ಶಾಂವಽಕ್ಕಿ ಕುಟ್ಟಂದ್ರ ಶರಽಗ್ಹಾಸಿ ಮಲಗ್ಯಾಳ|
ಎಬಸಣ್ಣ ನಿನ್ನ ಮಡದೀನ| ಸೂವಯ್ಯಾ ||೧||
ಮಡದೀನ ಎಬಸಿದರ ಅರಸನಿದ್ದಿ ನಾದಾನ|
ಎರಡೊಬ್ಬಿ ಮಾಡಿ ಥಳಸವ್ವಾ| ಸೂವಯ್ಯಾ ||೨||
ಎರಡೊಽಬ್ಬಿ ಮಾಡಿದರ ಕರಡಕ್ಕಿನಾದಾವ|
ಕರಡಕ್ಕಿ ಜ್ವಾಳ ನುರಿಯಽವ| ಸೂವಯ್ಯಾ ||೩||
ಕುಟ್ಟಿದರ ಕುಟ್ಟವ್ವಾ ಕಿಟಕೀಟ ಹಚಬ್ಯಾಡಾ|
ಬಂದ್ಹಾದಿ ಹಿಡಿದು ನಡಿ ತಂಗೀ| ಸೂವಯ್ಯಾ ||೪||
ಎತ್ತಾರೆ ತಾರಣ್ಣಾ ಮುಟ್ಟಾರೆ ಬಿಗಿಯಣ್ಣಾ|
ಹೊಂತೂಟ್ಲೆ ನನ್ನ ಖಳವಣ್ಣ| ಸೂವಯ್ಯಾ ||೫||
ಎತ್ತಽ ನಮ್ಮಲ್ಲಿಲ್ಲ ಮುಟ್ಟಽ ನಮ್ಮಲ್ಲಿಲ್ಲ|
ಬಂದಽ ದಾರಿ ಹಿಡಿದು ನಡಿ ತಂಗಿಽ| ಸೂವಯ್ಯಾ ||೬||
ತಂಗಿ ಹ್ವಾದ ಮರದೀನ ರಂಬೀಗಿ ಬ್ಯಾನಿ ಬಂದು|
ಮನಿಯಾನ ಮಕ್ಕಳಿಗಿ ಉರಿ ಛೆಳಿಯಽ| ಸೂವಯ್ಯಾ ||೭||
ಮನಿಯಾನ ಮಕ್ಕಳಿಗಿ ಉರಿ ಛೆಳೀ ಬಂದರ|
ದೇವಽರ ಕೇಳಾಕ ನಡದಾನಾಽ| ಸೂವಯ್ಯಾ ||೮||
ಕೇಳೂಸಿ ನೋಡಿದರ ದೇವರಿಲ್ಲ ದೀಡೆರಿಲ್ಲ|
ಮನಿಯಾನ ಹೆಣಮಗಳು ಉಸರಂದ| ಸೂವಯ್ಯಾ ||೯||
ಎತ್ತಾರೆ ತಗೊಂಡಾನಽ ಮುಟ್ಟಾರೆ ಬಿಗದಾನ|
ತಂಗ್ಹ್ವಾದ ದಾರಿ ಹಿಡಿದಾಽನ| ಸೂವಯ್ಯಾ ||೧೦||
ಎಂದಿಲ್ಲದಣ್ಣಯ್ಯಾ ಇಂದ್ಯಾಕ ಬಂದಾನ|
ಕುಂಡಽರ ಕೊಡರೆ ಮಣಿ ಚವಕಿ| ಸೂವಯ್ಯಾ ||೧೧||
ಕುಂಡಽರ ಬಂದಿಲ್ಲ ನಿಂದಽರ ಬಂದಿಲ್ಲ|
ಬರಬೇಕ ತಂಗಿ ಮದುವೀಗಿ| ಸೂವಯ್ಯಾ ||೧೨||
ಮಜ್ಜಿಗಿ ಮಾಡವರಿಲ್ಲ ಬೆಣ್ಣಿ ತೆಗೆಯುವರಿಲ್ಲ|
