ಮೂಲ: ಅರವಿಂದ ಗುಹಾ

ಹಿಂದೊಮ್ಮೆ ಒಬ್ಬ ಬೆಲೆವೆಣ್ಣನ್ನು ಕೂಡಿದೆ
ಎರಡೂವರೆ ರೂಪಾಯಿ ಕೊಟ್ಟು,
ಕತ್ತಲ ಓಣಿಯಲ್ಲಿ ಪಡೆದೆ, ಲೆಕ್ಕಾಚಾರದ ಪ್ರೀತಿ
ಕೊಟ್ಟ ಹಣಕ್ಕೆ ತಕ್ಕಷ್ಟು;
ನೆನಪಿಸಿಕೊಳ್ಳಲು ಅವಳ ಎಷ್ಟೋ ಯತ್ನಿಸುತ್ತೇನೆ
ಸ್ಮೃತಿಯ ತಳದಾಳಕ್ಕೇ ಜಾರಿ,
ಏನು ಮಾಡಿದರು ಸಹ ನೆನಪಾಗುತ್ತಿಲ್ಲವೇ
ಶ್ರೀಹರೀ ಶ್ರೀಹರೀ ಶ್ರೀಹರೀ!

ಅವಳ ಹೆಸರೆಂಥದೋ ನೆನಪಾಗುತ್ತಿಲ್ಲ ಈಗ
ಘಟನೆ ಬಲು ಹಿಂದೆ ನಡೆದದ್ದು,
ಏನವಳ ಹೆಸರು? ಮಾಲತಿಯೋ, ತರಂಗಿಣಿಯೊ
ರಾಧಾಮಣಿಯೊ, ನೆನಪು ಮಬ್ಬು;
ಇರಲಿ ಬಿಡಿ ಅದನ್ನೀಗ, ಒಂದು ಮಾತಂತು ನಿಜ
ಅವಳ ಜಡೆ ಬೆನ್ನಲ್ಲಿ ಜಾರಿ,
ಕಾಡಿಗೆ ಹೊಳಪಿನ ನೋಟ ಎದೆ ಸೀಳುವಂತಿತ್ತು
ಶ್ರೀಹರೀ ಶ್ರೀಹರೀ ಶ್ರೀಹರೀ!

ಎಷ್ಟನೆಯ ಸ್ವರ್ಗಕ್ಕೋ ರವಾನೆಯಾದಂತಿದ್ದೆ
ರತಿದೇವಿ ರೆಕ್ಕೆಯನ್ನೇರಿ,
ರೆಕ್ಕೆಯ ಸ್ಪರ್ಶವಷ್ಟೆ ನೆನಪಿನಲ್ಲುಳಿದಿದೆ
ಉಳಿದ ವಿವರಗಳೆಲ್ಲ ತೀರಿ;
ವಿಗ್ರಹದ ಮೂಗು ತುಟಿ ಕೈಕಾಲು ಕೆತ್ತನೆ
ಹೂತುಹೋಗಿದೆ ಮರವೆಯಲ್ಲಿ,
ಕಡೆದಿದ್ದ ಕಲ್ಲಷ್ಟೆ ನೆನಪಲ್ಲಿ ಉಳಿದಿದೆ
ಶ್ರೀಹರೀ ಶ್ರೀಹರೀ ಶ್ರೀಹರಿ!

ಕುರುಡನಿಗೆ ಕಂಡೀತು ಏನು? ಆದರೆ ನೋಡಿ,
ಕತ್ತಲೆಯನ್ನೆ ಅವನು ಹಾಡಬಹುದು,
ಕತ್ತಲೆಯಲ್ಲಿ ನಾನು ಮಟ್ಟೊಂದ ರಚಿಸಿದರೆ
ಹಾಡಲು ಅದಕ್ಕೆ ಒಂದು ಗೀತೆ ಬೇಕು;
ಎರಡೂವರೆ ರೂಪಾಯಿ ಕೊಂಡ ಪ್ರೀತಿಯು ಹೀಗೆ
ಹಾಡೊಂದು ಹುಟ್ಟಲು ಆಯ್ತು ದಾರಿ,
ಆಕಾಶ ಪುಟ್ಟ ಕೊಳದಲ್ಲಿ ಪ್ರತಿಬಿಂಬಿಸಿತು
ಶ್ರೀಹರೀ ಶ್ರೀಹರೀ ಶ್ರೀಹರೀ!
*****