ಬರೆದವರು: Thomas Hardy / Tess of the d’Urbervilles
ನಾಯಕನು ಮಲ್ಲಿಯನ್ನು ಒಂದು ಕ್ಷಣ ಬಿಟ್ಟಿರಲಾರ. ಅವನಿಗೆ ಈಗ ಲೋಕದಲ್ಲಿ ಯಾರೂ ಬೇಡ. ಮಲ್ಲಿಯೂ ಒಂದು ತೂಕ: ಲೋಕವೆಲ್ಲ ಇನ್ನೊಂದು ತೂಕ. ಊಟದಲ್ಲಿ ಮಲ್ಲಿಯ ಜೊತೆ: ಕುಳಿತಿದ್ದರೆ ಮಲ್ಲಿಯೊಡನೆ. ಓದಿದರೆ ಅವಳ ಮಗ್ಗುಲಲ್ಲಿ. ಬೆಳಗಿಂದ ಬೆಳಗಿನವರೆಗೂ ಎಲ್ಲೋ ಒಂದೆರಡು ಗಂಟೆ ಆಗಾಗ ಅವಳನ್ನು ಬಿಟ್ಟಿ ದ್ದರೆ ಅದೇ ಹೆಚ್ಚು.
ಮಲ್ಲಿ ಆ ಮಗುವನ್ನು ಒಂದು ಗಳಿಗೆ ಬಿಟ್ಟರುವುದಿಲ್ಲ; ರಾಣಿಯು ಯಾವಾಗಲಾದರೂ ಮಗುವಿನ ಕಡೆ ನೋಡಿದರೆ, “ತೆಂಗಿನ ಸೊಸಿ ಬೆಳೆಸಿದಂಗೆ ಬೆಳೆಸಿಕೊಡ್ತೀನಿ ಬುದ್ಧಿ” ಎನ್ನುತ್ತಾಳೆ. ತಾನು ಚಿಕ್ಕ ತಾಯಿಯ ಹಾಗೆ ಅವನ್ನ ನೋಡುತ್ತಿಲ್ಲ. ಅವನಿಗಾಗಿ ಗೊತ್ತಾಗಿರುವ ದಾದಿಯಂತೆ ಆ ಮಗುವಿಗೆ ಉಪಚಾರಮಾಡುತ್ತಾಳೆ. ರಾತ್ರಿಯಲ್ಲಿ ಅವನು ಎದ್ದರೆ, ರಾಣಿಗೆ ಎಚ್ಚರವಾಗುವುದಕ್ಕಿಂತ ಮುಂಚೆ ಅವಳಿಗೆ ಎಚ್ಚರವಾಗುತ್ತದೆ. ಆ ಮಗುವಿಗೆ ಸ್ನಾನ ಉಡುಪು ಊಟ, ನಿದ್ದೆ, ಎಲ್ಲದಕ್ಕೂ ಅವನ ಭಾಗ್ಯದೇವತೆಗಿಂತ. ಹೆಚ್ಚಾಗಿ ಗಮನ ಕೊಟ್ಟು ಕಾಪಾಡುತ್ತಿದ್ದಾಳೆ.
ಒಂದು ದಿನ ಆನಂದಮ್ಮನು ಬಂದು ಕುಳಿತಿದ್ದಾಳೆ, ಮಲ್ಲಿಯು ಮಗುವನ್ನು ಎತ್ತಿಕೊಂಡು ಬಂದಳು. ಆನಂದಮ್ಮನು ಕರೆದಳು: ಮಗು ಬರಲಿಲ್ಲ. ಮಲ್ಲಿಯು ನಗುನಗುತ್ತಾ “ನಮ್ಮ ಪುಟ್ಟ ಬುದ್ಧಿ ಶುದ್ಧ ಕಳ್ಳ, ಅಮ್ಮಾ ! ದೊಡ್ಡಮ್ಮನೋರು ಕರೆದರೂ ಹೋಗೋದಿಲ್ಲ.” ಎಂದು, ಮಗುವನ್ನು ಕೆಳಗೆ ಇಳಿಸಿ “ಪುಟ್ಟ ಬುದ್ದೀನ ನೋಡಿಕೊಳ್ಳಿ ಬುದ್ಧಿ, ನಾನು ಹೋಗುತ್ತೇನೆ” ಎಂದು ಹೊಗಿ ಮರದ ತೆರೆಯ ಮರೆ ಯಲ್ಲಿ ನಿಂತುಕೊಂಡಳು.