ಹ್ಯಾಂಗ ಬರಲೆಣ್ಣಾ ಮದವೀಗಿಽ| ಸೂವಯ್ಯಾ ||೧೩||
ಮಜ್ಜಿಗಿ ಮಾಡವರ ಕುಡತ ಬೆಣ್ಣಿ ತೆಗೆವರ ಕುಡತ|
ಬರಬೇಕ ತಂಗಿ ಮದವೀಗಿ| ಸೂವಯ್ಯಾ ||೧೪||
ಬ್ಯಾಸೀಗಿ ಬಿಸಲಣ್ಣ ಕೂಸೀನ ತಾಯಣ್ಣ|
ಹ್ಯಾಂಗ ಬರಲೆಣ್ಣ ಮದವೀಗಿಽ| ಸೂವಯ್ಯಾ ||೧೫||
ನಿನಗ ಪಲ್ಲಕಿ ಕುಡತ ಕೂಸಿಗಿ ಮೇಣೇ ಕುಡತ|
ಗಂಡಽಗ ಕುಡುತ ಮರಿಗುದರಿ| ಸೂವಯ್ಯಾ ||೧೬||
ಬಂದಽರ ಬರುವೇನೋ ಬಾಗಿಲ್ದಾಗ ನಿಂತೇನೊ|
ಬಾಲಾಗ ಧಾರಿ ಎರೆದೇನೋ| ಸೂವಯ್ಯಾ ||೧೭||
ಹತ್ತ ರೂಪಾಯಿ ಕೊಟ್ಟು ಸೀರೀಯ ತರಸೀದ|
ಉಟ್ಹೋಗ ತಂಗಿ ಜನದಾಗ| ಸೂವಯ್ಯಾ ||೧೮||
ಇಽವು ಸೀರಿ ಒಯ್ದು ಮಡದೀಗಿ ಉಡಸಣ್ಣಾ|
ಹಾಡ್ಯಾಳೊ ನಿನ್ನ ಹರಸ್ಯಾಳೋ| ಸೂವಯ್ಯಾ ||೧೯||
ಹಾಡಿಯಾಳೊ ನಿನ್ನಽ ಹರಸ್ಯಾಳೊ ನಾಲುರದಾಗ|
ಬಾ ಅಣ್ಣಽನಂದು ಕರದಾಳೋ| ಸೂವಯ್ಯಾ ||೨೦||
ಕಲ್ಲಬುರಗಿಗಿ ಹೋಗಿ ಕುಬ್ಬಽಸ ತಂದೀದ|
ತೊಟಗೋ ಬಾ ತಂಗಿ ಜನದಾಽಗಽ| ಸೂವಯ್ಯಾ ||೨೧||
ಅವು ಕುಬ್ಬಸನೊಯ್ದು ಮಡದೀಗಿ ತೊಡಿಸಣ್ಣ|
ಹಾಡ್ಯಾಳೊ ನಿನ್ನ ಹರಸ್ಯಾಳೋ| ಸೂವಯ್ಯಾ ||೨೨||
ಹಾಡಿಯಾಽಳ ನಿನ್ನ ಹರಸ್ಯಾಳ ನಾಲುರದಾಗ|
ಬಾರಣ್ಣನೆಂದು ಕರದಾಽಳಽ| ಸೂವಯ್ಯಾ ||೨೩||
ಪಂಡ್ರಾಪೂರಕ್ಹೋಗಿ ಕೂಕಮ ತಂದೀದ|
ಹಚಗೊ ಬಾ ತೆಂಗಿ ಸಬೆದಾಽಗಽ| ಸೂವಯ್ಯಾ ||೨೪||
ಅಽವು ಕೂಕುಮನೊಯ್ದು ಮಡದೀಗಿ ಹೆಚ್ಚಣ್ಣಾ|
ಹಾಡ್ಯಾಳೊ ನಿನ್ನ ಹೆರಸ್ಯಾಳೋ| ಸೂವಯ್ಯಾ ||೨೫||
