Home / ಕಥೆ / ಕಾದಂಬರಿ / ಅವಳ ಕತೆ – ೫

ಅವಳ ಕತೆ – ೫

ಅಧ್ಯಾಯ ಐದು

ಸೆಟ್ಟರಿಗೆ ದಾರಿಯ ಉದ್ದಕ್ಕೂ ನಿಜವಾಗಿ ಯಾವುದೋ ಒಂದು ಲೋಕಕ್ಕೆ ಹೋಗಿಬಂದಿರುವಂತೆ ಆಯಿತು. ಚಿನ್ನಳ ಕೈಹಿಡಿದುಕೊಂಡು ಮುತ್ತಿಟ್ಟಾಗ ಏನೋ ಬಹಳ ಪ್ರಿಯವಾದ ಒಂದು ಚಳುಕು ಹೊಡೆದಂತಾಗಿ ಮೈಯೆಲ್ಲ ಮುಳ್ಳು ಕಟ್ಟಿತು. ಅವರು ಯಾವ ಹೆಂಗಸನ್ನು ಮುಟ್ಟಿದಾಗಲೂ ಹಾಗಾಗಿರಲಿಲ್ಲ. ದಾರಿಯುದ್ದಕ್ಕೂ ಅವರಿಗೆ ಇನ್ನು ಯಾವ ಯೋಚನೆಯೂ ಇಲ್ಲವೇ ಇಲ್ಲ. “ಸುಲ್ತಾನ ಇವಳ ಸಂಗೀತಕ್ಕೆ ಒಂದು ಲಕ್ಷ ಕೊಡುತ್ತೀನೆಂದ. ಇವಳಿಗೇ ಆದರೆ ಇನ್ನೆಷ್ಟು ಲಕ್ಷ ಕೊಡಬಾರದು? ಬೇಕಾದುದು ಆಗಲಿ. ಇವಳು ಇನ್ನೊಬ್ಬರ ಪಾಲು ಆಗದಂತೆ ನೋಡಿಕೊಳ್ಳಬೇಕು. ವಜ್ರದ ಗಣಿಯೂ ನಮ್ಮದೇ ಆಗಬೇಕು. ಅದಕ್ಕಿಂತ ಹೆಚ್ಚಾಗಿ ಈ ಭೋಗದ ಖನಿಯೂ ಬೇಕೇಬೇಕು. ಈ ಎರಡು ಖನಿ ಹಿಡಿದರೆ ನಮ್ಮಂತಹ ಭಾಗ್ಯವಂತರು ಇನ್ನಿಲ್ಲ” ಎಂದು ಅಳೆದು ಸುರಿದು ಮಾಡುತ್ತಿದ್ದರು. ಅವರು ಯಾವುದನ್ನು ಯೋಚಿಸುವುದಕ್ಕೆ ಹೊರಟರೂ ಅವಳ ಆ ಕೋಮಲ ಹಸ್ತದ ಮೃದು ಸುಖಸ್ಪರ್ಶವೇ ನೆನಪಾಗುವುದು. ಮನಸ್ಸು ಆಗಲೇ ಆ ಸುಖಡ ಸಾಗರದಲ್ಲಿ ಓಲಾಡಿದಂತೆ, ಮುಳುಗಿ ತೇಲಿದಂತೆ, ಏನೇನೋ ಯೋಚನೆ ಗಳಲ್ಲಿ ಬಿದ್ದು ಒದ್ದಾಡಿ ಕುಣಿದು ಕುಪ್ಪಳಿಸುವುದು.

ಗಾಡಿಯು ಮನೆಗೆ ಬಂತು. ಸೆಟ್ಟರು ಒಳಕ್ಕೆ ಹೋಗುತ್ತಿದ್ದ ಹಾಗೆಯೇ ಅರಮನೆಯಿಂದ ಬಂದಿರುವ ಪತ್ರವೊಂದು ಕೈಸೇರಿತು. ಆ ದಿನವೇ ಸಂಜೆ ಸೂರ್ಯಾಸ್ತಮಯವಾದ ಒಂದು ಮುಹೂರ್ತದ ಸುಸಮಯದಲ್ಲಿ ಸೆಟ್ಟರು ದರ್ಶನಕ್ಕೆ ಬರಬಹುದು ಎಂದು ಅಪ್ಪಣೆಯಾಗಿದೆಯೆಂದು ತಿಳಿಯಿತು. ಅವರೂ ಚಕ್ರವರ್ತಿಗಳ ದರ್ಶನಕ್ಕೆ ಹೋಗುವುದಕ್ಕೆ ಸಿದ್ದರಾದರು.

ಗೊತ್ತಾದ ಹೊತ್ತಿಗೆ ಸಚಿವರು ಕುದುರೆ ಬಾಗಿಲಲ್ಲಿ ಕಾದಿದ್ದು ಸೆಟ್ಟರನ್ನು ಕರದುಕೊಂಡು ವಿದ್ಯಾರಣ್ಯ ವಿಲಾಸದ ತೊಟ್ಟಗೆ ಕರೆದುಕೊಂಡು ಹೋದರು. ಸ್ವಲ್ಪ ಹೊತ್ತಿನೊಳಗಾಗಿ ಚಕ್ರವರ್ತಿಗಳ ಸವಾರಿಯು ನರಸಿಂಹ ವಿಲಾಸಕ್ಕೆ ದಯಮಾಡಿಸಿತು. ಸೆಟ್ಟರು ಆಂಧ್ರಕರ್ನಾಟಕ ರಮಾರಮಣರ ಸಮ್ಮುಖದಲ್ಲಿ ಗಂಭೀರವಾಗಿ ಭಯಭಕ್ತಿಗಳಿಂದ ಹಾರ ತುರಾಯಿ ಸಮರ್ಪಿಸಿದರು. ಅವರೆಕಾಳು ಗಾತ್ರದ ಆಣಿಮುತ್ತೊಂದು, ಅದರ ಜೊತೆಗೆ ಸರಿಯಾದ ಎರಡು ಮುದ್ದಾದ ಪಚ್ಚೆಗಳು ಬಹು ಸೂಕ್ಷ್ಮವಾಗಿ ಕುಂದಣದಲ್ಲಿ ಕೂಡಿಸಿರುವ ಉಂಗುರವೊಂದನ್ನು ಕಾಣಿಕೆ ಮಾಡಿದರು. ಗರ್ವಗಂಧಿಗಳಾದ ಚಕ್ರವರ್‍ತಿ ಗಳೂ ಅದನ್ನು ದೀಪದ ಬೆಳಕಿನಲ್ಲಿ ನೋಡಿ ತಮ್ಮ ಮೆಚ್ಚುಗೆಯನ್ನು ತೋರಿಸಿದರು. “ವರ್ತಕ ಕುಲದ ಯಜಮಾನರು ಅ ಸಿಂಹಾಸನದಲ್ಲಿ ಇಟ್ಟಿರುವ ಅಚಲ ಭಕ್ತಿಯ ಗುರುತಾಗಿ ಇದು ಮಹಾಸ್ವಾಮಿಯನರ ಬೆರಳನ್ನು ಅಲಂಕರಿಸಬೇಕು ಎಂದು ಬೇಡಿಕೊಳ್ಳುತ್ತೇನೆ ಮಹಾಸ್ತಾಮಿ” ಎಂದು ಸೆಟ್ಟರು ವಿನಯವಾಗಿ ವಿಜ್ಞಾಪಿಸಿಕೊಂಡರು.