ಪುಟ್ಟಬುದ್ದಿಯು ಅತ್ತಕಡೆ ಇತ್ತಕಡೆ ನೋಡಿ ಮಲ್ಲಿಯು ಕಣ್ಣಿಗೆ ಬೀಳದಿರಲು ಅಳುವುದಕ್ಕೆ ಆರಂಭಿಸಿತು. ಅದನ್ನು ಕೇಳಿ ರಾಣಿಯು ಎಲ್ಲಿದ್ದಳೋ ಓಡಿ ಬಂದಳು. ಮರೆಯಲ್ಲಿದ್ದ ಮಲ್ಲಿಯನ್ನು ಕಾಣದೆ ತಾನೇ ಹೋಗಿ ಎತ್ತಿಕೊಳ್ಳುವುದಕ್ಕೆ ಕೈ ನೀಡಿದಳು. ಮಗುವು ಬರಲಿಲ್ಲ. “ನೋಡಿದಿರಾ ತಾಯಿ, ಈ ಮಲ್ಲೀ ಮಾಟಾನಾ! ನಾನು ಹೆತ್ತವಳು. ನಮ್ಮ ಪುಟ್ಟಬುದ್ದೀಗೆ ನಾನು ಬೇಡ. ಅವಳು ಬೇಕು. ಅವಳು ಪಾಪ! ಎಲ್ಲಿ ಹೋಗಿದ್ದಾಳೋ! ಅವಳು ಅತ್ತ ಇತ್ತ ಹೋಗಕೂಡದು. ಈ ಕಳ್ಳನ ಮುಂದೆಯೇ” ಕೂತಿರಬೇಕೇನೋ? ಎಂದು ಸಣ್ಣಗೆ ಮೂತಿ ಹಾಗೆಂದಳು.
ಮಗು ಇನ್ನೂ ಬಲವಾಗಿ ಅತ್ತಿತು.
ಕೂಡಲೇ ಮರೆಯಿಂದ ಮಲ್ಲಿಯು ಓಡಿಬಂದಳು: ಎತ್ತಿ ಕೊಂಡಳು. ಮಗುವು ಸುಮ್ಮನಾಯಿತು.
ರಾಣಿಯು “ಓಹೋ! ತಾಯಿ ಮಕ್ಕಳ ಕಣ್ಣುಮುಚ್ಚಾಲೆಯೋ ಇದು? ನಾನು ಅರೀದೇ ಮಾಡುತ್ತಿದ್ದ ಕೆಲಸ ಬಿಟ್ಟು ಬಂದೆ” ಎಂದು ಹೊರಟಳು.
ಆನಂದಮ್ಮನು ನಕ್ಕಳು.
ಮಲ್ಲಿಯು “ಯಾಕೆ ಗೊತ್ತಾ ಅಮ್ಮ! ನನ್ನ ಹೊಟ್ಟೇಲಿ ಹುಟ್ಟಿ ತ್ತಲ್ಲಾ ಅದೇ ನಮ್ಮ ದೊಡ ಬುದ್ಧಿಯೋರ ಹೊಟ್ಟೇಲಿ ಗಂಡಾಗಿ ಹುಟ್ಟಿದೆ. ಅದಕ್ಕೇ ನನ್ನ ಮೇಲೆ ಇಷ್ಟು ಅಭಿಮಾನ ಲೋ ಪುಟ್ಟ ಬುದ್ಧೀ ನಿಂಗೆ ಬುದ್ಧಿಯಿಲ್ಲ. ಇನ್ನೊಂದು ವರ್ಷ, ನಾನು ನಿಮ್ಮನ್ನೆಲ್ಲ ಬಿಟ್ಟು ಓಡಿ ಹೋಗೋಳು ಕಣಪ್ಪ. ಅತ್ತತಿರುಗಿಕೋ” ಎಂದು ಅದನ್ನು ಮುದ್ದಿಸಿದಳು.