ಹಾಡಿಯಾಽಳಽ ನಿನ್ನ ಹರಸ್ಯಾಳ ನಾಲುರದಾಗ|
ಬಾರಣ್ಣನೆಂದು ಕರದಾಳಽ| ಸೂವಯ್ಯಾ ||೨೬||
ನನ್ನಲ್ಲಿ ಹುಟ್ಟೀದಿ ನನ್ನಲ್ಲಿ ಬೆಳದೀದಿ|
ಇಟ್ಟ ಮಾತೆಲ್ಲಿ ಕಲತೆವ್ವಾಽ| ಸೂವಯ್ಯಾ ||೨೭||
ಅಡವ್ಯಾಗ ಹುಟ್ಟೀದ ಆಡವ್ಯಾಗ ಬೆಳದೀದ|
ಎಲಿಗೊಂದ ಮಾತ ಕಲತೀನಽ| ಸೂವಯ್ಯಾ ||೨೮||
ಹುಟ್ಟಿದ ಮಲ್ಲಿಗಿಗೀಡ ಹುಟ್ಟಿದಂಗ ಇರುದಿಲ್ಲ|
ದಿನಕೊಂದು ಪರಿಯ ಚಿಗವೂದಽ| ಸೂವಯ್ಯಾ ||೨೯||
ದಿನಽಕೊಂದು ಪರಿಯ ಚಿಗವೂ ಮಲ್ಲಿಗಿ ಹೊವ|
ಮತ್ತೊಬ್ಬ ಜಾಣ ಮುಡಿಯೋದಽ| ಸೂವಯ್ಯಾ ||೩೦||
*****
ಶಾಂವಕ್ಕಿ ಕುಟ್ಟಂದ್ರ
ಈ ಹಾಡಿನಲ್ಲಿ ನಾದುನಿಯು (ಗಂಡನ ತಂಗಿ) ಸೊಗಸಿನ ಸಂಸಾರಕ್ಕೆ ಹೇಗೆ ಮುಳುವಾಗುವಳೆಂಬುದು ತೋರಿಸಲ್ಪಟ್ಟಿದೆ. “ನಡಿಯುವ ಹೆಣ್ಣಿಗೆ ನಾದುನಿ ಮೂಲ” ಎಂಬ ಗಾದೆಯ ಮಾತಿಗೆ ಈ ಹಾಡು ತಕ್ಕ ದೃಷ್ಟಾಂತವಾಗಿದೆ. ಅವಳು ಅಣ್ಣನ ಅಂತಃಕರಣವನ್ನು ಹಿಂಡಿ ಹಿಪ್ಪೆಮಾಡಿ ಒಗೆತನ ಹರಿಸುವುದಕ್ಕೆ ಹೇಗೆ ಆಟ ಹೊಡುತ್ತಾಳೆಂಬುದನ್ನು ನಾವು ಇಲ್ಲಿ ಸ್ಪಷ್ಟವಾಗಿ ಕಂಡುಕೊಳ್ಳುವೆವು; ಈ ಹಾಡು ಒಂದು ಕಥೆಯಂತಿದೆ.
ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.
ಶಬ್ದಪ್ರಯೋಗಗಳು:- ಶಾಂವಕ್ಕಿ=ಶಾಂವಿ ಎಂಬ ಒಂದು ತರದ ಧಾನ್ಯ. ಥಳಿಸು=ಅಕ್ಕೀ ಕುಟ್ಟು. ಕಿಟಕಿಟ=ಕರಕರೆ. ಹೊಂತೂಟ್ಲೆ-ಹೊತ್ತಿರುವುದರೊಳಗಾಗಿ (ಹೊತ್ತುಂಟಲೆ). ಇಟ್ಟು=ಇಷ್ಟು.