ನೀಲಿ ಗಗನದಲಿ ಮೋಡವೊಂದು ತೇಲಿತು
ತಾನೇ ಮುಗಿಲಿಗಿಂತ ಹಿರಿದೆಂದಿತು
ಬಂದಿತ್ತು ಅಲ್ಲೊಂದು ಪ್ರಕಾಶ ಕಿರಣ
ಮರೆಯಾಗಿ ತನ್ನ ತಾ ಕಳೆದುಕೊಂಡಿತು

ಹಾಗೆ ನಮ್ಮ ಚಿತ್ತದಿ ಉದಿಯಿಸುವ ಗರ್ವ
ತಾನೇ ಮೀರಿ ಆಚರಿಸುವುದು ನಿತ್ಯ ಪರ್ವ
ಕ್ಷಣ ಮಾತ್ರದಿ ಆತ್ಮ ಛಾಯೆ ಮೂಡಿದರಾಯ್ತು
ತನ್ನ ತಾ ಕಳೆದುಕೊಂಡು ಇಲವಾಯ್ತು

ರಾತ್ರಿ ಬಾನಿನಲಿ ಏಸೊಂದು ತಾರೆ
ಒಂದಾದರೂ ಹರಿಸಬಲ್ಲುದೆ ಬೆಳಕಧಾರೆ
ಚಂದ್ರನಿಲ್ಲದಾಗ ಮಿಂಚಿ ತೋರುವುವು ಬಿಂಕ
ಶಶಿಯುದಿಸಿದಾಗ ಮೌನ ಬೇಡಿದೆ ಸುಂಕ

ದೇವರನ್ನು ಮರೆತು ಆಸೆಗಳ ನೂರು
ಪ್ರತಿ ಆಸೆಯಲ್ಲೂ ಕನಸು ಸಾವಿರಾರು
ಕನಸು ಸಾಧಿಸಿದರೆ ಇಹುದೇ ಆನಂದ
ಮಾಣಿಕ್ಯ ವಿಠಲನ ಸಾಕ್ಷಾತ್ಕಾರವೇ ಆನಂದ
*****