ಚಕ್ರವರ್ತಿಗಳೂ ನಗುತ್ತ ಅದನ್ನು ಬೆರಳಿಗೆ ಜೋಡಿಸುತ್ತಾ “ಇಂತಹ ಉತ್ತಮವಾದ ಆಭರಣ ಕಾಣಿಕೆಯಾಗಿ ಒಪ್ಪಿಸಿದರೆ ಅದನ್ನು ಇಟ್ಟು ಕೊಳ್ಳಿ ಎಂದು ಹೇಳಬೇಕಾಗಿಯೆ ಇಲ್ಲ. ಸೆಟ್ಟರೆ! ಮುತ್ತಿಗಿಂತ ಪಚ್ಚೆ ಚೆನ್ನಾಗಿದೆ; ಪಚ್ಚೆಗಿಂತ ಮುತ್ತು ಚೆನ್ನಾಗಿದೆ. ಎರಡಕ್ಕಿಂತ ನೀವು ಆಡಿದ ಮಾತು ಇನ್ನೂ ಚೆನ್ನಾಗಿದೆ. ಆಯಿತು. ಮುಂದೆ?“

“ಮಹಾಸ್ವಾಮಿ ! ನಾನು ಗೋಲ್ಕೊಂಡಕ್ಕೆ ಹೋಗಿದ್ದಾಗ ಸುಲ್ತಾನರ ಭೇಟಿ ಮಾಡಿದೆ. ಮಾತು ಮಾತಿಗೆ ಬಂದು ಕೆಲವು ಷರತ್ತುಗಳ ಮೇಲೆ ಗೋಲ್ಕೊಂಡದ ವಜ್ರದ ಗಣಿಗಳನ್ನು ಗುತ್ತಿಗೆ ಕೊಡುವುದಕ್ಕೆ ಸಿದ್ಧವಾಗಿದ್ದಾರೆ. ಆ ಗಣಿಗಳನ್ನು ನಡೆಸುವುದಕ್ಕೆ ಬೇಕಾದ ಬಂಡವಾಳ ಸುಮಾರು ಐದು ಕೋಟಿ ಎಂದು ಲೆಕ್ಕಮಾಡಿ, ತಮ್ಮ ಪಾದಸೇವಕರಾದ ವರ್ತಕ ಮಂಡಲಿಯವರು ಅಷ್ಟು ಹಣನನ್ನೂ ಕೊಡುವುದಕ್ಕೆ ಸಿದ್ದರಾಗಿದ್ದಾರೆ. ಈ ವಿಷಯ ಮಹಾ ಪಾದದಲ್ಲಿ ಅರಿಕೆ ಮಾಡಿ ಮುಂದೆ ಇಲ್ಲಿ ಅಪ್ಪ್ರಣೆಯಾದಂತೆ ನಡೆಯುವುದಕ್ಕೆ ಸಿದ್ಧವಾಗಿದ್ದೇವೆ. ಮಹಾಸ್ವಾಮಿ.”

“ಷರತ್ತುಗಳೇನು?” .

ಈ ಮಹಾಸ್ವಾ ಮಿಯವರು ಸಾವಕಾಕವಾಗಿ ಕೇಳಬೇಕು. ಷರತ್ತು ಬಹು ವಿಚಿತ್ರವಾಗಿದೆ. ಅಲ್ಲದೆ, ಸುಲ್ತಾನರು ಅಲ್ಲಾನ ಮೇಲೆ ಆಣೆಯಿಟ್ಟು ಅದನ್ನೆಲ್ಲಾ ಅಕ್ಷರಶಃ ಪಾಲಿಸುವುದಾಗಿ ವಚನ ಕೊಟ್ಟಿದ್ದಾರೆ ಅಲ್ಲದೆ ಗೋಲ್ಕೊಂಡದ ಸುಲ್ತಾನರು ಅವನುದ್‌ನಗರ, ಬೀರಾರ್‌ ಸುಲ್ತಾನರಂತೆ ಅಲ್ಲವಾಗಿ ಆತನ ಮಾತನ್ನು ನಂಬಬಹುದು. ಆದರೂ ನಮ್ಮ ಜಾಗ್ರತೆಯಲ್ಲಿ ನಾವಿರಬೇಕಾಗಿ ನಮ್ಮಿಂದ ಆಗಬೇಕಾದ ರಕ್ಷಣೆಗಳನ್ನೆಲ್ಲಾ ನಾವೂ ಮಾಡಿ ಕೊಳ್ಳುತ್ತೇವೆ. ಇಷ್ಟೆಲ್ಲ ಏಕೆ ಹೇಳುತ್ತಿದ್ದೇನೆಂದರೆ ಆ ಷರತ್ತು ಮಹಾಪಾದಕ್ಕೆ ಸಂಬಧಪಟ್ಟ ಒಂದು ಅಭಿಮಾನ ವಸ್ತುವಿನ ವಿಷಯ.”

ಚಕ್ರವರ್ತಿಗಳು ತಲೆದೂಗಿದರು. “ಏನು ನಮ್ಮ ಚಿನ್ನಾಸಾನಿ ಸಂಗೀತವೋ?”

ಸೆಟ್ಟರು ಚಕ್ರವರ್ತಿಗಳಿಗೆ ಸಾಷ್ಟಾಂಗ ಪ್ರಣಾಮಮಾಡಿ ಎದ್ದು ನಿಂತು ಕೈ ಜೋಡಿಸಿಕೊಂಡು ಹೇಳಿದರು, “ಮಹಾಪಾದಕ್ಕೆ ಯಾವ ರೀತಿಯಲ್ಲೂ ಆಯಾಸವಾಗಬಾರದು. ರಾಧಾನಿಯಲ್ಲಿ ನನ್ನದು ಸುಮಾರು ಎರಡು ಮೂರುಕೋಟಯಷ್ಟು ಆಸ್ತಿಯಿದೆ. ಇಷ್ಟನ್ನೂ ಸನ್ನಿಧಾನದಲ್ಲಿ ಒತ್ತೆಯಿಟ್ಟು ಹೇಳುತ್ತೇನೆ. ಜೊತೆಗೆ ಮಹಾಸನ್ನಿಧಾನದ ಅಪ್ಪಣೆಯಾದರೆ, ನಮ್ಮ ಭದ್ರತೆಗೋಸ್ಕರ, ನಮ್ಮ ವರ್ತ ಕಮಂಡಲಿಯನವರ ಹಣದ ರಕ್ಷಣೆಗೋಸ್ಕರ, ಮಹಾಪಾದಗಳನ್ನು ಆಶ್ರಯಿಸಿಬಾಳುವ ಪ್ರಜಾವರ್ಗದ ಸೌಖ್ಯಕ್ಕೋಸ್ಕರ ಗೋಲ್ಕೊಂಡದ ನವಾಬರಿಂದ ಇನ್ನು ದತ್ತು ನ ೯ ನಮ್ಮ ರಾಜ್ಯಗಳರಡೂ ಶಾಂತಿಯಿಂದ ಇರುವುದು ಎಂದು ಸಂಧಿ ಮಾಡಿಕೊಂಡು ಬರುತ್ತೇನೆ. ನಮ್ಮ ವೀರ ಮಂಡಲವು ನಿರಾತಂಕವಾಗಿದ್ದು ಮಹಾಸ್ಟಾ ಮಿಯವರ ಕೀರ್ತಿಯನ್ನು ಬೆಳಗಲಿ.”