ರಾಣಿಯು “ನೋಡಿ ತಾಯಿ, ನೋಡಿ. ಆ ಮಗೂನ ಕೈಲೂ ಇದೇ ಮಾತಾ? ಛೇ, ಬುಡ್ತು ಅನ್ನು” ಎಂದು ಹುಸಿಕೋಪದಿಂದ ಗದರಿಕೊಂಡಳು.
“ಸದಾಶಿವನಿಗೆ ಅದೇ ಜ್ಞಾನ ಬುದ್ದಿ. ನದಿ ಕಟ್ಟೆ ದಾಟದಿದ್ದರೆ ಸಮುದ್ರ ಸೇರೀತಾ? ಅದಕ್ಕೆ ತನ್ಕ ಅಭಿಮಾನದ ಕಟ್ಟೆದಾಟಿ ನಾನು ಹೊರಡುತೀನಿ” ಎಂದು ಮಲ್ಲಿಯು ಅನ್ಯಮನಸ್ಕಳಾಗಿ ನುಡಿದಳು.
ಆನಂದಮ್ಮನಿಗೆ ಬಾಯಿ ಕೊನೆಯವರೆಗೂ ಬಂತು: “ಮಲ್ಲೀ ನೀನು ನನ್ನ ಮಗಳು. ಇದುವರೆಗೆ ನಾನು ನಿನಗೆ ಹೇಳಿರಲಿಲ್ಲ. ನಾನು ನಿನ್ನನ್ನು ಬೇಡವೆಂದು ಒತ್ತರಿಸಿದೆ. ದೈವ ಮತ್ತೆ ನಿನ್ನನ್ನು ಕೊಟ್ಟಿದೆ. ನನಗೆ ಕೊನೆಗಾಲ, ಕೊನೆಗಾಲದಲ್ಲಿ ನನ್ನ ಬಾಯಿಗೆ ಅಷ್ಟು ನೀರು ಬಿಟ್ಟು ಹೋಗುವೆಯಂತೆ. ಇರು” ಎನ್ನಬೇಕು ಎನ್ನಿಸಿತು.
ಎದೆ ಡವದಡ ಎಂದಿತು. ಕಣ್ಣಿನಲ್ಲಿ ನೀರು ತುಂಬಿತು: ಅವಳ ಬಾಯಲ್ಲಿ ಆ ಮಾತು ಬರಲಿಲ್ಲ. “ಅವಳು ನುಂಗಿದ ಬಾಯಿನೀರಿ ನೊಡನೆ ಆ ಮಾತು ಹೊಟ್ಟೆಯೊಳಕ್ಕೆ ಹೊರಟು ಹೋಯಿತು.
ಅದೆಲ್ಲ ಶಂಭುರಾಮಯ್ಯನಿಗೂ ತಿಳಿಯಿತು. ಅವನೂ ನಗು ನಗುತ್ತ ತನಗೆ ಬೇಕಾದುದನ್ನು ತಪ್ಪದೆ, ಎಳ್ಳಷ್ಟೂ ಲೋಪವಿಲ್ಲದೆ ಸಾಧಿಸುವ ಮಲ್ಲಿಯ ವಿಚಕ್ಷಣತೆಯನ್ನು ಬಲ್ಲನಾಗಿ ಅವನು ಏನೂ ಹೇಳಲಿಲ್ಲ.
*****
ಮುಂದುವರೆಯುವುದು