೀತು ಬಣ್ಣಬಣ್ಣಗಳ ಬಿಲ್ಲು.
ನಿಂತು ತುದಿದಂಡೆಯಲಿ
ಕೊಳದೆದೆಯ ನೆರಳಳೆಯೆ
ಅರಳುವವು ನೀರ್ವೂಗಳೆಲ್ಲ ಮರಳಿ.
ಧರೆಗೆ ಬೆಳಕಾಗುವದು.
ಕೊಳಕೆ ಹಗಲಾಗುವದು.
ಸುಳಿಯುವವು ಕೆಂಪು ಮೀನಗಳು ಹೊರಳಿ.
*****


