ಚಕ್ರವರ್ತಿಗಳು ತಲೆದೂಗಿದರು. “ಆಯಿತು, ಸೆಟ್ಟರು ಕನ್ಯೆಯಿಲ್ಲದೆ ಮದುವೆಗೆ ಯತ್ನಿಸುತ್ತಿದ್ದಾರೆ. ಚಿನ್ನಳು ಒಪ್ಪಬೇಕಲ್ಲ ?“

“ಮಹಾತಾಯಿ ಹೆತ್ತ ಹೆಣ್ಣು ಆಕೆ. ಮಹಾಸ್ವಾಮಿ. ನಾನು ತಿಳಿದ ಮಟ್ಟಿಗೂ ಆಕೆಗೆ ಪರಮ ಭಕ್ತಿ ಸ್ಥಾನಗಳೆರಡು. ಆ ವಿದ್ಯಾಗುರು ಭರತಾಚಾರ್ಯರು. ಅನ್ನದಾತರಾದ ಮಹಾಪಾದ. ಕುಲೀನೆಯೂ ಪದಸ್ಥೆಯೂ ಆದ ಈ ಎರಡು ಬಿಟ್ಟರೆ ದೈವವಲ್ಲದೆ ಇನ್ನೊಂದಕ್ಕೆ ತಲೆಬಾಗುವುದಿಲ್ಲ ಎಂದರೆ ಸರ್ವರೂ ಅದಕ್ಕೆ ಒಪ್ಪಲೇಬೇಕಲ್ಲವೆ ಮಹಾಸ್ವಾಮಿ? ಆದರೆ ಆಕೆಯ ರಹಸ್ಯನನ್ನು ನಾನು ಭೇದಿಸಿದ್ದೇನೆ. ಹಿಂದೆ ಸನ್ನಿಧಾನದ ಆನುಗ್ರದ ಪಡೆದ ನಟರಾಯ ಕಂಠೀರವರಿಗೆ ಸನ್ಮಾನ ಸಭೆ ನಡೆದಾಗ ಆಕೆಯೇ ಸಂಗೀತ ಮಾಡಿದ್ದು ಮಹಾಪಾದಕ್ಕೆ ವೇದ್ಯವಿರ ಬೇಕು. ಆದಿನ ನಾನು ಆಧ್ಯಕ್ಷನಾಗಬೇಕಿತ್ತು. ಬಲು ಬುದ್ಧಿವಂತಿಕೆಯಿಂದ ನನ್ನನ್ನು ನಾನಾಗಿ ಓಡಿಹೋಗುವಂತೆ ಮಾಡಿ, ಭರತಾಚಾರ್ಯರನ್ನು ಅಧ್ಯಕ್ಷಸ್ಥಾನದಲ್ಲಿ ಕುಳ್ಳಿರಿಸಿ, ಅವರೆದುರಿಗೆ ಹಾಡಿ ತನ್ನ ಪ್ರತಿಜ್ಞೆಯನ್ನು ಸಾಧಿಸಿಕೊಂಡ ಹಟದ ಹೆಣ್ಣು ಆಕೆ ಮಹಾಸ್ವಾಮಿ. ಆಕೆ ವಿಜಯನಗರದ ಚಕ್ರವರ್ತಿಗಳಿಗೆ ಮುಗಿದ ಕೈ ಇನ್ನೊಬ್ಬ ದೊರೆಗೆ ಕೈಮುಗಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದೂ ಬಲ್ಲೆ. ಅದರಿಂದ ಸನ್ನಿಧಾನದ ಅಪ್ಪಣೆಯಾದರೆ ಭರತಾಚಾರ್ಯರನ್ನೂ ಕರೆದುಕೊಂಡು ಹೋಗಿ ಅಲ್ಲಿ ಆಸ್ಥಾನದಲ್ಲಿ ಕೂರಿಸುತ್ತೇನೆ. ಅವಳು ಕೈಮುಗಿಯುವುದೂ ಹಾಡುವುದೂ ತನ್ನ ಗುರುವಿನ ಪೂಜೆಗಾಗಿ. ಅದರ ಫಲವೆಲ್ಲ ತಮ್ಮ ಪ್ರಜೆಗಳಾದ ನಮಗೆ. ತಾವು ಇದನ್ನು ಅಂಗೀಕರಿಸ ಬೇಕು ಮಹಾಸ್ವಾಮಿ “

“ಆಗಲಿ, ನಾವು ಒಪ್ಪಿದೆವು ಎನ್ನೋಣ. ಮಾಡು ಮಾಡುತ್ತೀರಿ.”

“ನಾಳೆಯೇ ಗೋಲ್ಕೊಂಡಕ್ಕೆ ಓಡುತ್ತೇನೆ ಮಹಾಪ್ರಭು. ಸುಲ್ತಾನರ ಕೈಕಾಲು ಹಿಡಿದಾದರೂ ಈ ಹತ್ತುವರುಷದ ಸಂಧಿ ಸಾಧಿಸುತ್ತೇನೆ. ಅಷ್ಟೇ ಶ್ರದ್ಧೆಯಿಂದ ಅಲ್ಲಿಗೆ ಹೋಗುವ ನಮ್ಮ ವಿಜಯನಗರದ ಪ್ರಜೆಗಳ ಒಂದು ಕೂದಲೂ ಅಲುಗದಂತೆ ರಕ್ಷಣೆನೀಡುವಂತೆ ಅವರಿಂದ ಹತ್ತುಬಾರಿ ಪ್ರಮಾಣ ಮಾಡಿಸುತ್ತೇನೆ. “

ಚಕ್ರವರ್ತಿಗಳಿಗೆ ಪರಮಾನಂದವಾಯಿತು. “ಸೆಟ್ಟರೇ ನಾವು ತಾರುಣ್ಯ ದಲ್ಲಿ ಹೊಡೆದು ಹಿಡಿಯಲ್ಲಿ ಅಡಗಿಸಿಕೊಳ್ಳುವುದು ಒಂದೇದಾರಿ ಎಂದು ನಂಬಿ ಅದರಂತೆಯೇ ನಡೆದು ಗೆದ್ದವರು. ಈಗೀಗ ನಮಗೂ ಗೆಲುವಿಗೆ ಇನ್ನೂ ಬೇರೆ ದಾರಿಯಿದೆ… ಹೋರಾಡುವುದಕ್ಕಿಂತ ಸರಸದಲ್ಲಿ ಗೆದ್ದಗೆಲುವು ಹೆಚ್ಚು ಬಾಳುವುದು ಎನ್ನುವುದು ಮನಸ್ಸಿಗೆ ಬಂದಿದೆ. ಆದರೂ ನಾವು ಕ್ಷತ್ರಿಯರು. ನಮಗೆ ದಂಡೋಪಾಯ ರುಚಿಸುವಷ್ಟು ಸಾಮದಾನಗಳು ಹಿಡಿಸವು. ಆದರೂ ಸಾಮದಾನಗಳಿಲ್ಲದ ದಂಡೋಪಾಯ ವಿಹಿತವಲ್ಲ. ದಂಡದ ಬಲವಲ್ಲದಿದ್ದರೆ ಸಾಮದಾನಗಳು ಫಲಿಸುವುದಿಲ್ಲ. ಅದರಿಂದ, ತಮ್ಮ ಸಲಹೆಯನ್ನು ನಾವು ಅಂಗೀಕರಿಸಿದ ಗುರುತಾಗಿ, ನಮ್ಮ ವರ್ತಕಕುಲ ಶ್ರೇಷ್ಠರಾದ ಯಜಮಾನ್‌ ವೀರಪ್ಪಸೆಟ್ಟರ ಮಾತು ನಮ್ಮ ಮಾತು ಎಂದು ಹೇಳುವುದಕ್ಕಾಗಿ, ಇದೋ, ಈ ನಮ್ಮ ಉಂಗುರವನ್ನು ತಮ್ಮಲ್ಲಿ ಕೊಟ್ಟಿದ್ದೇನೆ. ಪಂಪಾಪತಿಯು ನಿಮ್ಮನ್ನು ಕಾಪಾಡಲಿ. ಭುವನೇಶ್ವರಿಯು ನಿಮಗೆ ಕಾವಲಾಗಿರಲಿ. ತಾವು ನಮ್ಮ ರಾಜ್ಯಕ್ಕೆ, ನಮ್ಮ ಪ್ರಜೆಗಳಿಗೆ, ನಮಗೆ ಪರಮೋಪಕಾರ ಮಾಡಿರುವಿರಿ. ತಾವು ಗೆದ್ದರೆ, ನಮ್ಮ ರಾಯಭಾರಿಗಳು ಹತ್ತುಜನ ಗೆಲ್ಲುವುದಕ್ಕಿಂತ ಹೆಚ್ಚಿನ ಗೆಲುವು ತರುವಿರಿ. ತಾವು ನಾಳೆಯದಿನ ಬೆಳಿಗ್ಗೆ ಮೂರನೆಯ ಮುಹೂರ್ತದಲ್ಲಿ, ಪಂಪಾಪತಿಯ ಪ್ರಸಾದಪಡೆದು, ಗೋಬ್ರಾಹ್ಮಣ ಪೂಜೆಮಾಡಿ ಗುರುಹಿರಿಯರ ಆಶೀರ್ವಾದ ಪಡೆದು ಹೊರಡಿ. ನಾಳೆ ತಾವು ಹೊರಡುವುದರೊಳಗಾಗಿ ಗೋಲ್ಕೊಂಡದಲ್ಲಿರುವ ನಮ್ಮ ರಾಯಭಾರಿಗೆ ನಾವುಕೊಡುವ ಆಜ್ಞಾ ಪತ್ರವು ತಮಗೆ ತಲಪುವುದು. ಈಸಲ ತಾವು ರಾಯಭಾರಿಯಜೊತೆಯಲ್ಲಿ ಇಳಿಯಿರಿ. ತಾವು ಸುಲ್ತಾನರ ಅರಮನೆಗೆ ದಯಮಾಡಿಸುವಾಗ, ರಾಯಭಾರಿಗಳ ರಾಜ ರಥದಲ್ಲಿಯೇ ಹೋಗಿಬನ್ನಿ. ರಾಮರಾಯನು ತನ್ನ ಪ್ರಜೆಗಳ ಸೌಖ್ಯವೇ ತನ್ನ ಜೀವಿತದ ಪರಮಾರ್ಥವೆಂದು ಭಾವಿಸಿರುವವನು ಎಂಬುದು ಸರ್ವತ್ರ ವಿದಿತವಾಗಲಿ.

ಸೆಟ್ಟರು ರಾಯರ ಅಭಿಮಾನವು ತಮಗೆ ಅಡ್ಡಿ ಯಾಗುವುದು ; ಅವರೆ ದುರ್ಯೋಧನನ ಬಿಂಕವು ತಮ್ಮ ಕಾರ್ಯವನ್ನು ಕೆಡಿಸುವುದು ಎಂದು ಹೆದರಿದ್ದರು. ಚಕ್ರವರ್ತಿಗಳು ಇಷ್ಟು ಸುಮುಖವಾಗಿರುವುದನ್ನು ಕಂಡು, ತಮ್ಮ ರಾಯಭಾರವು ಇಷ್ಟು ಸುಲಲಿತವಾಗಿ, ಸರಾಗವಾಗಿ, ಸುಖವಾಗಿ ಸಿದ್ದಿ ಯಾದುದನ್ನುಕಂಡು ಪರಮಾಶ್ಚರ್ಯಪಟ್ಟರು. ಬಹುವಾಗಿ ಅಳೆದು ಸುರಿದು, ತಾವು ಗೆದ್ದುದಕ್ಕೆ ಕಾರಣವೇನಿರಬಹುದು ಎಂದು ಬಹಳವಾಗಿ ಚಿಂತಿಸಿ ಕೊನೆಗೆ ಕಂಡುಹಿಡಿದರು. ಕೈಮೇಲೆ ಕೈಹೊಡೆದು “ನೋಡಿದೆಯಾ ? ಈ ಅದೃಷ್ಟ, ಆ ರಂಡೆ ಕೈ ಮುಟ್ಟಿದ್ದರಿಂದ. ಕೆ ಮುಟ್ಟಿದ್ದಕ್ಕೇ ಇಷ್ಟಾದರೆ….? ಎಂದು ಏನೇನೋ ಮುಂದಿನ ಲೆಕ್ಕ ಮಾಡುತ್ತಿದ್ದ ಹಾಗೆಯೇ ಗಾಡಿಯು ಅವರ ಮನೆಗೆ ಬಂದಿತು. ಆಳು ಬಂದು ಬಾಗಿಲು ತೆಗೆದನು. ಸೆಟ್ಟರು ಭಾವಸಮಾಧಿಯಿಂದ ಎಚ್ಚೆತ್ತು, “ಈ ದಿನ ಬೆಳಿಗ್ಗೆ ನರಿ ಮೊಕ ನೋಡಿದೆನೋ ಏನೋ? ಇದೇ ಅದೃಷ್ಟ ಈ ತಿಂಗಳೆಲ್ಲಾ ಇದ್ದು ಬಿಟ್ಟರೆ, ನಾವು ಬದುಕಿದ್ದು ಸಾರ್ಥಕವಾಯಿತು “ಎಂದುಕೊಂಡು. ಮನೆಯೊಳಕ್ಕೆ ಹೋದರು. ಹೋಗುತ್ತಿದ್ದ ಹಾಗೆಯೇ ಹೆಂಡತಿ ಗೌರಮ್ಮ ಎದುರು ಬಂದರು. “ಅಮ್ಮಣ್ಣಿ ಯವರೇ, ಹೊಡಿ ನಗಾರಿ ಮೇಲೆ ಕೈ. ಮೊದಲು ಹೋಗಿ ಕೈಕಾಲು ತೊಳೆದುಕೊಂಡು ತುಪ್ಪದ ದೀಪ ಇಡಿ. ನಾಳೆ ನಮಗೆ ಗೋಲ್ಕೊಂಡದ ಪ್ರಯಾಣ. ನಾವು ಹೋಗಿಬರುವವರೆಗೂ ಆ ದೀಪ ಉರಿಯಲಿ ನಾಳೆ ಬೆಳಿಗ್ಗೆ ಪಂಪಾಪತಿಗೆ ಭಾರಿ ಪೂಜೆ ಕೊಡಿಸಿ” ಎಂದು ಅವಸರವಾಗಿ ತಮ್ಮ ಕೋಣೆಗೆ ಓಡಿದರು.

ಮರುದಿನ ಸೆಟ್ಟರು ವಿಬತವಾದ ಕಾಲದಲ್ಲಿ ಎಲ್ಲವನ್ನೂ ಮುಗಿಸಿಕೊಂಡು ರಾಜಪತ್ರವನ್ನು ಭದ್ರವಾಗಿರಿಸಿಕೊಂಡು ಗೋಲ್ಕೊಂಡಕ್ಕೆ ಹೊರಟರು. ಮೊದಲನೆಯ ಮಝಲು ತಲಪುತ್ತಿದ್ದ ಹಾಗೆಯೇ, ಅಲ್ಲಿದ್ದ ರಾಯಸದವನು ಬಂದು ಕಾಣಿಸಿಕೊಂಡು ಕೈಮುಗಿದನು; “ನಿರೂಪ ಬಂದಿದೆ, ಒಂಟೆಯ ಸಾರೋಟು ಸಿದ್ಧವಾಗಿ ಕಾದಿದೆ”ಎಂದು ಅರಿಕೆಮಾಡಿದನು. ಸೆಟ್ಟರು ತಮಗಾಗಿದ್ದ ಆಯಾಸವನ್ನು ಲಕ್ಷಿಸದೆ ಕೂಡಲೆ ಸಾರೋಟು ಹತ್ತಿದರು. ಒಂಟೆಗಳು ತಾರುಗಾಲು ಮಾರುಗಾಲು ಹಾಕಿಕೊಂಡು ನಾಗಾಲೋಟದಿಂದ ಓಡಿದುವು.

ರಾಜಾಜ್ಞೆಯಾದಂತೆ ಸೆಟ್ಟರು ರಾಯಭಾರ ಮಂದಿರದಲ್ಲಿಯೇ ಇಳಿದರು. ಮರುದಿನವೇ ಸುಲ್ತಾನರ ಭೇಟಿಯಾಯಿತು. ಅವರು ಸೆಟ್ಟರು ರಾಯಭಾರಿಯ ರಾಜರಥದಲ್ಲಿ ಬಂದರೆಂದು ಕೇಳಿ ಆಶ್ಚರ್ಯಪಟ್ಟರು. ಅದರಿಂದಲೇ ಅವರಿಗೆ ಅರ್ಥವಾಯಿತು ಸೆಟ್ಟರು ಗೆದ್ದು ಬಂದಿದ್ದಾರಿಯೆಂದು. ಅವರನ್ನು ಬಹಳ ಆದರದಿಂದ ಬರಮಾಡಿಕೊಂಡರು. ಅಣ್ಣನನ್ನು ಕಂಡ ತಮ್ಮನಂತೆ ಗೌರವ ದಿಂದ ವಿಶ್ವಾಸದಿಂದ ಕಂಡು, ಎದುರುಗೊಂಡು ಆಲಿಂಗನವನ್ನು ಕೊಟ್ಟು, ಕರೆದುಕೊಂಡು ಹೋಗಿ ತಮ್ಮ ಬಳಿಯಲ್ಲಿಯೇ ಸುಖಾಸನದಲ್ಲಿ ಕುಳ್ಳಿರಿಸಿ ಕೊಂಡು ಕೇಳಿದರು. “ಕೈಂವ್‌. ಸೆಟ್ಟಿ ಸಾಹೆಬ್‌, ಗೆದ್ದು ಬಂದಿರಿ ತಾನೇ? “ “ಜಹಾಸನಾ, ತಮ್ಮ ಕೆಲಸ ಕೆಡುವುದು ಎಲ್ಲಿ ಬಂತು? ಎಲ್ಲವೂ ಸಿದ್ಧ ವಾಗಿದೆ. ತಾವು ಒಂದು ನಿರೂಪ ಹೊರಡಿಸಿ, ಯಾವೊತ್ತೆಂದರೆ ಅವೊತ್ತು ಸಂಗೀತ ಇಟ್ಟುಕೊಳ್ಳಬಹುದು.”

ನಿಜವೇ? ಸೆಟ್ಟ ಸಾಹೆಬ್‌, ಆ ಜಂಭಗಾತಿ, ನಮ್ಮ ಆಸ್ಥಾನದಲ್ಲಿ ಹಾಡುವುದಕ್ಕೆ ಒಪ್ಪಿದಳೇ ? ವಿಜಯನಗರದ ಚಕ್ರವರ್ತಿಗಳಿಗೆ ಮುಗಿದ ಕೈ ಇನ್ನೊಬ್ಬರಿಗೆ ಮುಗಿಯುವುದಿಲ್ಲ ಎಂದಳಂತಲ್ಲಾ ! ಸೆಟ್ಟಿ ಸಾಹೆಬ್‌, ಆಕೆ ನಮ್ಮ ದರಬಾರಿಗೆ ಬಂದರೆ ಖುರ್ನೀಸಾ ಮಾಡಬೇಕಾಗಿಲ್ಲ. ಆಕೆ ಬಂದು ನಮ್ಮೆದುರಿಗೆ ಹಾಡಲಿ ಅಷ್ಟೇ ಸಾಕು. ಒಂದು ಸಲ ಆಕೆ ಬಂದು ಹೋಗಲಿ. ಆಮೇಲೆ ನಾವೇ ಚಕ್ರವರ್ತಿಗಳ ದರಬಾರಿಗೆ ಬರುತ್ತೇವೆ. ನಮ್ಮ ಮರ್ಯಾದೆ ಬಿಟ್ಟು ನಾವು ಮೊದಲು ಅಲ್ಲಿ ಬರಬಾರದು. ಅಲ್ಲವೇ ಹೇಳಿ.”

“ಹೌದು, ಮಹಾಸ್ಕಾ ಮಿ, ನ್ಯಾಯ. ನಾನು ಸನ್ನಿಧಾನದಲ್ಲಿ ಅರಿಕೆ ಮಾಡುವುದು ಖುರ್ನೀಸಾ “ಚಾರವಲ್ಲ. ಯಾರೇ ಆಗಲಿ ದರ್ಬಾರಿಗೆ ಬಂದಮೇಲೆ ಆ ಶಿಸ್ತು ಬಿಡುವುದು ಎಂದರೇನು? ಅದೆಲ್ಲ ಇರಲಿ ಮಹಾಸ್ತಾ ಮಿ. ಈಗ ಸನ್ನಿಧಾನದಿಂದ ನಮಗೆ ಆಗಬೇಕಾದುದು ಇಷ್ಟು, ನಾವು ಆತಯನ್ನು ಕರಿದು ತಂದು ಮತ್ತೆ ವಿಜಯನಗರ ಮುಟ್ಟಸ ಸುವವಕಿಗೆ ಆ ಹೊಣೆಯೆಲ್ಲ ನಮ್ಮದು. “ನಾವು ಆ ಹೊಣೆಗಾರಿಕೆ ಹೊತ್ತುದಕ್ಕೆ ಸಂಕಟ ಪಡುವಂತಾಗಬಾರದು. ಹಾಗೆ ಅರಮನೆಯಿಂದ ತಕ್ಕ ಏಟು ಮಾಡಿಸಬೇಕು. ತಾಲ್ಲೂಕುದಾರರಿಗೆಲ್ಲ ಹುಕುಂ ಆಗಬೇಕು.”

ಸುಲ್ತಾನರು ಒಪ್ಪಿದರು. ಸುಲ್ತಾನರ “ಆನಂದ ಹೇಳತೀರದು. ಸೆಟ್ಟರನ್ನು ತಬ್ಬಿಕೊಂಡರು ; ಸೆಟ್ಟ ಸಾಹೆಬ್‌, ತಮ್ಮಿಂದ ಬಹಳ ಉಪಕಾರ ಆಯಿತು. ಇನ್ನು ತಮಗಾಗಿ ಏನಾಗಬೇಕು ಹೇಳಿ.?

“ಜಹಾಪನಾ, ಈ ಗರೀಬನಿಗೆ ಖುದಾ ಬೇಕಾದ್ದೆಲ್ಲ ಕೊಟ್ಟಿದ್ದಾನೆ. ಆದರೂ ನಮ್ಮ ಎರಡು ರಾಜ್ಯಗಳ ಸ್ನೇಹ ಬೆಳೆಯಲೆಂದು ಅದಿನ ಅಪ್ಪಣೆ ಯಾದಂತೆ ಗಣಿಯನ್ನು ನಮಗೆ ಕೊಡಿಸಬೇಕು.”

“ಹಾಂ, ಆಗಬಹುದು. ನಾವೇ ಹೇಳಿದ್ದೇ ವೆ.”

“ಮತ್ತೊಂದು ಅರಿಕೆಯುಂಟು ಮಹಾಸ್ತ್ರಾಮಿ.”

“ಹೇಳಿ.”

“ನಮ್ಮ ವ್ಯಾಪಾರಗಳೆಲ್ಲ ಸುಸೂತ್ರವಾಗಿ ನಡೆಯುವಂತೆ ಖಾವಂದರೂ ಚಕ್ರವರ್ತಿಗಳೂ ಹತ್ತು ಸ್ನೇಹದ ಕರಾರುಮಾಡಿಕೊಳ ಬೇಕು. ಬ ಕಡೆಯವರು ಒಬ್ಬರಲ್ಲಿ ಒಬ್ಬರು ನಂಬಿಕೆಯಿಂದ ನಡೆದುಕೊಳ್ಳುವು ದಕ್ಕೆ ಅನುಕೂಲವಾಗಲೆಂದು ಈ ಲಸ ಆಗಬೇಕು ಪ್ರಭು. ಇಡೋ, 1 ಒಂದು ಮಾತು ಹೇಳುತ್ತೇನೆ. ಆದಿನ ನಾವು ಕೇಳುವ ಗುತ್ತಿಗೆಗೆ ಗಣಿ ಕೊಡಿಸುತ್ತೇವೆಂದು ಅಸ್ಪಣೆಯಾಗಿತ್ತು. ಈದಿನ ಉಭಯತ್ರರ ಸೌಖ್ಯಕ್ಕಾಗಿ ಆಗುವ ಈ ಕರಾರನ್ನು ಗೌರವಿಸಿ ತಾವು ಹೇಳಿದಷ್ಟು ಗುತ್ತಿಗೆ ಕೊಡುವುದಕ್ಕೆ ನಾವು ಸಿದ್ದ ವಾಗಿದ್ದೇವೆ.”

ಸುಲ್ತಾನರು ನಕ್ಕರು. “ಸೆಟ್ಟಿಸಾಹೇಬ್‌, ನಾವು ತಮ್ಮ ಬುದ್ಧಿ ಬಹಳ ದೊಡ್ಡದು ಎಂದು ಕೇಳಿದ್ದೆವು. ಅದರಿಂದಲೇ ತಮ್ಮನ್ನು ಕರೆಯಿಸಿ ಕೊಂಡು ತಮ್ಮ ಮೂಲಕವಾಗಿ ಚಕ್ರವರ್ತಿಗಳಿಗೆ ಈ ಮಾತು ಹೇಳಿಕಳುಹಿಸ ಬೇಕೆಂದು ತಮ್ಮ ಶಕ್ತಿ ಸಾಮರ್ಥ್ಯ ನೋಡಬೇಕೆಂದು ಈ ಸಂಗೀತದ ಮಾತಿ ನಿಂದ ಆರಂಭಿಸಿದೆವು. ನಾವೂ ತಮ್ಮನ್ನು ಕೋರುತ್ತಿದ್ದ ಹಾಗೆಯೇ ತಾವೇ ಬಂದಿರಿ. ನಮಗೂ ಬೇಕಾಗಿರುವುದು ಸಂಧಿ. ಸಮಾಧಾನ. ನಮ್ಮ ರಾಜ್ಯ, ಬಿಜಾಪುರ ರಾಜ್ಯ, ಇವೆರಡೂ ನಿಮ್ಮ ಮಗ್ಗುಲಲ್ಲಿರುವ ರಾಜ್ಯಗಳು. ನಾವೂ ದುಡ್ಡು ಕೊಟ್ಟು ಸೈನ್ಯ ಇಟ್ಟಿದ್ದೇವೆ. ನೀವೂ ಇಟ್ಟಿದ್ದೀರಿ. ಸೈನ್ಯ ಸೈನ್ಯ ಹೊಡೆದಾಡಿದರೆ ನಮಗೆ ನಷ್ಟವಿಲ್ಲ. ಆದರೆ ಸೈನ್ಯ ಹೊಡೆದಾಡುತ್ತಿರುವಾಗ, ಸುತ್ತಮುತ್ತ ಆಗುವ ನಷ್ಟವೆಷ್ಟು ? ಪ್ರಜೆಗಳಿಗೆ ಆಗುವ ಕಷ್ಟವೆಷ್ಟು ? ಯುದ್ಧ ಗಳಿಗೆ ಆಗುವ ಖರ್ಚು ವಹಿಸಿಕೊಳ್ಳುವವರು ಯಾರು ? ನಾವು ನಮ್ಮ ಅರಮನೆ ಯಲ್ಲಿ ಹಣ ಮುಗಿಯಿತು ಎಂದರೆ ಪ್ರಜೆಗಳನ್ನು ತಾನೇ ಸುಲಿಯಬೇಕು? ಹೀಗೆ ಕೊಲೆ, ಸುಲಿಗೆ, ಇದಕ್ಕಿಂತ ದರೋಡೆ ಉತ್ತಮವಲ್ಲವೇ? ನನಗಂತೂ ಯುದ್ಧ ಬೇಡ. ಸಲಾಂ. ಅಲ್ಲಾನ ರಾಜ್ಯ ಈ ಜಗತ್ತೆಲ್ಲ. ಚಕ್ರವರ್ತಿ ಯಾಗಲಿ, ಸುಲ್ತಾನನಾಗಲಿ, ಯಾರೇ ಆಳಿದರೂ ಜಗತ್ತಿನ ರಾಜ ಅಲ್ಲಾ. ನಮ್ಮ ರಾಜ್ಯದಲ್ಲಿ ಸುಬೇದಾರ್‌ ಇದ್ದಹಾಗೆ ನಾವೆಲ್ಲ. ಸುಬೇದಾರ್‌ ಸುಬೇದಾರ್‌ ಹೊಡೆದಾಡಿದರೆ ನಾವು ಸುಮ್ಮನಿರುವೆವೆ? ಇಬ್ಬರನ್ನೂ ಬಲಿ ಹಾಕುತ್ತೇವೆ. ಹಾಗೆ ಅಲ್ಲಾನ ರಾಜ್ಯದ ಸುಬೇದಾರರಾದ ನಾವೂ ಚಕ್ರವರ್ತಿಗಳೂ ಕಾದಾಡಿದರೆ, ಅಲ್ಲಾನ ಪ್ರಜೆಗಳಿಗೆ ಹಿಂಸೆಯಾಗಿ, ಆತನಿಗೆ ಕೋಪ ಬಂದು ನಮ್ಮನ್ನೆಲ್ಲಾ ಧ್ವ೦ಸಮಾಡುವನು. ಅದರಿಂದ ಅಲ್ಲಿಂದ ಬಂದ ಅಧಿಕಾರ, ಇಲ್ಲಿ ಇರುವವರೆಗೂ ನಾವು ಸರಿಯಾಗಿ ನಡೆಸೋಣ. ಸಾಧ್ಯವಾದ ಮಟ್ಟಿಗೂ ರೈತ ತನ್ನ ಕೈಲಾದದ್ದು ಮಾಡಿ, ಆದಷ್ಟು ಬೆಳೆ ಬೆಳೆಯುವಂತೆ, ನಮ್ಮ ಪ್ರಜೆಗಳ ಸೌಖ್ಯ ಶಾಂತಿ ಹೆಚ್ಚಿಸೋಣ. ಈ ಅಭಿಪ್ರಾಯ ಮನಸ್ಸಿನಲ್ಲಿಟ್ಟು ಕೊಂಡು, ತಾವು ಈ ಶಾಂತಿಯ ಕರಾರು ತರುವಿರಿ ಎಂದೂ ನಂಬಿ ತಮ್ಮನ್ನು ಈ ಕಾರ್ಯಮಾಡಿರಿ ಎಂದೆವು. ತಾವೂ ತಂದಿದ್ದೀರಿ. ತಮ್ಮ ಮಾತು ತಮ್ಮ ದೊರೆಗಳಿಗೆ ಒಪ್ಪಿಗೆಯಾಗಿದೆಯೆಂಬು ದನ್ನು ತಮ್ಮ ಕೈಯಲ್ಲಿರುವ ಉಂಗುರ ತಾವು ಇಲ್ಲಿಗೆ ಬಂದಾಗ ಏರಿ ಬಂದ ರಾಜರಥ, ನಮಗೆ ಹೇಳುತ್ತಿವೆ. ತಮ್ಮ ರಾಯಭಾರಿಗೂ ನಿರೂಪ ಬಂದೇ ಇರಬೇಕು. ನಾವೂ ನಮ್ಮ ದಿವಾನರಿಗೆ ಹುಕುಂ ಕಳುಹಿಸುತ್ತೇವೆ. ಅವರಿಬ್ಬರೂ ಸಂಧಿ ಪತ್ರ ಬರೆಯಲಿ. ನಾವು ರುಜು ಮಾಡಿ ತಮ್ಮ ವಶ ಕೊಡುತ್ತೀವೆ. ಈ ಸಂಧಿಪತ್ರ ಆದರೆ, ನಮ್ಮ ರಾಜ್ಯದಲ್ಲಿ ಸಂಚಾರಮಾಡು ತ್ತಿರುವ ಪ್ರಜೆಗಳನ್ನು ಕಾಪಾಡುವ ಭಾರ ನಮ್ಮದು ಆಗುತ್ತದೆ. ಆದರೂ ತಮಗೆ ನಂಬಿಕೆಯಾಗಲಿ ಎಂದು, ತಮ್ಮ ಕೆಲಸ ಸುಸೂತ್ರವಾಗಿ ನಡೆಯಲೆಂದು ತಾವು ತಮ್ಮೊಡನೆ ಸಂಗೀತಗಾರರನ್ನು ಕರೆದುಕೊಂಡು ಬರುವಾಗ ಗೋಲ್ಕೊಂ ಡದ ಒಂಟೆ ಸವಾರರು ಒಂದು ತುಕಡಿ ತಮ್ಮ ಜೊತೆಯಲ್ಲಿ ಇರುವಂತೆ ಹುಕುಂ ಮಾಡುತ್ತೇವೆ. ಇನ್ನು ಗಣಿಯ ಸಮಾಚಾರ. ಈ ಗಣಿ ಮಾತ್ರ ವಲ್ಲ, ಈ ಭೂಮಂಡಲದಲ್ಲಿರುವ ಚಿನ್ನ, ಬೆಳ್ಳಿ, ವಜ್ರ, ಪಚ್ಚಿ, ಇವುಗಳೆಲ್ಲಾ ಅಲ್ಲಾನದು. ಅಲ್ಲಾನ ಪ್ರಜೆಗಳ ಸೌಖ್ಯವನ್ನು ಕೋರುವವರು ಯಾರೋ ಅವರಿಗೆ ಸೇರಬೇಕಾದವು. ತಾವು ಅಂಥಾ ಸತ್ಪುರುಷರು. ತಾವು ತಮಗೆ ತೋರಿದಂತೆ ಗುತ್ತಿಗೆ ಕರಾರು ಬರೆಯಿಸಿ ತೆಗೆದುಕೊಂಡು ಬನ್ನಿ. ನಮ್ಮ ಪರವಾಗಿ ನಮ್ಮ ದಿವಾನರು ಅದನ್ನು ಒಪ್ಪಿಕೊಳ್ಳುವಂತೆ ನಾವು ಹುಕುಂ ಕಳುಹಿಸುತ್ತೀವೆ. ಸೆಟ್ಟಿಸಾಹೆಬ್‌, ತಾವು ಇಲ್ಲ ಗಣಿಯ ಕೆಲಸಕ್ಕೆ ವಿಜಯನಗರದಿಂದ ಒಂದು ಕಾಸೂ ತರಬೇಕಾಗಿಲ್ಲ. ಏನು ಬೇಕಾದರೂ ನಮ್ಮ ಅರಮನೆಯಿಂದಲೇ ತೆಗೆದುಕೊಳ್ಳಬೇಕು. ಜಗತ್ತಿನಲ್ಲಿ ಸೈತಾನನ ಸಂತಾನವಾಗಿ ಲೋಕವನ್ನು ಗೋಳು ಹುಯ್ದುಕೊಳ್ಳುವವರು ಬೇಕಾದಷ್ಟು ಜನಇದ್ದಾರೆ. ಅವರ ವಂಶ ನಾಶವಾಗಲಿ. ತಮ್ಮಂಥಾವರ ವಂಶ ಬೆಳೆಯಲಿ. ತಾವು ಮಾಡಿದ ಉಪಕಾರ ನಮ್ಮ ತಲೆಯ ಮೇಲಿದೆ.”

ಸುಲ್ತಾನರ ಭಾಷಣವನ್ನು ಕೇಳಿ ಸೆಟ್ಟರು ಬೆರಗಾದರು. ಅವರ ಕಣ್ಣಿನಲ್ಲಿ ನೀರು ಧಾರಾಳವಾಗಿ ಸುರಿಯಿತು. “ಜಹಾಂಪನಾ, ತಾವು ಗೋಲ್ಕೊಂಡಕ್ಕೆ ಮಾತ್ರವಲ್ಲ. ಅಖಂಡ ಜಗತ್ತಿಗೇ ಸುಲ್ತಾನರಾಗಲು ತಕ್ಕವರು. ತಾವು ಅಪ್ಪಣೆಕೊಡಿಸಿದಂತೆ ಇಷ್ಟು ಮೇಲುಮಟ್ಟದ ಮನಸ್ಸಿನಿಂದ ರಾಜ್ಯ ಆಳುವವರು ಎಷ್ಟು ಜನ ಇದ್ದಾರು? ತಮ್ಮ ವಂಶ ಸಾವಿರಕಾಲ ಇರಲಿ. ನಾನು ಇಲ್ಲಿ ನೋಡುತ್ತಿ ರುವುದು ಸುಲ್ತಾನರನ್ನಲ್ಲ. ಮನುಷ್ಯಕುಲವನ್ನು ಕಾಪಾಡಲು ಬಂದ ದೇವದೂತರನ್ನು. ತಾವು ಅನುಗ್ರಹಿಸಿರುವ ಈ ಸಂಧಿ ಶಾಶ್ವತವಾಗಿದ್ದು ನಮ್ಮ ಎರಡು ರಾಜ್ಯವನ್ನೂ ಸುಖವಾಗಿಡಲಿ. “

ಸುಲ್ತಾನರ ಕಣ್ಣಿನಲ್ಲಿಯೂ ನೀರು ಬಂತು. “ಇಲ್ಲಾ. ಹಾಗಾಗುವ ಹಾಗಿಲ್ಲ. ಬಹಮನೀ ಸುಲ್ತಾನರೆಲ್ಲ ಒಂದೇ ಮನಸ್ಸಿನವರಲ್ಲ. ಬಿಜಾಪುರದವರು ಗೋಲ್ಕೊ೦ಡದವರು ಒಂದು ದಾರಿಹಿಡಿದರೆ ಮಿಕ್ವಮೂವರೂ ಇನ್ನೊಂದು ದಾರಿ ಹಿಡಿಯಬೇಕೆಂದಿದ್ದಾರೆ. ಆಗಲಿ. ಲೋಕದಲ್ಲಿ ಕೆಡಿಸುವುದಕ್ಕೆ ಇರುವ ಅನುಕೂಲ ಬದುಕಿಸುವುದಕ್ಕಿಲ್ಲ. ನೋಡಿ. ಸೆಟ್ಟಿ ಸಾಹೆಬ್‌, ಖುದಾ ತನ್ನ ಖುಷಿಗಾಗಿ ಲೋಕವನ್ನು ಹುಟ್ಟಿಸಿದ. ಆದರೆ ಅಮೃತ ತನ್ನಬಳಿ ಇಟ್ಟು ಕೊಂಡು, ವಿಷ ಈ ಲೋಕದಲ್ಲಿ ಇಟ್ಟು ಬಿಟ್ಟು ಸೈತಾನ್‌ವಶಕ್ಕೆ ಕೊಟ್ಟು ಬಿಟ್ಟ ಯಾವನು ಸೈತಾನ್‌ ಬಿಟ್ಟು ಖುದಾ ಹಿಡಿದ, ಅವರು ತಿನ್ನುವ ವಿಷವೆಲ್ಲ ಅಮೃತ ಯಾವನು ಅದನ್ನು ಬಿಟ್ಟು, ಎಂದರೆ ಖುದಾಬಿಟ್ಟು ಸೈತಸನ್‌ ಹಿಡಿದ ಅವನು ತಿಂದದ್ದು ಅಮೃತವೇ ಆದರೂ ವಿಷ. ಈಲೋಕದಲ್ಲಿ ಸೈತಾನ್‌ ಹಿಡಿದವರೇ ಬಹಳ. ಏನಾದರೂ ಆಗಲಿ. ಖುದಾನಂಬಿ ಸಂಧಿಮಾಡಿಕೊಂಡು ಸಂಧಿಪತ್ರಕ್ಕೆ ರುಜು ಹಾಕೋಣ.”

ಸುಲ್ತಾನರು ಸೆಟ್ಟರನ್ನು ಬೀಳ್ಕೊಟ್ಟರು. ಸುಲ್ತಾನರು ನಿರೀಕ್ಷಿಸಿದಂತೆ ವಿಜಯನಗರದಿಂದ ರಾಯಭಾರಿಗಳಿಗೆ ನಿರೂಪ ಬಂದಿತ್ತು. ರಾಯಭಾರಿಗಳು ಸೆಟ್ಟರ ದಾರಿಕಾಯುತ್ತ ಇದ್ದವರು ಏನಾಯಿತು ? ಎಂದರು. ಸೆಟ್ಟರು ಮಂದಹಾಸದಿಂದ, “ಬುದ್ದಿಯವರು ಹೋಗಿ ಸಂಧಿಪತ್ರ ಬರೆಸಿಕೊಂಡು ಬರಬೇಕು”ಎಂದರು. ರಾಯಭಾರಿಯು ದೊಡ್ಡದಾಗಿ ಕೈ ತೆಗೆದು ಸೆಟ್ಟರನ್ನು ಬಾಚಿ ತಬ್ಬಿಕೊಂಡು, ಕಣ್ಣಿನಲ್ಲಿ ನೀರು ಅಂಕೆಸಂಕೆಯಿಲ್ಲದ ಹರಿಯುತ್ತಿರಲು, “ಸೆಟ್ಟರೇ, ವಿಜಯನಗರ ಉಳಿಸಿದಿರಿ. ಪಂಪಾಪತಿ ನಿಮ್ಮನ್ನು ಕಾಪಾಡಲಿ ಭುವನೇಶ್ವರಿ ನಿಮ್ಮ ವಂಶವನ್ನು ರಕ್ಷಿಸಲಿ. ಬೀರಾರ್‌, ಬಿದರೆ, ಅಹಮ್ಮದ್‌ ನಗರಗಳ ಸುಲ್ತಾನರು ವಿಜಯನಗರದಲ್ಲಿ ಕಗ್ಗೊಲೆಮಾಡಿ ಲೂಟ ಮಾಡ ಬೇಕೆಂದು ಮಸಲತ್ತುಮಾಡಿ, ಗೋಲ್ಕೊಂಡದ ಸುಲ್ತಾನರ ಒಪ್ಪಿಗೆ ಪಡೆಯಲು ಇಲ್ಲಿಗೆ ತಮ್ಮ ರಾಯಭಾರಿಯನ್ನು ಕಳುಹಿಸಿದ್ದಾರೆ. ಇದೋ ಈಗ ತಾನೇ ನನಗೂ ಸುದ್ದಿಬಂತು”ಎಂದು ಹೇಳಿಕೊಂಡನು.

ಸೆಟ್ಟರಿಗೆ ತಾವು ಈ ಲೋಕದಲ್ಲಿ ಇಲ್ಲ ಎನ್ನಿಸುವಂತಾಯಿತು. ಏನು. ಹೇಳಲೂ ತೋರದೆ ಸುಖಾಸನದಲ್ಲಿ ಸುಮ್ಮನೆ ಕುಳಿತುಬಿಟ್ಟರು. ಎದೆಯನ್ನು ಮುಟ್ಟಿಕೊಂಡಾಗ ಕಿಸೆಯಲ್ಲಿ ಇಟ್ಟುಕೊಂಡಿದ್ದ ಪಂಪಾಸತಿಯ ಪ್ರಸಾದ ಕೈಗೆ ತಗುಲಿ ಅವರ ಮನಸ್ಸು ಎಲ್ಲಿಯೋ ಹಾರಿಹೋಯಿತು. ಮತ್ತೆ ಕಣ್ಣುಬಿಟ್ಟು ನೋಡಿದಾಗ, ರಾಯಭಾರಿಗಳನ್ನು ನೋಡಲು ಗೋಲ್ಕೊಂಡದ ದಿವಾನರು ಬಂದಿದ್ದರು.

ಸೆಟ್ಟರು ಕಣ್ಣುಬಿಡುತ್ತಿದ್ದ ಹಾಗೆಯೇ ದಿವಾನರು ಸಲಾಂ ಮಾಡಿದರು. “ಸೆಟ್ಟಿ ಸಾಹೆಬ್‌, ಹುಜೂರ್ರವರ ಹುಕುಂ ಅಗಿದೆ. ಗಣಿಯನ್ನು ತಮಗೆ ವರ್ಷಕ್ಕೆ ೫೦ಲಕ್ಷ ಗುತ್ತಿಗೆಗೆ ಕೊಡುವುದು; ತಮಗೆ ಬೇಕಾದ ಹಣವನ್ನು ಕೊಡುವುದು ; ಬಂದ ಲಾಭದಲ್ಲಿ ಸರಕಾರವೂ ತಾವೂ ಅರ್ಧ ಅರ್ಥ ಹಂಚಿ ಕೊಳ್ಳುವುದು ಎಂದು. ಇದೋ, ಗುತ್ತಿಗೆಕರಾರು ತಂದಿದೀನೆ. ತಾವು ರುಜು ಮಾಡಬೇಕು” ಎಂದು ಕಾಗದನನ್ನು ಮುಂದಿಟ್ಟನು.

ಇವರಿಬ್ಬರೂ ಮಾತನಾಡುತ್ತಿರುವಾಗಲೇ ರಾಯಭಾರಿಯು ಮತ್ತೊಂದು ಕಾಗದವನ್ನು ತಂದು ದಿವಾನರ ಕೈಯಲ್ಲಿಟ್ಟನು. ದಿವಾನರು ಬಹು ಸಂತೋಷ ದಿಂದ ಅವರಿಗೆ ಸಲಾಂಮಾಡಿ ಕೈಹಿಡಿದು ಕುಲುಕಿದರು. ತಾವು ಮಾಫಿ ಕೊಡಬೇಕು. ಬಲೆ ಬಲೆ ತಕ್ಲೀಫ್‌ ಆಯಿತು. ಈಗ ಹುಜೂರ್‌ ಅವರು ಸಂಜೆ ನಮಾಜ್‌ಗೆ ಹೋಗುವವೇಳೆಗೆ ಈಕಾಗದ ನಾನು ತೆಗೆದುಕೊಂಡು ಹೋಗಬೇಕು. ಇದು ಬಹಳ ಜರೂರು. ಅದರಿಂದ ನಾನು ಹೊರಡುತ್ತೇನೆ. ದಫಾ ದಫಾ ಮಾಫಿ ಕೇಳುತ್ತೇನೆ.”

ಸೆಟ್ಟರು “ಕಾಗದವು ನನ್ನಲ್ಲಿರಲಿ. ನಾನು ಹುಜೂರ್‌ ಅವರನ್ನು ಭೇಟಿಮಾಡಿ ಹೇಳುತ್ತೇನೆ. ನಾನು ಈದಿನ ರಾತ್ರಿಯೇ ವಿಜಯನಗರಕ್ಕೆ ಹೊರಡುತ್ತೇನೆ ಎಂದು ಅರಿಕೆಮಾಡಿ” ಎಂದರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...